Exit Poll: 2014, 2019ರಲ್ಲಿ ಆಂಧ್ರಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರು ಯಾರು? ವಿಧಾನಸಭಾ ಚುನಾವಣಾ ಫಲಿತಾಂಶದ ಹಿನ್ನೋಟ
ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆ ಜೊತೆಗೆ ವಿಧಾನಸಭಾ ಚುನಾವಣೆಯೂ ನಡೆದಿದೆ. ಎಕ್ಸಿಟ್ ಪೋಲ್ ಬರಲು ಇನ್ನೇನು ಕೆಲವೇ ಕ್ಷಣಗಳು ಬಾಕಿ ಉಳಿದಿವೆ. ಈ ಹೊತ್ತಿನಲ್ಲಿ 2014 ಹಾಗೂ 2019 ಈ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದಿತ್ತು, ಯಾರು ಸ್ಪರ್ಧಿಸಿದ್ದರು, ಈ ಬಾರಿ ಯಾರು ಪ್ರಮುಖರು ಎಂಬಿತ್ಯಾದಿ ವಿವರ ಇಲ್ಲಿದೆ.
ಅಮರಾವತಿ: 2024ರ ಲೋಕಸಭಾ ಚುನಾವಣೆ ಹಾಗೂ ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆ ನಡೆದಿದ್ದು, ಈ ಬಾರಿ ಯಾರು ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬಹುದು ಎಂದು ಕುತೂಹಲ ತೆಲುಗು ಭಾಷಿಕರಲ್ಲಿದೆ. ಇಂದು (ಜೂನ್ 1) ಸಂಜೆ 5 ರಿಂದ 6 ಗಂಟೆಯ ಸುಮಾರಿಗೆ ಎಕ್ಸಿಟ್ ಪೋಲ್ (ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ) ಫಲಿತಾಂಶ ಹೊರ ಬೀಳಲಿದ್ದು, ಯಾವ ಪಕ್ಷಕ್ಕೆ ಬಹುಮತ ಸಿಗಲಿದೆ ಎಂಬ ಚಿತ್ರಣ ಸಿಗಲಿದೆ. ಆಂಧ್ರಪ್ರದೇಶದ ಎಲ್ಲಾ 175 ವಿಧಾನಸಭಾ ಕ್ಷೇತ್ರಗಳಿಗೆ ಮೇ 13 ರಂದು ಮತದಾನ ನಡೆದಿತ್ತು. ಲೋಕಸಭೆ ಹಾಗೂ ವಿಧಾನಸಭೆಯ ಚುನಾವಣಾ ಫಲಿತಾಂಶ ಜೂನ್ 4 ರಂದು ಹೊರ ಬೀಳಲಿದೆ.
ಆಂಧ್ರಪ್ರದೇಶ ರಾಜಕೀಯದಲ್ಲಿ ಹಾಲಿ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಹಾಗೂ ಎನ್. ಚಂದ್ರಬಾಬು ನಾಯ್ದು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಪ್ರಮುಖ ಪಕ್ಷಗಳಾಗಿವೆ. ಈ ಬಾರಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಹಾಗೂ ಬಿಜೆಪಿ ಟಿಡಿಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಇದರೊಂದಿಗೆ ಜಗನ್‌ಮೋಹನ್ ರೆಡ್ಡಿ ಸಹೋದರಿ ಶರ್ಮಿಳಾ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿಕೊಂಡಿದ್ದಾರೆ. ಸಿಪಿಎಂ, ಸಿಪಿಐ ಪಕ್ಷಗಳು ಪೈಪೋಟಿಗೆ ಇಳಿದಿವೆ.
ಆಂಧ್ರಪ್ರದೇಶದ ಪ್ರಮುಖ ಅಭ್ಯರ್ಥಿಗಳು
ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (ವೈಎಸ್‌ಆರ್‌ಸಿಪಿ), ಎನ್. ಚಂದ್ರಬಾಬು ನಾಯ್ಡು (ಟಿಡಿಪಿ), ಪವನ್ ಕಲ್ಯಾಣ್ (ಜೆಎಸ್‌ಪಿ), ಕಿಲ್ಲಿ ಕೃಪಾರಾಣಿ (ಕಾಂಗ್ರೆಸ್), ಧರ್ಮನಾ ಪ್ರಸಾದ ರಾವ್ (ವೈಎಸ್‌ಆರ್‌ಸಿಪಿ), ಧರ್ಮನಾ ಕೃಷ್ಣ ದಾಸ್ (ವೈಎಸ್‌ಆರ್‌ಸಿಪಿ), ಪಾಮುಲಾ ಪುಷ್ಪ ಶ್ರೀವಾಣಿ ( ವೈಎಸ್‌ಆರ್‌ಸಿಪಿ), ನಲ್ಲಮಿಲ್ಲಿ ರಾಮಕೃಷ್ಣ ರೆಡ್ಡಿ (ಬಿಜೆಪಿ), ರಘು ರಾಮ ಕೃಷ್ಣರಾಜು (ಟಿಡಿಪಿ), ಚಿಂತಾಮನೇನಿ ಪ್ರಭಾಕರ್ (ಟಿಡಿಪಿ), ವೈಎಸ್ ಚೌಧರಿ (ಬಿಜೆಪಿ), ನಾದೆಂಡ್ಲ ಮನೋಹರ್ (ಜೆಎಸ್‌ಪಿ), ಕನ್ನಾ ಲಕ್ಷ್ಮೀನಾರಾಯಣ (ಟಿಡಿಪಿ), ಅದಾಲ ಪ್ರಭಾಕರ ರೆಡ್ಡಿ (ವೈಎಸ್‌ಆರ್‌ಸಿಪಿ), ಅಮ್ಜತ್ ಬಾಷಾ ಶೇಕ್ ಬೇಪಾರಿ (ವೈಎಸ್‌ಆರ್‌ಸಿಪಿ), ನಂದಮೂರಿ ಬಾಲಕೃಷ್ಣ (ಟಿಡಿಪಿ), ನಲ್ಲಾರಿ ಕಿಶೋರ್ ಕುಮಾರ್ ರೆಡ್ಡಿ (ಟಿಡಿಪಿ), ನಾರಾ ಲೋಕೇಶ್ (ಟಿಡಿಪಿ) ಮತ್ತು ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ (ವೈಎಸ್‌ಆರ್‌ಸಿಪಿ) ಆಂಧ್ರಪ್ರದೇಶದ ಕೆಲವು ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಆಂಧ್ರಪ್ರದೇಶದ ಪ್ರಮುಖ ಕ್ಷೇತ್ರಗಳು
ಪುಲಿವೆಂದುಲ, ಕುಪ್ಪಂ, ಪಿಠಾಪುರಂ, ಮಂಗಳಗಿರಿ, ಹಿಂದೂಪುರ, ವಿಜಯವಾಡ ಪಶ್ಚಿಮ, ನರಸನ್ನಪೇಟ, ಶ್ರೀಕಾಕುಳಂ, ತೆಕ್ಕಲಿ, ಗಜುವಾಕ, ಉಂಡಿ, ಗನ್ನವರಂ (ಕೃಷ್ಣಾ), ಆತ್ಮಕೂರ್, ಪ್ರದ್ದತ್ತೂರು ಮತ್ತು ಜಮ್ಮಲಮಡುಗು ಆಂಧ್ರಪ್ರದೇಶದ ಕೆಲವು ಪ್ರಮುಖ ವಿಧಾನಸಭಾ ಕ್ಷೇತ್ರಗಳಾಗಿವೆ.
ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ 2019 ಫಲಿತಾಂಶಗಳು
2019ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ 151 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತು. ವೈಎಸ್ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾದರು. ಆಗ ಆಡಳಿತದಲ್ಲಿದ್ದ ಟಿಡಿಪಿ ಕೇವಲ 23 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಪವನ್ ಕಲ್ಯಾಣ್ ನೇತೃತ್ವದ ಜೆಎಸ್‌ಪಿ ಒಂದೇ ಒಂದು ಸ್ಥಾನವನ್ನು ಗೆದ್ದಿದ್ದರೆ, ಕಾಂಗ್ರೆಸ್ ಹಾಗೂ ಬಿಜೆಪಿಗೆ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. 2014ರ ಆಂಧ್ರಪ್ರದೇಶ ಚುನಾವಣೆಯಲ್ಲಿ, ಟಿಡಿಪಿಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು ಮತ್ತು ಒಟ್ಟಿಗೆ ಅವರು 106 ಸ್ಥಾನಗಳನ್ನು (ಟಿಡಿಪಿ 102 ಮತ್ತು ಬಿಜೆಪಿ 4) ಪಡೆದಿದ್ದರು. ವೈಎಸ್‌ಆರ್‌ಸಿಪಿ 67 ಸ್ಥಾನಗಳನ್ನು ಪಡೆದುಕೊಂಡಿತ್ತು.
ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ 2014ರ ಫಲಿತಾಂಶ
ಎನ್. ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (TDP) ಆಂಧ್ರಪ್ರದೇಶದಲ್ಲಿ 175 ಸ್ಥಾನಗಳಲ್ಲಿ ಬಹುಮತವನ್ನು ಗೆದ್ದುಕೊಂಡಿತು, ಆದರೆ ಕೆ. ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿಯು ಹೊಸ ತೆಲಂಗಾಣ ರಾಜ್ಯದಲ್ಲಿ ಗೆಲುವು ಸಾಧಿಸಿತು.