ಕನ್ನಡ ಸುದ್ದಿ  /  ಚುನಾವಣೆಗಳು  /  ಸಂಪಾದಕೀಯ: ಆರ್ಥಿಕ ಅಸಮಾನತೆಯ ಚರ್ಚೆಯಲ್ಲಿ ಜಾತಿಯ ಸಂಕೀರ್ಣ ಪಾತ್ರ, ಕಾಂಗ್ರೆಸ್‌ ಉರುಳಿಸಿದ ರಾಜಕೀಯ ದಾಳದ ಹಲವು ಒಳಸುಳಿಗಳು

ಸಂಪಾದಕೀಯ: ಆರ್ಥಿಕ ಅಸಮಾನತೆಯ ಚರ್ಚೆಯಲ್ಲಿ ಜಾತಿಯ ಸಂಕೀರ್ಣ ಪಾತ್ರ, ಕಾಂಗ್ರೆಸ್‌ ಉರುಳಿಸಿದ ರಾಜಕೀಯ ದಾಳದ ಹಲವು ಒಳಸುಳಿಗಳು

ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗೆ ಪರಸ್ಪರ ಸಂಬಂಧ ಇದೆ. ಇದೀಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಈ ಅಸಮಾನತೆಯು ಚರ್ಚೆಗೆ ಬಂದಿದೆ. ಆದರೆ ವಾಸ್ತವಗಳ ಬಗ್ಗೆ ಚುನಾವಣಾ ರಾಜಕೀಯದಿಂದ ಆಚೆಗೂ ಯೋಚಿಸಬೇಕಿದೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅಸಮಾನತೆ ಮತ್ತು ಆರ್ಥಿಕ ಅಂತರಗಳ ಬಗ್ಗೆ ಗಮನ ಹರಿಸಲೇಬೇಕು.

ಬಿಹಾರದಲ್ಲಿ ಜಾತಿ ಗಣತಿ (ಎಡಚಿತ್ರ), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಬಲಚಿತ್ರ). ಆರ್ಥಿಕ ಅಸಮಾನತೆ ಮತ್ತು ಜಾತಿ ಗಣತಿಯನ್ನು ಲೋಕಸಭೆ ಚುನಾವಣೆಯ ವೇಳೆ ಮುನ್ನೆಲೆಗೆ ತರುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಇದರ ರಾಜಕೀಯ ಒಳಸುಳಿಗಳು ಹಲವು.
ಬಿಹಾರದಲ್ಲಿ ಜಾತಿ ಗಣತಿ (ಎಡಚಿತ್ರ), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಬಲಚಿತ್ರ). ಆರ್ಥಿಕ ಅಸಮಾನತೆ ಮತ್ತು ಜಾತಿ ಗಣತಿಯನ್ನು ಲೋಕಸಭೆ ಚುನಾವಣೆಯ ವೇಳೆ ಮುನ್ನೆಲೆಗೆ ತರುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಇದರ ರಾಜಕೀಯ ಒಳಸುಳಿಗಳು ಹಲವು.

ಜಾತಿಗಣತಿಯನ್ನು ತನ್ನ ಚುನಾವಣಾ ಪ್ರಚಾರದ ಕೇಂದ್ರ ವಿಷಯವನ್ನಾಗಿ ಮಾಡುವಲ್ಲಿ ಕಾಂಗ್ರೆಸ್ ಬಹುಮಟ್ಟಿಗೆ ಯಶಸ್ವಿಯಾಗಿದೆ. ಈ ವಿಚಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಲವು ಕಡೆ ಪ್ರಸ್ತಾಪಿಸಿದ್ದಾರೆ. ಈ ಮೂಲಕ 2024 ರ ಸಾರ್ವತ್ರಿಕ ಚುನಾವಣೆಯ ಪ್ರಮುಖ ಪ್ರಶ್ನೆಗಳಲ್ಲಿ ಅಸಮಾನತೆಯ ಅಂಶವನ್ನೂ ಒಂದು ಪ್ರಸ್ತಾಪಿಸಲೇಬೇಕಾದ ವಿಚಾರ ಎನಿಸುವಂತೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರು ಆರ್ಥಿಕ ಸಮೀಕ್ಷೆ ಸೇರಿದಂತೆ ಕಾಂಗ್ರೆಸ್ ಪ್ರಸ್ತಾಪಿಸಿರುವ ಹಲವು ವಿಚಾರಗಳಿಗೆ ಪರೋಕ್ಷವಾಗಿ ಉತ್ತರ ಕೊಡುತ್ತಿದ್ದಾರೆ. ಅಂದರೆ ಕಾಂಗ್ರೆಸ್‌ನ ಈ ಪ್ರಶ್ನೆಗಳನ್ನು ನಿರ್ಲಕ್ಷಿಸಲು ಆಗುವುದಿಲ್ಲ ಎನ್ನುವುದು ಬಿಜೆಪಿಗೆ ಮನವರಿಕೆ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಚುನಾವಣಾ ರಾಜಕೀಯದ ದೃಷ್ಟಿಯಿಂದ ಕಾಂಗ್ರೆಸ್‌ ಪ್ರಸ್ತಾಪಿಸಿದ ಈ ವಿಚಾರವು ಯೋಜಿತ ಮತ್ತು ಬುದ್ಧಿವಂತಿಕೆಯ ಕಾರ್ಯತಂತ್ರ ಎನಿಸುತ್ತದೆಯೇ? ಈ ಪ್ರಶ್ನೆಗೆ ಉತ್ತರವು ಸರಳವಾಗಿಲ್ಲ. ಭಾರತದಲ್ಲಿ ಜಾತಿ ಮತ್ತು ಆರ್ಥಿಕ ಅಸಮಾನತೆಗಳ ನಡುವಿನ ಸಂಬಂಧವನ್ನು ವಿಶ್ಲೇಷಿಸುವುದು ಸುಲಭವಲ್ಲ. ಇದರ ಜೊತೆಗೆ ಚುನಾವಣೆಯಲ್ಲಿ ಈ ವಿಚಾರದ ಬಗ್ಗೆ ಜನರು ತಮ್ಮ ಅಭಿಪ್ರಾಯವನ್ನು ಚುನಾವಣಾ ರಾಜಕೀಯದಲ್ಲಿ ಅಭಿವ್ಯಕ್ತಿಸುತ್ತಾರೆಯೇ ಎನ್ನುವ ಬಗ್ಗೆಯೂ ಇದಮಿತ್ಥಂ ಎಂದು ಹೇಳಲು ಆಗುವುದಿಲ್ಲ. ಮತ ಚಲಾಯಿಸುವುದನ್ನೇ ದೇಶದ ಜನರ ರಾಜಕೀಯ ಅಭಿವ್ಯಕ್ತಿ ಎಂದು ವ್ಯಾಖ್ಯಾನಿಸಿದರೆ ಅದಕ್ಕೆ ಕಾರಣವಾಗುವ ಅಂಶಗಳಲ್ಲಿ ಜಾತಿ ಮತ್ತು ಆರ್ಥಿಕ ಅಸಮಾನತೆಗಳು ಈ ಬಾರಿಯ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ಪ್ರಭಾವ ಬೀರಬಹುದು ಎನ್ನುವ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವುದಿಲ್ಲ.

ಭಾರತದಲ್ಲಿ ಅಸಮಾನತೆ ಇದೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎನ್ನುವುದು ಯಾರೂ ಅಲ್ಲಗಳೆಯಲು ಸಾಧ್ಯವಾಗದ ಸತ್ಯ. ಆದರೆ ಜಾತಿವಾರು ಸಂಪತ್ತಿನ ಬಗ್ಗೆ ತಾಜಾ ದತ್ತಾಂಶಗಳು ಲಭ್ಯವಿಲ್ಲ. ಹೀಗಾಗಿಯೇ ಈ ವಿಚಾರವನ್ನು ಪ್ರಸ್ತಾಪಿಸುವುರುುದರಿಂದ ಯಾವ ರಾಜಕೀಯ ಪಕ್ಷಕ್ಕೆ ಎಷ್ಟು ಲಾಭ ಸಿಗುತ್ತದೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ (National Sample Survey Office - NSSO) ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆಯು (All India Debt and Investment Survey - AIDIS) ಕೊರೊನಾ ಸಾಂಕ್ರಾಮಿಕ ಪಿಡುಗಿಗೆ ಮುಂಚಿನ ದತ್ತಾಂಶಗಳನ್ನು ಕೊಡುತ್ತದೆ. ಇದರಲ್ಲಿಯೂ ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ), ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಈ ಯಾವುದೇ ಗುಂಪುಗಳಿಗೆ ಸೇರದವರನ್ನು ವಿಶಾಲ ಸಾಮಾಜಿಕ ಗುಂಪುಗಳನ್ನಾಗಿ ವಿಂಗಡಿಸಿ ದತ್ತಾಂಶ ಪ್ರಸ್ತುತಪಡಿಸಲಾಗಿದೆ.

ಆಸ್ತಿ ತಾರತಮ್ಯದ ವಿಚಾರದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಜಾತಿಗಳಿಗೆ ಸೇರಿದವರಲ್ಲಿ ಇತರ ಜಾತಿಗಳಿಗೆ ಸೇರಿದವರಿಗೆ ಹೋಲಿಸಿದರೆ ಬಡತನದಲ್ಲಿ ಬಹಳಷ್ಟು ಹಿಂದಿದ್ದಾರೆ. ಒಬಿಸಿ ಜಾತಿಗಳಿಗೆ ಸೇರಿದವರು ಶ್ರೀಮಂತರು ಮತ್ತು ಬಡವರ ಗುಂಪಿನಲ್ಲಿ ಸಮಾನವಾಗಿ ಹಂಚಿಹೋಗಿದ್ದಾರೆ. ಒಬಿಸಿಗಳನ್ನು ಕೇಂದ್ರೀಕರಿಸಿ ಜಾತಿ ರಾಜಕಾರಣ ಮಾಡುವವರಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಒಬಿಸಿಗಳನ್ನು ಒಂದೇ ಗುಂಪಾಗಿ ಪರಿಗಣಿಸಲು ಅಥವಾ ಅವರ ಅಗತ್ಯಗಳನ್ನು ಒಂದೇ ರೀತಿಯಾಗಿ ಪರಿಭಾವಿಸಲು ಸಾಧ್ಯವಿಲ್ಲ ಎನ್ನುವುದನ್ನು ಇದು ಬಿಂಬಿಸುತ್ತದೆ.

ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆಯ ದತ್ತಾಂಶದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಜಾತಿ ತಾರತಮ್ಯದ ಜೊತೆಗೆ ನಗರ ಮತ್ರು ಗ್ರಾಮೀಣ ಪ್ರದೇಶಗಳ ತಾರತಮ್ಯವು ಪ್ರಸ್ತಾಪವಾಗಿದೆ. ನಗರಗಳಲ್ಲಿ ನೆಲೆಸಿರುವವರು ಗ್ರಾಮೀಣ ಪ್ರದೇಶಗಳ ಸಹವರ್ತಿಗಳಿಗೆ ಹೋಲಿಸಿದರೆ ಹೆಚ್ಚಿನ ಆಸ್ತಿ, ಸಂಪನ್ಮೂಲಗಳನ್ನು ಹೊಂದಿದ್ದಾರೆ. ವಾಸ್ತವದಲ್ಲಿ ಕೃಷಿಯನ್ನೇ ಜೀವನೋಪಾಯಕ್ಕೆ ಅವಲಂಬಿಸಿದವರ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಅಂಥ ಆಶಾದಾಯಕ ಪ್ರತಿಕ್ರಿಯೆ ಕಾಣಿಸುವುದಿಲ್ಲ. ಕೃಷಿಯಿಂದ ಹೊರಬಂದವರು ಅಥವಾ ಕೃಷಿಯೊಂದಿಗೆ ಪೂರಕ ಆದಾಯ ಹೊಂದಿರುವವರ ಪರಿಸ್ಥಿತಿ ಮಾತ್ರವೇ ಸುಧಾರಿಸುತ್ತಿದೆ. ಕಡಿಮೆ ಆದಾಯದ ಕೃಷಿ ಚಟುವಟಿಕೆಯಿಂದ ಉತ್ತಮ ಆದಾಯದ ಕೃಷಿಯೇತರ ಚಟುವಟಿಕೆಗಳತ್ತ ಜನರು ಗಮನ ಹರಿಸುವಂತೆ ಮಾಡಬೇಕು ಎನ್ನುವ ಆಶಯವನ್ನೇ ಈ ಅಂಕಿಅಂಶಗಳೂ ಪ್ರತಿನಿಧಿಸುತ್ತವೆ. ಮುಂದಿನ ದಿನಗಳಲ್ಲಿ ದೆಹಲಿ ಗದ್ದುಗೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಈ ಅಂಶಗಳನ್ನು ನಿರ್ಲಕ್ಷಿಸಲು ಆಗುವುದಿಲ್ಲ. ಮೀಸಲಾತಿಯ ವ್ಯಾಪ್ತಿಯಲ್ಲಿ ಒಬಿಸಿಗಳ ಪ್ರಾತಿನಿಧ್ಯವನ್ನು ಹೆಚ್ಚಿಸಲು ಜಾತಿ ಜನಗಣತಿ ಎಷ್ಟರಮಟ್ಟಿಗೆ ಯಶಸ್ವಿಯಾಗಬಲ್ಲದು ಎಂಬ ಪ್ರಶ್ನೆಯ ಜೊತೆಗೆ ಆರ್ಥಿಕ ಮತ್ತು ಔದ್ಯೋಗಿಕವಾಗಿ ಆಗಬೇಕಿರುವ ಪರಿವರ್ತನೆಗಳ ಸವಾಲನ್ನೂ ಇಂಥ ಸಮೀಕ್ಷೆಗಳು ನಿರ್ವಹಿಸಬೇಕಾಗುತ್ತದೆ.

ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಜಾತಿ ಜನಗಣತಿಯ ಪ್ರಸ್ತಾವವನ್ನು ಕಾಂಗ್ರೆಸ್ ದೇಶದ ಮುಂದಿಟ್ಟಿದೆ. ಆದರೆ ರಾಜಕೀಯವಾಗಿ ಕರ್ನಾಟಕ ಮತ್ತು ಕೆಲ ರಾಜ್ಯಗಳನ್ನು ಹೊರತುಪಡಿಸಿದರೆ ಕಾಂಗ್ರೆಸ್ ಬಹುಕಾಲದಿಂದ ಕುಸಿತ ಕಂಡಿದೆ. ಹಲವು ಸಮುದಾಯಗಳ ಬೆಂಬಲ ಕಳೆದುಕೊಂಡಿದೆ. ಇದೀಗ ಜಾತಿ ಗಣತಿಯನ್ನು ಪ್ರಸ್ತಾಪಿಸುವ ಮೂಲಕ ಒಂದಿಷ್ಟು ಸಮುದಾಯಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ರಾಜಕೀಯವಾಗಿ ಇದು ಎಷ್ಟರಮಟ್ಟಿಗೆ ಯಶಸ್ವಿಯಾಗಬಲ್ಲದು? ಬಿಜೆಪಿಯು ಹಲವು ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಟ್ಟಿದೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್‌ನ ಈ ನಡೆಯು ಜನರನ್ನು ಸೆಳೆಯಬಲ್ಲದೇ? ಉತ್ತರಕ್ಕಾಗಿ ಜೂನ್ 4 ರ ವರೆಗೆ ಕಾಯಬೇಕಿದೆ.

ಇಂಗ್ಲಿಷ್ ಮೂಲ ಬರಹದ ಲಿಂಕ್: Reading caste in inequality debate