Lok Sabha Elections2024: ಕುಮಾರಸ್ವಾಮಿ ಸ್ಪರ್ಧೆಗೆ ಹೆಚ್ಚಿದ ಒತ್ತಡ; ಈ ಮೂರರಲ್ಲಿ ಒಂದು ಕ್ಷೇತ್ರದಿಂದ ಕಣಕ್ಕೆ ಸಾಧ್ಯತೆ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಡ ಹೆಚ್ಚುತ್ತಿದೆ.(ವರದಿ: ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಸ್ಪರ್ಧೆಗೆ ಜೆಡಿಎಸ್ ಮತ್ತು ಬಿಜೆಪಿಯಿಂದ ಒತ್ತಡ ಹೆಚ್ಚಾಗುತ್ತಿದೆ. ಕುಮಾರಸ್ವಾಮಿ ಅವರ ಸಹದ್ಯೋಗಿಗಳು ಆರಂಭದಿಂದಲೂ ಸ್ಪರ್ಧಿಸುವಂತೆ ಮನವೊಲಿಸುತ್ತಿದ್ದಾರೆ. ಆದರೆ ಅವರು ಇದುವರೆಗೂ ಗುಟ್ಟು ಬಿಟ್ಟು ಕೊಟ್ಟಿಲ್ಲ. ಮತ್ತೊಂದು ಕಡೆ ಸೀಟು ಹಂಚಿಕೆ ಒಂದು ಹಂತಕ್ಕೆ ಬಂದಿದ್ದು, ಈ ವಾರದೊಳಗೆ ಯಾರಿಗೆ ಎಷ್ಟು ಎನ್ನುವುದನ್ನು ವರಿಷ್ಠರು ಪ್ರಕಟ ಮಾಡಲಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಎಲ್ಲ 28 ಸ್ಥಾನಗಳಿಗೆ ಏಕ ಕಾಲಕ್ಕೆ ಜಂಟಿ ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡುವುದಾಗಿ ತಿಳಿದು ಬಂದಿದೆ.
ಆದರೆ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಮಾತ್ರ ಕುಮಾರಸ್ವಾಮಿ ಅವರ ಸ್ಪರ್ಧೆ ಪ್ರಧಾನಿ ಮೋದಿ ಅವರ ನಿರ್ಧಾರಕ್ಕೆ ಬಿಟ್ಟ ವಿಷಯ ಎಂದು ಹೇಳುವ ಮೂಲಕ ಕುತೂಹಲವನ್ನು ಉಳಿಸಿದ್ದಾರೆ.
ಕುಮಾರಸ್ವಾಮಿ ಅವರ ಸ್ಪರ್ಧೆಗೆ ಬಿಜೆಪಿಯಲ್ಲಿ ಒಮ್ಮತಾಭಿಪ್ರಾಯವಿಲ್ಲ. ಕೆಲವು ಮುಖಂಡರು ಇವರ ಸ್ಪರ್ಧೆಯಿಂದ ಎಲ್ಲ 28 ಸ್ಥಾನಗಳನ್ನು ಗೆಲ್ಲಲು ಸಹಾಯಕವಾಗುತ್ತದೆ ಎಂದು ಅಭಿಪ್ರಾಯಪಟ್ಟರೆ, ಮತ್ತೊಂದು ಗುಂಪು ಬೇಡ ಎನ್ನುತ್ತಿದೆ. ತಮ್ಮ ವೈಯಕ್ತಿಕ ಹಿತಾಸಕ್ತಿ ದೃಷ್ಠಿಯಿಂದ ಬೇಡ ಎನ್ನುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪಕ್ಷದ ಬಹುತೇಕ ಮುಖಂಡರು ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದಲೇ ಕಣಕ್ಕಿಳಿಯಬೇಕು ಎಂದು ಒತ್ತಡ ಹೇರುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಒತ್ತಡ ಹೇರುತ್ತಿದೆ. ಈ ಕ್ಷೇತ್ರದಲ್ಲಿ ಮೂವರು ಶಾಸಕರು ಇದ್ದು ಅನುಕೂಲವಾಗಲಿದೆ ಎನ್ನುವುದು ಬಿಜೆಪಿ ನಾಯಕರ ವಾದ.
ಆದರೆ ಜೆಡಿಎಸ್ ಮುಖಂಡರು ಈ ಕ್ಷೇತ್ರದಿಂದ ಹೆಚ್ ಡಿಕೆ ಅವರ ಸ್ಪರ್ಧೆ ಬೇಡ ಎನ್ನುತ್ತಿದ್ದಾರೆ. ಡಿ.ಕೆ. ಸಹೋದರರ ವಿರುದ್ದ ಘರ್ಷಣೆ ಮಾಡಿಕೊಳ್ಳುವುದು ಉತ್ತಮ ನಡೆ ಅಲ್ಲ. ಇದರಿಂದ ಒಕ್ಕಲಿಗ ಸಮುದಾಯದಲ್ಲಿ ಗೊಂದಲ ಉಂಟಾಗುತ್ತದೆ ಎಂಬ ಅಭಿಪ್ರಾಯ ಇದೆ.
ಇತ್ತೀಚೆಗೆ ಕುಮಾರಸ್ವಾಮಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಕಾರ್ಯಕರ್ತರು ಆಹ್ವಾನಿಸಿದ್ದಾರೆ.
ಶುಕ್ರವಾರ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಕುಮಾರಸ್ವಾಮಿ ಅವರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಹುಶಃ ಈ ಸಭೆಯಲ್ಲಿ ಎಲ್ಲವೂ ನಿರ್ಧಾರವಾಗಲಿದೆ.
ಜೆಡಿಎಸ್ ಮೂಲಗಳ ಪ್ರಕಾರ ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರಗಳು ಪಕ್ಕಾ ಆಗಿವೆ. ಜೊತೆಗೆ ಬೆಂಗಳೂರು ಗ್ರಾಮಾಂತರ, ತುಮಕೂರು ಅಥವಾ
ಚಿಕ್ಕಬಳ್ಳಾಪುರ ಕ್ಷೇತ್ರ ದಕ್ಕುವ ಸಾಧ್ಯತೆಗಳಿವೆ ಎಂದು ಹೇಳುತ್ತಿದ್ದಾರೆ.
ಬಿ. ಎನ್. ಬಚ್ಚೇಗೌಡ ಅವರು ಸ್ಪರ್ಧಿಸದ ಕಾರಣ ಕುಮಾರಸ್ವಾಮಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಬಿಜೆಪಿಯ ಒಂದು ವರ್ಗ ಬಯಸಿದೆ.
ಒಂದು ವೇಳೆ ನಾಲ್ಕು ಸ್ಥಾನಗಳು ಜೆಡಿಎಸ್ ಗೆ ಲಭ್ಯವಾದರೆ ಕುಮಾರಸ್ವಾಮಿ ಅವರ ಜವಾಬ್ಧಾರಿ ಹೆಚ್ಚಾಗುತ್ತದೆ. ಚುನಾವಣಾ ಉಸ್ತುವಾರಿ ವಹಿಸಬೇಕಾಗುತ್ತದೆ. ಆದ್ದರಿಂದ ಅವರು ಸ್ಪರ್ಧೆ ಮಾಡುವುದು ಅನುಮಾನ ಎಂಬ ಅಭಿಪ್ರಾಯವು ಇದೆ.
ಪಕ್ಷದ ಹಿತದೃಷ್ಟಿಯಿಂದ ಕುಮಾರಸ್ವಾಮಿ ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಒಳ್ಳೆಯದು. ಕೇಂದ್ರ ಸಚಿವರಾದರೆ ಪಕ್ಷವನ್ನು ಸಂಘಟಿಸಲು ಸಹಾಯವಾಗುತ್ತದೆ ಎಂದು ಕೆಲವು ಜೆಡಿಎಸ್ ಮುಖಂಡರು ವಾದಿಸುತ್ತಾರೆ.
ವೈಯಕ್ತಿಕವಾಗಿ ಪ್ರಧಾನಿ ಮೋದಿ ಅವರಿಗೆ ಕುಮಾರಸ್ವಾಮಿ ಸ್ಪರ್ಧಿಸುವುದು ಇಷ್ಟವಿದೆ. ಇದರಿಂದ ಎನ್ ಡಿ ಎ ಸಹದ್ಯೋಗಿಗಳಿಗೆ ಉತ್ತಮ ಸಂದೇಶ ರವಾನೆಯಾಗುತ್ತದೆ. ಮಾಜಿ ಮುಖ್ಯಮಂತ್ರಿಗಳ ಸಾಮರ್ಥ್ಯದ ಮೇಲೆ ನಂಬಿಕೆ ಇದೆ ಎಂಬ ಸಂದೇಶ ರವಾನೆಯಾಗುತ್ತದೆ.
ಜೆಡಿಎಸ್ ಪಕ್ಷದಲ್ಲಿ 19 ಶಾಸಕರಿದ್ದು ಹೋಳು ಮಾಡಲು ಕಾಂಗ್ರೆಸ್ ಸರ್ಕಾರ ಹವಣಿಸುತ್ತಿದೆ. ಬಿಜೆಪಿ ಜೊತೆಯಲ್ಲಿ ಮೈತ್ರಿ ಮಾಡಿಕೊಂಡಿರುವುದಕ್ಕೆ ಶರಣ ಕಂದಕೂರ, ಕರೆಮ್ಮ ನಾಯಕ್ ಮೊದಲಾದ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಕುಮಾರಸ್ವಾಮಿ ದೆಹಲಿಯಲ್ಲಿ ಕುಳಿತರೆ ಪಕ್ಷವನ್ನು ಇಬ್ಭಾಗ ಮಾಡದೆ ಇರದು ಎಂಬ ಅಭಿಪ್ರಾಯವೂ ಇದೆ.
(ವರದಿ: ಎಚ್. ಮಾರುತಿ, ಬೆಂಗಳೂರು)