ಬಾಕ್ಸಿಂಗ್ ಡೇ ಟೆಸ್ಟ್: ಜೈಸ್ವಾಲ್-ಕೊಹ್ಲಿ ಅದ್ಭುತ ಆಟದ ಹೊರತಾಗಿಯೂ ಸಂಕಷ್ಟದಲ್ಲಿ ಭಾರತ; 2ನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ಮೇಲುಗೈ
ಬಾಕ್ಸಿಂಗ್ ಡೇ ಟೆಸ್ಟ್ ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಮತ್ತೆ ಮೇಲುಗೈ ಸಾಧಿಸಿದೆ. ಸ್ಟೀವ್ ಸ್ಮಿತ್ ಶತಕವು ತಂಡದ ಮೊತ್ತ ಹೆಚ್ಚಿಸಲು ನೆರವಾಗಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ 474 ರನ್ ಪೇರಿಸಿದೆ. ಇದಕ್ಕೆ ಪ್ರತಿಯಾಗಿ ಭಾರತದ ಪರ ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್ ಶತಕದ ಜೊತೆಯಾಟ ಆಡಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸುಸ್ಥಿತಿಯಲ್ಲಿದೆ. ಎರಡನೇ ದಿನದಾಟದ ಅಂತ್ಯದ ವೇಳೆಗೆ ಮೇಲುಗೈ ಸಾಧಿಸಿರುವ ಆತಿಥೇಯರು, ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಎರಡನೇ ದಿನ ಸ್ಟೀವ್ ಸ್ಮಿತ್ ಆಕರ್ಷಕ ಶತಕ ಗಮನ ಸೆಳೆದರೆ, ಯಶಸ್ವಿ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ ಶತಕದ ಜೊತೆಯಾಟ ಪಂದ್ಯದ ಹೈಲೈಟ್ ಆಯ್ತು. ಸದ್ಯ ಎರಡು ದಿನಗಳ ಆಟ ಸಂಪೂರ್ಣವಾಗಿದ್ದು, ಭಾರತ ತಂಡ 310 ರನ್‌ಗಳ ಹಿನ್ನಡೆ ಅನುಭವಿಸಿದೆ. ಮೂರನೇ ದಿನದಾಟ ರೋಚಕತೆ ಉಳಿಸಿಕೊಂಡಿದೆ.
ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಮತ್ತೆ ಮೇಲುಗೈ ಸಾಧಿಸಿತು. ಮಧ್ಯಮ ಕ್ರಮಾಂಕದ ಆಟಗಾರ ಸ್ಟೀವ್ ಸ್ಮಿತ್, ಭಾರತದ ವಿರುದ್ಧ 11ನೇ ಶತಕ ಸಿಡಿಸಿ ತಂಡದ ಮೊತ್ತವನ್ನು 474ಕ್ಕೆ ಏರಿಸಿದರು. ಇದಕ್ಕೆ ಪ್ರತಿಯಾಗಿ ಕ್ರೀಸ್‌ಕಚ್ಚಿ ಅಡಲು ವಿಫಲವಾದ ಭಾರತ, ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ.
ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ 101 ರನ್ ಗಳಿಸಿದ್ದ ಸ್ಮಿತ್, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ 140 ರನ್ ಸಿಡಿಸಿದರು. ಇದರೊಂದಿಗೆ ಭಾರತದ ವಿರುದ್ಧ ಶತಕ ದಾಖಲೆ ನಿರ್ಮಿಸಿದರು.
ಆಸ್ಟ್ರೇಲಿಯಾದ ಬೃಹತ್ ಮೊತ್ತಕ್ಕೆ ಉತ್ತರವಾಗಿ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (82) ಮತ್ತು ವಿರಾಟ್ ಕೊಹ್ಲಿ (36) ಉತ್ತಮ ಜೊತೆಯಾಟವಾಡಿದರು. ಇವರಿಬ್ಬರ ನಡುವೆ ಮೂರನೇ ವಿಕೆಟ್‌ಗೆ 102 ರನ್‌ಗಳ ಜೊತೆಯಾಟ ಬಂತು. ಒಂದು ಹಂತದಲ್ಲಿ 153 ರನ್ ವೇಳೆಗೆ 2 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ, ಎರಡನ ದಿನದಾಟದ ಅಂತ್ಯದ ವೇಳೆಗೆ 164 ರನ್ ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿದೆ.
ಅನಗತ್ಯ ರನೌಟ್‌ಗೆ ಬಲಿಯಾದ ಯಶಸ್ವಿ ಜೈಸ್ವಾಲ್
ಉತ್ತಮ ಜೊತೆಯಾಟವಾಡುತ್ತಿದ್ದ ಜೈಸ್ವಾಲ್ ಮತ್ತು ಕೊಹ್ಲಿ, ಸಂವಹನ ಸಮಸ್ಯೆಯಿಂದಾಗಿ ವಿಕೆಟ್ ಕಳೆದುಕೊಳ್ಳುವಂತಾಯ್ತು. ಚೆಂಡನ್ನು ನೇರವಾಗಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಬಳಿಗೆ ಹೊಡೆದ ಜೈಸ್ವಾಲ್, ನಾನ್‌ಸ್ಟ್ರೈಕ್ ಬಳಿ ಇದ್ದ ವಿರಾಟ್‌ಗೆ ಸಿಂಗಲ್ ಓಡುವಂತೆ ಕರೆ ನೀಡಿದರು. ಆದರೆ, ಕೊಹ್ಲಿ ಬೇಡ ಎಂದರು. ಅಷ್ಟರಲ್ಲೇ ನಾನ್‌ಸ್ಟ್ರೈಕ್ ಬಳಿ ಓಡಿ ಬಂದಿದ್ದ ಜೈಸ್ವಾಲ್ ಅವರನ್ನು, ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ರನೌಟ್ ಮಾಡಿದರು. ಹೀಗಾಗಿ ಯಶಸ್ವಿ ಅನಗತ್ಯವಾಗಿ ವಿಕೆಟ್ ಒಪ್ಪಿಸಬೇಕಾಯ್ತು.
ಫಾಲೊ ಆನ್ ಭೀತಿ
ಜೈಸ್ವಾಲ್ ಔಟಾಗುತ್ತಿದ್ದಂತೆಯೇ ವೇಗದ ಬೌಲರ್ ಬೋಲ್ಯಾಂಡ್ ಅವರು ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿದರು. ಕ್ರಮಾಂಕ ಬದಲಿಸಿ ಮುಂಚಿತವಾಗಿ ಬಂದ ವೇಗಿ ಆಕಾಶ್ ದೀಪ್ ಕೂಡಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ದಿನದಾಟದ ಅಂತ್ಯದ ವೇಳೆಗೆ ರವೀಂದ್ರ ಜಡೇಜಾ (ಅಜೇಯ 4) ಮತ್ತು ರಿಷಭ್ ಪಂತ್ (ಅಜೇಯ 6) ಆಡುತ್ತಿದ್ದಾರೆ. ಮೂರನೇ ದಿನದಾಟದ ವೇಳೆ ಬ್ಯಾಟಿಂಗ್ ಮುಂದುವರೆಸಲಿದ್ದಾರೆ. ಭಾರತ ಇನ್ನೂ 310 ರನ್‌ಗಳ ಹಿನ್ನಡೆಯಲ್ಲಿದ್ದು, ಈಗಾಗಲೇ 5 ವಿಕೆಟ್ ಕಳೆದುಕೊಂಡಿದೆ. ಫಾಲೋ ಆನ್ ತಪ್ಪಿಸಲು ಇನ್ನೂ ಕನಿಷ್ಠ 100 ರನ್ ಗಳಿಸಲೇ ಬೇಕಿದೆ.
ಭಾರತದ ಪರ ನಾಯಕ ರೋಹಿತ್ ಶರ್ಮಾ ಮತ್ತೆ ನಿರಾಶೆ ಮೂಡಿಸಿದರು. ಕೆಎಲ್ ರಾಹುಲ್ ಅವರಿಂದ ತಮ್ಮ ಆರಂಭಿಕ ಸ್ಥಾನವನ್ನು ಮರಳಿ ಪಡೆದರೂ, ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ. ಪ್ಯಾಟ್ ಕಮಿನ್ಸ್ ಅವರ ಎಸೆತದಲ್ಲಿ ಬೋಲ್ಯಾಂಡ್‌ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಅವರ ಗಳಿಕೆ ಕೇವಲ 3 ರನ್. ಅಡಿಲೇಡ್ ಹಾಗೂ ಬ್ರಿಸ್ಬೇಸ್ ಟೆಸ್ಟ್‌ಗಳಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಹಿಟ್‌ಮ್ಯಾನ್, ಕಳೆದ ಎಂಟು ಇನ್ನಿಂಗ್ಸ್‌ಗಳಲ್ಲಿ 18ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ.