ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ಡಿವೋರ್ಸ್? ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ, ಫೋಟೋಸ್ ಡಿಲೀಟ್
Yuzvendra Chahal and Dhanashree Verma Divorce: ಟೀಮ್ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ಅವರು ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ, ಫೋಟೋಸ್ ಡಿಲೀಟ್ ಮಾಡಿದ್ದು, ಡಿವೋರ್ಸ್ ಪಡೆಯುವ ಸಾಧ್ಯತೆ ಇದೆ ಎಂಬ ವದಂತಿ ಹಬ್ಬಿದೆ.
ಕ್ರಿಕೆಟಿಗ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಶೀಘ್ರದಲ್ಲೇ ಡಿವೋರ್ಸ್ (Yuzvendra Chahal and Dhanashree Verma Divorce) ಪಡೆಯಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಸೆಲೆಬ್ರಿಟಿ ಕಪಲ್ಸ್ ಯಾವುದೇ ಅಧಿಕೃತ ಪೋಸ್ಟ್ ಹಂಚಿಕೊಂಡಿಲ್ಲ. ಆದರೆ ಚಹಲ್ ಮತ್ತು ಧನಶ್ರೀ ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ ಮಾಡಿರುವುದು ಮತ್ತು ತನ್ನ ಪತ್ನಿ ಜೊತೆಗಿನ ಫೋಟೋಗಳನ್ನು ಚಹಲ್ ಡಿಲೀಟ್ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಧನಶ್ರೀ ಅವರು ಚಹಲ್ರನ್ನು ಅನ್‌ಫಾಲೋ ಮಾಡಿದ್ದರೂ, ಅವರೊಂದಿಗಿನ ಯಾವುದೇ ಚಿತ್ರಗಳನ್ನು ಅಳಿಸಿಲ್ಲ.
ಚಹಲ್-ಧನಶ್ರೀ ವಿಚ್ಛೇದನ ಪಡೆಯುತ್ತಾರೆ ಎನ್ನುವ ವದಂತಿಗಳು ನಿಜ ಎಂದು ದಂಪತಿಯ ಹತ್ತಿರದ ಮೂಲಗಳು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿವೆ. ಸೆಲೆಬ್ರಿಟಿ ದಂಪತಿ ಡಿವೋರ್ಸ್ ಪಡೆಯುವುದು ಖಚಿತ. ಆದರೆ ಇದು ಅಧಿಕೃತವಾಗಿ ಬಹಿರಂಗಪಡಿಸಲು ಇನ್ನಷ್ಟು ಕಾಲಾವಕಾಶಬೇಕು. ಆದರೆ ಈ ಜೋಡಿ ಬೇರ್ಪಡಲು ನಿಖರವಾದ ಕಾರಣ ಏನೆಂದು ಇನ್ನೂ ತಿಳಿದಿಲ್ಲ. ತಮ್ಮ ಜೀವನ ಪ್ರತ್ಯೇಕವಾಗಿ ಮುಂದುವರಿಸಲು ಇಬ್ಬರು ಸಹಮತ ವ್ಯಕ್ತಪಡಿಸಿದ್ದಾರೆ ಎಂಬುದಂತೂ ಸ್ಪಷ್ಟವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ ಎಂದು ವರದಿಯಾಗಿದೆ. ಆದರೆ ಈ ಹಿಂದೆಯೂ ಚಹಲ್-ಧನಶ್ರೀ ವಿಚ್ಛೇದನ ಪಡೆಯುತ್ತಾರೆ ಎಂಬ ರೂಮರ್ ಹಬ್ಬಿತ್ತು.
ಇತ್ತೀಚೆಗೆ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ವಿಚ್ಛೇದನ ಪಡೆದಿದ್ದರು. ಇದೀಗ ಮತ್ತೊಂದು ವದಂತಿ ಹಬ್ಬಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
2023ರಲ್ಲೇ ಹಬ್ಬಿತ್ತು ಚಹಲ್-ಧನಶ್ರೀ ಡಿವೋರ್ಸ್ ವದಂತಿ
ಐಸಿಐಡಿಕೆ ಪ್ರಕಾರ, 2023ರಲ್ಲಿ ಧನಶ್ರೀ ಇನ್ಸ್ಟಾಗ್ರಾಂನಲ್ಲಿ ತನ್ನ ಹೆಸರಿನಿಂದ 'ಚಹಲ್' ಉಪನಾಮ ತೆಗೆದ ನಂತರ ವಿಚ್ಛೇದನದ ವದಂತಿಗಳು ಹುಟ್ಟಿಕೊಂಡಿದ್ದವು. ಯುಜ್ವೇಂದ್ರ ಅವರು 'ಹೊಸ ಜೀವನ ಲೋಡ್ ಆಗುತ್ತಿದೆ' (New Life Loading) ಎಂಬ ನಿಗೂಢ ಇನ್ಸ್ಟಾಗ್ರಾಂ ಸ್ಟೋರಿಯನ್ನು ಹಂಚಿಕೊಂಡ ಒಂದು ದಿನದ ಬಳಿಕ ವದಂತಿಗೆ ಮತ್ತಷ್ಟು ಪುಷ್ಠಿ ಸಿಕ್ಕಿತ್ತು. ಅಂದಿನಿಂದಲೂ ಈ ಗುಸುಗುಸು ನಡೆಯುತ್ತಲೇ ಇತ್ತು. ಇದಾದ ನಂತರ ಚಹಲ್ ಅವರು ವಿಚ್ಛೇದನದ ವದಂತಿಗಳನ್ನು ತಳ್ಳಿಹಾಕುವ ಪೋಸ್ಟ್ ಮಾಡಿದ್ದರು. ವದಂತಿಗಳನ್ನು ನಂಬಬೇಡಿ ಅಥವಾ ಹರಡಬೇಡಿ ಎಂದು ತೇಪೆ ಹಚ್ಚುವ ಪ್ರಯತ್ನ ನಡೆಸಿದ್ದರು. ಆದರೀಗ ಅದೆಲ್ಲವೂ ನಿಜವೆಂದು ವರದಿಯಾಗಿದೆ.
ಪ್ರೀತಿಸಿ ಮದುವೆಯಾಗಿದ್ದ ಚಹಲ್-ಧನಶ್ರೀ
ಧನಶ್ರೀ ಮತ್ತು ಚಹಲ್ ಅವರು ಪ್ರೀತಿಸಿ ಮದುವೆಯಾದವರು. 2020ರ ಡಿಸೆಂಬರ್ 11 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಟಿವಿ ಶೋ ಜಲಕ್ ದಿಖ್ಲಾ ಜಾ ಸೀಸನ್ 11ರಲ್ಲಿ ತಮ್ಮ ಪ್ರೇಮಕಥೆಯ ಬಗ್ಗೆ ಧನಶ್ರೀ ವರ್ಮಾ ಬಿಚ್ಚಿಟ್ಟಿದ್ದರು. ಲಾಕ್ಡೌನ್ನಲ್ಲಿ ಚಹಲ್ ಹಾಗೂ ಧನಶ್ರೀ ನಡುವೆ ಪ್ರೀತಿ ಹುಟ್ಟಿತ್ತು. ಕೊರೊನಾ ಅವಧಿಯಲ್ಲಿ ಖಾಲಿ ಕುಳಿತಿದ್ದ ಚಹಲ್ ಅವರು ಧನಶ್ರೀ ಡ್ಯಾನ್ಸ್ ವಿಡಿಯೋಗಳನ್ನು ನೋಡಿ ತನಗೂ ಡ್ಯಾನ್ಸ್ ಕಲಿಯಬೇಕು ಎಂಬ ಆಸೆ ಹುಟ್ಟಿತ್ತಂತೆ. ಅದಕ್ಕಾಗಿ ಚಹಲ್, ಡ್ಯಾನ್ಸ್ ಕಲಿಯಬೇಕೆಂದು ಆಕೆಗೆ ಮೆಸೇಜ್ ಮಾಡಿದ್ದರಂತೆ. ಇದಕ್ಕೆ ಒಪ್ಪಿದ್ದ ಧನಶ್ರೀ ಆನ್‌ಲೈನ್‌ನಲ್ಲೇ ಕ್ಲಾಸ್ ಆರಂಭಿಸಿದ್ದರಂತೆ. ಅಲ್ಲಿಂದ ಇಬ್ಬರ ಪ್ರೇಮ ಪಯಣ ಶುರುವಾಗಿತ್ತು. ಅಚ್ಚರಿ ಏನೆಂದರೆ ಇವರಿಬ್ಬರೂ ಡೇಟಿಂಗ್ ಮಾಡಲೇ ಇಲ್ಲ. ನೇರವಾಗಿ ಮದುವೆಯಾದರು. ನನ್ನನ್ನು ಮದುವೆ ಆಗ್ತೀಯಾ ಎಂದು ನೇರವಾಗಿ ಚಹಲ್ ಪ್ರಪೋಸ್ ಮಾಡಿದ್ದರಂತೆ. ಅದಕ್ಕೆ ಧನಶ್ರೀ ಒಪ್ಪಿದ್ದರಂತೆ.