ಕನ್ನಡ ಸುದ್ದಿ  /  Elections  /  Bangalore News Lok Sabha Elections2024 Bangalore North Constituency Search For Candidates On In Bjp Congress Mrt

Lok Sabha Elections2024: ಕೆಂಗಲ್‌ ಹನುಮಂತಯ್ಯ, ಜಾಫರ್‌ ಷರೀಫ್‌ ಪ್ರತಿನಿಧಿಸಿದ್ದ ಬೆಂಗಳೂರು ಉತ್ತರ ಕ್ಷೇತಕ್ಕೆ ಯಾರು ಹುರಿಯಾಳುಗಳು?

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಯಾರು ಸ್ಪರ್ಧಿಸಬಹುದು ಎನ್ನುವ ಕುತೂಹಲ ಉಭಯ ಪಕ್ಷಗಳಲ್ಲಿದೆ.ವಿಶ್ಲೇಷಣೆ: ಎಚ್.ಮಾರುತಿ. ಬೆಂಗಳೂರು

ಬಿಜೆಪಿಯಿಂದ ಸದಾನಂದಗೌಡ, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಡಾ.ಸಿ.ಎನ್‌.ಮಂಜುನಾಥ್‌, ಕಾಂಗ್ರೆಸ್‌ನಿಂದ ಎಂ.ವಿ.ರಾಜೀವ್‌ಗೌಡ ಹೆಸರಿದೆ.
ಬಿಜೆಪಿಯಿಂದ ಸದಾನಂದಗೌಡ, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಡಾ.ಸಿ.ಎನ್‌.ಮಂಜುನಾಥ್‌, ಕಾಂಗ್ರೆಸ್‌ನಿಂದ ಎಂ.ವಿ.ರಾಜೀವ್‌ಗೌಡ ಹೆಸರಿದೆ.

ಬೆಂಗಳೂರು: ಕೆಂಗಲ್ ಹನುಮಂತಯ್ಯ ಅವರು ಪ್ರತಿನಿಧಿಸಿದ್ದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳು ಯಾರು? ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆಯೇ? ಇಂತಹ ಹಲವು ಪ್ರಶ್ನೆಗಳು ಮತದಾರರಲ್ಲಿ ಮಾತ್ರವಲ್ಲ. ರಾಜಕೀಯ ಮುಖಂಡರ ಮನದಾಳದಲ್ಲೂ ಇದೆ. ಈ ಕ್ಷೇತ್ರದಿಂದ ಹಲವಾರು ಹೆಸರುಗಳು ಚಲಾವಣೆಯಲ್ಲಿವೆ. ಬಿಜೆಪಿಯಲ್ಲಿ ಹಾಲಿ ಸದಸ್ಯ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಅವರನ್ನು ಬದಲಾಯಿಸಿ ಹೊಸಬರಿಗೆ ಟಿಕೆಟ್‌ ನೀಡಲಾಗುತ್ತದೆಯೇ, ಈಗಾಗಲೇ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿರುವ ಎಸ್.ಟಿ.ಸೋಮಶೇಖರ್‌ಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಿದೆಯೇ ಎನ್ನುವ ಚರ್ಚೆಯೂ ನಡೆದಿದೆ. ಆದರೆ ಉತ್ತರಕ್ಕಾಗಿ ಇನ್ನೂ ಕೆಲ ದಿನ ಕಾಯಬೇಕು.

ಕ್ಷೇತ್ರದ ಇತಿಹಾಸ

ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ಉತ್ತರ ಕ್ಷೇತ್ರವೂ ಒಂದು. ಈ ಕ್ಷೇತ್ರವನ್ನು ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರು 1952 ರಿಂದ 1977 ರವರೆಗೆ ಮೂರು ಬಾರಿ ಪ್ರತಿನಿಧಿಸಿದ್ದರು. 1977ರಿಂದ 1996 ರವರೆಗೆ ಕಾಂಗ್ರೆಸ್ ನ ಸಿ.ಕೆ. ಜಾಫರ್ ಷರೀಫ್ ಆಯ್ಕೆಯಾಗುತ್ತಾ ಬಂದಿದ್ದರು. 1996ರಲ್ಲಿ ಜಾಫರ್ ಷರೀಫ್ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಕಾಂಗ್ರೆಸ್ ಹಿಡಿತ ತಪ್ಪಿತ್ತು. 1999 ರಲ್ಲಿ ಮತ್ತೆ ಜಾಫರ್ ಷರೀಫ್ ಆಯ್ಕೆಯಾದರು.

ಬೆಂಗಳೂರು ನಗರದ ಉತ್ತರ ಭಾಗದ ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ರಚಿಸಲಾಗಿದೆ. ಕೆ.ಆರ್.ಪುರಂ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ ಮತ್ತು ಪುಲಕೇಶಿನಗರ ಸೇರಿದಂತೆ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಆಂಜನೇಯ ಸ್ವಾಮಿ ದೇವಸ್ಥಾನ, ಇಸ್ಕಾನ್ ಮತ್ತು ಹೆಬ್ಬಾಳ ಮೇಲ್ಸೇತುವೆ ಗಮನ ಸೆಳೆಯುವ ಚಿತ್ರಣಗಳು.

ಎಲ್ಲಕ್ಕಿಂತ ಹೆಚ್ಚಾಗಿ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ರಿಯಲ್ ಎಸ್ಟೇಟ್ ವ್ಯವಹಾರ ರಾಜಕಾರಣಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಬಿಜೆಪಿ ತೆಕ್ಕೆಗೆ

1951ರಿಂದ ಕಾಂಗ್ರೆಸ್ ಹಿಡಿತದಲ್ಲಿದ್ದ ಈ ಕ್ಷೇತ್ರ 2004 ರಿಂದ ಬಿಜೆಪಿ ತೆಕ್ಕೆಗೆ ಜಾರಿದೆ. 2004ರಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ಟಿ.ಸಾಂಗ್ಲಿಯಾನಾ, 2009ರಲ್ಲಿ ಡಿ.ಬಿ.ಚಂದೇಗೌಡ ಮತ್ತು 2014 ಹಾಗೂ 2019ರಲ್ಲಿ ಡಿವಿ ಸದಾನಂದಗೌಡ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ ಕಾಂಗ್ರೆಸ್ ನ ಸಿ.ಕೆ. ಜಾಫರ್ ಷರೀಫ್ ಆರಿಸಿ ಬಂದಿದ್ದರು. 1996ರಲ್ಲಿ ಜೆಡಿಎಸ್ ನ ಸಿ.ನಾರಾಯಣಸ್ವಾಮಿ ಆಯ್ಕೆಯಾಗಿದ್ದರು.

2011ರ ನಂತರ ಜನಗಣತಿ ನಡೆದಿಲ್ಲವಾದ್ದರಿಂದ ಅಂಕಿಅಂಶಗಳಿಗೆ ಹಳೆಯ ಗಣತಿಯನ್ನೇ ಆಧಾರವಾಗಿಟ್ಟುಕೊಳ್ಳಬೇಕಿದೆ. ಈ ಕ್ಷೇತ್ರ ಶೇ. 92 ರಷ್ಟು ನಗರ ಪ್ರದೇಶ ಮತ್ತು ಶೇ.8ರಷ್ಟು ಗ್ರಾಮೀಣ ಪ್ರದೇಶವನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚು ಎಂದು ತಿಳಿದಿದೆಯಾದರೂ ನಿಖರ ಮಾಹಿತಿ ಇಲ್ಲ. ಇಲ್ಲಿ ಶೇ.13.3ರಷ್ಟು\ ಮುಸಲ್ಮಾನ, ಶೇ.11.9 ರಷ್ಟು ಎಸ್ ಸಿ, ಶೇ.2.2 ರಷ್ಟು ಎಸ್ ಟಿ ಮತ್ತು ಶೇ.2.5ರಷ್ಟು ಕ್ರಿಶ್ಚಿಯನ್ನರಿದ್ದಾರೆ. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕಳೆದನಾಲ್ಕು ಚುನಾವಣೆಗಳಿಂದ ಬಿಜೆಪಿ ಆಯ್ಕೆಯಾಗುತ್ತಿರುವುದು ವಿಶೇಷ.

ವಿಧಾನಸಭೆ ಕ್ಷೇತ್ರ ಲೆಕ್ಕಾಚಾರ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 5 ಮತ್ತು ಕಾಂಗ್ರೆಸ್ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಇಲ್ಲೊಂದು ಬಿಜೆಪಿಗೆ ಹಿನ್ನೆಡೆಯಾಗುವ ಅಂಶವೂ ಇದೆ. ಅತಿ ದೊಡ್ಡ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ತಾಂತ್ರಿಕವಾಗಿ ಬಿಜೆಪಿಯಲ್ಲಿದ್ದರೂ ಅವರು ಕಾಂಗ್ರೆಸ್ ಜೊತೆ ಒಡನಾಟ ಬೆಳೆಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅವರು ಆತ್ಮಸಾಕ್ಷಿ ಮತದ ಹೆಸರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಶತಾಯ ಗತಾಯ ಈ ಕ್ಷೇತ್ರವನ್ನು ಗೆಲ್ಲಲು ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದೆ. 2019ರ ಚುನಾವಣೆಯಲ್ಲಿ 24.2 ಲಕ್ಷ ಮತದಾರರು ನೊಂದಣಿ ಮಾಡಿಕೊಂಡಿದ್ದರು. ಬೆಂಗಳೂರು ಉತ್ತರ ಅತೀ ಹೆಚ್ಚು ಮತದಾರರನ್ನು ಹೊಂದಿದ್ದು 22,24, 847 ಮತದಾರರಿದ್ದಾರೆ. ಇವರಲ್ಲಿ 11,66,811 ಪುರುಷರು ಹಾಗೂ 10,61,746 ಮಹಿಳೆಯರಿದ್ದಾರೆ.

ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದ ಗೌಡ 8,24,500 ಮತಗಳನ್ನು ಪಡೆದು ಆಯ್ಕೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ 6,76,982 ಮತ ಪಡೆದಿದ್ದರು.

2014 ರ ಲೋಕಸಭಾ ಚುನಾವಣೆಯಲ್ಲಿ, ಡಿ.ವಿ.ಸದಾನಂದ ಗೌಡ ಕಾಂಗ್ರೆಸ್ ಅಭ್ಯರ್ಥಿ ಸಿ.ನಾರಾಯಣಸ್ವಾಮಿ ವಿರುದ್ಧ 2.29 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

2009 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಡಿ.ಬಿ.ಚಂದ್ರೇಗೌಡ ಕಾಂಗ್ರೆಸ್ ಅಭ್ಯರ್ಥಿ ಸಿ. ಕೆ. ಜಾಫರ್ ಶರೀಫ್ ವಿರುದ್ಧ ಜಯ ಸಾಧಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ನಾಮಬಲ ಮತ್ತು ಹಿಂದುತ್ವದ ಆಧಾರದ ಮೇಲೆ ಚುನಾವಣೆ ನಡೆಯುತ್ತಿದ್ದು, ಮತದಾರ ಯಾರತ್ತ ಒಲಿಯುತ್ತಾನೆ ಎಂದು ಕಾದು ನೋಡಬೇಕಿದೆ.

ಬಿಜೆಪಿಯಲ್ಲೇ ಪೈಪೋಟಿ

ಡಿ.ವಿ. ಸದಾನಂದ ಗೌಡ ಮೂರು ತಿಂಗಳ ಹಿಂದೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ತಕ್ಷಣವೇ ಚುರುಕಾದ ಸಿ.ಟಿ. ರವಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಲು ತೆರೆ ಮರೆಯಲ್ಲಿ ಪ್ರಯತ್ನಗಳನ್ನು ಆರಂಭಿಸಿದರು. ಚಿಕ್ಕಮಗಳೂರು- ಉಡುಪಿ ಕ್ಷೇತ್ರದ ಸದಸ್ಯೆ ಶೋಭಾ ಕರಂದ್ಲಾಜೆ ಅವರೂ ಸಹ ಇಲ್ಲಿಗೆ ವಲಸೆ ಬರಲು ಆಸೆ ತೋರಿಸಿದ್ದರು. ಇವರಿಗೆ ಬೆಂಗಳೂರಿಗೆ ಪ್ರವೇಶ ತೋರಿಸಿದರೆ ತಮ್ಮ ಹಿಡಿತ ತಪ್ಪಿ ಹೋಗುತ್ತದೆ ಎಂದು ಭಾವಿಸಿದ ನಗರದ ಮೂಲ ಬಿಜೆಪಿ ನಾಯಕರು ಪ್ರತಿತಂತ್ರ ರೂಪಿಸಿದರು. ಮತ್ತೆ

ಸದಾನಂದ ಗೌಡರ ಮನವೊಲಿಕೆಯಲ್ಲಿ ಆರ್. ಅಶೋಕ್ ಹಾಗೂ ಶಾಸಕ ಡಾ. ಅಶ್ವತ್ಥನಾರಾಯಣ ಯಶಸ್ವಿಯಾಗಿದ್ದಾರೆ. ಅವರನ್ನು ಲೋಕಸಭೆಗೆ ಕಳಿಸಿದರೆ ಬೆಂಗಳೂರು ರಾಜಕಾರಣದಲ್ಲಿ ಮುಂದೆಯೂ ತಮ್ಮದೇ ಪ್ರಾಬಲ್ಯ ಮುಂದುವರೆಸಬಹುದು ಎನ್ನುವುದು ಇವರ ಲೆಕ್ಕಾಚಾರ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಗೌಡರು ಮತ್ತೆ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಸದಾನಂದ ಗೌಡರಿಗೆ ಮತ್ತೆ ಟಿಕೆಟ್ ದೊರೆಯುವುದೇ ಎನ್ನುವುದು ನಿಗೂಢವಾಗಿದೆ.

ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕರೂ ಆಶ್ಚರ್ಯವೇನಿಲ್ಲ. ಕಾಂಗ್ರೆಸ್ ನಿಂದ ರಾಜೀವ್ ಗೌಡ ಅವರ ಹೆಸರು ಕೇಳಿ ಬರುತ್ತಿದೆ. ಎಸ್.ಟಿ.ಸೋಮಶೇಖರ್‌ ಲೋಕಸಭೆಗೆ ಬೇಡ ಎನ್ನುತ್ತಿದ್ದಾರೆ.

ಸದ್ಯಕ್ಕೆ ಕ್ಷೇತ್ರದ ರಾಜಕೀಯ ಮಾತ್ರ ಸುಡು ಬಿಸಿಲಿನಲ್ಲಿಯೂ ತಣ್ಣಗಿದ್ದು, ಅಭ್ಯರ್ಥಿಗಳ ಘೋಷಣೆಯಾದರೆ ಕಾವು ಪಡೆದುಕೊಳ್ಳುತ್ತದೆ.

(ವಿಶ್ಲೇಷಣೆ: ಎಚ್.ಮಾರುತಿ. ಬೆಂಗಳೂರು)