West Bengal: ಸಂದೇಶ್‌ಖಾಲಿಯಲ್ಲಿ ಹಿಂಸಾಚಾರ; ಮತದಾರರ ಬೆದರಿಸಲು ಪೊಲೀಸರನ್ನು ಬಳಸಿಕೊಂಡ ಟಿಎಂಸಿ, ಬಿಜೆಪಿ ಆರೋಪ
West Bengal Lok Sabha election 2024 : ಪಶ್ಚಿಮ ಬಂಗಾಳ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಹೆಚ್ಚು ಗಮನಸೆಳೆದಿದ್ದು ಸಂದೇಶ್‌ಖಾಲಿ ಪ್ರಕರಣ. ಚುನಾವಣೆಯುದ್ದಕ್ಕೂ ಭಾರಿ ಚರ್ಚೆಯಲ್ಲಿದ್ದ ಕೇಸ್, ಇದೀಗ ಮತದಾನದ ಅಂತಿಮ ದಿನ ಮತ್ತೆ ಚರ್ಚೆಯ ವಿಷಯವಾಗಿದೆ. ಟಿಎಂಸಿ ಮೇಲೆ ಬಿಜೆಪಿ ಗಂಭಿರ ಆರೋಪ ಮಾಡಿದೆ.

ಪಶ್ಚಿಮ ಬಂಗಾಳ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಹೆಚ್ಚು ಚರ್ಚೆಯ ವಿಷಯವಾಗಿದ್ದು ಸಂದೇಶ್‌ಖಾಲಿ ಪ್ರಕರಣ. ಚುನಾವಣಾ ಫಲಿತಾಂಶದ ಮೇಲೆ ಈ ಕೇಸ್ ಭಾರಿ ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದರಿಂದ ಯಾರಿಗೆ ಲಾಭ ಹಾಗೂ ಯಾರಿಗೆ ನಷ್ಟ ಎಂಬುದು ಫಲಿತಾಂಶದ ಬಳಿಕ ಸ್ಪಷ್ಟವಾಗಲಿದೆ. ಪ್ರಕರಣ ಸಂಬಂಧ ಆರಂಭದಲ್ಲಿ ಟಿಎಂಸಿ ವಿರುದ್ಧ ಧ್ವನಿಯೆತ್ತಿದ್ದ ಜನರು, ಆ ಬಳಿಕ ಬಿಜೆಪಿ ವಿರುದ್ಧ ತಿರುಗಿಬಿದ್ದರು. ಇದೀಗ, ರಾಜ್ಯದಲ್ಲಿ ನಡೆಯುತ್ತಿರುವ ಅಂತಿಮ ಹಂತದ ಮತದಾನದ ಸಂದರ್ಭದಲ್ಲಿ ಪ್ರಕರಣ ಯೂಟರ್ನ್ ಪಡೆದುಕೊಳ್ಳುವ ಸಾಧ್ಯತೆ ಇದೆ.
ತೃಣಮೂಲ ಕಾಂಗ್ರೆಸ್ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಬಸಿರ್‌ಹತ್ ಲೋಕಸಭಾ ಕ್ಷೇತ್ರದ ಮತದಾರರನ್ನು ಸೆಳೆಯಲು ರಾಜ್ಯ ಯಂತ್ರವನ್ನು ಬಳಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಸಂದೇಶ್‌ಖಾಲಿಯಲ್ಲಿ ಹಿಂಸಾಚಾರ ನಡೆಸುವ ಮೂಲಕ ಮತದಾರರನ್ನು ಬೆದರಿಸಲು ಟಿಎಂಸಿ ಪೊಲೀಸರನ್ನು ಬಳಸಿಕೊಂಡಿದೆ ಎಂಬುದು ಬಿಜೆಪಿ ಆರೋಪ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೂಚನೆ ಮೇರೆಗೆ ಪಶ್ಚಿಮ ಬಂಗಾಳ ಪೊಲೀಸರು ಸಂದೇಶಖಾಲಿ ಮತದಾರರನ್ನು ಹೆದರಿಸಲು ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಆರೋಪಿಸಿದ್ದಾರೆ.
ಮತದಾರರಿಗೆ ಬೆದರಿಕೆ
ಮಧ್ಯರಾತ್ರಿ ನಡೆಸಲಾದ ಕಾರ್ಯಾಚರಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಸೂಚನೆ ಮೇರೆಗೆ ಪೊಲೀಸರು ಸಂದೇಶಖಾಲಿಯ ಬೆರ್ಮಜೂರಿನಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಬೂತ್ ಏಜೆಂಟ್‌ಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಮಹಿಳೆಯರಿಗೆ ಬೆದರಿಕೆ ಹಾಕುವುದು ಮಾತ್ರವಲ್ಲದೆ ದೌರ್ಜನ್ಯ ಎಸಗಲಾಗುತ್ತಿದೆ. ಮತದಾರರ ಚೀಟಿ ಕಸಿದುಕೊಂಡು ನಾಳೆ ಬೂತ್‌ಗೆ ಬರಬೇಡಿ ಎಂದು ಮನವಿ ಮಾಡಿದ್ದಾರೆ. ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸ್ಥಳೀಯ ಟಿಎಂಸಿ ಗೂಂಡಾಗಳು ಪೊಲೀಸರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಮಮತಾ ಬ್ಯಾನರ್ಜಿ ಮಾಡಿದ ಪಾಪಗಳಿಗೆ ಬೆಲೆ ತೆರಬೇಕಾಗುತ್ತದೆ. ಆದರೆ ಸದ್ಯಕ್ಕೆ ನಾವು ನಮ್ಮ ಕಾರ್ಮಿಕರ ಸುರಕ್ಷತೆಯನ್ನು ಖಾತ್ರಿಪಡಿಸುತ್ತಿದ್ದೇವೆ ಎಂದು ಮಾಳವೀಯ ಆರೋಪಿಸಿದ್ದಾರೆ.
ಹಿಂದೆ ಟಿಎಂಸಿಯಲ್ಲಿದ್ದ ಬಿಜೆಪಿ ನಾಯಕ ಸುವೇಂದು ಅಧಿಕಾರಿ; ಮತದಾರರನ್ನು, ವಿಶೇಷವಾಗಿ ಮಹಿಳೆಯರನ್ನು ಬೆದರಿಸಲು ಸಂದೇಶಖಾಲಿಯ ವಿವಿಧ ಪ್ರದೇಶಗಳಲ್ಲಿ ಪೊಲೀಸರು ಯೂನಿಫಾರ್ಮ್ ಧರಿಸಿದೆ ಜನಸಾಮಾನ್ಯರಂತೆ ಸಂಚರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಚುನಾವಣೆಗೂ ಮುನ್ನ ಸಂದೇಶ್‌ಖಾಲಿ ಜನರ ಮತ ಗಿಟ್ಟಿಸಿಕೊಳ್ಳಲು ಇದು ಮಮತಾ ಬ್ಯಾನರ್ಜಿಯವರ ಕೊನೆಯ ಪ್ರಯತ್ನವಾಗಿದೆ. ಪೊಲೀಸರು ಮತ್ತು ಸ್ವಯಂಸೇವಕರು ಸಾಮಾನ್ಯರಂತೆ ಉಡುಪು ಧರಿಸಿ, ಕಾಲಿಗೆ ಚಪ್ಪಲಿ ಹಾಕಿಕೊಂಡು ಮತದಾರರನ್ನು ಹೆದರಿಸುತ್ತಿದ್ದಾರೆ. ಸಂದೇಶಖಾಲಿ ಗ್ರಾಮದ ವಿವಿಧ ಪ್ರದೇಶಗಳಲ್ಲಿ ತಿರುಗಾಡುತ್ತಿದ್ದಾರೆ. ಮುಖ್ಯವಾಗಿ ಮಹಿಳೆಯರನ್ನು ಹೆದರಿಸುತ್ತಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇದು ಚುನಾವಣಾ ಫಲಿತಾಂಶದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.