ಕನ್ನಡ ಸುದ್ದಿ  /  ಚುನಾವಣೆಗಳು  /  Karnataka Exit Poll Result 2024: ಕರ್ನಾಟಕದಲ್ಲಿ ಎನ್‌ಡಿಎಗೆ ಬಲ, ಕಾಂಗ್ರೆಸ್‌ ಚೇತರಿಕೆ, ಮತಗಟ್ಟೆ ಸಮೀಕ್ಷೆಗಳ ಲೆಕ್ಕಾಚಾರ

Karnataka Exit poll result 2024: ಕರ್ನಾಟಕದಲ್ಲಿ ಎನ್‌ಡಿಎಗೆ ಬಲ, ಕಾಂಗ್ರೆಸ್‌ ಚೇತರಿಕೆ, ಮತಗಟ್ಟೆ ಸಮೀಕ್ಷೆಗಳ ಲೆಕ್ಕಾಚಾರ

Karnataka politics ಲೋಕಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ ಹೊರ ಬಿದ್ದಿದ್ದು, ಕರ್ನಾಟಕದಲ್ಲಿ ಆಳುವ ಕಾಂಗ್ರೆಸ್‌ ಸರ್ಕಾರಕ್ಕಿಂತ ಬಿಜೆಪಿ ಜೆಡಿಎಸ್‌ ಮೈತ್ರಿ ಮುನ್ನಡೆ ಸಾಧಿಸಿರುವುದು ಕಂಡು ಬಂದಿದೆ.

ಕರ್ನಾಟಕದಲ್ಲಿ ಬಿಜೆಪಿಗೆ ಮುನ್ನಡೆ ಸಿಗುವ ಸೂಚನೆ ದೊರೆತಿದೆ,
ಕರ್ನಾಟಕದಲ್ಲಿ ಬಿಜೆಪಿಗೆ ಮುನ್ನಡೆ ಸಿಗುವ ಸೂಚನೆ ದೊರೆತಿದೆ,

ಬೆಂಗಳೂರು: ದಕ್ಷಿಣ ಭಾರತದಲ್ಲಿಯೇ ಬಿಜೆಪಿ ಹಾಗೂ ಕಾಂಗ್ರೆಸ್‌ ನ ನೇರ ಹಣಾಹಣಿಗೆ ವೇದಿಕೆಯಾಗಿರುವ ಕರ್ನಾಟಕದಲ್ಲಿ ಸತತ ಐದನೇ ಬಾರಿಯೂ ಬಿಜೆಪಿಯೇ ಮುನ್ನಡೆ ಸಾಧಿಸುವ ಮುನ್ಸೂಚನೆಯನ್ನು ಲೋಕಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆಗಳು ಸಾರುತ್ತಿವೆ. 2004ರ ಲೋಕಸಭೆ ಚುನಾವಣೆಯಿಂದಲೂ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟವೇ ಮುನ್ನಡೆ ಸಾಧಿಸಿಕೊಂಡು ಬಂದಿದೆ. ಆನಂತರದ ಮೂರು ಚುನಾವಣೆಗಳಲ್ಲೂ ಎನ್‌ಡಿಎ ಮೈತ್ರಿ ಕೂಟಕ್ಕೆ ಅಧಿಕ ಸ್ಥಾನ ಲಭಿಸಿದೆ. ಈ ಬಾರಿಯೂ ಇದೇ ರೀತಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮತ್ತೊಮ್ಮೆ ಗಣನೀಯ ಸಾಧನೆ ಮಾಡಲಿದೆ ಎನ್ನುವ ಮುನ್ನೋಟವನ್ನು ಮತಗಟ್ಟೆ ಸಮೀಕ್ಷೆಗಳು ನೀಡಿವೆ.

ಟ್ರೆಂಡಿಂಗ್​ ಸುದ್ದಿ

ಮೊದಲ ಹಂತದ ಮತದಾನಕ್ಕೆ ಕೆಲ ದಿನಗಳಿಗೆ ಮೊದಲು ಬಹಿರಂಗಗೊಂಡ ಹಾಸನದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣವು ಮತ ಚಲಾವಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎನ್ನುವುದನ್ನು ಮತಗಟ್ಟೆ ಸಮೀಕ್ಷೆಗಳು ಸಾರಿ ಹೇಳಿವೆ. ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ ಸರ್ಕಾರದ ಪ್ರಭಾವ ಲೋಕಸಭೆ ಚುನಾವಣೆಯಲ್ಲಿ ಬೀರಿಲ್ಲ ಎನ್ನುವುದನ್ನು ಮತಗಟ್ಟೆ ಸಮೀಕ್ಷೆಗಳು ಹೇಳುತ್ತಿವೆ.ಜೆಡಿಎಸ್‌ನೊಂದಿಗೆ ಮೈತ್ರಿಯ ಮೂಲಕ ಬಿಜೆಪಿ ನಾಯಕರು ರೂಪಿಸಲು ಯತ್ನಿಸಿದ 'ಸೋಷಿಯಲ್ ಎಂಜಿನಿಯರಿಂಗ್' ಪ್ರಯತ್ನವೂ ಫಲ ಕೊಟ್ಟಿವೆ ಎಂದು ಸಮೀಕ್ಷೆಗಳು ತಿಳಿಸಿವೆ.

ಅದರಲ್ಲೂ ಗ್ಯಾರಂಟಿ ಯೋಜನೆಗಳು ವಿಧಾನಸಭೆ ಚುನಾವಣೆಯಲ್ಲಿ ಕೈ ಹಿಡಿದರೂ ಲೋಕಸಭೆ ಚುನಾವಣೆಯನ್ನು ಮತದಾರರು ಭಿನ್ನವಾಗಿಯೇ ನೋಡಿರಬಹುದು ಎನ್ನುವ ಅಂಶಗಳು ಈ ಸಮೀಕ್ಷೆಗಳ ಫಲಿತಾಂಶಗಳು ಹೇಳುತ್ತಿವೆ.

ಐದೂ ಗ್ಯಾರೆಂಟಿಗಳ ಅನುಷ್ಠಾನವನ್ನು ಪ್ರಚಾರ ಸಭೆಗಳಲ್ಲಿ ಪ್ರಸ್ತಾಪಿಸಿ ಮತ ಸೆಳೆಯಲು ಕಾಂಗ್ರೆಸ್ ನಾಯಕರು ಮಾಡಿದ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ಕಾಂಗ್ರೆಸ್‌ ಆಡಳಿತವಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಂಥ ಪ್ರಭಾವಿ ನಾಯಕರಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಲಿದೆ ಎನ್ನುವ ಮುನ್ಸೂಚನೆಯನ್ನೂ ಮತಗಟ್ಟೆ ಸಮೀಕ್ಷೆಗಳು ನೀಡಿವೆ. 'ಕರ್ನಾಟಕಕ್ಕೆ ಸಿದ್ದರಾಮಯ್ಯ, ಭಾರತಕ್ಕೆ ನರೇಂದ್ರ ಮೋದಿ' ಎಂದು ಹಲವು ಮತದಾರರು ಈ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ ಹೇಳುತ್ತಿದ್ದರು. ಅಂತಿಮ ಫಲಿತಾಂಶದ ಮುನ್ಸೂಚನೆಯಲ್ಲಿ ಮತಗಟ್ಟೆ ಸಮೀಕ್ಷೆಗಳು ಕರ್ನಾಟಕದ ವಿಚಾರದಲ್ಲಿ ಈ ಅಂಶ ನಿಜವಾಗಬಹುದು ಎಂಬ ಮುನ್ಸೂಚನೆ ಕೊಟ್ಟಿವೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದ್ದರಿಂದ ಅನುಭವಿಸಿದ ಭಾರೀ ಹಿನ್ನಡೆಯನ್ನು ಅರಿತ ಬಿಜೆಪಿ ಹೈಕಮಾಂಡ್‌ ಅವರ ಮಗ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ, ಯಡಿಯೂರಪ್ಪ ಅವರಿಗೆ ಸಂಸದೀಯ ಮಂಡಳಿಯ ಸ್ಥಾನದೊಂದಿಗೆ ಅಭ್ಯರ್ಥಿ ಆಯ್ಕೆ ಹೊಣೆ ನೀಡಿತ್ತು. ಇದು ಕೂಡ ಫಲ ಕೊಟ್ಟಿರಬಹುದು ಎನ್ನುವುದನ್ನು ಸಮೀಕ್ಷೆಗಳು ಹೇಳುತ್ತಿವೆ

1999ರ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್‌ ಎರಡಂಟಿ ದಾಟಿತ್ತು. ಆಗ ಕಾಂಗ್ರೆಸ್‌ಗೆ 18 ಸ್ಥಾನ ಸಿಕ್ಕರೆ, ಜೆಡಿಯು ಜತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿಗೆ 10 ಸ್ಥಾನ ದೊರೆತಿದ್ದವು. 2004ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 18, ಕಾಂಗ್ರೆಸ್‌ಗೆ 8, ಜೆಡಿಎಸ್‌ಗೆ 2 ಸ್ಥಾನ ಬಂದವು. 2009ರಲ್ಲಿ ಬಿಜೆಪಿಗೆ 19, ಕಾಂಗ್ರೆಸ್‌ಗೆ 6 , ಜೆಡಿಎಸ್‌ಗೆ‌ 3 ಸ್ಥಾನ ಲಭಿಸಿದ್ದವು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್‌ಗೆ 9 ಹಾಗೂ ಜೆಡಿಎಸ್‌ಗೆ 2 ಸ್ಥಾನ ಸಿಕ್ಕಿದ್ದವು. ಆದರೆ 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಒಂದು ಸ್ಥಾನ ಪಡೆದರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತಲಾ ಒಂದು ಸ್ಥಾನ ಹಂಚಿಕೊಂಡಿದ್ದವು. ಒಂದು ಸ್ಥಾನ ಪಕ್ಷೇತರರ ಪಾಲಾಗಿತ್ತು.

ಈ ಬಾರಿಯ ಮತಗಟ್ಟೆ ಸಮೀಕ್ಷೆಗಳು 2009 ಇಲ್ಲವೇ 2014ರ ಲೋಕಸಭೆ ಚುನಾವಣೆ ಚುನಾವಣೆ ಫಲಿತಾಂಶವೇ ಮರುಕಳಿಸಬಹುದು. ಬಿಜೆಪಿ ಸ್ಥಾನಗಳು ಕುಸಿತವಾದರೂ ಮುಂಚೂಣಿಯಲ್ಲಿಇರಬಹುದು. ಕಾಂಗ್ರೆಸ್‌ ಸ್ಥಾನಗಳು ಹೆಚ್ಚಬಹುದು ಎನ್ನುವ ಮುನ್ಸೂಚನೆ ಸಿಕ್ಕಿದೆ.

ಲೋಕಸಭೆ ಚುನಾವಣೆಯ ಕರ್ನಾಟಕದ ಮತಗಟ್ಟೆ ಸಮೀಕ್ಷೆ ಕುರಿತು ಲೈವ್ ಅಪ್ಡೇಟ್ಸ್ ಅನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲೂ ಕ್ಷಣ ಕ್ಷಣಕ್ಕೂ ಒದಗಿಸಲಾಗುತ್ತಿದ್ದು, ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಬಹುದು.

(ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್‌ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು)