ಜಿಂಬಾಬ್ವೆ ವಿರುದ್ಧ ಪ್ರಚಂಡ ಶತಕ; ಆಡಿದ ಎರಡನೇ ಪಂದ್ಯದಲ್ಲೇ ರೋಹಿತ್ ಶರ್ಮಾ ದಾಖಲೆ ಮುರಿದ ಅಭಿಷೇಕ್ ಶರ್ಮಾ
ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 46 ಎಸೆತಗಳಲ್ಲಿ ಶತಕ ಬಾರಿಸಿದರು. ಜಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 8 ಸಿಕ್ಸರ್ ಸಿಡಿಸುವುದರೊಂದಿಗೆ ರೋಹಿತ್ ಶರ್ಮಾ ದಾಖಲೆಯನ್ನು ಮುರಿದಿದ್ದಾರೆ.
ಜಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಯುವ ಭಾರತ ತಂಡ ಭರ್ಜರಿ ಜಯ ಸಾಧಿಸಿತು. ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಸ್ಫೋಟಕ ಶತಕ ಸಿಡಿಸಿದರು. ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಸಿಕಂದರ್ ರಝಾ ಬಳಗವನ್ನು ಮಣಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಐಪಿಎಲ್ ಹೀರೋ ಅಭಿಷೇಕ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಆಡಿದ ಎರಡನೇ ಪಂದ್ಯದಲ್ಲಿ ಪ್ರಚಂಡ ಪ್ರದರ್ಶನ ನೀಡಿದರು. ಆ ಮೂಲಕ ಯಾವುದೇ ಪಂದ್ಯವಾದರೂ ಸಿಡಿಯುವ ಸೂಚನೆ ಕೊಟ್ಟರು. ಎರಡನೇ ಓವರ್‌ನಲ್ಲೇ ನಾಯಕ ಶುಭ್ಮನ್ ಗಿಲ್ ಒಂದಂಕಿ ಮೊತ್ತಕ್ಕೆ ಔಟಾದರೂ, ಅಭಿಷೇಕ್ ಅಬ್ಬರ ಮುಂದುವರೆಸಿದರು. ಜಿಂಬಾಬ್ವೆ ಬೌಲಿಂಗ್ ದಾಳಿಯನ್ನು ಹಣ್ಣುಗಾಯಿ ನೀರುಗಾಯಿಯಾಗಿಸಿದ ಸನ್‌ರೈಸರ್ಸ್ ಹೈದರಾಬಾದ್ ದಾಂಡಿಗ ಹಲವು ದಾಖಲೆಗಳನ್ನು ನಿರ್ಮಿಸಿದರು.
ಪಂದ್ಯದ ಆರಂಭದ ಪವರ್‌ಪ್ಲೇನಲ್ಲಿ ನಿಧಾನಗತಿಯ ಆರಂಭದ ಪಡೆದ ತಂಡ, ಅಭಿಷೇಕ್ ಜಿಂಬಾಬ್ವೆ ಬೌಲರ್‌ಗಳ ಬೆವರಿಳಿಸಿದರು. ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ತಮ್ಮ ಮೊದಲ ಅರ್ಧಶತಕ ಪೂರ್ಣಗೊಳಿಸಿದರು. 27 ರನ್ ಗಳಿಸಿದ್ದಾಗ ಜೀವದಾನ ಪಡೆದ ಅಭಿಷೇಕ್, 10 ಓವರ್‌ಗಳಲ್ಲಿ ಭಾರತವನ್ನು 74 ರನ್‌ಗಳಿಗೆ ಮುನ್ನಡೆಸಿದರು. ಅದರ ಬೆನ್ನಲ್ಲೇ ಟಾಪ್ ಗೇರ್‌ನಲ್ಲಿ ರನ್ ಗಳಿಸಲು ಆರಂಭಿಸಿದರು. ನಂತರದ 10 ಓವರ್‌ನಲ್ಲಿ ಟೀಮ್ ಇಂಡಿಯಾ ರನ್ ರೇಟ್ ದುಪ್ಪಟ್ಟಾಯ್ತು. ಕೇವಲ 60 ಎಸೆತಗಳಲ್ಲಿ ತಂಡ 160 ರನ್ ಗಳಿಸಿತು. ಮೈಯರ್ಸ್ ಎಸೆತದ 11ನೇ ಓವರ್‌ನಲ್ಲಿ 28 ರನ್ ಹರಿದು ಬಂತು.
ರೋಹಿತ್ ಶರ್ಮಾ ದಾಖಲೆ ಮುರಿದ ಅಭಿಷೇಕ್ ಶರ್ಮಾ
ಪಂದ್ಯದಲ್ಲಿ 212.77ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅಭಿಷೇಕ್ 7 ಬೌಂಡರಿ ಹಾಗೂ 8 ಸ್ಫೋಟಕ ಸಿಕ್ಸರ್ ಸಿಡಿಸಿದರು. ಇದರೊಂದಿಗೆ ವಿಶ್ವಕಪ್ ಗೆದ್ದ ನಾಯಕ ಹಿಟ್‌ಮ್ಯಾನ್ ದಾಖಲೆ ಮುರಿದರು. 2024ರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ ದಾಖಲೆಯನ್ನು ಅಭಿಷೇಕ್ ಮುರಿದಿದ್ದಾರೆ. ಈ ಋತುವಿನಲ್ಲಿ ಒಟ್ಟು 47ನೇ ಸಿಕ್ಸರ್ ಸಿಡಿಸುವ ಮೂಲಕ 2024ರಲ್ಲಿ ಹಿಟ್‌ಮ್ಯಾನ್ ಅವರನ್ನು ಹಿಂದಿಕ್ಕಿದರು.
ಕೇವಲ 47 ಎಸೆತಗಳಲ್ಲಿ ಅಭಿಷೇಕ್ ತಮ್ಮ ಮೊದಲ ಶತಕ ಗಳಿಸಿದರು. ಋತುರಾಜ್ ಗಾಯಕ್ವಾಡ್ ಜೊತೆಗೂಡಿದ ಅಭಿಷೇಕ್, ಜಿಂಬಾಬ್ವೆ ವಿರುದ್ಧ ಅತಿ ಹೆಚ್ಚು ರನ್‌ಗಳ ಜೊತೆಯಾಟವಾಡಿದ (136) ದಾಖಲೆ ನಿರ್ಮಿಸಿದರು.
ಟಿ20ಯಲ್ಲಿ ಭಾರತದ ಪರ ಅತಿ ವೇಗದ ಶತಕ ಗಳಿಸಿದ ಬ್ಯಾಟರ್‌ಗಳು
46 ಎಸೆತಗಳಲ್ಲಿ ಶತಕ ಬಾರಿಸಿದ ಅಭಿಷೇಕ್ ಟಿ20ಯಲ್ಲಿ ಭಾರತದ ಪರ ವೇಗವಾಗಿ ಶತಕ ಬಾರಿಸಿದ ಮೂರನೇ ಆಟಗಾರ ಎನಿಸಿಕೊಂಡರು. ಅಭಿಷೇಕ್ ಮತ್ತು ಕೆಎಲ್ ರಾಹುಲ್ ಭಾರತದ ಪರ 46 ಎಸೆತಗಳಲ್ಲಿ ಟಿ20 ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಇಬರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಪರ ಅತಿ ವೇಗದ ಶತಕ ಬಾರಿಸಿದ ದಾಖಲೆ ರೋಹಿತ್ ಹೆಸರಿನಲ್ಲಿದೆ. 2017ರಲ್ಲಿ ಇಂದೋರ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಟೀಮ್ ಇಂಡಿಯಾ ಪರ ವೇಗದ ಶತಕವಾಗಿದೆ. ಹಿಟ್‌ಮ್ಯಾನ್ ನಂತರದ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಇದ್ದಾರೆ. ಕಳೆದ ವರ್ಷ ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅವರು 45 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
ಭಾರತ ಕ್ರಿಕೆಟ್ ತಂಡದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | India vs Zimbabwe 2nd T20: ಬೌಲರ್‌ಗಳ ಮಿಂಚಿನ ದಾಳಿ, ಅಭಿಷೇಕ್ ಬೊಂಬಾಟ್ ಶತಕ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಕಂಬ್ಯಾಕ್