Lok Sabha Elections2024: ತೃಣಮೂಲ ಪ್ರತ್ಯೇಕ ಸ್ಪರ್ಧೆ, ಮಮತಾ ತವರಲ್ಲಿ ಇಂಡಿಯಾ ಬ್ಲಾಕ್‌ಗಿಲ್ಲ ಸ್ಥಾನ, ಯೂಸೂಫ್ ಪಠಾಣ್ ಈ ಬಾರಿ ಅಭ್ಯರ್ಥಿ
West Bengal politics ಪಶ್ಚಿಮ ಬಂಗಾಲದಲ್ಲಿ ಎನ್‌ಡಿಎ ವಿರುದ್ದ ಇಂಡಿಯಾ ಬ್ಲಾಕ್ ಮೈತ್ರಿ ಮುರಿದುಬಿದ್ದಿದೆ. ಟಿಎಂಸಿ( TMC) ಪ್ರತ್ಯೇಕವಾಗಿ ಕಣಕ್ಕಿಳಿಯುವ ಸಂದೇಶವನ್ನು ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿ ಪ್ರಕಟಿಸುವ ಮೂಲಕ ರವಾನಿಸಿದೆ.
ಕೋಲ್ಕತ್ತಾ: ಲೋಕಸಭೆ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಸಿವೆ. ಕೆಲವು ಪಕ್ಷಗಳಿಗೆ ಅಭ್ಯರ್ಥಿಗಳ ಆಯ್ಕೆಯೂ ಆಗಿದೆ. ಆದರೆ ಇಂಡಿಯಾ ಬ್ಲಾಕ್‌ನ ಪ್ರಮುಖ ಪಾಲುದಾರ ಪಕ್ಷವಾದ ತೃಣಮೂಲ ಕಾಂಗ್ರೆಸ್ ಮಾತ್ರ ಪಶ್ಚಿಮಬಂಗಾಲದ ಎಲ್ಲಾ 42 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ನಮ್ಮದು ಪ್ರತ್ಯೇಕ ದಾರಿ ಎಂದು ಮಮತಾ ಬ್ಯಾನರ್ಜಿ ಪರೋಕ್ಷವಾಗಿ ಸಾರಿದ್ದಾರೆ. ಈ ಬಾರಿ ಕ್ರಿಕೆಟಿಗ ಯೂಸೂಫ್ ಪಠಾಣ್ ಅವರಿಗೆ ಟಿಎಂಸಿ ಬಹರಮ್ ಪುರ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಒಂದು ವರ್ಷದಿಂದ ಎನ್‌ಡಿಎಗೆ ವಿರುದ್ದವಾಗಿ ಇಂಡಿಯಾ ಬ್ಲಾಕ್ ರೂಪುಗೊಂಡು ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಮುಂದಾಗಿದೆ. ಸೀಟು ಹಂಚಿಕೆ ಕುರಿತಂತೆ ಈಗಾಗಲೇ ಐದಾರು ಸಭೆಗಳೂ ನಡೆದಿವೆ. ಆದರೆ ಅಂತಿಮ ರೂಪ ನೀಡಲು ಆಗಿಲ್ಲ. ಇದರ ನಡುವೆ ಈ ಬೆಳವಣಿಗೆ ನಡೆದಿದೆ.
ಇಂಡಿಯಾ ಬ್ಲಾಕ್‌ನ ಪ್ರಮುಖ ಸಹಯೋಗಿಗಳಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ಜನತಾದಳ ಕಳೆದ ತಿಂಗಳೇ ಮೈತ್ರಿಯಿಂದ ಹೊರಬಂದು ಎನ್‌ಡಿಎ ಸೇರಿತ್ತು. ಮತ್ತೊಂದು ಪಕ್ಷವಾದ ಪಶ್ಚಿಮ ಬಂಗಾಲದಲ್ಲಿ ಆಡಳಿತದಲ್ಲಿರುವ ತೃಣಮೂಲ ಕಾಂಗ್ರೆಸ್ ಕೂಡ ಮೈತ್ರಿ ಕೂಟದಿಂದ ಪ್ರತ್ಯೇಕವಾಗಿದೆ. ಏಕೆಂದರೆ ತೃಣಮೂಲ ಪಕ್ಷವು ಲೋಕಸಭೆ ಚುನಾವಣೆ ಎಲ್ಲಾ ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಈ ಸಂದೇಶವನ್ನು ಸಾರಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಭಾರತೀಯ ಕಾಂಗ್ರೆಸ್ ಪಕ್ಷವು ಟಿಎಂಸಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಇರಾದೆಯನ್ನು ನಿರಂತರವಾಗಿ ವ್ಯಕ್ತಪಡಿಸಿಕೊಂಡು ಬಂದಿತ್ತು. ಈ ಕುರಿತು ಮಾತುಕತೆಗಳೂ ಆಗಿದ್ದವು. ಆದರೆ ಈಗ ಪ್ರತ್ಯೇಕವಾಗಿ ಸ್ಪರ್ಧಿಸುವ ಪಟ್ಟಿಯನ್ನು ಟಿಎಂಸಿ ಪ್ರಕಟಿಸಿದೆ. ನಾವು ಬಿಜೆಪಿಯಲ್ಲಿ ಸಮರ್ಥವಾಗಿ ಎದುರಿಸುವ ತೀರ್ಮಾನ ಮಾಡಿದ್ದೆವು ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎಂಟು ಸದಸ್ಯರಿಗೆ ಕೊಕ್
ಈ ನಡುವೆ ತೃಣಮೂಲ ಕಾಂಗ್ರೆಸ್ ಹೊಸ ಮುಖಗಳಿವೆ ಈ ಚುನಾವಣೆಯಲ್ಲಿ ಆದ್ಯತೆ ನೀಡಿದೆ. ಎಂಟು ಹಾಲಿ ಸದಸ್ಯರಿಗೆ ಕೊಕ್ ನೀಡಲಾಗಿದೆ. ಕ್ರಿಕೆಟಿಗರಾದ ಯೂಸೂಫ್ ಪಠಾಣ್ ಬಹರಮ್‌ಪುರ ಕ್ಷೇತ್ರದಿಂದ ಹಾಗೂ ಕೀರ್ತಿ ಆಜಾದ್ ಅವರು ಬರ್ಧಮಾನ್ ದುರ್ಗಾಪುರದಿಂದ ಟಿಎಂಸಿ ಅಭ್ಯರ್ಥಿಗಳಾಗಲಿದ್ದಾರೆ. ಯೂಸೂಫ್ ಅವರು ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಐದು ಬಾರಿ ಪ್ರತಿನಿಧಿಸಿರುವ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿರುವುದು ವಿಶೇಷ.
ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಲಂಚ ಕೇಳಿದ್ದ ಆರೋಪದ ಮೇಲೆ ಅಮಾನತುಗೊಂಡಿದ್ದ ಮಹುವಾ ಮೋಯಿತ್ರಾ ಅವರಿಗೆ ಕೃಷ್ಣನಗರದಿಂದ ಎರಡನೇ ಬಾರಿಗೆ ಟಿಕೆಟ್ ನೀಡಲಾಗಿದೆ. ನಟ ಶತೃಘ್ನ ಸಿನ್ಹಾ ಕೂಡ ಮತ್ತೊಮ್ಮೆ ಅವಕಾಶ ಪಡೆದುಕೊಂಡಿದ್ಧಾರೆ.
ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ 22, ಬಿಜೆಪಿ 18 ಹಾಗೂ ಕಾಂಗ್ರೆಸ್ 2 ಸ್ಥಾನಗಳನ್ನು ಪಡೆದುಕೊಂಡಿದ್ದವು.