ಕನ್ನಡ ಸುದ್ದಿ  /  Elections  /  Bangalore News Karnataka Cm Appoints 5 Ministers As Government Spokespersons For Lok Sabha Elections2024 Kub

Lok Sabha Elections2024: ಲೋಕಸಭೆ ಚುನಾವಣೆಗೆ ಕರ್ನಾಟಕದ 5 ಸಚಿವರಿಗೆ ಸರ್ಕಾರದ ವಕ್ತಾರರ ಹೊಣೆ

ಲೋಕಸಭೆ ಚುನಾವಣೆಗೆ ಅಣಿಯಾಗುತ್ತಿರುವ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಐವರು ಸಚಿವರನ್ನು ವಕ್ತಾರರನ್ನಾಗಿ ನೇಮಿಸಿದೆ.

ದಿನೇಶ್‌ ಗುಂಡೂರಾವ್‌, ಕೃಷ್ಣಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಈಶ್ವರಖಂಡ್ರೆ, ಸಂತೋಷ್‌ ಲಾಡ್‌ ಅವರಿಗೆ ವಕ್ತಾರರ ಜವಾಬ್ದಾರಿ ನೀಡಲಾಗಿದೆ.
ದಿನೇಶ್‌ ಗುಂಡೂರಾವ್‌, ಕೃಷ್ಣಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಈಶ್ವರಖಂಡ್ರೆ, ಸಂತೋಷ್‌ ಲಾಡ್‌ ಅವರಿಗೆ ವಕ್ತಾರರ ಜವಾಬ್ದಾರಿ ನೀಡಲಾಗಿದೆ.

ಬೆಂಗಳೂರು: ಲೋಕಸಭೆ ಚುನಾವಣೆಗೆ ಸಿದ್ದತೆಗಳು ನಡೆಯುತ್ತಿರುವ ನಡುವೆ ರಾಜಕೀಯ ಪಕ್ಷಗಳೂ ಅಭ್ಯರ್ಥಿಗಳ ಆಯ್ಕೆಯೂ ಸೇರಿದಂತೆ ಪ್ರಚಾರಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿವೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವೂ ಈಗಾಗಲೇ ಜಾರಿಗೊಳಿಸಿರುವ ಗ್ಯಾರಂಟಿ ಸಮಾವೇಶಗಳ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದೆ. ಇದರ ನಡುವೆ ಕರ್ನಾಟಕ ಸರ್ಕಾರ ಕೈಗೊಂಡಿರುವ ಸಾಧನೆಯ ವಿವರಗಳನ್ನು ಮತದಾರರಿಗೆ ನೀಡಲು ಐವರು ಸಚಿವರನ್ನು ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ. ಲೋಕಸಭೆ ಚುನಾವಣೆ ಮುಗಿಯುವವರೆಗೂ ಐವರು ಸಚಿವರು ಸರ್ಕಾರ ಹಾಗೂ ಪಕ್ಷದ ಕೊಂಡಿಯಾಗಿ ಕೆಲಸ ಮಾಡಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷರೂ ಆಗಿದ್ದ ಸಚಿವ ದಿನೇಶ್‌ ಗುಂಡೂರಾವ್‌, ಕಂದಾಯ ಸಚಿವ ಕೃಷ್ಣಬೈರೇಗೌಡ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌, ಐಟಿ.ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ , ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಹಾಗೂ ಕಾರ್ಮಿಕ ಸಚಿವ ಸಂತೋಷ್‌ ಎಸ್.ಲಾಡ್‌ ಅವರಿಗೆ ಸರ್ಕಾರದ ವಕ್ತಾರರನ್ನಾಗಿ ನೇಮಿಸಲಾಗಿದೆ.

ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರದಿದ್ದು, ಐವರು ಸಚಿವರನ್ನು ರಾಜ್ಯ ಸರ್ಕಾರದ ವಕ್ತಾರರನ್ನಾಗಿ ನೇಮಿಸಲಾಗಿದೆ. ಅವರಿಗೆ ಸರ್ಕಾರದ ಸಾಧನೆಗಳು, ದಾಖಲೆಗಳು ಮತ್ತು ಮಾಹಿತಿಗಳನ್ನು ಕಾಲ ಕಾಲಕ್ಕೆ ಒದಗಿಸುವಂತೆ ಇಲಾಖೆಗಳ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡಿ ಎಂದು ಸೂಚಿಸಿದ್ದಾರೆ.

ಈ ಸಚಿವರು ಸರ್ಕಾರದ ಗ್ಯಾರಂಟಿ ಯೋಜನೆಗಳು, ಒಂದು ವರ್ಷದಲ್ಲಿ ಕೈಗೊಂಡ ಅಭಿವೃದ್ದಿಗಳು, ಕ್ಷೇತ್ರವಾರು ಪ್ರಗತಿಯ ವಿವರಗಳನ್ನು ವಕ್ತಾರರಾಗಿ ನೀಡಲಿದ್ದಾರೆ. ಯುವ ಸಚಿವರಿಗೆ ಚುನಾವಣೆಯ ಹೊಣೆಯನ್ನು ಈ ಮೂಲಕ ಸಿದ್ದರಾಮಯ್ಯ ವಹಿಸಿದ್ದಾರೆ.

ಅಶೋಕ್‌ ಟೀಕೆ

ಸಚಿವ ಸಂಪುಟದ 34 ಸಚಿವರ ಪೈಕಿ ಕೇವಲ 5 ಜನ ಮಂತ್ರಿಗಳು ಸರ್ಕಾರದ ಅಧಿಕೃತ ವಕ್ತಾರರಾದರೆ ಉಳಿದ ಸಚಿವರು ಸರ್ಕಾರವನ್ನ ಪ್ರತಿನಿಧಿಸಲು ಅಸಮರ್ಥರು ಎಂದು ತಮ್ಮ ಅಭಿಪ್ರಾಯವೇ ಸಿಎಂ ಸಿದ್ದರಾಮಯ್ಯ ನವರೇ? ಎಂದು ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದ್ದಾರೆ.

ಈ ಪಟ್ಟಿಯಲ್ಲಿರುವ ವಕ್ತಾರರ ಪೈಕಿ ಒಬ್ಬ ಸಚಿವ ಮಹಾಶಯರಿಂದಲೇ ತಮ್ಮ ಸರ್ಕಾರ ಅತ್ಯಂತ ಮುಜುಗರಕ್ಕೆ ಒಳಗಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣದಲ್ಲಿ ಮಾಧ್ಯಮಗಳ ಮೇಲೆ ಸುಳ್ಳು ಆರೋಪ ಮಾಡಿ, ಮಾಧ್ಯಮಗಳನ್ನು ಪದೇ ಪದೇ ನಿಂದನೆ ಮಾಡಿ ಸತ್ಯವನ್ನು ತಿರುಚಲು ಶ್ರಮಿಸಿದ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಇದು ತಾವು ನೀಡುತ್ತಿರುವ ಬಹುಮಾನವೇ ಸಿದ್ದರಾಮಯ್ಯನವರೇ? ಎಂದು ಅಶೋಕ್‌ ಎಕ್ಸ್‌ ಪೋಸ್ಟ್‌ ಮೂಲಕ ಪ್ರಶ್ನಿಸಿದ್ದಾರೆ.