ಆಂಗ್ಲರಿಗೆ ತಿರುಮಂತ್ರವಾದ ಬಜ್‌ಬಾಲ್ ತಂತ್ರ; ಜೈಸ್ವಾಲ್ ಆಕ್ರಮಣಕಾರಿ ಆಟಕ್ಕೆ ಮಂಕಾದ ಇಂಗ್ಲೆಂಡ್, ಮೊದಲ ಟೆಸ್ಟ್‌ನಲ್ಲಿ ಮುನ್ನಡೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಆಂಗ್ಲರಿಗೆ ತಿರುಮಂತ್ರವಾದ ಬಜ್‌ಬಾಲ್ ತಂತ್ರ; ಜೈಸ್ವಾಲ್ ಆಕ್ರಮಣಕಾರಿ ಆಟಕ್ಕೆ ಮಂಕಾದ ಇಂಗ್ಲೆಂಡ್, ಮೊದಲ ಟೆಸ್ಟ್‌ನಲ್ಲಿ ಮುನ್ನಡೆ

ಆಂಗ್ಲರಿಗೆ ತಿರುಮಂತ್ರವಾದ ಬಜ್‌ಬಾಲ್ ತಂತ್ರ; ಜೈಸ್ವಾಲ್ ಆಕ್ರಮಣಕಾರಿ ಆಟಕ್ಕೆ ಮಂಕಾದ ಇಂಗ್ಲೆಂಡ್, ಮೊದಲ ಟೆಸ್ಟ್‌ನಲ್ಲಿ ಮುನ್ನಡೆ

India vs England 1st Test: ಹೈದರಾಬಾದ್​ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್‌ ತಂಡಗಳ ನಡುವಿನ ಮೊದಲ ಟೆಸ್ಟ್​​ ಪಂದ್ಯದಲ್ಲಿ ಭಾರತ ಅಬ್ಬರಿಸಿದೆ. ಮೊದಲ ದಿನದಾಟದಲ್ಲಿ ಇಂಗ್ಲೆಂಡ್‌ ತಂಡವನ್ನು ಆಲೌಟ್‌ ಮಾಡಿದ ಬಳಿಕ, ಆಕ್ರಮಣಕಾರಿ ಇನ್ನಿಂಗ್ಸ್‌ ಆಡಿದ ಭಾರತ, ಆಂಗ್ಲರಿಗಿಂತ ಕೇವಲ 127 ರನ್‌ ಹಿನ್ನಡೆಯಲ್ಲಿದ್ದಾರೆ.

ನಾಯಕ ರೋಹಿತ್ ಶರ್ಮಾ ಅವರೊಂದಿಗೆ ತಮ್ಮ ಅರ್ಧಶತಕ ಸಂಭ್ರಮಿಸಿದ ಯಶಸ್ವಿ ಜೈಸ್ವಾಲ್
ನಾಯಕ ರೋಹಿತ್ ಶರ್ಮಾ ಅವರೊಂದಿಗೆ ತಮ್ಮ ಅರ್ಧಶತಕ ಸಂಭ್ರಮಿಸಿದ ಯಶಸ್ವಿ ಜೈಸ್ವಾಲ್ (AP)

ಟೆಸ್ಟ್‌ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ಬಜ್‌ಬಾಲ್ ತಂತ್ರವು ಆಂಗ್ಲರಿಗೆ ತಿರುಗುಬಾಣವಾಗಿದೆ. ಭಾರತ ವಿರುದ್ಧದ ಟೆಸ್ಟ್‌ (India vs England) ಸರಣಿಯ ಮೊದಲ ಪಂದ್ಯದಲ್ಲಿ, ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಲು ವಿಫಲರಾದ ಆಂಗ್ಲರು, ಆ ಬಳಿಕ ಭಾರತದ ಅಬ್ಬರಕ್ಕೆ ಮೂಗುದಾರ ಹಿಡಿಯಲು ಸಂಪೂರ್ಣ ವಿಫಲರಾದರು. ಇಂಗ್ಲೆಂಡ್‌ನ ಬಜ್‌ಬಾಲ್‌ ತಂತ್ರವನ್ನು ಚಿತ್ರಾನ್ನ ಮಾಡಿದ ಜೈಸ್ವಾಲ್‌ ಸ್ಫೋಟಕ ಇನ್ನಿಂಗ್ಸ್‌ ಆಡಿದರು. ಕಡಿಮೆ ಎಸೆತಗಳಲ್ಲಿ ಹೆಚ್ಚು ರನ್‌ ಕಲೆ ಹಾಕಿ ಮಿಂಚಿದರು.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನದಾಟದ ಕೊನೆಯ ಸೆಷನ್‌ಗೂ ಮುನ್ನ ಆಂಗ್ಲರನ್ನು ಆಲೌಟ್‌ ಮಾಡುವಲ್ಲಿ ಯಶಸ್ವಿಯಾದ ರೋಹಿತ್‌ ಶರ್ಮಾ ಪಡೆ, ಆ ಬಳಿಕ ತನ್ನ ಮೊದಲ ಇನ್ನಿಂಗ್ಸ್‌ ಆರಂಭಿಸಿತು. ಭಾರತದ ತ್ರಿವಳಿ ಸ್ಪಿನ್ನರ್‌ಗಳಾದ‌ ಅಶ್ವಿನ್‌, ಜಡೇಜಾ ಹಾಗೂ ಅಕ್ಷರ್‌ ಪಟೇಲ್‌ ಸ್ಪಿನ್‌ ಮೋಡಿಗೆ ಬೇಗನೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ಇಂಗ್ಲೆಂಡ್; 64.3 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲೌಟ್‌ ಆಯ್ತು. ದಿನದ ಕೊನೆಯ ಸೆಷನ್‌ನಲ್ಲಿ ಇನ್ನಿಂಗ್ಸ್‌ ಆರಂಭಿಸಿದ ಭಾರತವು ಬಜ್‌ಬಾಲ್‌ ತಂತ್ರ ಅನುಸರಿಸಿತು. ಯಶಸ್ವಿ ಜೈಸ್ವಾಲ್‌ ಮೊದಲ ಓವರ್‌ನಿಂದಲೇ ಸ್ಫೋಟಕ ಆಟವಾಡಿದರು. ಬಜ್‌ಬಾಲ್‌ ತಂತ್ರವು ಜೈಸ್ಬಾಲ್‌ ತಂತ್ರವಾಗಿ ಮಾರ್ಪಟ್ಟಿತು.

ಇದನ್ನೂ ಓದಿ | ಗಳಿಸಿದ್ದು 29 ರನ್, ಬರೆದಿದ್ದು ವಿಶ್ವದಾಖಲೆ; ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಜೋ ರೂಟ್ ಹೊಸ ಸಾಧನೆ

ಮೊದಲ ದಿನದಾಟದ ಕೊನೆಯ ಸೆಷನ್‌ನಲ್ಲಿ ಇನ್ನಿಂಗ್ಸ್‌ ಆರಂಭಿಸಿದ ನಾಯಕ ರೋಹಿತ್‌ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್‌, ಮೊದಲ ವಿಕೆಟ್‌ಗೆ 80 ರನ್‌ಗಳ ಜೊತೆಯಾಟವಾಡಿದರು. 27 ಎಸೆತಗಳಲ್ಲಿ 24 ರನ್‌ ಗಳಿಸಿದ ರೋಹಿತ್‌ ಶರ್ಮಾ, ಲೀಚ್‌ ಎಸೆತದಲ್ಲಿ ಸ್ಟೋಕ್ಸ್‌ಗೆ ಕ್ಯಾಚ್‌ ನೀಡಿ ಔಟಾದರು.

108.57ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಜೈಸ್ವಾಲ್

ಆರಂಭದಿಂದಲೂ ಅಬ್ಬರಿಸಿದ ಜೈಸ್ವಾಲ್‌, ಕೇವಲ 70 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸ್ಫೋಟಕ ಸಿಕ್ಸರ್‌ ಸಹಿತ 76 ರನ್‌ ಸಿಡಿಸಿದರು. 108.57ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿ, ಆಂಗ್ಲ ಬೌಲರ್‌ಗಳ ಬೆವರಿಳಿಸಿದರು. ಇವರಿಗೆ ಜೊತೆಯಾದ ಶುಭ್ಮನ್‌ ಗಿಲ್‌ 43 ಎಸೆತಗಳಲ್ಲಿ 14 ರನ್‌ ಪೇರಿಸಿದರು. ದಿನದ ಅಂತ್ಯಕ್ಕೆ 23 ಓವರ್‌ಗಳನ್ನು ಆಡಿದ ಭಾರತವು ಕೇವಲ 1 ವಿಕೆಟ್‌ ಕಳೆದುಕೊಂಡು 119 ರನ್ ಗಳಿಸಿದೆ. ಆ ಮೂಲಕ ಕೇವಲ 127 ರನ್‌ಗಳ ಅಲ್ಪ ಹಿನ್ನಡೆಯೊಂದಿಗೆ ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ ಪರ ಆರಂಭಿಕರಾದ ಜಾಕ್ ಕ್ರಾವ್ಲಿ ಮತ್ತು ಬೆನ್ ಡಕೆಟ್ ವೇಗವಾಗಿ ರನ್ ಕಲೆ ಹಾಕಲು ಆರಂಭಿಸಿದರು. 55 ರನ್ ಗಳಿಸಿದ್ದಾಗ ಇಂಗ್ಲೆಂಡ್ ಮೊದಲ ವಿಕೆಟ್ ಕಳೆದುಕೊಂಡಿತು. 39 ಎಸೆತಗಳಲ್ಲಿ 35 ರನ್ ಗಳಿಸಿದ್ದ ಡಕೆಟ್, ಅಶ್ವಿನ್ ಬೌಲಿಂಗ್‌​ನಲ್ಲಿ ಔಟಾದರು. ಓಲಿ ಪೋಪ್ 1 ರನ್ ಗಳಿಸಿ ನಿರ್ಗಮಿಸಿದರು. 60 ರನ್‌ ವೇಳೆಗೆ 3 ವಿಕೆಟ್​ ಕಳೆದುಕೊಂಡಿದ್ದ ತಂಡಕ್ಕೆ ಜೋ ರೂಟ್ ಮತ್ತು ಬೇರ್‌​ಸ್ಟೋ ಆಸರೆಯಾದರು. ತಂಡದ ಮೊತ್ತ 121 ಆಗುತ್ತಿದ್ದಂತೆಯೇ, 37 ರನ್‌ ಗಳಿಸಿದ್ದ ಬೇರ್‌ಸ್ಟೋ ಅಕ್ಸರ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. ಅವರ ಬೆನ್ನಲ್ಲೇ ರೂಟ್‌ ಆಟ 29 ರನ್‌ಗೆ ಅಂತ್ಯವಾಯ್ತು. ಬೆನ್‌ ಫೋಕ್ಸ್‌ ಮತ್ತು ರೆಹಾನ್‌ ಅಹ್ಮದ್‌ ಅಲ್ಪಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರು.

ಸ್ಟೋಕ್ಸ್‌ ಆಕರ್ಷಕ ಅರ್ಧಶತಕ

ನಾಯಕ ಬೆನ್‌ ಸ್ಟೋಕ್ಸ್‌ ವೇಗದ ಬ್ಯಾಟಿಂಗ್‌ ನಡೆಸಿ ತಂಡದ ರನ್‌ ಹೆಚ್ಚಿಸಿದರು. ಅರ್ಧಶತಕದ ಗಡಿದಾಟಿದ ಅವರು 88 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸ್ಫೋಟಕ ಸಿಕ್ಸರ್‌ ಸಹಿತ 70 ರನ್‌ ಗಳಿಸಿದರು. ಅಂತಿಮವಾಗಿ ಬುಮ್ರಾ ಎಸೆದ ಕ್ಲೀನ್‌ ಬೋಲ್ಡ್‌ ಆಗಿ ವಿಕೆಟ್‌ ಒಪ್ಪಿಸಿದರು. 246 ರನ್‌ ಗಳಿಸಿ ಇಂಗ್ಲೆಂಡ್‌ ಆಲೌಟ್‌ ಆಯ್ತು.

ಇದನ್ನೂ ಓದಿ | ಭಾರತದ ಸ್ಪಿನ್ ತ್ರಿವಳಿಗಳ ದಾಳಿಗೆ ಉಸಿರೆತ್ತದ ಇಂಗ್ಲೆಂಡ್; ಮೊದಲ ಇನ್ನಿಂಗ್ಸ್‌​ನಲ್ಲಿ 246ಕ್ಕೆ ಆಲೌಟ್​

ಸದ್ಯ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ. 127 ರನ್‌ಗಳ ಅಲ್ಪ ಹಿನ್ನಡೆಯಲ್ಲಿರುವ ತಂಡ, ಎರಡನೇ ದಿನದಾಟದಲ್ಲಿ ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದೆ. ಗಿಲ್‌ ಮತ್ತು ಜೈಸ್ವಾಲ್‌ ಶುಕ್ರವಾರ ಬ್ಯಾಟಿಂಗ್‌ ಆರಂಭಿಸಲಿದ್ದಾರೆ.

Whats_app_banner