6,6,6,6,6,6,6… ಅದೇ ಖದರ್, ಅದೇ ಪವರ್; 2007ರ ವಿಶ್ವಕಪ್ ಬ್ಯಾಟಿಂಗ್ ವೈಭವ ಮರುಕಳಿಸಿದ ಯುವರಾಜ್ ಸಿಂಗ್, ವಿಡಿಯೋ
ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20ಯ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ಮಾಸ್ಟರ್ಸ್ ವಿರುದ್ಧ ಇಂಡಿಯಾ ಮಾಸ್ಟರ್ಸ್ ಪರ ಯುವರಾಜ್ ಸಿಂಗ್ ಸಿಕ್ಸರ್ಗಳ ದಂಡಯಾತ್ರೆ ನಡೆಸಿ ಮತ್ತೊಮ್ಮೆ ಆ ತಂಡಕ್ಕೆ ದುಸ್ವಪ್ನವಾಗಿ ಕಾಡಿದ್ದಾರೆ.

2007ರ ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್ ನೆನಪಿದೆಯೇ? ಅವತ್ತು ಆಸ್ಟ್ರೇಲಿಯಾ ವಿರುದ್ಧ ಯುವರಾಜ್ ಸಿಂಗ್ ಅವರು ಆಡಿದ್ದ ಸ್ಫೋಟಕ ಆಟವನ್ನು ಕ್ರಿಕೆಟ್ ಪ್ರೇಮಿಗಳು ಹೇಗೆ ಮರೆಯಲು ಸಾಧ್ಯ, ಅಲ್ಲವೇ? ಕೇವಲ 30 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಿತ ಸಿಡಿಸಿದ್ದ 70 ರನ್ಗಳ ಅಮೋಘ ಆಟದಿಂದ ಭಾರತ ತಂಡ ಫೈನಲ್ಗೂ ಪ್ರವೇಶಿಸಿತ್ತು! 18 ವರ್ಷಗಳ ತಂಡದ ವಿರುದ್ಧ ಅದೇ ಪರಿಸ್ಥಿತಿಯಲ್ಲಿ ಅಂತಹದ್ದೇ ಇನ್ನಿಂಗ್ಸ್ ಅನ್ನು ಮತ್ತೆ ನೆನಪಿಸಿದ್ದಾರೆ ಯುವರಾಜ್!
ಮಾರ್ಚ್ 13ರಂದು ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20ಯ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ಮಾಸ್ಟರ್ಸ್ ವಿರುದ್ಧ ಇಂಡಿಯಾ ಮಾಸ್ಟರ್ಸ್ ಪರ ಯುವರಾಜ್ ಸಿಂಗ್ ಸಿಕ್ಸರ್ಗಳ ಹೋಳಿ ಆಚರಿಸಿ 2007ರ ಟಿ20 ವಿಶ್ವಕಪ್ ಬ್ಯಾಟಿಂಗ್ ವೈಭವವನ್ನು ಮರುಕಳಿಸಿದ್ದಾರೆ. ವಿಶ್ವ ಶ್ರೇಷ್ಠ ಕ್ರಿಕೆಟಿಗ ಯುವರಾಜ್, ಹಿರಿಯ ಆಸೀಸ್ ಆಟಗಾರರ ವಿರುದ್ಧ ಬರೋಬ್ಬರಿ 7 ಸಿಕ್ಸರ್ ಚಚ್ಚಿ ಭಾರತ ತಂಡವನ್ನು ಫೈನಲ್ಗೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
30 ಎಸೆತ, 59 ರನ್, 7 ಸಿಕ್ಸರ್
2007ರ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲೂ ಸೋಲಿಸಿ ಆಸ್ಟ್ರೇಲಿಯಾ ತಂಡವನ್ನು ಹೊರದಬ್ಬಿದ್ದ ಯುವಿ, ಈಗ ಐಎಂಎಲ್ನಲ್ಲೂ ಅದೇ ತಂಡವನ್ನು ಟೂರ್ನಿಯಿಂದ ಹೊರಹಾಕಿದ್ದಾರೆ. ರಾಯಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಸೆಮೀಸ್ನಲ್ಲಿ ಇಂಡಿಯಾ 6.3 ಓವರ್ಗಳಲ್ಲಿ 64 ರನ್ಗೆ 2 ವಿಕೆಟ್ ಕಳೆದುಕೊಂಡ ಅವಧಿಯಲ್ಲಿ ಕಣಕ್ಕಿಳಿದ ಯುವರಾಜ್, 30 ಎಸೆತಗಳಲ್ಲಿ 7 ಸಿಕ್ಸರ್, 1 ಬೌಂಡರಿ ಸಹಿತ 59 ರನ್ ಗಳಿಸಿದರು. ಅದರಲ್ಲೂ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಮೆಕ್ಗೈನ್ ಅವರ ಒಂದೇ ಓವರ್ನಲ್ಲಿ ಭರ್ಜರಿ 3 ಸಿಕ್ಸರ್ ಚಚ್ಚಿದ್ದು ಅವರ ಹಳೆಯ ಬ್ಯಾಟಿಂಗ್ ಖದರ್ ಮರುಕಳಿಸಿತು.
ಈ ಸಿಕ್ಸರ್ಗಳು ಥೇಟ್ 2007ರ ಟಿ20 ವಿಶ್ವಕಪ್ ಸೆಮೀಸ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡಿಸಿದ ಸಿಕ್ಸರ್ಗಳಂತೆಯೇ ಇದ್ದವು. ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಯುವಿ ಆಟವನ್ನು ಹಳೆಯ ಆಟವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಬುಲೆಟ್ ವೇಗದಲ್ಲಿ ಬಂದ ಚೆಂಡನ್ನು ರಾಕೆಟ್ ವೇಗದಲ್ಲಿ ಕಳುಹಿಸಿದ್ದಾರೆ. ಕ್ರಿಕೆಟ್ ಪ್ರಿಯರು ಅದೇ ಖದರ್, ಅದೇ ಪವರ್, ಕೆಲವೊಂದು ಎಂದಿಗೂ ಬದಲಾಗಲ್ಲ ಎಂದು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮೈದಾನದಲ್ಲಿ ನೆರೆದಿದ್ದ ಫ್ಯಾನ್ಸ್ಗೆ ಮನರಂಜನೆಯ ರಸದೌತಣ ಉಣಬಡಿಸಿದರು.
ಫೈನಲ್ಗೆ ಇಂಡಿಯಾ ಮಾಸ್ಟರ್ಸ್
ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಮಾಸ್ಟರ್ಸ್ ಸೆಮಿಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿತು. ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 220 ರನ್ ಪೇರಿಸಿತು. ಸಚಿನ್ ತೆಂಡೂಲ್ಕರ್ 42 ರನ್, ಯುವರಾಜ್ ಸಿಂಗ್ 59 ರನ್, ಸ್ಟುವರ್ಟ್ ಬಿನ್ನಿ 36, ಯೂಸಫ್ ಪಠಾಣ್ 23 ರನ್ ಸಿಡಿಸಿ ಮಿಂಚಿದರು.
ಈ ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 18.1 ಓವರ್ಗಳಲ್ಲಿ 126 ರನ್ಗೆ ಆಲೌಟ್ ಆಯಿತು. ಭಾರತದ ಬೌಲರ್ಗಳ ದಾಳಿಗೆ ತತ್ತರಿಸಿತು. ಶಹಬಾಜ್ ನದೀಮ್ 4 ವಿಕೆಟ್ ಕಿತ್ತು ಮಿಂಚಿದರೆ, ಇರ್ಫಾನ್ ಪಠಾಣ್, ವಿನಯ್ ಕುಮಾರ್ ತಲಾ 2 ವಿಕೆಟ್ ಕಬಳಿಸಿದರು. ಆಸೀಸ್ ಬೆನ್ ಕಟಿಂಗ್ 39 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್. 94 ರನ್ಗಳಿಂದ ಮಣಿಸಿದ ಭಾರತ ಫೈನಲ್ಗೆ ಅರ್ಹತೆ ಪಡೆಯಿತು.
ಇದನ್ನೂ ಓದಿ: ಐಪಿಎಲ್ನಿಂದ ಹ್ಯಾರಿ ಬ್ರೂಕ್ಗೆ ಎರಡು ವರ್ಷ ನಿಷೇಧ