ಕನ್ನಡ ಸುದ್ದಿ  /  Cricket  /  Zimbabwe All Rounder Sikandar Raza Equals Virat Kohli Record Of 2023 After Hat Trick Vs Rwanda World Cup Qualifiers Jra

ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಸಿಕಂದರ್ ರಝಾ; ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಹ್ಯಾಟ್ರಿಕ್‌ ಸಾಧನೆ

ಜಿಂಬಾಬ್ವೆ ಕ್ರಿಕೆಟ್‌ ತಂಡದ ಅನುಭವಿ ಆಲ್‌ರೌಂಡರ್ ಸಿಕಂದರ್ ರಝಾ, ಐತಿಹಾಸಿಕ ದಾಖಲೆ ಬರೆದಿದ್ದಾರೆ. ಹ್ಯಾಟ್ರಿಕ್ ವಿಕೆಟ್‌ ಸಾಧನೆ ಮಾತ್ರವಲ್ಲದೆ 2023ರಲ್ಲಿ ವಿರಾಟ್‌ ಕೊಹ್ಲಿ ಮಾತ್ರ ಮಾಡಿರುವ ದಾಖಲೆ ಸರಿಗಟ್ಟಿದ್ದಾರೆ.

ಸಿಕಂದರ್ ರಝಾ
ಸಿಕಂದರ್ ರಝಾ

ಐಸಿಸಿ ಪುರುಷರ ಟಿ20 ವಿಶ್ವಕಪ್ (ICC Men's T20 World Cup) ಆಫ್ರಿಕಾ ವಲಯದ ಅರ್ಹತಾ ಪಂದ್ಯಗಳು (Africa Region Qualifier) ನಡೆಯುತ್ತಿವೆ. ಸೋಮವಾರ ನಡೆದ ಪಂದ್ಯಗಳಲ್ಲಿ ನಮೀಬಿಯಾ ಮತ್ತು ಜಿಂಬಾಬ್ವೆ ತಂಡಗಳು ಕ್ರಮವಾಗಿ ಕೀನ್ಯಾ ಮತ್ತು ರುವಾಂಡಾ ವಿರುದ್ಧ ನಿರ್ಣಾಯಕ ಪಂದ್ಯಗಳಲ್ಲಿ ಗೆದ್ದು ಬೀಗಿವೆ.

ಈ ಗೆಲುವಿನೊಂದಿಗೆ ನಮೀಬಿಯಾ ತಂಡವು ಆಫ್ರಿಕಾ ವಲಯದ ಕ್ವಾಲಿಫೈಯರ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಎಂಟು ಅಂಕಗಳನ್ನು ಕಲೆ ಹಾಕಿದೆ. ಮತ್ತೊಂದೆಡೆ ಪಂದ್ಯದಲ್ಲಿ ಸೋತರೂ ಕೀನ್ಯಾ ಕೂಡಾ ಆರು ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ | ಐಪಿಎಲ್‌ನಲ್ಲಿ ಆಡೋದು ಪ್ರತಿಯೊಬ್ಬ ಕ್ರಿಕೆಟಿಗನ ಬಯಕೆ, ಅವಕಾಶ ಸಿಕ್ರೆ ಖಂಡಿತಾ ಆಡ್ತೇನೆ ಎಂದ ಪಾಕ್‌ ವೇಗಿ

ದಿನದ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ತಂಡವು ರುವಾಂಡಾ ವಿರುದ್ಧ 144 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಈ ಪಂದ್ಯಕ್ಕೂ ಮುನ್ನ ಉಗಾಂಡಾ ವಿರುದ್ಧ ಆಘಾತಕಾರಿ ಸೋಲನುಭವಿಸಿದ್ದ ಜಿಂಬಾಬ್ವೆ, ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯಲು ರುವಾಂಡಾ ವಿರುದ್ಧ ಗೆಲ್ಲಲೇ ಬೇಕಿತ್ತು. ಅನುಭವಿ ಆಲ್‌ರೌಂಡರ್ ಸಿಕಂದರ್ ರಝಾ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅಮೋಘ ಪ್ರದರ್ಶನ ನೀಡುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಬ್ಯಾಟಿಂಗ್‌ನಲ್ಲಿ 36 ಎಸೆತಗಳಲ್ಲಿ 58 ರನ್ ಗಳಿಸಿದ ಅವರು, ಆ ಬಳಿಕ ಬೌಲಿಂಗ್‌ನಲ್ಲೂ ಅಬ್ಬರಿಸಿದರು. ಆ ಮೂಲಕ ಪಂದ್ಯದಲ್ಲಿ ಎರಡೆರಡು ದಾಖಲೆ ನಿರ್ಮಿಸಿದರು.

ಹ್ಯಾಟ್ರಿಕ್‌ ಸಾಧಿಸಿದ ಮೊದಲ ಬೌಲರ್

ರಾಝಾ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದರು.‌ ಬೌಲಿಂಗ್‌ನಲ್ಲಿಯೂ ಎದುರಾಳಿ ತಂಡಕ್ಕೆ ಗಂಭೀರ ಹಾನಿ ಮಾಡಿದರು. ಬ್ಯಾಟಿಂಗ್‌ ವೇಳೆ ಆರು ಬೌಂಡರಿ ಮತ್ತು ನಾಲ್ಕು ಸ್ಫೋಟಕ ಸಿಕ್ಸರ್‌ ಸಿಡಿಸಿದರು. ಇವರ ಆಟದ ನೆರವಿಂದ ಜಿಂಬಾಬ್ವೆಗೆ 4 ವಿಕೆಟ್‌ ನಷ್ಟಕ್ಕೆ 215 ರನ್‌ ಗಳಿಸಿತು.

19ನೇ ಓವರ್‌ನಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ ರಝಾ, ಅಮೋಘ ದಾಖಲೆ ಮಾಡಿದರು. ಟಿ20 ಸ್ವರೂಪದಲ್ಲಿ ಜಿಂಬಾಬ್ವೆ ಪರ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಕೇವಲ 3 ರನ್‌ ಬಿಟ್ಟುಕೊಟ್ಟು 3 ರನ್ ಕಲೆಹಾಕಿದರು.

ಕೊಹ್ಲಿ ದಾಖಲೆ ಸರಿಗಟ್ಟಿದ ರಝಾ

ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ವೀರೋಚಿತ ಪ್ರದರ್ಶನ ನೀಡಿದ ರಝಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಇದು ಈ ವರ್ಷ ಅವರ ಆರನೇ ಮ್ಯಾನ್‌ ಆಫ್‌ ದಿ ಮ್ಯಾಚ್ ಪ್ರಶಸ್ತಿಯಾಗಿದೆ. ಭಾರತದ ಬ್ಯಾಟರ್‌ ವಿರಾಟ್ ಕೊಹ್ಲಿ‌ ಕೂಡಾ ಈ ವರ್ಷ ಆರು ಬಾರಿ ಪಂದ್ಯಶ್ರೇಷ್ಠರಾಗಿದ್ದಾರೆ. ಆ ಮೂಲಕ ರಝಾ ಕೂಡಾ ಜಂಟಿ ಗರಿಷ್ಠ ಪ್ರಶಸ್ತಿ ದಾಖಲೆ ಮಾಡಿದ್ದಾರೆ.