ಕನ್ನಡ ಸುದ್ದಿ  /  Elections  /  Bangalore News Karnataka Bjp Candidates List Many Sitting Mps Miss Ticket For Lok Sabha Elections2024 Kub

Lok Sabha Elections2024: ಕರ್ನಾಟಕದಲ್ಲಿ ಬಿಜೆಪಿಯ ಇವರಿಗೆಲ್ಲಾ ಟಿಕೆಟ್‌ ಸಿಗೋದು ಅನುಮಾನ, ಯಾವ ಕ್ಷೇತ್ರ, ಸದಸ್ಯ ಯಾರು?

Karnataka politics ಲೋಕಸಭೆ ಚುನಾವಣೆ ಟಿಕೆಟ್‌ ಆಯ್ಕೆಗೆ ಬಿಜೆಪಿಯಲ್ಲಿ ರಾಜಕೀಯ ಜೋರಾಗಿದೆ. ವಿವಾದ ಸೃಷ್ಟಿಸಿದ ಹಾಲಿ ಸದಸ್ಯರನ್ನು ಕೈಬಿಟ್ಟು ಹೊಸಬರಿಗೆ ಮಣೆ ಹಾಕಲು ಪಕ್ಷ ಮುಂದಾಗಿದೆ.

ಪ್ರತಾಪಸಿಂಹ, ನಳೀನ್‌ಕುಮಾರ್‌ ಕಟೀಲು, ಮಂಗಳ ಅಂಗಡಿ, ಅನಂತಕುಮಾರ್‌ ಹೆಗಡೆ ಸಹಿತ ಹಲವರು ಹಾಲಿ ಸದಸ್ಯರಿಗೆ ಟಿಕೆಟ್‌ ತಪ್ಪುವ ಭೀತಿಯಿದೆ.
ಪ್ರತಾಪಸಿಂಹ, ನಳೀನ್‌ಕುಮಾರ್‌ ಕಟೀಲು, ಮಂಗಳ ಅಂಗಡಿ, ಅನಂತಕುಮಾರ್‌ ಹೆಗಡೆ ಸಹಿತ ಹಲವರು ಹಾಲಿ ಸದಸ್ಯರಿಗೆ ಟಿಕೆಟ್‌ ತಪ್ಪುವ ಭೀತಿಯಿದೆ.

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕಣಕ್ಕಿಳಿಯುವ ಬಿಜೆಪಿ ಸದಸ್ಯರ ಪಟ್ಟಿ ಆಯ್ಕೆ ಕಸರತ್ತು ಇನ್ನೂ ಮುಂದುವರಿದಿದೆ. ಕೆಲವು ಕ್ಷೇತ್ರಗಳಿಗೆ ಹೆಸರನ್ನು ಅಂತಿಮಗೊಳಿಸಿದ್ದರೆ. ಇನ್ನೂ ಕೆಲವು ಕ್ಷೇತ್ರಗಳಿಗೆ ಸ್ಪರ್ಧೆ ಇರುವುದರಿಂದ ಇನ್ನೂ ಅಖೈರುಗೊಳಿಸಿಲ್ಲ. ಈ ನಡುವೆ ಕೆಲವು ಹಾಲಿ ಸದಸ್ಯರು ಟಿಕೆಟ್‌ ತಪ್ಪಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದರಲ್ಲಿ ಕೆಲವು ಅಚ್ಚರಿಯ ಹೆಸರುಗಳೂ ಇವೆ.

ಯಾವ ಕ್ಷೇತ್ರದಲ್ಲಿ ಹೇಗೆ

  • ವಿವಾದದ ಹೇಳಿಕೆಗಳ ಮೂಲಕವೇ ಬಿಜೆಪಿಗೆ ಬಿಸಿ ತುಪ್ಪವಾಗಿರುವ ಕೆನರಾ ಕ್ಷೇತ್ರದ ಆರು ಬಾರಿ ಸಂಸದ ಅನಂತಕುಮಾರ್‌ ಹೆಗಡೆ ಅವರನ್ನು ಬದಲಾಯಿಸುವ ಕುರಿತು ಚರ್ಚೆಗಳಿವೆ. ಇಲ್ಲಿಯೂ ಹೊಸ ಮುಖಕ್ಕೆ ಅವಕಾಶ ಸಿಗಬಹುದು.
  • ಹಾವೇರಿ- ಗದಗದಲ್ಲಿ ಹಾಲಿ ಸದಸ್ಯ ಶಿವಕುಮಾರ ಉದಾಸಿ ಅವರು ಮೂರು ಬಾರಿ ಸಂಸದರಾಗಿದ್ದವರು. ಈ ಬಾರಿ ಅವರೇ ಚುನಾವಣೆ ಕಣಕ್ಕೆ ಇಳಿಯುತ್ತಿಲ್ಲ. ಮುಂದಿನ ಬಾರಿ ವಿಧಾನಸಭೆ ಚುನಾವಣೆಗೆ ಅವರು ಕಣಕ್ಕಿಳಿಯುವ ಸಾಧ್ಯತೆಯಿದೆ. ಇದರಿಂದ ಇಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಪುತ್ರ ಕಾಂತೇಶ್‌ ಹೆಸರು ಪರಿಶೀಲನೆಯಲ್ಲಿದೆ.
  • ಬಳ್ಳಾರಿಯಲ್ಲಿ ಹಾಲಿ ಸದಸ್ಯ ದೇವೇಂದ್ರಪ್ಪ ಅವರಿಗೆ ಈ ಚುನಾವಣೆಯಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಇಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳು ಅಧಿಕವಾಗಿವೆ.

ಇದನ್ನೂ ಓದಿರಿ: Breaking News: ಹರಿಯಾಣದಲ್ಲಿ ಬಿಜೆಪಿಯ ಹಿಂದುಳಿದ ವರ್ಗಗಳ ನಾಯಕ ನಯಾಬ್‌ ಸಿಂಗ್‌ ಸೈನಿಗೆ ಸಿಎಂ ಪಟ್ಟ

  • ವಿಜಯಪುರದಲ್ಲಿ ಹಾಲಿ ಸದಸ್ಯ ಸತತ ಆರು ಬಾರಿ ಸಂಸದರಾಗಿರುವ ರಮೇಶ್‌ ಜಿಗಜಿಣಗಿ ಅವರ ಆರೋಗ್ಯ ಸರಿಯಾಗಿಲ್ಲ. ಈ ಕಾರಣದಿಂದ ಅವರ ಬದಲು ಸಂಬಂಧಿಯೇ ಆಗಿರುವ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಇಲ್ಲವೇ ಅವರ ಪುತ್ರ ಉಮೇಶ್‌ ಕಾರಜೋಳ ಹೆಸರು ಪರಿಗಣನೆಯಲ್ಲಿದೆ.
  • ಬಾಗಲಕೋಟೆಯಲ್ಲೂ ನಾಲ್ಕು ಬಾರಿ ಗೆದ್ದಿರುವ ಪಿ.ಸಿ.ಗದ್ದಿಗೌಡರ ಅವರನ್ನು ಬದಲಾಯಿಸಿ ಹೊಸಬರಿಗೆ ಮಣೆ ಹಾಕಬಹುದು ಎನ್ನಲಾಗುತ್ತಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಇಲ್ಲವೇ ನಿವೃತ್ತಯ ಅಧಿಕಾರಿ ಪ್ರಕಾಶ್‌ ಹೆಸರನ್ನು ಪರಿಶೀಲಿಸಲಾಗುತ್ತಿದೆ
  • ದಾವಣಗೆರೆ ಕ್ಷೇತ್ರದಿಂದ ಗೆದ್ದು ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದ ಜಿ.ಎಂ.ಸಿದ್ದೇಶ್ವರ ಅವರಿಗೂ ಸ್ಥಳೀಯವಾಗಿ ವಿರೋಧವಿದೆ. ಸಿದ್ದೇಶ್ವರ ಅವರ ಬದಲು ಅವರ ಪುತ್ರನಿಗೆ ಇಲ್ಲಿ ಅವಕಾಶ ನೀಡಬಹುದು ಎನ್ನಲಾಗುತ್ತಿದೆ.
  • ಮಂಗಳೂರು ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದಿರುವ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರ ಬದಲು ಹೊಸಬರಿಗೆ ಅವಕಾಶ ನೀಡಬೇಕು ಎನ್ನುವ ಯೋಚನೆ ವರಿಷ್ಠರಲ್ಲಿದೆ. ನಳಿನ್‌ಗೆ ಪಕ್ಷ ಸಂಘಟನೆಯು ಜವಾಬ್ದಾರಿಯೊಂದಿಗೆ ರಾಜ್ಯ ರಾಜಕಾರಣಕ್ಕೆ ಅವಕಾಶ ಮಾಡಿಕೊಡಬಹುದು ಎನ್ನುವ ಮಾತುಗಳಿವೆ.

ಇದನ್ನೂಓದಿರಿ: ಟಿ20 ವಿಶ್ವಕಪ್‌ಗೆ ವಿರಾಟ್‌ ಕೊಹ್ಲಿ ಆಯ್ಕೆ ಅನುಮಾನ; ಕಠಿಣ ನಿರ್ಧಾರಕ್ಕೆ ಮುಂದಾದ ಬಿಸಿಸಿಐ

  • ಬೆಂಗಳೂರು ಉತ್ತರದಲ್ಲೂ ಎರಡು ಬಾರಿ ಗೆದ್ದು. ಈ ಹಿಂದೆ ಮಂಗಳೂರು, ಚಿಕ್ಕಮಗಳೂರು- ಉಡುಪಿಯಿಂದಲೂ ಸಂಸದರಾಗಿದ್ದ ಡಿ.ವಿ.ಸದಾನಂದಗೌಡ ಅವರಿಗೆ ವಯಸ್ಸಿನ ಕಾರಣದಿಂದ ಟಿಕೆಟ್‌ ತಪ್ಪಬಹುದು. ಅವರೂ ಪ್ರಯತ್ನ ನಡೆಸಿದ್ದಾರೆ. ಇಲ್ಲಿಗೆ ಹೊಸಬರಿಗೆ ಅವಕಾಶ ಸಿಗಲಿದೆ.
  • ಮೈಸೂರು- ಕೊಡಗು ಕ್ಷೇತ್ರದಲ್ಲೂ ಪ್ರತಾಪಸಿಂಹ ವಿರುದ್ದ ಪಕ್ಷದೊಳಗೆ ಅಸಮಾಧಾನವಿದೆ.ಕೆಲಸ ಮಾಡಿದ್ದರೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಮುಖಂಡರೊಡನೆಯೂ ಸಂಬಂಧ ಚೆನ್ನಾಗಿಲ್ಲ ಎನ್ನುವ ಕಾರಣಕ್ಕೆ ಬದಲಿಸಿ ರಾಜವಂಶಸ್ಥ ಯದುವೀರ್‌ ಇಲ್ಲವೇ ವೈದ್ಯರೊಬ್ಬರಿಗೆ ಅವಕಾಶ ಮಾಡಿಕೊಡಬಹುದು ಎನ್ನುವ ಚರ್ಚೆಗಳು ನಡೆದಿವೆ.
  • ಚಿಕ್ಕೋಡಿಯಲ್ಲೂ ಹಾಲಿ ಸದಸ್ಯ ಅಣ್ಣಾಸಾಹೇಬ್‌ ಜೊಲ್ಲೆ ಅವರ ಬದಲಿಗೆ ರಮೇಶ್‌ ಕತ್ತಿಗೆ ಅವಕಾಶ ನೀಡಬಹುದು ಎನ್ನಲಾಗುತ್ತಿದೆ. ಅಣ್ಣಾಸಾಹೇಬ್‌ ಪತ್ನಿ ಶಶಿಕಲಾ ಜೊಲ್ಲೆ ಹಾಲಿ ಶಾಸಕರು. ಸಚಿವರಾಗಿದ್ದವರು. ಈ ಹಿಂದೆ ಇಲ್ಲಿ ಸಂಸದರಾಗಿದ್ದ ರಮೇಶ್‌ ಕತ್ತಿಗೆ ಇನ್ನೊಂದು ಆಯ್ಕೆಗೆ ಟಿಕೆಟ್‌ ನೀಡಬಹುದು ಎನ್ನುವ ಅಭಿಪ್ರಾಯಗಳಿವೆ
  • ಬೆಳಗಾವಿಯಲ್ಲಿ ಹಾಲಿ ಸದಸ್ಯೆ ಮಂಗಳಾ ಅಂಗಡಿ ಅವರು ಪತಿ ಚನ್ನಬಸಪ್ಪ ಅಂಗಡಿ ನಿಧನದ ನಂತರ ಸದಸ್ಯರಾಗಿದ್ದರು. ಈ ಬಾರಿ ಇಲ್ಲಿ ಅಂಗಡಿ ಅವರ ಬೀಗರಾಗಿರುವ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರಿಗೆ ಟಿಕೆಟ್‌ ನೀಡಬಹುದು. ಶೆಟ್ಟರ್‌ ನಿರಾಕರಿಸಿದರೆ ಅವರ ಸೊಸೆಗೆ ಅವಕಾಶ ಮಾಡಿಕೊಡಬಹುದು ಎಂಬ ಚರ್ಚೆಗಳು ನಡೆದಿವೆ.
  • ಚಿಕ್ಕಬಳ್ಳಾಪುರದಲ್ಲೂ ವಯೋ ಸಹಜ ಕಾರಣ ಹಾಗೂ ಪುತ್ರ ಕಾಂಗ್ರೆಸ್‌ ನಲ್ಲಿ ಗುರುತಿಸಿಕೊಂಡಿರುವುದರಿಂದ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡರಿಗೆ ಟಿಕೆಟ್‌ ಇಲ್ಲ. ಇಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಇಲ್ಲವೇ ಶಾಸಕ ಎಸ್‌.ಆರ್.ವಿಶ್ವನಾಥ್‌ ಪುತ್ರ ಅಲೋಕ್ ಹೆಸರು ಮುಂಚೂಣಿಯಲ್ಲಿವೆ.

ಇದನ್ನೂ ಓದಿರಿ: Brain Teaser: ಇಲ್ಲಿದೆ ಕೂಡಿಸಿ, ಭಾಗಿಸುವ ಸುಲಭ ಗಣಿತ; ಆದ್ರೆ ಕ್ಯಾಲ್ಕುಲೆಟರ್‌ ಬಳಸದೆ ಉತ್ತರ ಹೇಳ್ಬೇಕು; ನಿಮ್ಮಿಂದ ಸಾಧ್ಯನಾ ನೋಡಿ

  • ಚಾಮರಾಜನಗರದಲ್ಲೂ ಹಾಲಿ ಸದಸ್ಯ ವಿ.ಶ್ರೀನಿವಾಸಪ್ರಸಾದ್‌ ಸ್ಪರ್ಧೆ ಸಾಧ್ಯತೆ ಕಡಿಮೆ. ಆರೋಗ್ಯದ ಕಾರಣದಿಂದ ಅವರು ಕಣಕ್ಕಿಳಿಯುವುದಿಲ್ಲ ಎಂದು ಹೇಳಿದ್ದಾರೆ. ಅವರ ಬದಲಿಗೆ ಅಳಿಯ ಡಾ.ಮೋಹನ್‌ ಇಲ್ಲವೇ ನಿವೃತ್ತ ಐಆರ್‌ಎಸ್‌ ಅಧಿಕಾರಿ ನಾರಾಯಣಸ್ವಾಮಿ ಅವರ ಹೆಸರು ಪರಿಗಣನೆಯಲ್ಲಿದೆ.
  • ತುಮಕೂರಿನಲ್ಲೂ ಹಾಲಿ ಸದಸ್ಯ ಜಿ.ಎಸ್‌.ಬಸವರಾಜು ಬದಲಿಗೆ ಮಾಜಿ ಸಚಿವ ವಿ.ಸೋಮಣ್ಣ ಇಲ್ಲವೇ ಜಿ.ಸಿ.ಮಾಧುಸ್ವಾಮಿಗೆ ಅವಕಾಶ ಸಿಗಬಹುದು.