ಆಂಧ್ರ ಪ್ರದೇಶ ಚುನಾವಣೆ 2024; 175 ವಿಧಾನಸಭಾ ಸ್ಥಾನಗಳಿಗೆ ಮೇ 13ಕ್ಕೆ ಮತದಾನ, ಚುನಾವಣಾ ಟ್ರೆಂಡ್ ಅರ್ಥಮಾಡಿಕೊಳ್ಳಲು ಈ 10 ಅಂಶ
ಆಂಧ್ರ ಪ್ರದೇಶ ಚುನಾವಣೆ 2024; ಆಂಧ್ರಪ್ರದೇಶದ 175 ವಿಧಾನಸಭಾ ಸ್ಥಾನಗಳಿಗೆ ಮೇ 13ಕ್ಕೆ ಮತದಾನ ನಡೆಯಲಿದೆ. ಅಧಿಕಾರ ಚುಕ್ಕಾಣಿ ಉಳಿಸಿಕೊಳ್ಳಲು ವೈಎಸ್‌ಆರ್‌ಸಿಪಿ ಪ್ರಯತ್ನಿಸಿದರೆ, ಟಿಡಿಪಿ ಮತ್ತೆ ವಶಪಡಿಸಿಕೊಳ್ಳುವುದಕ್ಕೆ ಬಿಜೆಪಿ, ಜನಸೇನಾ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಚುನಾವಣಾ ಟ್ರೆಂಡ್ ಅರ್ಥಮಾಡಿಕೊಳ್ಳಲು ಈ 10 ಅಂಶಗಳನ್ನು ಪ್ರಸ್ತುತ ಪಡಿಸಲಾಗಿದೆ.

ಬೆಂಗಳೂರು/ಹೈದರಾಬಾದ್: ಲೋಕಸಭಾ ಚುನಾವಣೆಯ ನಡುವೆ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ಕೂಡ ನಡೆಯುತ್ತಿದೆ. ವಿಭಜಿತ ಆಂಧ್ರ ಪ್ರದೇಶದ ಮೂರನೇ ಚುನಾವಣೆ ಇದು. ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಜೊತೆಗೆ ವಿಧಾನಸಭೆಯ 175 ಕ್ಷೇತ್ರಗಳಿಗೆ ಮತದಾನ ಮೇ 13 ರಂದು ಮತದಾನ ನಡೆಯಲಿದೆ. ಆಂಧ್ರಪ್ರದೇಶದ ಚುನಾವಣೆ ಈ ಬಾರಿ ಹೆಚ್ಚು ಗಮನಸೆಳೆದಿದ್ದು, ಬಿಜೆಪಿ ತನ್ನ ಛಾಪು ಮೂಡಿಸಲು ಪ್ರಯತ್ನಿಸುತ್ತಿದೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಯಶಸ್ಸಿನೊಂದಿಗೆ ಪ್ರಧಾನಿ ಮೋದಿಯವರ ರ‍್ಯಾಲಿ ಈ ವಿಚಾರದಲ್ಲಿ ಗಮನಾರ್ಹ.
ರಾಜಕೀಯವಾಗಿ ಗಮನಿಸುವಾಗ ಹೊಸ ಆಂಧ್ರಪ್ರದೇಶದ ರಚನೆಯಾದ ಬಳಿಕ ಮೊದಲ ಚುನಾವಣೆ 2014ರಲ್ಲಿ ನಡೆಯಿತು. ಆಗ, ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಾರ್ಟಿ 175 ಸ್ಥಾನಗಳ ಪೈಕಿ 102 ಗೆಲುವು ಕಂಡು ಅಧಿಕಾರ ಚುಕ್ಕಾಣಿ ಹಿಡಿಯಿತು. 2019ರ ಚುನಾವಣೆ ನಡೆಯುವಾಗ ಚಿತ್ರಣ ಬದಲಾಗಿತ್ತು. ವೈಎಸ್‌ಆರ್‌ಕಾಂಗ್ರೆಸ್ ಪಾರ್ಟಿ ಪ್ರಾಬಲ್ಯ ಹೆಚ್ಚಾಗಿತ್ತು. 175 ಸ್ಥಾನಗಳ ಪೈಕಿ 151ರಲ್ಲಿ ಗೆಲುವು ಕಂಡ ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿ ಅಧಿಕಾರಕ್ಕೇರಿತು. ಜಗನ್‌ಮೋಹನ್ ರೆಡ್ಡಿ ಮುಖ್ಯಮಂತ್ರಿಯಾದರು.
ಇಲ್ಲಿ ಏನಿದ್ದರೂ ಪ್ರಾದೇಶಿಕ ಪಕ್ಷಗಳದ್ದೇ ಕಾರುಬಾರು. ತೆಲುಗುದೇಶಂ ಪಾರ್ಟಿ, ವೈಎಸ್‌ಆರ್‌ಕಾಂಗ್ರೆಸ್ ಪಾರ್ಟಿ. ಇವೆರಡು ಬಿಟ್ಟರೆ ಉಳಿದವರಿಗೆ ಪ್ರಾಶಸ್ತ್ಯವಿಲ್ಲ. ರಾಷ್ಟ್ರೀಯ ಪಕ್ಷವೆನಿಸಿಕೊಂಡ ಕಾಂಗ್ರೆಸ್, ಬಿಜೆಪಿಯನ್ನೂ ಇಲ್ಲಿ ಲೆಕ್ಕಕ್ಕೇ ತೆಗೆದುಕೊಂಡಿಲ್ಲ ಜನ. 2014ರ ಚುನಾವಣೆಯಲ್ಲಿ ಬಿಜೆಪಿ 4 ಸ್ಥಾನ ಗೆದ್ದುಕೊಂಡಿತ್ತು. 2019ರ ಚುನಾವಣೆಯಲ್ಲಿ ಈ ನಾಲ್ಕೂ ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದೆ. ಇನ್ನು ಕಾಂಗ್ರೆಸ್ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇದೆ. ಎರಡೂ ಚುನಾವಣೆಯಲ್ಲಿ ಶೂನ್ಯ ಸಾಧನೆ.
ಆಂಧ್ರಪ್ರದೇಶ ಚುನಾವಣೆ 2024; ವಿಧಾನಸಭಾ ಚುನಾವಣೆ ಚಿತ್ರಣ, 10 ಮುಖ್ಯ ಅಂಶಗಳು
1) ಆಂಧ್ರಪ್ರದೇಶದಲ್ಲಿ ಮೇ 13 ರಂದು ಅಕ್ಷರಶಃ ಸಾರ್ವತ್ರಿಕ ಚುನಾವಣೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ಮತದಾನಗಳು ಒಟ್ಟೊಟ್ಟಿಗೆ ನಡೆಯುತ್ತಿದೆ. 25 ಸಂಸದೀಯ ಕ್ಷೇತ್ರಗಳಿಂದ 454 ಅಭ್ಯರ್ಥಿಗಳು ಮತ್ತು 175 ವಿಧಾನಸಭಾ ಕ್ಷೇತ್ರಗಳಲ್ಲಿ 2,387 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 4.09 ಕೋಟಿ ಮತದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲಿದ್ದಾರೆ.
2) ಈ ಸಲದ ಚುನಾವಣೆ ಕಳೆದ ಸಲದಂತೆಯೇ ವೈಎಸ್‌ಆರ್‌ಕಾಂಗ್ರಸ್ ಪಾರ್ಟಿ ಮತ್ತು ತೆಲುಗುದೇಶಂ ಪಾರ್ಟಿ ನಡುವಿನ ನೇರ ಹಣಾಹಣಿ. ಹಾಲಿ ಮುಖ್ಯಮಂತ್ರಿ ವೈಎಸ್ ಜಗನ್‌ಮೋಹನ್ ರೆಡ್ಡಿ ಮತ್ತು ಮೂರು ಸಲದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ನಡುವಿನ ಬಿಗ್ ಫೈಟ್. ಈ ಸಲ ಚಂದ್ರಬಾಬು ನಾಯ್ಡು ಅವರ ಟಿಡಿಪಿ, ಬಿಜೆಪಿ, ಪವನ್ ಕಲ್ಯಾಣ್ ಅವರ ಜನಸೇನಾ ಪಾರ್ಟಿ ಮೈತ್ರಿ ಮಾಡಿಕೊಂಡು ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿಯನ್ನು ಎದುರಿಸುತ್ತಿರುವುದು ವಿಶೇಷ.
3) ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕಳೆದ ಸಲದ ಅದೇ ಹವಾ ಉಳಿಸಿಕೊಂಡು ಗೆಲ್ಲಬೇಕು ಎಂಬುದು ವೈಎಸ್‌ಆರ್‌ಸಿಪಿ ಯೋಜನೆ. 2019ರಲ್ಲಿ ವೈಎಸ್‌ಆರ್‌ಸಿಪಿ 25 ಲೋಕಸಭಾ ಸ್ಥಾನಗಳ ಪೈಕಿ 22 ಗೆದ್ದುಕೊಂಡಿತ್ತು. ವಿಧಾನಸಭಾ ಚುನಾವಣೆಯಲ್ಲಿ 175ರ ಪೈಕಿ 151 ರಲ್ಲಿ ಗೆಲುವಿನ ನಗೆ ಬೀರಿತ್ತು. ಹೀಗಾಗಿ ಪ್ರಚಾರಕ್ಕೆ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರು ಸಾಮಾಜಿಕವಾಗಿ ವ್ಯಾಪಕ ಪರಿಣಾಮ ಬೀರುವ “ನವರತ್ನಾಲು” ಯೋಜನೆಗಳನ್ನೆ ಮುಖ್ಯವಾಗಿ ಬಿಂಬಿಸಿದ್ದಾರೆ.
4) ಇನ್ನು ತೆಲುಗುದೇಶಂ ಪಾರ್ಟಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ ಮೊದಲ ಅವಧಿಗಷ್ಟೇ ಹೊಸ ಆಂಧ್ರಪ್ರದೇಶದ ಆಳ್ವಿಕೆ ಸಿಕ್ಕಿದ್ದು. ಬರಬರುತ್ತ ಹಗರಣಗಳ ಸುಳಿಗೆ ಸಿಕ್ಕ ನಾಯ್ದು ಮತ್ತು ಅವರ ಪಾರ್ಟಿ ತೆಲಂಗಾಣದಲ್ಲಷ್ಟೇ ಅಲ್ಲ, ಆಂಧ್ರದಲ್ಲೂ ಜನಪ್ರಿಯತೆ ಕಳೆದುಕೊಂಡಿದೆ. ಹೀಗಾಗಿ ಅವರಿಗೆ ಈ ಸಲ ಮಾಡು ಇಲ್ಲವೇ ಮಡಿ ಹೋರಾಟ.
5) ಟಿಡಿಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ ಇನ್ನೂ ರಾಜಕೀಯವಾಗಿ ಬೆಳೆದಿಲ್ಲ. ಪಕ್ಷ ರಚನೆಯಾಗಿ 10 ವರ್ಷ (2014 ಮಾರ್ಚ್ 14) ಆದರೂ ಸಂಘಟನಾತ್ಮಕವಾಗಿ ಇನ್ನೂ ಬಲಿಷ್ಠವಾಗಿಲ್ಲ. ಹೇಗಾದರೂ ಸರಿ, ಈ ಸಲದ ಚುನಾವಣೆಯಲ್ಲಿ ಪಕ್ಷಕ್ಕೆ ಅಸ್ತಿತ್ವ ಕಂಡುಕೊಳ್ಳಲೇ ಬೇಕು ಎಂದು ಪವನ್ ಕಲ್ಯಾಣ್ ಕೂಡ ಮಾಡು ಇಲ್ಲವೇ ಮಡಿ ಹೋರಾಟ ನಡೆಸಿದ್ದಾರೆ. ಆದಾಗ್ಯೂ ಕಳೆದ ಬಾರಿ ಜನಸೇನಾ ಒಂದು ಸ್ಥಾನ ಗೆದ್ದುಕೊಂಡಿತ್ತು.
6) ರಾಷ್ಟ್ರೀಯ ಪಕ್ಷ ಬಿಜೆಪಿಗೆ ಆಂಧ್ರದಲ್ಲಿ ಅಸ್ತಿತ್ವ ಇದ್ದೂ ಇಲ್ಲದಂತೆ ಇದೆ. ಬಹಳ ಏರಿಳಿತ ಇಲ್ಲಿ ಗೋಚರಿಸುತ್ತಿದೆ. 2014ರ ಚುನಾವಣೆಯಲ್ಲಿ 4 ಸ್ಥಾನಗಳಲ್ಲಿ ಗೆಲುವು ಕಂಡಿದ್ದ ಬಿಜೆಪಿಗೆ 2019ರ ಚುನಾವಣೆಯಲ್ಲಿ ಅದನ್ನು ಉಳಿಸಿಕೊಳ್ಳಲಾಗಿಲ್ಲ. ಸದ್ಯ ಟಿಡಿಪಿ ಮತ್ತು ಜನಸೇನಾ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಈ ಸಲ ಪಕ್ಷ ಸಂಘಟನೆಯಷ್ಟೇ ಅಲ್ಲ, ಎನ್‌ಡಿಎ ಮೈತ್ರಿಕೂಟದ ಗೆಲುವು ಕೂಡ ಪ್ರತಿಷ್ಠೆಯ ವಿಚಾರ. ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ನಾಯಕ ಕಿರಣ್ ಕುಮಾರ್ ರೆಡ್ಡಿ ಬಿಜೆಪಿಯಲ್ಲಿದ್ದು, ಅವರೂ ಚುನಾವಣೆಗೆ ಸ್ಪರ್ಧಿಸಿರುವುದು ಗಮನಾರ್ಹ.
7) ಕಾಂಗ್ರೆಸ್ ಪಕ್ಷದ ವಿಚಾರಕ್ಕೆ ಬಂದರೆ ಅವಿಭಜಿತ ಆಂಧ್ರಪ್ರದೇಶದಲ್ಲಿ 2009ರ ತನಕವೂ ಪ್ರಭಾವಿಯಾಗಿದ್ದ ಕಾಂಗ್ರೆಸ್ ಪಕ್ಷ ಹೊಸ ಆಂಧ್ರದಲ್ಲಿ ಚುನಾವಣಾ ರಾಜಕೀಯದಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಕಳೆದ ಎರಡೂ ಚುನಾವಣೆಗಳಲ್ಲಿ ಒಂದೇ ಒಂದು ಸ್ಥಾನ ಗೆಲ್ಲುವುದಕ್ಕೂ ಅದರಿಂದಾಗಲಿಲ್ಲ. ರಾಜ್ಯ ವಿಭಜನೆಗೆ ಮೊದಲು ಅವಿಭಜಿತ ಆಂಧ್ರಪ್ರದೇಶ ಇದ್ದಾಗ 2009ರ ತನಕವೂ ಪ್ರಭಾವಿಯಾಗಿಯೇ ಇತ್ತು. 2009ರಲ್ಲಿ ಆಡಳಿತವನ್ನೂ ನಡೆಸಿತ್ತು. ಆಗ ಕಿರಣ್ ಕುಮಾರ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದರು.
8) ಚುನಾವಣಾ ಪ್ರಚಾರ ತಂತ್ರವೂ ಬದಲಾಗಿದ್ದು, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಸಾಮಾನ್ಯ ಜನರನ್ನು ತಮ್ಮ 'ಸ್ಟಾರ್ ಪ್ರಚಾರಕರು' ಎಂದು ಘೋಷಿಸಿದ್ದರು. 12 ಸ್ಟಾರ್ ಪ್ರಚಾರಕರ ಪೈಕಿ ಗೃಹರಕ್ಷಕರು, ರೈತರು, ಆಟೋ ಚಾಲಕರು, ಟೈಲರ್ ಮತ್ತು ಮಾಜಿ ಸರ್ಕಾರಿ ಸ್ವಯಂಸೇವಕರಿದ್ದಾರೆ. ಉಳಿದ ಪಕ್ಷಗಳು ತಮ್ಮ ರಾಜಕೀಯ ನೇತಾರರನ್ನೇ ಸ್ಟಾರ್ ಪ್ರಚಾರಕರನ್ನಾಗಿ ಹಳೆಯ ಪದ್ಧತಿಯನ್ನೇ ಮುಂದುವರಿಸಿವೆ. ಸಾಂಪ್ರದಾಯಿಕ ಪ್ರಚಾರದ ಜೊತೆಗೆ ಡಿಜಿಟಲ್ ಪ್ರಚಾರಕ್ಕೂ ಒತ್ತು ನೀಡಲಾಗಿದೆ.
9) ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಪ್ರಮುಖ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಸಂದರ್ಶನಗಳನ್ನು ನಡೆಸುವುದು. ಕ್ಷಿಪ್ರ ಪ್ರಚಾರ ಮತ್ತು ಇನ್‌ಸ್ಟಾಗ್ರಾಂ ಮತ್ತು ಇತರ ವೇದಿಕೆಗಳಲ್ಲಿ ರಾಜಕೀಯ ಘಟನೆಗಳನ್ನು ಕವರ್ ಮಾಡುವ ಕೆಲಸಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಇವರನ್ನು ಬಳಸಿಕೊಂಡಿದ್ದಾರೆ.
10) ಆಂಧ್ರಪ್ರದೇಶದ ರಾಜಧಾನಿ ಯಾವುದು ಎಂಬುದರ ಭವಿಷ್ಯವನ್ನು ನಿರ್ಧರಿಸುವಲ್ಲಿ ಈ ಚುನಾವಣೆ ನಿರ್ಣಾಯಕ. ಚಂದ್ರಬಾಬು ನಾಯ್ಡು ಕಳೆದ ಅವಧಿಯಲ್ಲಿ ಮಂಡಿಸಿದ್ದ ಪರಿಕಲ್ಪನೆಯಂತೆ ಕೃಷ್ಣಾ ನದಿ ದಡದ ಅಮರಾವತಿಯಲ್ಲಿ ಒಂದೇ ಒಂದು ಭವ್ಯ ರಾಜಧಾನಿ ಅಥವಾ ಈ ಅವಧಿಯಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಮಂಡಿಸಿದ ಪರಿಕಲ್ಪನೆಯಂತೆ ಮೂರು ರಾಜಧಾನಿಗಳು - 1) ವಿಶಾಖಪಟ್ಟಣಂನಲ್ಲಿ ಕಾರ್ಯಕಾರಿ ರಾಜಧಾನಿ, 2) ಕರ್ನೂಲ್‌ನಲ್ಲಿ ನ್ಯಾಯಾಂಗ ರಾಜಧಾನಿ 3) ಅಮರಾವತಿಯಲ್ಲಿ ಶಾಸಕಾಂಗ ರಾಜಧಾನಿ. ಈ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೋ ಅವರ ಇಚ್ಛೆಯಂತೆ ರಾಜಧಾನಿ ತೀರ್ಮಾನವಾಗಲಿದೆ.
ಆಂಧ್ರಪ್ರದೇಶ ಚುನಾವಣೆ 2024; ವಿಧಾನಸಭಾ ಚುನಾವಣೆ ಕಣದ 5 ಮುಖ್ಯ ಅಭ್ಯರ್ಥಿಗಳು
ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ), ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನ ಸೇನಾ ಪಕ್ಷವನ್ನು ಒಳಗೊಂಡಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ನಡುವೆ ನೇರ ಹಣಾಹಣಿ ಈ ಸಲ ಚುನಾವಣೆಯಲ್ಲಿ ಎದ್ದು ಕಾಣುವ ವಿಚಾರ. ಇದಲ್ಲದೇ, ಮೂರನೇ ಸ್ಪರ್ಧಿಯಾಗಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್ ಕೂಡ ಇದೆ. ಕಣದಲ್ಲಿ ಈ ಪಕ್ಷಗಳ ಅಭ್ಯರ್ಥಿಗಳ ಪೈಕಿ 5 ಮುಖ್ಯ ಅಭ್ಯರ್ಥಿಗಳು ಗಮನಸೆಳೆಯುತ್ತಾರೆ.
1) ವೈಎಸ್ ಜಗನ್ ಮೋಹನ್ ರೆಡ್ಡಿ (ಪುಲಿವೆಂದುಲ)
ಮುಖ್ಯಮಂತ್ರಿ ಜಗನ್ ರೆಡ್ಡಿ ಅವರು ಪುಲಿವೆಂದುಲದಿಂದ ಮೂರನೇ ಬಾರಿಗೆ ಮರು ಆಯ್ಕೆ ಬಯಸಿದ್ದಾರೆ. ಬಿಟೆಕ್ ರವಿ ಎಂದೇ ಖ್ಯಾತರಾಗಿರುವ ಟಿಡಿಪಿಯ ಮಾರೆಡ್ಡಿ ರವೀಂದ್ರನಾಥ್ ರೆಡ್ಡಿ ವಿರುದ್ಧ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಇಲ್ಲಿಂದ ಎಂ ಧ್ರುವಕುಮಾರ್ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ.
ಜಗನ್ ಅವರ ಸಹೋದರಿ ವೈಎಸ್ ಶರ್ಮಿಳಾ ಅವರು ಪುಲಿವೆಂದುಲ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕಡಪ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಹೀಗಾಗಿ ಜಗನ್ ರೆಡ್ಡಿ ಈ ಬಾರಿ ಕೌಟುಂಬಿಕ ರಾಜಕೀಯ ಕಲಹದಲ್ಲಿ ಸಿಎಂ ಸಿಲುಕಿದ್ದಾರೆ. ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುತ್ತಿರುವ ಶರ್ಮಿಳಾ ತನ್ನ ಸಹೋದರನ ಮೇಲೆ ಎಲ್ಲ ರಂಗಗಳಲ್ಲಿಯೂ ಟೀಕಾ ಪ್ರಹಾರ ಮಾಡಿದ್ದಾರೆ.
2) ಎನ್ ಚಂದ್ರಬಾಬು ನಾಯ್ಡು (ಕುಪ್ಪಂ)
ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು 1989 ರಿಂದ ಕುಪ್ಪಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ, ವೈಎಸ್‌ಆರ್‌ಸಿಪಿ ಸರ್ಕಾರದ ಕಲ್ಯಾಣ ಯೋಜನೆಗಳ ವಿರುದ್ಧ ನಾಯ್ಡು ಅವರ ನಿಷ್ಠೆಯನ್ನು ಪರೀಕ್ಷಿಸುತ್ತಿರುವ ಕಾರಣ ಈ ಕ್ಷೇತ್ರವು ಈ ಬಾರಿ ಅಭೂತಪೂರ್ವ ರಾಜಕೀಯ ಕ್ರಾಂತಿಗೆ ಸಾಕ್ಷಿಯಾಗಲಿದೆ. ಈ ಸ್ಥಾನಕ್ಕೆ ಆಡಳಿತ ಪಕ್ಷ ಯುವ ಅಭ್ಯರ್ಥಿ ಕೆ.ಭರತ್ ಅವರನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಅವುಲ ಗೋವಿಂದರಾಜುಲು ಅವರನ್ನು ಕಣಕ್ಕೆ ಇಳಿಸಿದೆ.
3) ನಾರಾ ಲೋಕೇಶ್ (ಮಂಗಳಗಿರಿ)
ಮಾಜಿ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ 2019 ರ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ ಮತ್ತೆ 2024 ರ ಚುನಾವಣೆಯಲ್ಲಿ ಮಂಗಳಗಿರಿಯಿಂದ ಶಾಸಕನಾಗಲು ಹೊರಟಿದ್ದಾರೆ. ಈ ಬಾರಿ ಅವರು ವೈಎಸ್‌ಆರ್‌ಸಿಪಿಯ ಮುರುಗುಡು ಲಾವಣ್ಯ ಮತ್ತು ಸಿಪಿಐ(ಎಂ)ನ ಜೊನ್ನಾ ಶಿವಶಂಕರ್ ವಿರುದ್ಧ ಕಣಕ್ಕಿಳಿದಿದ್ದಾರೆ.
4) ಪವನ್ ಕಲ್ಯಾಣ್ (ಪೀತಾಪುರಂ)
ಜೆಎಸ್‌ಪಿ ಮುಖ್ಯಸ್ಥ ಪವನ್ ಕಲ್ಯಾಣ್ ಪೀತಾಪುರಂ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ವೈಎಸ್‌ಆರ್‌ಸಿಪಿಯ ಹಾಲಿ ಕಾಕಿನಾಡ ಲೋಕಸಭಾ ಸದಸ್ಯೆ ವಂಗ ಗೀತಾ, ಕಾಂಗ್ರೆಸ್‌ನ ಮಾದೇಪಲ್ಲಿ ಸತ್ಯಾನಂದ ರಾವ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿ ಪೀತಾಪುರಂನಲ್ಲಿ ವೈಎಸ್‌ಆರ್‌ಸಿಪಿಯ ದೊರಬಾಬು ಪೆಂಡೆಮ್ ಅವರು ಟಿಡಿಪಿಯ ಎಸ್‌ವಿಎಸ್‌ಎನ್ ವರ್ಮಾ ಅವರನ್ನು 14,000 ಮತಗಳಿಂದ ಸೋಲಿಸಿದ್ದರು.
5) ಧರ್ಮನಾ ಪ್ರಸಾದ ರಾವ್ (ಶ್ರೀಕಾಕುಳಂ)
ಆಂಧ್ರಪ್ರದೇಶದ ಸಚಿವ ಧರ್ಮನಾ ಪ್ರಸಾದ ರಾವ್ ಅವರು ಶ್ರೀಕಾಕುಳಂ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಟಿಡಿಪಿಯ ಗೊಂಡು ಶಂಕರ್ ಮತ್ತು ಕಾಂಗ್ರೆಸ್‌ನ ಅಂಬಟಿ ಕೃಷ್ಣ ರಾವ್ ವಿರುದ್ಧ ಕಣಕ್ಕಿಳಿದಿದ್ದಾರೆ. 2019 ರಲ್ಲಿ, ಧರ್ಮನಾ ರಾವ್ ಅವರು ಟಿಡಿಪಿಯ ಗುಂಡ ಲಕ್ಷ್ಮಿ ದೇವಿ ವಿರುದ್ಧ 5,000 ಕ್ಕಿಂತ ಕಡಿಮೆ ಮತಗಳಿಂದ ಈ ಸ್ಥಾನವನ್ನು ಗೆದ್ದುಕೊಂಡಿದ್ದರು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
