ಸುದರ್ಶನ್, ಜೈಸ್ವಾಲ್ ಓಪನರ್ಸ್, ಕರುಣ್ ಔಟ್, ಗಿಲ್ ನಾಯಕ; ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ಗೆ ಭಾರತದ ಸಂಭಾವ್ಯ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ಸುದರ್ಶನ್, ಜೈಸ್ವಾಲ್ ಓಪನರ್ಸ್, ಕರುಣ್ ಔಟ್, ಗಿಲ್ ನಾಯಕ; ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ಗೆ ಭಾರತದ ಸಂಭಾವ್ಯ ತಂಡ

ಸುದರ್ಶನ್, ಜೈಸ್ವಾಲ್ ಓಪನರ್ಸ್, ಕರುಣ್ ಔಟ್, ಗಿಲ್ ನಾಯಕ; ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ಗೆ ಭಾರತದ ಸಂಭಾವ್ಯ ತಂಡ

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್​ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಹಾಗಾದರೆ ಮೊದಲ ಟೆಸ್ಟ್​ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೇಗಿರಲಿದೆ? ಇಲ್ಲಿದೆ ವಿವರ.

ಸುದರ್ಶನ್, ಜೈಸ್ವಾಲ್ ಓಪನರ್ಸ್, ಕರುಣ್ ಔಟ್, ಗಿಲ್ ನಾಯಕ; ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ಗೆ ಭಾರತದ ಸಂಭಾವ್ಯ ತಂಡ
ಸುದರ್ಶನ್, ಜೈಸ್ವಾಲ್ ಓಪನರ್ಸ್, ಕರುಣ್ ಔಟ್, ಗಿಲ್ ನಾಯಕ; ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ಗೆ ಭಾರತದ ಸಂಭಾವ್ಯ ತಂಡ

ಜೂನ್ 20ರಿಂದ ಶುರುವಾಗುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತದ ಬಲಿಷ್ಠ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ರೋಹಿತ್​ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ನಿವೃತ್ತಿಯ ನಂತರ ಇದು ಭಾರತ ಮೊದಲ ಟೆಸ್ಟ್ ಸರಣಿಯಾಗಿದೆ. ಮೇ 7, ಮೇ 12ರಂದು ಕ್ರಮವಾಗಿ ಈ ಸೂಪರ್ ಸ್ಟಾರ್ ಜೋಡಿ ಟೆಸ್ಟ್​​​​ ಕ್ರಿಕೆಟ್​​ನಿಂದ ಹಿಂದೆ ಸರಿದಿದ್ದರು. ರೋಹಿತ್​ ಶರ್ಮಾ ಸ್ಥಾನಕ್ಕೆ ಬದಲಿಯಾಗಿ ಯುವ ಆಟಗಾರ ಶುಭ್ಮನ್ ಗಿಲ್ ಅವರನ್ನು ಟೆಸ್ಟ್ ತಂಡದ ನೂತನ ನಾಯಕನನ್ನಾಗಿ ನೇಮಕ ಮಾಡಲಾಗಿದೆ. ರಿಷಭ್ ಪಂತ್​ಗೆ ವೈಸ್ ಉಪನಾಯಕತ್ವ ನೀಡಲಾಗಿದೆ. ಹಾಗಿದ್ದರೆ ಮೊದಲ ಟೆಸ್ಟ್​​ಗೆ ಭಾರತದ ಸಂಭಾವ್ಯ ಪ್ಲೇಯಿಂಗ್​ 11 ಹೇಗಿರಲಿದೆ ಎನ್ನುವುದನ್ನು ಮುಂದೆ ತಿಳಿಯೋಣ.

ಆರಂಭಿಕ ಸ್ಥಾನಕ್ಕೆ ಯಾರು?

ಮಹತ್ವದ ಸರಣಿಗೆ ಭಾರತ ತಂಡದಲ್ಲಿ ನಾಲ್ವರ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಪೈಕಿ ಒಬ್ಬರ ಸ್ಥಾನ ಖಚಿತವಾಗಿದೆ. ಯಶಸ್ವಿ ಜೈಸ್ವಾಲ್ ಈಗಾಗಲೇ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಆದರೆ ಇವರ ಜೊತೆಗೆ ಇನ್ನಿಂಗ್ಸ್​​ ಆರಂಭಿಸಲು ಅಭಿಮನ್ಯು ಈಶ್ವರನ್, ಕೆಎಲ್ ರಾಹುಲ್ ಮತ್ತು ಸಾಯಿ ಸುದರ್ಶನ್ ನಡುವೆ ಸ್ಪರ್ಧೆ ನಡೆಯುತ್ತಿದೆ. ಆದರೆ ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಹೆಚ್ಚಿರುವ ಕಾರಣ ಸಾಯಿ ಸುದರ್ಶನ್​ಗೆ ಮೊದಲ ಆದ್ಯತೆ ನೀಡುವ ನಿರೀಕ್ಷೆ ಹೆಚ್ಚಿದೆ. ಸಾಕಷ್ಟು ಬಾರಿ ತಂಡಕ್ಕೆ ಆಯ್ಕೆಯಾಗಿದ್ದರೂ ಈ ಬಾರಿಯೂ 11ರಲ್ಲಿ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ.

ಗಿಲ್​ಗೆ 3ನೇ ಸ್ಥಾನ, ಕೊಹ್ಲಿ ಸ್ಥಾನ ತುಂಬೋದು ಯಾರು?

ನೂತನ ನಾಯಕ ಶುಭ್ಮನ್ ಗಿಲ್ ಅವರು ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಆದರೆ ವಿರಾಟ್ ಕೊಹ್ಲಿ ಸ್ಥಾನ ಯಾರು ತುಂಬುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ಸ್ಥಾನಕ್ಕೆ ಅನುಭವಿಗಳು ಬೇಕಿರುವ ಕಾರಣ ಕೆಎಲ್ ರಾಹುಲ್​ರನ್ನು ಆಡಿಸುವ ಸಾಧ್ಯತೆಯಿದೆ. ವಿಕೆಟ್ ಕೀಪರ್​ ಆಗಿ ರಿಷಭ್ ಪಂತ್ ಮುಂದುವರೆಯಲಿದ್ದಾರೆ. ಆರಂಭಿಕರು ವೈಫಲ್ಯ ಅನುಭವಿಸಿದರೂ ಮಧ್ಯಮ ಕ್ರಮಾಂಕದಲ್ಲಿ ಅನುಭವಿಗಳೇ ಇರಬೇಕೆಂಬ ಕಾರಣಕ್ಕೆ ಟೀಮ್ ಮ್ಯಾನೇಜ್​ಮೆಂಟ್ ಚಿಂತಿಸುತ್ತಿದೆ. ಮತ್ತೊಂದೆಡೆ 8 ವರ್ಷಗಳ ನಂತರ ಕಂಬ್ಯಾಕ್ ಮಾಡಿದ ಕರುಣ್ ನಾಯರ್​ಗೆ ಪ್ಲೇಯಿಂಗ್​ 11ನಲ್ಲಿ ಅವಕಾಶ ಸಿಗುವ ಸಾಧ್ಯತೆ ತೀರಾ ಕಡಿಮೆ.

ಬೌಲರ್ಸ್ ಯಾರು?

6ನೇ ಕ್ರಮಾಂಕದಲ್ಲಿ ವೇಗದ ಆಲ್​ರೌಂಡರ್​ ನಿತೀಶ್ ರೆಡ್ಡಿ ಅವಕಾಶ ಪಡೆಯಲಿದ್ದರೆ, 7ನೇ ಕ್ರಮಾಂಕದಲ್ಲಿ ಸ್ಪಿನ್ ಆಲ್​ರೌಂಡರ್ ರವೀಂದ್ರ ಜಡೇಜಾ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಆದರೆ ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ಅವರು ಅವಕಾಶಕ್ಕಾಗಿ ಕಾಯಬೇಕಾಗುತ್ತದೆ. ಇಂಗ್ಲೆಂಡ್​ನ ಪಿಚ್​ಗಳು ವೇಗದ ಬೌಲರ್​​ಗಳಿಗೆ ಹೆಚ್ಚು ಅನುಕೂಲಕರವಾಗಿರುವ ಕಾರಣ ಜಸ್ಪ್ರೀತ್ ಬುಮ್ರಾ ಜೊತೆಗೆ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಆಡಬಹುದು. ಹೀಗಾಗಿ, ಆಕಾಶ್ ದೀಪ್, ಕುಲ್ದೀಪ್ ಯಾದವ್ ಬೆಂಚ್ ಕಾಯಬೇಕಾಗುತ್ತದೆ. ಒಂದು ವೇಳೆ ಸ್ಪಿನ್ನರ್​​​​ಗಳು ಮಿಂಚುತ್ತಿದ್ದರೆ, ಕುಲ್ದೀಪ್​ಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಭಾರತದ ಸಂಭಾವ್ಯ ಪ್ಲೇಯಿಂಗ್ 11

ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭಮನ್ ಗಿಲ್, ಕೆಎಲ್ ರಾಹುಲ್, ರಿಷಭ್ ಪಂತ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಇಂಗ್ಲೆಂಡ್​​ ಸರಣಿಗೆ ಭಾರತ ತಂಡ ಪ್ರಕಟ

ಶುಭ್ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ/ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ ಜುರೆಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್ ಸಿಂಗ್, ಕುಲ್ದೀಪ್ ಯಾದವ್.

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.