ಕನ್ನಡ ಸುದ್ದಿ  /  Cricket  /  Yuvraj Singh To Parthiv Patel Players Who Won Ipl Trophy After Leaving Royal Challengers Bangalore Moeen Ali Rcb Prs

ಆರ್​ಸಿಬಿ ತೊರೆದ ಬಳಿಕ ಐಪಿಎಲ್ ಟ್ರೋಫಿ ಗೆದ್ದ ಕ್ರಿಕೆಟರ್ಸ್ ಇವರೇ ನೋಡಿ; ತಂಡಕ್ಕೆ ಬಂದು ಹೋದೋರೆಲ್ಲಾ ಕಪ್ ಗೆದ್ದರು, ಆದರೆ..!

Royal Challengers Bangalore : ರಾಯಲ್ ಚಾಲೆಂಜರ್ಸ್ ಬೆಂಗಳೂರು ತೊರೆದು ಬೇರೊಂದು ತಂಡ ಸೇರಿ ಐಪಿಎಲ್ ಟ್ರೋಫಿ ಗೆದ್ದಿರುವ ಆಟಗಾರರು ಯಾರು? ಆ ಆಟಗಾರರ ಪಟ್ಟಿ ಇಲ್ಲಿದೆ.

ಆರ್​ಸಿಬಿ ತೊರೆದು ಬೇರೆ ತಂಡದ ಪರ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ ಕ್ರಿಕೆಟರ್ಸ್ ಇವರೇ
ಆರ್​ಸಿಬಿ ತೊರೆದು ಬೇರೆ ತಂಡದ ಪರ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ ಕ್ರಿಕೆಟರ್ಸ್ ಇವರೇ

ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆರಂಭಕ್ಕೆ‌ ಮುಹೂರ್ತ ನಿಗದಿಯಾಗಿದೆ. ಮಾರ್ಚ್ 22ರಿಂದ ಶ್ರೀಮಂತ ಲೀಗ್‌ಗೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು (RCB vs CSK 2024) ಎದುರಿಸಲಿದೆ. ಮೊದಲ ಪಂದ್ಯಕ್ಕೆ ಚೆನ್ನೈ ಎಂಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಕಳೆದ ಹದಿನಾರು ವರ್ಷಗಳಿಂದ ಕಪ್ ಗೆಲ್ಲದ ಆರ್ ಸಿಬಿ ಟ್ರೋಫಿ ಬರ ನೀಗಿಸೋಕೆ ಸಜ್ಜಾಗಿದೆ.

2009, 2011, 2016ರಲ್ಲಿ ಐಪಿಎಲ್ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಎತ್ತಲು ಸಾಧ್ಯವಾಗಿಲ್ಲ. 17ನೇ ಆವೃತ್ತಿಯಲ್ಲಾದರೂ ಟ್ರೋಫಿ ಕನಸು ನನಸಾಗುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಆರ್​ಸಿಬಿ ತಂಡ ತೊರೆದು ಬೇರೊಂದು ತಂಡ ಸೇರಿದ ಆಟಗಾರರು ಮಾತ್ರ ಟ್ರೋಫಿ ಗೆದ್ದು ಬೀಗಿದ್ದಾರೆ. ಆರ್ ಸಿಬಿಯಿಂದ‌ ಮತ್ತೊಂದು ತಂಡ ಸೇರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ ಆಟಗಾರರ ಪಟ್ಟಿ ಇಲ್ಲಿದೆ.

ಯುವರಾಜ್ ಸಿಂಗ್

2014ರಲ್ಲಿ 14 ಕೋಟಿಗೆ ರಾಯಲ್ ಚಾಲೆಂಜರ್ಸ್ ‌ಬೆಂಗಳೂರು ಸೇರಿದ ಟೀಮ್ ಇಂಡಿಯಾ ಆಲ್ ರೌಂಡರ್ ಯುವರಾಜ್ ಸಿಂಗ್, ಒಂದು ಸೀಸನ್ ನಂತರ‌ ತಂಡದಿಂದ ಬಿಡುಗಡೆಗೊಂಡರು. ಆ ವರ್ಷ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಬೆಂಗಳೂರು ಎರಡನೇ ಸುತ್ತಿಗೆ ಅರ್ಹತೆ ಪಡೆಯಲು ವಿಫಲವಾಗಿತ್ತು. ಇದಾದ ಎರಡು ವರ್ಷಗಳ ನಂತರ ಅಂದರೆ 2016ರಲ್ಲಿ ಯುವರಾಜ್ ಸಿಂಗ್ ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದು ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದರು. ಅಚ್ಚರಿ ಅಂದರೆ ಫೈನಲ್ ನಲ್ಲಿ ಆರ್ ಸಿಬಿ ವಿರುದ್ಧವೇ ಗೆದ್ದಿದ್ದು ವಿಶೇಷ. 2019ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಮೂಲಕ ಕಣಕ್ಕಿಳಿದು ಎರಡನೇ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದರು. ಒಂದು ತಿಂಗಳ ನಂತರ ವಿದಾಯ ಘೋಷಿಸಿದ್ದರು.

ಪಾರ್ಥೀವ್ ಪಟೇಲ್

ಪಾರ್ಥೀವ್ ಪಟೇಲ್ 2014ರಲ್ಲಿ ಬೆಂಗಳೂರು ತಂಡದ ಭಾಗವಾಗಿದ್ದರು. 2018ರಲ್ಲಿ ಮತ್ತೆ ಆರ್‌ಸಿಬಿ ಸೇರಿ 2020ರವರೆಗೂ ಆಡಿದರು. ಆದರೆ 2020ರಲ್ಲಿ ಇಡೀ ಐಪಿಎಲ್ ಬೆಂಚ್ಗೆ ಸೀಮಿತಕ್ಕೆ ಒಳಗಾದರು. ಈ ಟೂರ್ನಿ ಮುಗಿದ ಒಂದು ತಿಂಗಳ ನಂತರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 2014ರಲ್ಲಿ ರಾಯಲ್ ಚಾಲೆಂಜರ್ಸ್ ತೊರೆದ ನಂತರ ಮುಂಬೈ ಸೇರಿದ್ದ ಪಾರ್ಥೀವ್ 2015, 2017ರಲ್ಲಿ ಎರಡು ಟ್ರೋಫಿಗೆ ಮುತ್ತಿಕ್ಕಿದ್ದರು.

ಜಾಕ್ ಕಾಲೀಸ್

ಜಾಕ್​ ಕಾಲಿಸ್ ಆರ್​ಸಿಬಿಯೊಂದಿಗೆ ತಮ್ಮ ಐಪಿಎಲ್ ವೃತ್ತಿಜೀವನ ಪ್ರಾರಂಭಿಸಿದರು. ಮೂರು ಆವೃತ್ತಿಗಳು ಆರ್​​ಸಿಬಿ ಪರ ಆಡಿದ್ದರು. ಆರ್​​ಸಿಬಿ ಪರ 2009ರಲ್ಲಿ ಒಂದು ಫೈನಲ್ ಸಹ ಆಡಿದ್ದರು. ಆದರೆ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸೋತರು. ಆರ್​ಸಿಬಿ ಪರ 46 ಪಂದ್ಯಗಳನ್ನು ಆಡಿರುವ ಕಾಲಿಸ್, 2011ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸೇರಿದರು. ಕೆಕೆಆರ್​ ಜೊತೆಗೆ 4 ವರ್ಷಗಳ ಕಾಲ ಆಡಿದ ಜಾಕ್, ಆರ್​ಸಿಬಿ ತೊರೆದ ಎರಡು ವರ್ಷಗಳ ನಂತರ ಕೊಲ್ಕತ್ತಾದೊಂದಿಗೆ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದರು. ಅವರು ಐಪಿಎಲ್ 2014 ಟ್ರೋಫಿಯನ್ನು ಎತ್ತಿ ಹಿಡಿದ ಗೌತಮ್ ಗಂಭೀರ್ ನೇತೃತ್ವದ ತಂಡದ ಭಾಗವಾಗಿದ್ದರು.

ಮೊಯಿನ್ ಅಲಿ

ಮೊಯಿನ್ ಅಲಿ 2018ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿಕೊಂಡರು. ಮೂರು ವರ್ಷಗಳ ಅವಧಿ ರೆಡ್​ ಆರ್ಮಿ ಜೊತೆಯಿದ್ದ ಮೊಯಿನ್, 2021ರಲ್ಲಿ ಚೆನ್ನೈ ಸೇರಿದರು. ಹರಾಜಿನಲ್ಲಿ ಧೋನಿ ಬಳಗವನ್ನು ಸೇರಿದ ಇಂಗ್ಲೆಂಡ್ ಆಟಗಾರ, ಸಿಎಸ್​​ಕೆ ಸೇರಿದ ವರ್ಷವೇ ಚಾಂಪಿಯನ್ ತಂಡದ ಭಾಗವಾದರು. ಐಪಿಎಲ್ 2022ರ ಮೆಗಾ ಹರಾಜಿನ ಮೊದಲು ಅವರನ್ನು ಸಿಎಸ್‌ಕೆ ಉಳಿಸಿಕೊಂಡಿತ್ತು. 2023ರಲ್ಲೂ ಮತ್ತೊಂದು ಟ್ರೋಫಿ ಗೆದ್ದರು.

ರಾಬಿನ್ ಉತ್ತಪ್ಪ

ರಾಬಿನ್ ಉತ್ತಪ್ಪ ಐಪಿಎಲ್​ 2009 ಮತ್ತು 2010ರಲ್ಲಿ ಆರ್​​ಸಿಬಿ ಭಾಗವಾಗಿದ್ದರು. 2009ರಲ್ಲಿ ಆರ್​ಸಿಬಿ ಪರ ಫೈನಲ್ ಆಡಿದ್ದರು. ಆದರೆ ಸೋಲು ಕಂಡಿತ್ತು. ಬಳಿಕ 2011 ರಿಂದ 2013ರವರೆಗೆ ಪುಣೆ ವಾರಿಯರ್ಸ್ ಪರ ಆಡಿದ ಉತ್ತಪ್ಪ, ತದನಂತರ ಕೋಲ್ಕತ್ತಾ ಸೇರಿದರು. ಆರ್​ಸಿಬಿ ತೊರೆದ ನಾಲ್ಕು ವರ್ಷಗಳ ನಂತರ ಕೆಕೆಆರ್​​ ಪರ ತಮ್ಮ ಮೊದಲ ಐಪಿಎಲ್ ಪ್ರಶಸ್ತಿ ಗೆದ್ದರು. 2021ರಲ್ಲಿ ಚೆನ್ನೈ ಸೇರಿದ ಉತ್ತಪ್ಪ 2ನೇ ಬಾರಿಗೆ ಚಾಂಪಿಯನ್ ಆದರು.

ಅಷ್ಟೇ ಅಲ್ಲದೆ, ಶೇನ್ ವ್ಯಾಟ್ಸನ್​, ಶಿವಂ ದುಬೆ, ಮನೀಷ್ ಪಾಂಡೆ, ಕೇದಾರ್ ಜಾಧವ್, ಕ್ವಿಂಟನ್ ಡಿ ಕಾಕ್ ಸೇರಿದಂತೆ ಹಲವರು ಆರ್​ಸಿಬಿ ತಂಡವನ್ನು ತೊರೆದ ನಂತರ ಬೇರೆ ತಂಡಗಳ ಪರ ಚಾಂಪಿಯನ್​ ಆಗಿದ್ದಾರೆ.

IPL_Entry_Point