Lok Sabha Elections2024: ಎನ್‌ಡಿಎದೊಂದಿಗೆ ಮುರಿದು ಬಿದ್ದ ಮೈತ್ರಿ, ಕೇಂದ್ರ ಸಚಿವ ರಾಜೀನಾಮೆ
ಕೇಂದ್ರದಲ್ಲಿ ಸಚಿವರಾಗಿದ್ದ ಪಶುಪತಿಕುಮಾರ್ ಪಾರಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎನ್‌ಡಿಎ ಜತೆಗೆ ಮೈತ್ರಿ ಮುರಿದು ಬಿದ್ದ ಕಾರಣದಿಂದ ಅವರು ಸಚಿವ ಸ್ಥಾನ ತೊರೆದು ಹೊರ ಬಂದಿದ್ದಾರೆ.

ದೆಹಲಿ: ಆಡಳಿತಾರೂಢ ಎನ್‌ಡಿಎ ಜತೆಗಿನ ಮೈತ್ರಿ ಮುರಿದು ಬಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿಯ ನಾಯಕ ಪಶುಪತಿಕುಮಾರ್ ಪಾರಸ್ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಸಂಪುಟ ದರ್ಜೆಯ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪಶುಪತಿಪಾರಸ್ ಅವರು ಎಲ್‌ಜೆಪಿಯ ನಾಯಕರಾಗಿದ್ದ ದಿವಂಗತ ರಾಮವಿಲಾಸ್ ಪಾಸ್ವಾನ್ ಸಹೋದರ. ಅವರು ಎರಡು ವರ್ಷದಿಂದಲೂ ಕೇಂದ್ರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮುಂಬರುವ ಲೋಕಸಭೆ ಚುನಾವಣೆಗೆ ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. ಇದರಿಂದ ಪಶುಪತಿ ಕುಮಾರ್ ಅವರು ಎನ್‌ಡಿಎಯಿಂದ ಹೊರ ಹೋಗುವ ಸನ್ನಿವೇಶ ನಿರ್ಮಾಣವಾಯಿತು. ಈ ಕಾರಣದಿಂದಾಗಿ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಮವಿಲಾಸ್ ಪಾಸ್ವಾನ್ ಅವರು ತೀರಿಕೊಂಡ ನಂತರ ಲೋಕಜನಶಕ್ತಿ ಇಬ್ಬಾಗವಾಗಿತ್ತು. ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಲೋಕಜನಶಕ್ತಿ ಪಕ್ಷ ಉಳಿಸಿಕೊಂಡರ, ಅವರ ಸಹೋದರ ಪಶುಪತಿ ಕುಮಾರ್ ಹೊಸ ಪಕ್ಷ ಕಟ್ಟಿ ಎನ್‌ಡಿಎಗೆ ಬೆಂಬಲ ಸೂಚಿಸಿದ್ದರು. ನಂತರ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು.
ಈಗ ಲೋಕಸಭೆ ಚುನಾವಣೆ ಮುನ್ನವೇ ಮೈತ್ರಿ ಮುರಿದು ಬಿದ್ದಿದರಿಂದ ಅವರು ಇಂಡಿಯಾ ಮೈತ್ರಿ ಕೂಟದ ಜತೆಗೆ ಹೋಗುತ್ತಾರೋ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸುತ್ತಾರೋ ಎನ್ನುವ ಕುತೂಹಲವಿದೆ.
ಬಹುತೇಕ ಅವರು ಪ್ರತ್ಯೇಕವಾಗಿ ಸ್ಪರ್ಧಿಸಬಹುದು. ಅದೂ ಅವರು ಪ್ರತಿನಿಧಿಸಿರುವ ಬಿಹಾರದ ಹಾಜಿಪುರ ಕ್ಷೇತ್ರದಿಂದಲೇ ಕಣಕ್ಕಿಳಿಯಬಹುದು ಎನ್ನಲಾಗುತ್ತಿದೆ. ಎನ್‌ಡಿಎ ಈಗಾಗಲೇ ಚಿರಾಗ್ ಪಾಸ್ವಾನ್ ಅವರ ಪಕ್ಷಕ್ಕೆ ಐದು ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ.
