ಯಶಸ್ವಿ ಜೈಸ್ವಾಲ್ ಔಟ್, ವಿರಾಟ್ ಕೊಹ್ಲಿ ಇನ್; ಇಂಗ್ಲೆಂಡ್ ವಿರುದ್ಧದ 2ನೇ ಏಕದಿನಕ್ಕೆ ಭಾರತದ ಸಂಭಾವ್ಯ XI
ಕನ್ನಡ ಸುದ್ದಿ  /  ಕ್ರಿಕೆಟ್  /  ಯಶಸ್ವಿ ಜೈಸ್ವಾಲ್ ಔಟ್, ವಿರಾಟ್ ಕೊಹ್ಲಿ ಇನ್; ಇಂಗ್ಲೆಂಡ್ ವಿರುದ್ಧದ 2ನೇ ಏಕದಿನಕ್ಕೆ ಭಾರತದ ಸಂಭಾವ್ಯ Xi

ಯಶಸ್ವಿ ಜೈಸ್ವಾಲ್ ಔಟ್, ವಿರಾಟ್ ಕೊಹ್ಲಿ ಇನ್; ಇಂಗ್ಲೆಂಡ್ ವಿರುದ್ಧದ 2ನೇ ಏಕದಿನಕ್ಕೆ ಭಾರತದ ಸಂಭಾವ್ಯ XI

India Likely XI: ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಗೆದ್ದಿರುವ ಭಾರತ ತಂಡದ ಎರಡನೇ ಪಂದ್ಯಕ್ಕೆ ಬ್ಯಾಟಿಂಗ್ ಸೂಪರ್​ ಸ್ಟಾರ್ ವಿರಾಟ್ ಕೊಹ್ಲಿ ಮರಳಲಿದ್ದಾರೆ ಎಂದು ವರದಿಯಾಗಿದೆ.

ಯಶಸ್ವಿ ಜೈಸ್ವಾಲ್ ಔಟ್, ವಿರಾಟ್ ಕೊಹ್ಲಿ ಇನ್; ಇಂಗ್ಲೆಂಡ್ ವಿರುದ್ಧದ 2ನೇ ಏಕದಿನಕ್ಕೆ ಭಾರತದ ಸಂಭಾವ್ಯ XI
ಯಶಸ್ವಿ ಜೈಸ್ವಾಲ್ ಔಟ್, ವಿರಾಟ್ ಕೊಹ್ಲಿ ಇನ್; ಇಂಗ್ಲೆಂಡ್ ವಿರುದ್ಧದ 2ನೇ ಏಕದಿನಕ್ಕೆ ಭಾರತದ ಸಂಭಾವ್ಯ XI

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿ ನಾಲ್ಕು ವಿಕೆಟ್​ಗಳ ಗೆಲುವಿನೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಭಾರತ ತಂಡ, ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಕಟಕ್​ನ ಬಾರಾಬತಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಜರುಗುವ ಈ ಪಂದ್ಯಕ್ಕೆ ಕಸರತ್ತು ಆರಂಭಿಸಿದೆ. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಜರುಗಿದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 248 ರನ್​ಗಳಿಗೆ ಆಲೌಟ್ ಮಾಡಿದ ರೋಹಿತ್ ಪಡೆ, 38.4 ಓವರ್​ಗಳಲ್ಲೇ ಚೇಸ್ ಮಾಡಿ ಗೆದ್ದಿದೆ. ಅದರಂತೆ ಮತ್ತೊಂದು ಗೆಲುವಿನ ಜೊತೆಗೆ ಸರಣಿಯನ್ನೂ ಕೈವಶ ಮಾಡಿಕೊಳ್ಳಲು ತಯಾರಾಗಿದೆ. ಆದರೆ ಅದಕ್ಕೊಂದಿಷ್ಟು ಬದಲಾವಣೆ ಮಾಡುವ ಸಾಧ್ಯತೆ ಇದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆಯ ಭಾಗವಾದ ಈ ಸರಣಿಯು ಆಟಗಾರರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಮೊದಲ ಪಂದ್ಯ ಗೆದ್ದ ಭಾರತ ತಂಡವು ತನ್ನ 2ನೇ ಪಂದ್ಯಕ್ಕೆ ಮಹತ್ವದ ಬದಲಾವಣೆಯ ನಿರೀಕ್ಷೆ ಇದೆ. ಮೊಣಕಾಲಿನ ಗಾಯದಿಂದ ಮೊದಲ ಏಕದಿನದಲ್ಲಿ ಕಣಕ್ಕಿಳಿಯದ ವಿರಾಟ್ ಕೊಹ್ಲಿ, ಕಟಕ್ ಪಂದ್ಯಕ್ಕೆ ಮರಳಬಹುದು. ಪಂದ್ಯಕ್ಕೂ ಮುನ್ನ ಗಾಯಗೊಂಡಿದ್ದ ಕೊಹ್ಲಿ ಮೈದಾನದಲ್ಲಿ ಓಡಾಡುತ್ತಿದ್ದರು. ಹಾಗಾಗಿ, ಗಾಯದ ಪ್ರಮಾಣ ಗಂಭೀರವಾಗಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಫೆಬ್ರವರಿ 9ರಂದು ನಡೆಯುವ ಪಂದ್ಯಕ್ಕೆ ಸಂಪೂರ್ಣ ಫಿಟ್ ಆಗುವ ನಿರೀಕ್ಷೆ ಇದ್ದು, ಒಂದು ವೇಳೆ ಅವರು ಮರಳಿದರೆ ಯಶಸ್ವಿ ಜೈಸ್ವಾಲ್ ದಾರಿ ಮಾಡಿಕೊಡಬೇಕಾಗಬಹುದು. ಕೊಹ್ಲಿ ಚೇತರಿಸಿಕೊಂಡಿಲ್ಲ ಎಂದರೆ ಜೈಸ್ವಾಲ್ ತಂಡದಲ್ಲಿ ಮುಂದುವರೆಯಲಿದ್ದಾರೆ.

ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಜೈಸ್ವಾಲ್ ತನ್ನ ಚೊಚ್ಚಲ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಕೇವಲ 15 ರನ್ ಸಿಡಿಸಿ ಔಟಾದರು. ರಿಷಭ್ ಪಂತ್ ಆಡುವ 11ರ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ. ಸರಣಿಯಲ್ಲಿ ಪಂತ್​​ರನ್ನು ಪರೀಕ್ಷೆಗೆ ಒಳಪಡಿಸುವ ಅಗತ್ಯ ಇದೆ. ಆದರೆ 2ನೇ ಏಕದಿನಕ್ಕೆ ಅವರನ್ನು ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಕಡಿಮೆ ಎನ್ನಬಹುದು. ಕೆಎಲ್ ರಾಹುಲ್ ಚಾಂಪಿಯನ್ಸ್ ಟ್ರೋಫಿಗೆ ಬಹುತೇಕ ಖಚಿತವಾಗಿರುವ ಹಿನ್ನೆಲೆ ಪಂತ್ ಮೇಲೆ ಪ್ರಯೋಗಕ್ಕೆ ಹೆಚ್ಚು ಒತ್ತು ನೀಡುವುದಿಲ್ಲ ಎನ್ನಬಹುದು. ವರುಣ್ ಚಕ್ರವರ್ತಿಗೆ 2ನೇ ಪಂದ್ಯಕ್ಕೆ ಅವಕಾಶ ನೀಡಿದರೂ ಅಚ್ಚರಿ ಇಲ್ಲ. ಅವರನ್ನು ಟಿ20ಐ ಸರಣಿಯಲ್ಲಿನ ಪ್ರದರ್ಶನವನ್ನು ಪರಿಗಣಿಸಿ ಏಕದಿನ ಸರಣಿಗೆ ತಂಡಕ್ಕೆ ಸೇರಿಸಲಾಗಿರುವ ಹಿನ್ನೆಲೆ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಪರೀಕ್ಷೆಗೆ ಒಳಪಡಿಸುವ ನಿರೀಕ್ಷೆಯಿದೆ. ಹಾಗಾಗಿ ಕುಲ್ದೀಪ್ ಯಾದವ್​​ಗೆ ವಿಶ್ರಾಂತಿ ನೀಡಿ ವರುಣ್​ರನ್ನು ಕರೆತರುವ ಸಾಧ್ಯತೆ ಇದೆ.

ಯಾರಿಗೆಲ್ಲಾ ಅವಕಾಶ ಸಿಗಲಿದೆ?

ವಿರಾಟ್ ತಂಡಕ್ಕೆ ಮರಳಿದರೆ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ನಂತರ ಕೊಹ್ಲಿ, ಶ್ರೇಯಸ್ ಅಯ್ಯರ್ ಕ್ರಮವಾಗಿ 3, 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಕೆಎಲ್ ರಾಹುಲ್ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಹಾರ್ದಿಕ್ ಪಾಂಡ್ಯ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಲಿದ್ದು, ನಂತರದ ಸ್ಥಾನದಲ್ಲಿ ರವೀಂದ್ರ ಜಡೇಜಾ ಆಡಲಿದ್ದಾರೆ, ಅಕ್ಷರ್ ಪಟೇಲ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ. ವರುಣ್ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿದ್ದರೆ, ಮೊಹಮ್ಮದ್ ಶಮಿ ಮತ್ತು ಹರ್ಷಿತ್ ರಾಣಾ ವೇಗದ ಬೌಲರ್‌ಗಳಾಗಿರಲಿದ್ದಾರೆ. ಆದರೆ ಏನೆಲ್ಲಾ ಬದಲಾವಣೆಯಾಗಲಿದೆ ಎಂಬುದನ್ನು ಕಾದುನೋಡೋಣ.

ಭಾರತದ ಸಂಭಾವ್ಯ XI

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ.

Whats_app_banner