ನಾನು ಮತ್ತು ಧೋನಿ ಆತ್ಮೀಯ ಸ್ನೇಹಿತರಲ್ಲ; ಯುವರಾಜ್ ಸಿಂಗ್ ಮಾತಿನ ನಿಜಾರ್ಥವೇನು
ಕನ್ನಡ ಸುದ್ದಿ  /  ಕ್ರಿಕೆಟ್  /  ನಾನು ಮತ್ತು ಧೋನಿ ಆತ್ಮೀಯ ಸ್ನೇಹಿತರಲ್ಲ; ಯುವರಾಜ್ ಸಿಂಗ್ ಮಾತಿನ ನಿಜಾರ್ಥವೇನು

ನಾನು ಮತ್ತು ಧೋನಿ ಆತ್ಮೀಯ ಸ್ನೇಹಿತರಲ್ಲ; ಯುವರಾಜ್ ಸಿಂಗ್ ಮಾತಿನ ನಿಜಾರ್ಥವೇನು

Yuvraj Singh: ಧೋನಿ ಮತ್ತು ತಾನು ಆಪ್ತ ಸ್ನೇಹಿತರಲ್ಲ ಎಂದು ಹೇಳುವ ಮೂಲಕ ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್‌ ಸಿಂಗ್‌ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದ್ದಾರೆ. ಅವರ ಮಾತಿನ ನಿಜಾರ್ಥ ಹೀಗಿದೆ.

ನಾನು ಮತ್ತು ಧೋನಿ ಆತ್ಮೀಯ ಸ್ನೇಹಿತರಲ್ಲ ಎಂದ ಯುವರಾಜ್ ಸಿಂಗ್
ನಾನು ಮತ್ತು ಧೋನಿ ಆತ್ಮೀಯ ಸ್ನೇಹಿತರಲ್ಲ ಎಂದ ಯುವರಾಜ್ ಸಿಂಗ್

ಯುವರಾಜ್ ಸಿಂಗ್ (Yuvraj Singh) ಮತ್ತು ಎಂಎಸ್ ಧೋನಿ (MS Dhoni) ಭಾರತ ಕ್ರಿಕೆಟ್‌ ತಂಡದ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟಿಂಗ್‌ ಅಸ್ತ್ರಗಳಾಗಿದ್ದರು. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‌ನಲ್ಲಿ ಇವರಿಬ್ಬರ ಪಾತ್ರ ನಿರ್ಣಾಯಕವಾಗಿತ್ತು. ಸದ್ಯ ಈ ಇಬ್ಬರೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದರೆ, ಈಗಲೂ ಭಾರತದ ತಂಡದ ಮಧ್ಯಮ ಕ್ರಮಾಂಕದ ಬಲಾಢ್ಯ ಬ್ಯಾಟರ್‌ಗಳಾಗಿ ಉಳಿದಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ನಡೆದ ಕೆಲವು ಬೆಳವಣಿಗೆಗಳಿಂದಾಗಿ ಧೋನಿ ಮತ್ತು ಯುವರಾಜ್ ಸಿಂಗ್ ಅವರ ವೈಯಕ್ತಿಕ ಸಂಬಂಧದ ಬಗ್ಗೆ‌ ಹಲವಾರು ಪ್ರಶ್ನೆಗಳಿದ್ದವು. ಆದರೆ, ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಧೋನಿ ಮತ್ತು ತಾನು ಆಪ್ತ ಸ್ನೇಹಿತರಲ್ಲ ಎಂದು ಹೇಳುವ ಮೂಲಕ ಭಾರತದ ಮಾಜಿ ಆಲ್‌ರೌಂಡರ್ ಯುವಿ, ಅಭಿಮಾನಿಗಳು ಅಚ್ಚರಿ ಪಡುವಂತೆ ಮಾಡಿದ್ದಾರೆ.

ಯೂಟ್ಯೂಬ್‌ನಲ್ಲಿ ಟಿಆರ್‌ಎಸ್ ಕ್ಲಿಪ್‌ ಚಾನೆಲ್‌ ಜೊತೆಗಿನ ಸಂಭಾಷಣೆಯಲ್ಲಿ, ಯುವಿ ಮಾತನಾಡಿದ್ದಾರೆ. ಕ್ರಿಕೆಟ್‌ನಿಂದಾಗಿ ಮಾತ್ರ ಮಾಹಿಯೊಂದಿಗೆ ಸ್ನೇಹಿತನಾಗಿ ಇದ್ದುದಾಗಿ ಯುವರಾಜ್ ಹೇಳಿದ್ದಾರೆ. ಧೋನಿ ಅವರು ನಾಯಕರಾಗಿದ್ದಾಗ ಉಪನಾಯಕನಾಗಿದ್ದ ಯುವಿಗೆ, ಮಾಹಿ ತೆಗೆದುಕೊಳ್ಳುತ್ತಿದ್ದ ಹೆಚ್ಚಿನ ನಿರ್ಧಾರಗಳು ಇಷ್ಟವಾಗುತ್ತಿರಲಿಲ್ಲವಂತೆ.

ನಾನು ಮತ್ತು ಮಾಹಿ ಆತ್ಮೀಯ ಸ್ನೇಹಿತರಲ್ಲ

“ನಾನು ಮತ್ತು ಮಾಹಿ ಆತ್ಮೀಯ ಸ್ನೇಹಿತರಲ್ಲ. ನಾವು ಜೊತೆಗೆ ಕ್ರಿಕೆಟ್‌ ಆಡುತ್ತಿದ್ದ ಕಾರಣಕ್ಕೆ ಸ್ನೇಹಿತರಾಗಿದ್ದೆವು. ಮಾಹಿ ಅವರ ಜೀವನಶೈಲಿ ನನಗಿಂತ ತುಂಬಾ ಭಿನ್ನವಾಗಿತ್ತು. ಹೀಗಾಗಿ ನಾವು ಎಂದಿಗೂ ಆತ್ಮೀಯ ಸ್ನೇಹಿತರಾಗಿರಲಿಲ್ಲ. ನಾವು ಕ್ರಿಕೆಟ್‌ನಿಂದ ಮಾತ್ರ ಸ್ನೇಹಿತರಾಗಿದ್ದೆವು. ನಾನು ಮತ್ತು ಮಾಹಿ ಮೈದಾನಕ್ಕಿಳಿದು ಆಡುವಾಗ ನಮ್ಮ ದೇಶಕ್ಕಾಗಿ ಇಬ್ಬರೂ 100 ಶೇಕಡಕ್ಕೂ ಹೆಚ್ಚು ಪ್ರಯತ್ನ ಹಾಕಿದ್ದೇವೆ. ಅವರು ನಾಯಕನಾಗಿದ್ದರೆ ನಾನು ಉಪನಾಯಕನಾಗಿದ್ದೆ. ನಾನು ತಂಡಕ್ಕೆ ಬಂದಾಗ ಅವರಿಗಿಂದ 4 ವರ್ಷ ಜೂನಿಯರ್ ಆಗಿದ್ದೆ. ನಾಯಕ ಮತ್ತು ಉಪನಾಯಕರ ನಡುವೆ ನಿರ್ಧಾರಗಳಲ್ಲಿ ವ್ಯತ್ಯಾಸಗಳಿರುತ್ತವೆ,” ಎಂದು ಯುವಿ ಹೇಳಿದ್ದಾರೆ.

“ಕೆಲವೊಮ್ಮೆ ಅವರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ನನಗೆ ಇಷ್ಟವಾಗುತ್ತಿರಲಿಲ್ಲ. ಇನ್ನೂ ಕೆಲವೊಮ್ಮೆ ನನ್ನ ನಿರ್ಧಾರಗಳು ಅವರಿಗೆ ಇಷ್ಟವಾಗುತ್ತಿರಲಿಲ್ಲ. ಅದು ಪ್ರತಿ ತಂಡದಲ್ಲಿಯೂ ಸಾಮಾನ್ಯ ಸಂಗತಿ,” ಎಂದು ಯುಚಿ ತಿಳಿಸಿದ್ದಾರೆ. ‌

“ನನ್ನ ವೃತ್ತಿಜೀವನದ ಕೊನೆಯ ಹಂತದಲ್ಲಿ ನನಗೆ ಆ ಬಗ್ಗೆ ಸರಿಯಾದ ಚಿತ್ರಣ ಸಿಗದಿದ್ದಾಗ, ನಾನು ಮಾಹಿ ಬಳಿ ಸಲಹೆ ಕೇಳಿದೆ. ಆಯ್ಕೆ ಸಮಿತಿಯು ಈಗ ನಿನ್ನ ಕಡೆ ನೋಡುತ್ತಿಲ್ಲ ಎಂದು ಮಾಹಿ ಹೇಳಿದರು. ಆ ಕ್ಷಣದಲ್ಲಿ ಕನಿಷ್ಠ ನನಗೆ ನನ್ನ ಬಗೆಗಿನ ನೈಜ ಚಿತ್ರಣ ಸಿಕ್ಕಿತು. ಇದು 2019ರ ವಿಶ್ವಕಪ್‌ಗೆ ಸ್ವಲ್ಪ ಮುಂಚಿತವಾಗಿ ನಡೆದ ವಿಚಾರ. ಅಲ್ಲದೆ ಅದು ಸತ್ಯ,” ಎಂದು ಯುವಿ ಬಹಿರಂಗಪಡಿಸಿದ್ದಾರೆ.

ಯುವಿ ಮಾತಿನ ಅರ್ಥವೇನು?

ಇಲ್ಲಿ ಸ್ನೇಹಿತರು ಅಲ್ಲ ಎಂಬ ಕಾರಣಕ್ಕೆ ಯುವಿ ಅವರು ಮಾಹಿಯನ್ನು ದೂರಿಲ್ಲ. ತಾವಿಬ್ಬರೂ ಆತ್ಮೀಯ ಸ್ನೇಹಿತರಾಗಿರಲಿಲ್ಲ. ಆದರೆ, ಇಬ್ಬರೂ ವೃತ್ತಿಪರರಾಗಿ ಒಬ್ಬರನ್ನೊಬ್ಬರು ಗೌರವಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ದೇಶಕ್ಕಾಗಿ ಆಡುವಾಗ ಇಬ್ಬರೂ ಒಂದಾಗಿ ಆಡಿದ್ದಾಗಿ ಹೇಳಿಕೊಂಡಿದ್ದಾರೆ.

“ನಮ್ಮ ತಂಡದ ಸದಸ್ಯರು ಮೈದಾನದ ಹೊರಗೂ ಉತ್ತಮ ಸ್ನೇಹಿತರಾಗಬೇಕಾಗಿಲ್ಲ. ಪ್ರತಿಯೊಬ್ಬರೂ ವಿಭಿನ್ನ ಜೀವನಶೈಲಿ ಹಾಗೂ ಕೌಶಲ್ಯವನ್ನು ಹೊಂದಿದ್ದಾರೆ. ಕೆಲವೊಬ್ಬರು ನಿರ್ದಿಷ್ಟ ಜನರೊಂದಿಗೆ ಇರಲು ಇಷ್ಟಪಡುತ್ತಾರೆ. ಮೈದಾನಕ್ಕಿಳಿಯಬೇಕಾದರೆ ಎಲ್ಲರೊಂದಿಗೆ ಉತ್ತಮ ಸ್ನೇಹಿತರಾಗಿರಬೇಕೆಂದೇನಿಲ್ಲ. ಯಾವುದೇ ತಂಡವಾದರೂ ಅಲ್ಲಿರುವ ಎಲ್ಲಾ ಹನ್ನೊಂದು ಮಂದಿ ಹೊಂದಿಕೆಯಾಗುವುದಿಲ್ಲ. ಆದರೆ, ಆಡುವಾಗ ಮಾತ್ರ ಎಲ್ಲಾ ಅಹಂಕಾರವನ್ನು ಬಿಟ್ಟು ತಂಡಕ್ಕಾಗಿ ಕೊಡುಗೆ ನೀಡಬೇಕು,” ಎಂದು ಯುವಿ ತಿಳಿಸಿದ್ದಾರೆ.

“2011ರ ವಿಶ್ವಕಪ್ ಫೈನಲ್‌ನಲ್ಲಿ ಗೌತಮ್ ಗಂಭೀರ್ ಔಟಾದರೆ ನಾನು ಬ್ಯಾಟಿಂಗ್‌ಗೆ ಹೋಗುತ್ತೇನೆ, ವಿರಾಟ್ ಔಟಾದರೆ ಧೋನಿ ಹೋಗುವುದಾಗಿ ಎಂದು ನಿರ್ಧರಿಸಲಾಗಿತ್ತು. ಅದು ಸ್ನೇಹಕ್ಕಿಂತ ಮುಖ್ಯ. ನಾವು ವೃತ್ತಿಪರರು. ನಾನು ಅವರು ಚೆನ್ನಾಗಿರಬೇಕೆಂದು ಬಯಸುತ್ತೇನೆ. ಅವನು ನನಗೆ ಶುಭ ಹಾರೈಸುತ್ತಾರೆಂದು ನನಗೆ ತಿಳಿದಿದೆ,” ಎಂದು ಯುವಿ ಹೇಳಿಕೊಂಡಿದ್ದಾರೆ.

Whats_app_banner