VK Pandian Profile: ಒಡಿಶಾದಲ್ಲಿ ಪಟ್ನಾಯಕ್ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ವಿಕೆ ಪಾಂಡಿಯನ್ ಯಾರು? ಇವರ ಹಿನ್ನೆಲೆಯೇನು?
ಲೋಕಸಭಾ ಚುನಾವಣೆ 2024ರ ಫಲಿತಾಂಶ ಸನ್ನಿಹಿತವಾಗಿರುವ ಈ ಸಂದರ್ಭದಲ್ಲಿ ಪ್ರತಿ ರಾಜ್ಯದ ರಾಜಕೀಯ ವಲಯದ ಮೇಲೂ ಜನರು ದೃಷ್ಟಿ ಹಾಯಿಸುತ್ತಿದ್ದಾರೆ. ಈ ಹೊತ್ತಿನಲ್ಲಿ ಒಡಿಶಾದಲ್ಲಿ ಬಿಜೆಡಿ ನಾಯಕ ನವೀನ್ ಪಟ್ನಾಯಕ್ ಉತ್ತರಾಧಿಕಾರಿಯಾಗಿ ವಿಕೆ ಪಾಂಡಿಯನ್ ಹೆಸರು ಕೇಳಿ ಬರುತ್ತಿದೆ, ಅಲ್ಲದೇ ಇವರೇ ಮುಂದಿನ ಸಿಎಂ ಎಂಬ ಮಾತು ಕೇಳಿ ಬರುತ್ತಿದೆ. ಯಾರು ಈ ಪಾಂಡಿಯನ್?
ಲೋಕಸಭಾ ಚುನಾವಣೆ 2024ರಲ್ಲಿ 7 ಹಂತದಲ್ಲಿ ಮತದಾನ ಮುಗಿದಿದ್ದು, ದೇಶದಾದ್ಯಂತ ಜನರು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ನಮ್ಮ ದೇಶಕ್ಕೆ ಮುಂದೆ ಯಾವ ಸರ್ಕಾರ ಬರಬಹುದು ಎಂಬ ಕುತೂಹಲದ ನಡುವೆ ವಿವಿಧ ರಾಜ್ಯಗಳ ರಾಜಕೀಯ ವಲಯದತ್ತಲೂ ಜನ ದೃಷ್ಟಿ ಹಾಯಿಸುತ್ತಿದ್ದಾರೆ. ಬಿಜೆಡಿ ಪ್ರಾಬಲ್ಯ ಇರುವ ಒಡಿಶಾದಲ್ಲಿ ನವೀನ್ ಪಾಟ್ನಾಯಕ್ ಮುಖ್ಯಮಂತ್ರಿಯಾಗಿದ್ದಾರೆ. ಒಡಿಶಾ ರಾಜಕೀಯ ರಂಗದಲ್ಲಿ ಪಾಟ್ನಾಯಕ್ ಕುಟುಂಬದವರ ಹೆಸರು ಮೊದಲಿನಿಂದಲೂ ಖ್ಯಾತಿ ಗಳಿಸಿದೆ. ಆದರೆ ಇತ್ತೀಚೆಗೆ ಸಿಎಂ ನವೀನ್ ಪಟ್ನಾಯಕ್ ಉತ್ತರಾಧಿಕಾರಿ ವಿಕೆ ಪಾಂಡಿಯನ್ ಎಂಬ ಹೆಸರು ಕೇಳಿ ಬರುತ್ತಿದೆ. ಹಾಗಾದರೆ ಈ ಯಾರು ಪಾಂಡಿಯನ್, ನವೀನ್ ಪಾಟ್ನಾಯಕ್ ಕುಟುಂಬಕ್ಕೂ ಇವರಿಗೂ ಸಂಬಂಧವೇನು, ಇವರ ಹಿನ್ನೆಲೆಯೇನು ಎಂಬಿತ್ಯಾದಿ ಪ್ರಶ್ನೆಗಳು ಎಲ್ಲರೂ ಮನದಲ್ಲೂ ಮೂಡುತ್ತಿದೆ. ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಯಾರು ಈ ಪಾಂಡಿಯನ್?
12 ವರ್ಷಗಳ ಕಾಲ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ವೈಯಕ್ತಿಕ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು ವಿ.ಕೆ. ಪಾಂಡಿಯನ್. ಆದರೆ ರಾಜಕೀಯ ರಂಗದಲ್ಲಿ ಅವರ ಕುರಿತು ಊಹಾಪೋಹಗಳು ಕೇಳಿ ಬರಲು ಆರಂಭಿಸಿದ ಮೇಲೆ ಅವರು ಯಾರು ಎಂಬ ಕುತೂಹಲ ಹೆಚ್ಚಾಗಿದೆ.
ಐಎಎಸ್ ಅಧಿಕಾರಿಯಾಗಿದ್ದ ಪಾಂಡಿಯನ್ ತಮಿಳುನಾಡಿನವರು. ಇವರ ಪೂರ್ಣ ಹೆಸರು ಕಾರ್ತಿಕೇಯನ್ ಪಾಂಡಿಯನ್. 1974 ಮೇ 29 ರಂದು ಜನಿಸಿದ ಇವರು ಸದ್ಯ ಬಿಜೆಡಿ (ಬಿಜು ಜನತಾ ದಳ) ಪಕ್ಷದ ಸದಸ್ಯರಾಗಿದ್ದಾರೆ. 2023 ನವೆಂಬರ್‌ನಲ್ಲಿ ಪಾಂಡಿಯನ್ ಅವರನ್ನು ಕ್ಯಾಬಿನೆಟ್ ಮಂತ್ರಿಯ ಶ್ರೇಣಿಯೊಂದಿಗೆ 5T ಅಧ್ಯಕ್ಷರನ್ನಾಗಿ ಮಾಡಲಾಯಿತು. ಅದಕ್ಕೂ ಮೊದಲು ಪಾಂಡಿಯನ್ ಅವರುಮ ಪಾಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಇವರು ಒಡಿಶಾ ಸರ್ಕಾರದ ಮುಖ್ಯಮಂತ್ರಿ ಪರಿವರ್ತನೆಯ ಉಪಕ್ರಮಗಳ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. 2023ರಲ್ಲಿ ಐಎಎಸ್ ಅಧಿಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದ ಇವರು ಬಿಜೆಡಿ ಸೇರುತ್ತಾರೆ. ನವೆಂಬರ್ 27, 2023 ರಂದು, ಅವರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಔಪಚಾರಿಕವಾಗಿ ಬಿಜು ಜನತಾ ದಳ ಪಕ್ಷಕ್ಕೆ ಸೇರುತ್ತಾರೆ.
ಇವರ ವೈಯಕ್ತಿಕ ಜೀವನ, ಹಿನ್ನೆಲೆ
ಪಾಂಡಿಯನ್ ಅವರು ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದಿಂದ (ಮಧುರೈ ಕ್ಯಾಂಪಸ್) ಕೃಷಿ ವಿಷಯದಲ್ಲಿ ಪದವಿ ಪಡೆದಿದ್ದಾರೆ. ನಂತರ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಪುಸಾ, ನವದೆಹಲಿಯಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. 2000ರಲ್ಲಿ, ಇವರು ಪಂಜಾಬ್ ಕೇಡರ್‌ನಲ್ಲಿ ಐಎಎಸ್ ಅಧಿಕಾರಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುತ್ತಾರೆ. 2000ನೇ ಇಸವಿಯಲ್ಲಿ ಇವರು ತಮ್ಮೊಂದಿಗೆ ಐಎಎಸ್ ಆಫೀಸರ್ ಆಗಿದ್ದ ಸುಜಾತ ಅವರನ್ನು ಮದುವೆಯಾಗುತ್ತಾರೆ. ಸುಜಾತ್ ಅವರು ಮಿಷನ್ ಶಕ್ತಿಯನ್ನು ಮುನ್ನೆಡುಸುತ್ತಿದ್ದಾರೆ. ಇದು 7 7 ಮಿಲಿಯನ್ ಸದಸ್ಯರನ್ನು ಹೊಂದಿರುವ ಭಾರತದ ಅತ್ಯಂತ ಯಶಸ್ವಿ ಸ್ವ ಸಹಾಯ ಸಂಘಗಳಲ್ಲಿ ಒಂದಾಗಿದೆ.
ವಿಕೆ ಪಾಂಡಿಯನ್ ವೃತ್ತಿ ಜೀವನ
2000ನೇ ಇಸವಿಯಲ್ಲಿ ಒಡಿಶಾವು ಭೀಕರ ಚಂಡಮಾರುತಕ್ಕೆ ಸಿಲುಕಿದ ಸಂದರ್ಭದಲ್ಲಿ ಪಾಂಡಿಯನ್ ಐಎಎಸ್ ಅಧಿಕಾರಿಯಾಗಿ ನೇಮಕಗೊಳ್ಳುತ್ತಾರೆ. 2002ರಲ್ಲಿ ಇವರು ಕಲಹಂಡಿ ಜಿಲ್ಲೆಯ ಧರಮ್‌ಗಢದ ಸಬ್ ಕಲೆಕ್ಟರ್ ಆಗಿ ನೇಮಕಗೊಳ್ಳುತ್ತಾರೆ. ಅಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಯ (MSP) ಯಶಸ್ವಿ ಅನುಷ್ಠಾನವನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2004 ರಲ್ಲಿ, ರೂರ್ಕೆಲಾದಲ್ಲಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ, ರೂರ್ಕೆಲಾ ಡೆವಲಪ್‌ಮೆಂಟ್ ಏಜೆನ್ಸಿಯ (RDA) ನೇತೃತ್ವ ವಹಿಸಿದ್ದರು. ಅದು 20 ವರ್ಷಗಳಿಂದ ದಿವಾಳಿಯಾಗಿತ್ತು. ತಮ್ಮ ಜೀವಮಾನದಲ್ಲಿ ಕೂಡಿಟ್ಟ ಹಣವನ್ನೆಲ್ಲಾ ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ ಜನರಿಗೆ ಮನೆ ಮಾಡಿಸಿಕೊಡುವುದು ಅವರಿಗೆ ಸಾಧ್ಯವಾಗಿರಲಿಲ್ಲ. ಪಾಂಡಿಯನ್ ಅವರ ನಾಯಕತ್ವದಲ್ಲಿ, RDA ಅನ್ನು 15 ಕೋಟಿ ಹೆಚ್ಚುವರಿಗೆ ತರಲಾಯಿತು ಮತ್ತು ಅವರು ಅಧಿಕಾರ ವಹಿಸಿಕೊಂಡ ಐದು ತಿಂಗಳೊಳಗೆ ಅವರು 20 ವರ್ಷಗಳಿಂದ ಕಾಯುತ್ತಿದ್ದ ಜನರಿಗೆ ಹಣವನ್ನು ಹಿಂದಿರುಗಿಸಲು ಸಾಧ್ಯವಾಯಿತು.
ಭಾರತದ ಅತ್ಯಂತ ಕಿರಿಯ ಜಿಲ್ಲಾಧಿಕಾರಿ
2005ರಲ್ಲಿ ಇವರನ್ನು ಮಯೂರ್‌ಭಂಜ್‌ನ ಜಿಲ್ಲಾಧಿಕಾರಿಯಾಗಿ ನೇಮಿಸಲಾಯಿತು. ಅವರು ಆ ಸಮಯದಲ್ಲಿ ಭಾರತದ ಅತ್ಯಂತ ಕಿರಿಯ ಜಿಲ್ಲಾಧಿಕಾರಿಗಳಲ್ಲಿ ಒಬ್ಬರಾಗಿದ್ದರು. ಇದು ಆ ಸಮಯಲ್ಲಿ ಒಡಿಶಾ ಅತಿ ದೊಡ್ಡ ಜಿಲ್ಲೆಯ ಜವಾಬ್ದಾರಿ ಹೊಂದಿದ್ದರು. ಅಂಗವಿಕಲರಿಗೆ ಪ್ರಮಾಣ ಪತ್ರ ವಿತರಿಸಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತಂದರು. ಇದು ವರ್ಷಕ್ಕೆ 700 ಪ್ರಮಾಣಪತ್ರಗಳಿಂದ ವರ್ಷಕ್ಕೆ 19000 ಪ್ರಮಾಣಪತ್ರಗಳಿಗೆ ವಿತರಣೆಯಲ್ಲಿ ಹೆಚ್ಚಳಕ್ಕೆ ಕಾರಣವಾಯಿತು. ಮಯೂರ್‌ಭಂಜ್‌ನಲ್ಲಿ ಇವರು ಮಾಡಿದ ಕೆಲಸಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆಯುತ್ತಾರೆ. ಮಯೂರ್‌ಭಂಜ್‌ನಲ್ಲಿ ಯಶಸ್ವಿಯಾದ ನಂತರ, PWD ಪ್ರಮಾಣಪತ್ರಗಳಿಗಾಗಿ ಏಕ ಗವಾಕ್ಷಿ ವ್ಯವಸ್ಥೆಯನ್ನು ರಾಷ್ಟ್ರೀಯ ಮಾದರಿಯಾಗಿ ತೆಗೆದುಕೊಳ್ಳಲಾಗಿತ್ತು ಮತ್ತು ಇದನ್ನು ರಾಷ್ಟ್ರವ್ಯಾಪಿ ಜಾರಿಗೊಳಿಸಲಾಯಿತು. ಆ ಸಮಯದಲ್ಲಿ ಅವರು ಹೆಲೆನ್ ಕೆಲ್ಲರ್ ಪ್ರಶಸ್ತಿಯನ್ನು ಪಡೆದ ಏಕೈಕ ಸರ್ಕಾರಿ ಅಧಿಕಾರಿ ಇವರಾಗಿದ್ದರು.
ಗಂಜಾಂನ ಜಿಲ್ಲಾಧಿಕಾರಿಯಾಗಿದ್ದಾಗ ಪಾಂಡಿಯನ್ ಅವರು ಜೀವನೋಪಾಯವನ್ನು ಸುಧಾರಿಸಲು ಮತ್ತು ಉದ್ಯೋಗ ಭದ್ರತೆಯನ್ನು ಒದಗಿಸಲು NREGS ಅನ್ನು ಪರಿಚಯಿಸಿದರು. ಅವರು ಮೊದಲ ಬಾರಿಗೆ ವೇತನಕ್ಕಾಗಿ ಬ್ಯಾಂಕ್ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸಿದರು ಮತ್ತು ಕಾರ್ಮಿಕ ಪಾವತಿಗಳು ನೇರವಾಗಿ ವೇತನದಾರರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು 1.2 ಲಕ್ಷ ಬ್ಯಾಂಕ್ ಖಾತೆಗಳನ್ನು ತೆರೆದರು.
2011ರಿಂದ ಇವರನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಗುತ್ತದೆ. 2023ರವರೆಗೆ ಅದೇ ಹುದ್ದೆಯಲ್ಲಿ ಮುಂದುವರಿಯುತ್ತಾರೆ ಪಾಂಡಿಯನ್. ಒಡಿಶಾ ರಾಜ್ಯದಲ್ಲಿ ಹಲವು ಬದಲಾವಣೆಗಳನ್ನು ಜಾರಿಗೊಳಿಸಿ ರಾಜ್ಯದ ಏಳಿಗೆಗೆ ಶ್ರಮಿಸಿರುವ ಪಾಂಡಿಯನ್ ಪಟ್ನಾಯಕ್ ಅವರಿಗೆ ಹತ್ತಿರವಾಗಿದ್ದು ಅತಿಶಯೋಕ್ತಿಯಲ್ಲ. ಪಟ್ನಾಯಕ್ ಅವರ ಹಲವು ಕನಸುಗಳನ್ನು ಸಕಾರಗೊಳಿಸುವ ಮೂಲಕ ಅವರ ಆತ್ಮೀಯತೆ ಗಳಿಸಿದ್ದಾರೆ ಪಾಂಡಿಯನ್. ಐಎಎಸ್ ಅಧಿಕಾರಿಯಾಗಿ ಸ್ವಯಂ ನಿವೃತ್ತಿ ಪಡೆದು ಸದ್ಯ ರಾಜಕೀಯದಲ್ಲಿದ್ದರೂ ಯಾವುದೇ ಕ್ಷೇತ್ರದಿಂದ ಸ್ವರ್ಧಿಸಿಲ್ಲ ಪಾಂಡಿಯನ್.
ತಮಿಳು ಮೂಲದ ಪಾಂಡಿಯನ್ ಅವರಿಗೆ ಪಟ್ನಾಯಕ್ ಹಾಗೂ ಬಿಜೆಡಿ ಮಣೆ ಹಾಕುತ್ತಿರುವ ಬಗ್ಗೆ ರಾಜಕೀಯ ವಲಯದಲ್ಲಿ ಕುಹುಕಗಳ ಕೇಳಿ ಬಂದರೂ ಈ ಬಗ್ಗೆ ಬಿಜೆಡಿ ಪಕ್ಷದ ಅಭ್ಯರ್ಥಿಗಳಾಗಲಿ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆಗಲಿ ತಲೆ ಕೆಡಿಸಿಕೊಂಡಂತಿಲ್ಲ. ಅದೇನೇ ಇರಲಿ, ಇನ್ನೇನು ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬೀಳಲಿದ್ದು, ಬಿಜೆಡಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬಹುದು ಎಂಬುದನ್ನು ಕಾದು ನೋಡಬೇಕಿದೆ.