ಕನ್ನಡ ಸುದ್ದಿ  /  Elections  /  Delhi News After 15 Years Odisha Biju Janata Dal May Join Bjp Lead Nda After Janata Dal S Janata Dal U Kub

Lok Sabha Elections2024: 15 ವರ್ಷದ ನಂತರ ಬಿಜೆಪಿ ಬಿಜೆಡಿ ಮರು ಬೆಸುಗೆ, ಮೋದಿಗೆ ಬೆಂಬಲಿಸಲಿದ್ದಾರೆ ಪಾಟ್ನಾಯಕ್‌

Politics ಜನತಾದಳ ಎಸ್‌, ಜನತಾದಳ ಯು ನಂತರ ಜನತಾದಳ ಬಿಜು ಈಗ ಎನ್‌ಡಿಎ ತೆಕ್ಕೆಗೆ ಬರುತ್ತಿದೆ. ಈ ಸಂಬಂಧ ಒಡಿಶಾದ ಬಿಜೆಡಿ ಹಾಗೂ ಬಿಜೆಪಿ ನಾಯಕರ ಹಂತದಲ್ಲಿ ಮಾತುಕತೆಗಳು ನಡೆದಿವೆ.

ಬಿಜೆಪಿಯ ಮೋದಿ, ಬಿಜೆಡಿಯ ನವೀನ್‌ ಪಾಟ್ನಾಯಕ್‌ ಈಗ ಹತ್ತಿರ ಹತ್ತಿರ..
ಬಿಜೆಪಿಯ ಮೋದಿ, ಬಿಜೆಡಿಯ ನವೀನ್‌ ಪಾಟ್ನಾಯಕ್‌ ಈಗ ಹತ್ತಿರ ಹತ್ತಿರ..

ದೆಹಲಿ: ಲೋಕಸಭೆ ಚುನಾವಣೆಗೆ ಇನ್ನೇನು ದಿನಾಂಕ ಘೋಷಣೆ ಮಾತ್ರ ಬಾಕಿ ಇರುವಾಗ ಬಿಜೆಪಿ ನೇತೃತ್ವದ ಎನ್‌ಡಿಎ( NDA) ಕೂಟಕ್ಕೆ ಹೊಸ ಪಕ್ಷಗಳು ಮರು ಸೇರ್ಪಡೆಯಾಗುತ್ತಿವೆ. ಆರು ತಿಂಗಳ ಹಿಂದೆ ಕರ್ನಾಟಕದಲ್ಲಿ ಜಾತ್ಯತೀತ ಜನತಾದಳ ಹಾಗೂ ಒಂದೂವರೆ ತಿಂಗಳ ಹಿಂದೆ ಬಿಹಾರದಲ್ಲಿ ಜನತಾದಳ ಸೇರ್ಪಡೆಯಾದ ಬಳಿಕ ಈಗ ಒಡಿಶಾದ ಸರದಿ. ಅಲ್ಲಿ ಸತತವಾಗಿ ಅಧಿಕಾರದಲ್ಲಿರುವ ನವೀನ್‌ ಪಾಟ್ನಾಯಕ್‌ ನೇತೃತ್ವದ ಬಿಜು ಜನತಾದಳ ಈಗ ಎನ್‌ಡಿಎ ಸೇರಲು ಮುಂದಾಗಿದೆ. ಈ ಕುರಿತು ಮಾತುಕತೆಗಳು ನಡೆದಿದ್ದು ಒಂದೆರಡು ದಿನದಲ್ಲಿ ಅಂತಿಮವಾಗಬಹುದು

ದೆಹಲಿಯಲ್ಲಿ ಕೆಲ ದಿನಗಳಿಂದ ಈ ನಿಟ್ಟಿನಲ್ಲಿ ಒಡಿಶಾದ ಬಿಜೆಪಿ ನಾಯಕರು ಹಾಗೂ ಬಿಜೆಡಿ ನಾಯಕರೊಂದಿಗೆ ಮಾತುಕತೆಗಳು ನಡೆದಿವೆ. ದೆಹಲಿಯಲ್ಲಿ ಬುಧವಾರ ನವೀನ್‌ ಪಾಟ್ನಾಯಕ್‌ ಅವರ ಅಧಿಕೃತ ನಿವಾಸದಲ್ಲಿ ಚರ್ಚೆಗಳು ನಡೆದಿವೆ. ಒಡಿಶಾದಲ್ಲಿ ಈಗ ವಿಧಾನಸಭೆ ಚುನಾವಣೆ ಜತೆಗೆ ಲೋಕಸಭೆ ಚುನಾವಣೆಯೂ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಮೈತ್ರಿ ಮಹತ್ವದ್ದಾಗಿದೆ ಎಂದೇ ಉಭಯ ಪಕ್ಷಗಳು ಹೇಳಿಕೊಂಡಿವೆ.

ಬಿಜೆಡಿ ಉಪಾಧ್ಯಕ್ಷ ಹಾಗೂ ಶಾಸಕ ದೇಬಿಪ್ರಸಾದ್‌ ಮಿಶ್ರ ಅವರು, ಈಗಾಗಲೇ ಮಾತುಕತೆಗಳು ಆಗಿವೆ. ಯಾವುದೂ ಅಂತಿಮವಾಗಿಲ್ಲ. ಒಡಿಶಾ ಜನರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮೈತ್ರಿ ಮಾತುಕತೆಯನ್ನು ನಡೆಸಿದ್ದೇವೆ. ಇನ್ನಷ್ಟು ಚರ್ಚೆಗಳು ಆಗಲಿವೆ ಎಂದಿದ್ದಾರೆ.

ಈಗಾಗಲೇ ಬಿಜೆಪಿ ಒಡಿಶಾ ಅಧ್ಯಕ್ಷ ಮನಮೋಹನ್‌ ಸಮಲ್‌, ಅವರು ಪಕ್ಷದ ವರಿಷ್ಠರಿಗೂ ಬಿಜೆಡಿಯೊಂದಿಗಿನ ಮಾತುಕತೆ, ಅವರ ನಿಲುವು, ಅಭಿಪ್ರಾಯಗಳನ್ನೂ ತಿಳಿಸಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಓಡಿಶಾದಲ್ಲಿ ಒಟ್ಟು 21 ಲೋಕಸಭೆ ಹಾಗೂ 147 ವಿಧಾನಸಭೆ ಕ್ಷೇತ್ರಗಳಿವೆ. ಕಳೆದ ಚುನಾವಣೆಯಲ್ಲಿ ಬಿಜೆಡಿ 12. ಬಿಜೆಪಿ 8, ಕಾಂಗ್ರೆಸ್‌ 1 ಸ್ಥಾನ ಪಡೆದಿತ್ತು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಡಿಗೆ 112 , ಬಿಜೆಪಿಗೆ 23 ಸ್ಥಾನ ಬಂದಿದ್ದವು. ಈ ಬಾರಿ ಹೊಂದಾಣಿಕೆಯಂತೆ ಬಿಜೆಪಿ ಹೆಚ್ಚು ಸ್ಥಾನಗಳನ್ನು ಲೋಕಸಭೆ ಚುನಾವಣೆಯಲ್ಲಿ ಪಡೆದರೆ, ವಿಧಾನಸಭೆ ಚುನಾವಣೆ ಕಡೆಗೆ ಬಿಜೆಡಿ ಗಮನ ನೀಡಲಿದೆ. 2036ಕ್ಕೆ ಒಡಿಶಾಕ್ಕೆ ನೂರು ವರ್ಷ ತುಂಬಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಬಿಜೆಡಿ ಈಗಿನಿಂದಲೇ ತಯಾರಿ ಆರಂಭಿಸಿದೆ ಎನ್ನಲಾಗುತ್ತಿದೆ.

ಹದಿನೈದು ವರ್ಷದ ಹಿಂದೆಯೇ ಬಿಜೆಡಿಯು ಬಿಜೆಪಿಯಿಂದ ದೂರವಾಗಿತ್ತು. ಇದಾದ ನಂತರ ಲೋಕಸಭೆ ಚುನಾವಣೆ ವೇಳೆ ಮೈತ್ರಿ ಮಾತುಕತೆ ನಡೆದಿದ್ದರೂ ಫಲಪ್ರದವಾಗಿರಲಿಲ್ಲ. ಹನ್ನೊಂದು ವರ್ಷ ಬಿಜೆಪಿಯೊಂದಿಗೆ ಬಿಜೆಡಿ ಇತ್ತು. ವಾಜಪೇಯಿ- ಅಡ್ವಾಣಿ ಕಾಲದಲ್ಲಿ ಹೊಂದಾಣಿಕೆಯೊಂದಿಗೆ ಇದ್ದ ಬಿಜೆಡಿ ಆನಂತರ ಎನ್‌ಡಿಎದಿಂದ ದೂರವಾಗಿತ್ತು. ಈಗ ಮತ್ತೆ ಮೈತ್ರಿ ಮಾತುಕತೆಗಳು ನಡೆದರೆ ಎನ್‌ಡಿಎ ಮೈತ್ರಿ ಬಲಗೊಳ್ಳಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.