Lok Sabha Elections2024:ಸಚಿವ ಈಶ್ವರ ಖಂಡ್ರೆಗೆ ಬಿಜೆಪಿ ಗಾಳ, ಲೋಕಸಭೆ ಚುನಾವಣೆ ಟಿಕೆಟ್‌, ಕೇಂದ್ರದಲ್ಲಿ ಮಂತ್ರಿಸ್ಥಾನದ ಭರವಸೆ-bidar news bjp offering forest minister eshwar khandre lok sabha elections 2024 ticket central minister ship from bidar ,ಚುನಾವಣೆಗಳು ಸುದ್ದಿ
ಕನ್ನಡ ಸುದ್ದಿ  /  ಚುನಾವಣೆಗಳು  /  Lok Sabha Elections2024:ಸಚಿವ ಈಶ್ವರ ಖಂಡ್ರೆಗೆ ಬಿಜೆಪಿ ಗಾಳ, ಲೋಕಸಭೆ ಚುನಾವಣೆ ಟಿಕೆಟ್‌, ಕೇಂದ್ರದಲ್ಲಿ ಮಂತ್ರಿಸ್ಥಾನದ ಭರವಸೆ

Lok Sabha Elections2024:ಸಚಿವ ಈಶ್ವರ ಖಂಡ್ರೆಗೆ ಬಿಜೆಪಿ ಗಾಳ, ಲೋಕಸಭೆ ಚುನಾವಣೆ ಟಿಕೆಟ್‌, ಕೇಂದ್ರದಲ್ಲಿ ಮಂತ್ರಿಸ್ಥಾನದ ಭರವಸೆ

Bidar News ಬೀದರ್‌ ಲೋಕಸಭೆ ಚುನಾವಣೆಗೆ ಟಿಕೆಟ್‌ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಕಾಂಗ್ರೆಸ್‌ನಲ್ಲಿರುವ ಸಚಿವ ಈಶ್ವರ ಖಂಡ್ರೆ ಅವರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.ವರದಿ: ಮಹೇಶ್‌ ಕುಲಕರ್ಣಿ.ಕಲಬುರಗಿ

ಈಶ್ವರ ಖಂಡ್ರೆ ಅವರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.
ಈಶ್ವರ ಖಂಡ್ರೆ ಅವರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.

ಬೀದರ್‌: ಲೋಕಸಭೆ ಚುನಾವಣೆಗ ಟಿಕೆಟ್‌ ಆಯ್ಕೆ ಜತಗೆ ಅನ್ಯ ಪಕ್ಷದವರನ್ನು ಸೆಳೆಯುವ ಪ್ರಯತ್ನಗಳು ಕರ್ನಾಟಕದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಸದ್ದಿಲ್ಲದೇ ನಡೆದಿವೆ. ಇದರ ನಡುವೆಯೇ ಬೀದರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಕುರಿತಂತೆ ಪಕ್ಷದ ಹೈಕಮಾಂಡ್ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಹಿನ್ನೆಲೆಯಲ್ಲಿ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ನಿರ್ಲಿಪ್ತರಾಗಿರುವ ಬೆನ್ನಲ್ಲೇ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಗಾಳ ಹಾಕಿದ್ದು, ಕಳೆದೆರಡು ದಿನಗಳಿಂದ ಈ ಯತ್ನ ನಡೆದಿರುವುದು ಈಗ ಕಾಂಗ್ರೆಸ್ ಪಾಳೆಯದಲ್ಲಿ ಭುಗಿಲು ಹುಟ್ಟಿಸಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷರೂ ಆಗಿರುವ ಖಂಡ್ರೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಾಕಾರ್ಯದರ್ಶಿ ಸಹ ಆಗಿದ್ದಾರೆ. ಹಾಗಾಗಿ, ಅವರೊಬ್ಬ ಪ್ರಬಲ ಲಿಂಗಾಯತ ಮುಖಂಡರಾಗಿರುವ ಹಿನ್ನೆಲೆಯಲ್ಲಿ ಲಿಂಗಾಯತ ಮತ ಬ್ಯಾಂಕ್ ಸೆಳೆಯಲು ಬಿಜೆಪಿ ಇಂಥದ್ದೊಂದು ಯತ್ನಕ್ಕೆ ಕೈ ಹಾಕಿದೆ ಎನ್ನಲಾಗಿದೆ.

ಕೈನಲ್ಲಿ ಅಸಮಾಧಾನ

ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಮತ್ತೊಮ್ಮೆ ಕಣಕ್ಕಿಳಿಯಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ಮಣಿಸಲು ಕಾಂಗ್ರೆಸ್ ತನ್ನ ಅಭ್ಯರ್ಥಿ ಯಾರು ಎಂಬುದನ್ನು ಇನ್ನೂ ಅಂತಿಮಗೊಳಿಸಿಲ್ಲ. ಇನ್ನು ಟಿಕೆಟ್ ಗಿಟ್ಟಿಸುವ ಯತ್ನದಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹಾಗೂ ಈಶ್ವರ ಖಂಡ್ರೆಯವರ ಪುತ್ರ ಸಾಗರ್ ಖಂಡ್ರೆ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಖಂಡ್ರೆಯವರ ಅಭಿಪ್ರಾಯ ಸಂಗ್ರಹ ಕುರಿತಂತೆ ಪಕ್ಷದ ಹೈಕಮಾಂಡ್ ಆಸಕ್ತಿ ತೋರದೆ ಇರುವುದು ಖಂಡ್ರೆಯವರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ ಎಂದು ಅವರ ನಿಕಟವರ್ತಿಗಳು ಹೇಳುತ್ತಾರೆ.

ಈ ಅಸಮಾಧಾನವನ್ನೇ ನಗದೀಕರಿಸಿಕೊಳ್ಳಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ ದಿಲ್ಲಿಯಿಂದ ಪ್ರತ್ಯೇಕ ತಂಡವೊಂದನ್ನು ಬೀದರ್ ಗೆ ಕಳಿಸಿದ್ದು, ಈ ತಂಡ ಈಶ್ವರ್ ಅವರ ಮನವೊಲಿಸುವ ಯತ್ನದಲ್ಲಿ ನಿರತವಾಗಿದೆ ಎಂದು ಆ ಮೂಲಗಳು ಹೇಳಿವೆ.

ತಮ್ಮ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿರುವ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ತಮ್ಮ ಪಟ್ಟು ಸಡಿಲಿಸಲು ಸಿದ್ದರಿಲ್ಲ. ಮೇಲಾಗಿ, ತಮ್ಮ ಪುತ್ರನ ರಾಜಕೀಯ ಭವಿಷ್ಯ ನಿರ್ಮಾಣಕ್ಕೆ ಇದೇ ಸಕಾಲವೆಂಬ ನಿರ್ಧಾರಕ್ಕೆ ಬಂದಿರುವ ಖಂಡ್ರೆ ಶತಾಯಗತಾಯ ತಮ್ಮ ಪುತ್ರನಿಗೆ ಟಿಕೆಟ್ ಪಡೆದೇ ತೀರಬೇಕೆಂಬ ಪಟ್ಟು ಹಿಡಿದಿದ್ದರೂ, ಕನಿಷ್ಠ ಸೌಜನ್ಯಕ್ಕೂ ಅವರನ್ನು ಪಕ್ಷದ ಹೈಕಮಾಂಡ್ ಸಂಪರ್ಕಿಸದೆ ಇರುವುದು ಖಂಡ್ರೆ ಅವರಲ್ಲಿ ವ್ಯಾಪಕ ಅಸಮಾಧಾನ ಮೂಡಿಸಿದೆ ಎನ್ನಲಾಗುತ್ತಿದೆ.

ಮಂತ್ರಿ ಸ್ಥಾನದ ಭರವಸೆ

ಈ ಮಧ್ಯೆ, ಬಿಜೆಪಿಗೆ ಸೇರ್ಪಡೆಗೊಂಡಲ್ಲಿ ಕೇಂದ್ರ ಸರಕಾರದಲ್ಲಿ ಈಶ್ವರ ಖಂಡ್ರೆಯವರಿಗೆ ಸಚಿವ ಸ್ಥಾನ ನೀಡುವುದಾಗಿಯೂ, ಜೊತೆಗೆ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಅವರ ಪುತ್ರ ಸಾಗರ್ ಖಂಡ್ರೆಗೆ ಟಿಕೆಟ್ ನೀಡುವುದು ಗ್ಯಾರಂಟಿ ಎಂಬ ಭರವಸೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ಪ್ರಬಲ ಲಿಂಗಾಯತ ನಾಯಕರಾಗಿರುವ ಖಂಡ್ರೆ ಅವರನ್ನು ಬಿಜೆಪಿಗೆ ಕರೆ ತರುವುದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ ಎಂಬುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವಾಗಿದ್ದು, ಹಾಗಾಗಿ, ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ತನ್ನ ಪ್ರಯತ್ನ ಮತ್ತಷ್ಟು ತೀವ್ರಗೊಳಿಸಿದೆ.

ಈ ಎಲ್ಲ ಲೆಕ್ಕಾಚಾರಗಳ ಮಧ್ಯೆ ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆಗೊಳ್ಳದೆ ಇರುವುದು ಬಿಜೆಪಿಯ ಗಾಳ ಎಸೆಯುವ ತಂತ್ರಕ್ಕೆ ಮತ್ತಷ್ಟು ಸಮಯ ದೊರೆತಂತಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

(ವರದಿ: ಮಹೇಶ್‌ ಕುಲಕರ್ಣಿ, ಕಲಬುರಗಿ)