Exit Poll: ಆಂಧ್ರಪ್ರದೇಶದಲ್ಲಿ ಅಣ್ಣತಂಗಿ ಸವಾಲಿನ ನಡುವೆ ವೈಎಸ್‌ಆರ್- ಟಿಡಿಪಿ ಮೈತ್ರಿ ಪಕ್ಷಗಳ ನೇರ ಹಣಾಹಣಿ
ಕನ್ನಡ ಸುದ್ದಿ  /  ಚುನಾವಣೆಗಳು  /  Exit Poll: ಆಂಧ್ರಪ್ರದೇಶದಲ್ಲಿ ಅಣ್ಣತಂಗಿ ಸವಾಲಿನ ನಡುವೆ ವೈಎಸ್‌ಆರ್- ಟಿಡಿಪಿ ಮೈತ್ರಿ ಪಕ್ಷಗಳ ನೇರ ಹಣಾಹಣಿ

Exit Poll: ಆಂಧ್ರಪ್ರದೇಶದಲ್ಲಿ ಅಣ್ಣತಂಗಿ ಸವಾಲಿನ ನಡುವೆ ವೈಎಸ್‌ಆರ್- ಟಿಡಿಪಿ ಮೈತ್ರಿ ಪಕ್ಷಗಳ ನೇರ ಹಣಾಹಣಿ

2024ರ ಲೋಕಸಭಾ ಚುನಾವಣಾ ಫಲಿತಾಂಶದ ಸದ್ದುಗದ್ದಲ ಜೋರಾಗಿರುವ ಈ ಹೊತ್ತಿನಲ್ಲಿ ಆಂಧ್ರಪ್ರದೇಶ ರಾಜಕೀಯದತ್ತ ಎಲ್ಲರೂ ದೃಷ್ಟಿ ನೆಟ್ಟಿದ್ದಾರೆ. ಪ್ರಾದೇಶಿಕ ಪಕ್ಷಗಳದ್ದೇ ಪಾರಮ್ಯ ಇರುವ ಆಂಧ್ರದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ವೈಎಸ್‌ಆರ್‌ ಕಾಂಗ್ರೆಸ್‌ ಹಾಗೂ ಟಿಡಿಪಿ ಮೈತ್ರಿ ಪಕ್ಷಗಳ ನಡುವೆ ನೇರಾ ಹಣಾಹಣಿ ಇದೆ.

ಆಂಧ್ರಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ; ವೈಎಸ್‌ಆರ್ vs ಟಿಡಿಪಿ ಮೈತ್ರಿ ಪಕ್ಷಗಳ ನಡುವೆ ನೇರ ಹಣಾಹಣಿ
ಆಂಧ್ರಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ; ವೈಎಸ್‌ಆರ್ vs ಟಿಡಿಪಿ ಮೈತ್ರಿ ಪಕ್ಷಗಳ ನಡುವೆ ನೇರ ಹಣಾಹಣಿ

2024ರ ಲೋಕಸಭಾ ಚುನಾವಣೆ ಮುಗಿದು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದೇವೆ. ಇಂದು (ಜೂನ್‌ 1) ಎಕ್ಸಿಟ್‌ ಪೋಲ್‌ ನಡೆಯಲಿದ್ದು ಫಲಿತಾಂಶದ ಬಗ್ಗೆ ಒಂದು ಚಿತ್ರಣ ಸಿಗಲಿದೆ. ಜೂನ್‌ 4ರಂದು ಈ ಬಾರಿ ಲೋಕಸಭಾ ಚುನಾವಣೆಯ ಫಲಿತಾಂಶದ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ. ಈ ಹೊತ್ತಿನಲ್ಲಿ ನೆರೆಯ ಆಂಧ್ರಪ್ರದೇಶದಲ್ಲಿ ಲೋಕಸಭೆಯ ಜೊತೆಗೆ ವಿಧಾನಸಭಾ ಚುನಾವಣೆ ಕೂಡ ನಡೆದಿದೆ. ರಾಷ್ಟ್ರೀಯ ಪಕ್ಷಗಳ ಪ್ರಾಬಲ್ಯವಿಲ್ಲದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಹಾಗೂ ಟಿಡಿಪಿ (ತೆಲುಗು ದೇಶಂ ಪಾರ್ಟಿ) ನಡುವೆ ನೇರ ಹಣಾಹಣಿ ಇದೆ. ಕಾಂಗ್ರೆಸ್‌ ಅನ್ನು ಬಲಪಡಿಸಲು ಜಗನ್ಮೋಹನ ರೆಡ್ಡಿ ಸಹೋದರಿ ಶರ್ಮಿಳಾ ಅವರನ್ನು ಪ್ರಯೋಗಿಸುವ ಪ್ರಯತ್ನ ನೀಡಿದರೂ ಅದು ಫಲ ಕೊಟ್ಟಂತೆ ಕಾಣತ್ತಿದೆ. ಈ ಕಾರಣದಿಂದ  ವೈಎಸ್‌ಆರ್‌ಪಿ, ಟಿಡಿಪಿ ಮೈತ್ರಿಕೂಟದ ನಡುವೆ ನೆಕ್‌ ಟು ನೆಕ್‌ ಫೈಟ್‌ ಇದ್ದು, ಯಾರು ಗೆಲ್ಲಬಹುದು ಎಂಬ ಕುತೂಹಲ ಹೆಚ್ಚಿದೆ. ಆಂಧ್ರಪ್ರದೇಶ ಲೋಕಸಭಾ ಕ್ಷೇತ್ರ, ಇಲ್ಲಿನ ಪ್ರಮುಖ ಪಕ್ಷಗಳು, ಯಾವ ಪಕ್ಷಗಳ ನಡುವೆ ತೀವ್ರ ಪೈಪೋಟಿ ಇದೆ ಎಂಬಿತ್ಯಾದಿ ವಿವರ ಇಲ್ಲಿದೆ.

ಆಂಧ್ರಪ್ರದೇಶ ಲೋಕಸಭಾ ಕ್ಷೇತ್ರ ಪರಿಚಯ

ಆಂಧ್ರಪ್ರದೇಶವು ಭಾರತದ ವೈವಿಧ್ಯಮಯ ರಾಜ್ಯಗಳಲ್ಲಿ ಒಂದಾಗಿದೆ. ಲೋಕಸಭೆಗೆ ಆಂಧ್ರಪ್ರದೇಶದಿಂದ 25 ಸಂಸದರು ಪ್ರತಿನಿಧಿಸುತ್ತಾರೆ. ಈ ಬಾರಿ ಮೇ 13ರಂದು ಏಕಕಾಲದಲ್ಲಿ ಮತದಾನ ನಡೆದಿದ್ದು, ಜೂನ್‌ 4 ರಂದು ಫಲಿತಾಂಶ ಹೊರ ಬೀಳಲಿದೆ. ಆಂಧ್ರಪ್ರದೇಶದಲ್ಲಿ ಪ್ರಸ್ತುತ ಮುಖ್ಯಮಂತ್ರಿಯಾಗಿರುವ ವೈಎಸ್‌ ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಹಾಗೂ ಈ ಹಿಂದೆ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಎನ್. ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ)ದ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ.

ಸದ್ಯ ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ 25 ಸ್ಥಾನಗಳಲ್ಲಿ 22 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಎನ್. ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷವನ್ನು (ಟಿಡಿಪಿ) ಕೇವಲ ಮೂರು ಸ್ಥಾನಗಳಿಸುವ ಮೂಲಕ ಹೀನಾಯ ಸೋಲು ಕಂಡಿತ್ತು.

2024ರ ಲೋಕಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವು, ಬಿಜೆಪಿ-ಟಿಡಿಪಿ ಮತ್ತು ಪವನ್‌ ಕಲ್ಯಾಣ್‌ ಅವರ ಜನಸೇನಾ ಪಕ್ಷ (ಜೆಎಸ್‌ಪಿ) ಗಳ ಮೈತ್ರಿಕೂಟದೊಂದಿಗೆ ಸ್ಪರ್ಧಿಸುತ್ತಿದೆ. ಬಿಜೆಪಿ-ಟಿಡಿಪಿ-ಜೆಎಸ್‌ಪಿ ಈ ಮೂರು ಪಕ್ಷಗಳ ನಡುವಿನ ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಟಿಡಿಪಿ ರಾಜ್ಯದ 17 ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಇದಕ್ಕೆ ಸರಿಯಾಗಿ ಬಿಜೆಪಿ ಮತ್ತು ಜೆಎಸ್‌ಪಿ ತಲಾ ಆರು ಮತ್ತು ಎರಡು ಸ್ಥಾನಗಳನ್ನು ಹೊಂದಿವೆ.

ಈ ಎಲ್ಲದರ ನಡುವೆ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಅವರ ಕಿರಿಯ ಸಹೋದರಿ ವೈಎಸ್‌ ಶರ್ಮಿಳಾ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮುನ್ನೆಡೆಸುತ್ತಿದ್ದಾರೆ. ಆಕೆ ಈ ಬಾರಿ ತಮ್ಮ ತಂದೆಯ ಪ್ರಬಲ ಕ್ಷೇತ್ರ ಕಡಪ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳಲ್ಲಿ ನಾಲ್ಕು ಪರಿಶಿಷ್ಟ ಜಾತಿಗಳಿಗೆ (SC) ಮತ್ತು ಒಂದು ಪರಿಶಿಷ್ಟ ಪಂಗಡಕ್ಕೆ (ST) ಮೀಸಲಾಗಿದೆ.

ಆಂಧ್ರಪ್ರದೇಶದಲ್ಲಿ ಈ ಬಾರಿ ನೇರಾ ಹಣಾಹಣಿ

ಆಂಧ್ರಪ್ರದೇಶದಲ್ಲಿ ಈ ಬಾರಿ ಪ್ರಸ್ತುತ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಮತ್ತು ಚಂದ್ರ ಬಾಬುನಾಯ್ಡು ಅವರ ಟಿಡಿಪಿ-ಬಿಜೆಪಿ-ಜೆಎಸ್‌ಸಿ ಮೈತ್ರಿ ಪಕ್ಷಗಳ ನಡುವೆ ನೇರ ಹಣಾಹಣಿ ಇದೆ. ಈ ನಡುವೆ ರಾಜ್ಯದಲ್ಲಿ ವೈಎಸ್‌ಆರ್‌ ಹಾಗೂ ಟಿಡಿಪಿ ನಡುವಿನ ವೈಮನಸ್ಸು ಕಾಂಗ್ರೆಸ್‌ಗೆ ಲಾಭವಾದಂತೆ ಕಾಣುತ್ತಿದೆ. ರಾಜ್ಯದಲ್ಲಿ ಮರಳಿ ತನ್ನ ಸ್ಥಾನ ಭದ್ರಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಯೋಚಿಸುತ್ತಿದೆ. ಜಗನ್‌ಮೋಹನ್‌ ಅವರ ಸಹೋದರಿಯೇ ಅವರಿಗೆ ಎದುರಾಳಿಯಾಗಿರುವುದು ಕುತೂಹಲ ಹೆಚ್ಚುವಂತೆ ಮಾಡಿದೆ.

ಜಗನ್‌ ಮೋಹನ್‌ ರೆಡ್ಡಿ ಅವರು ತಮ್ಮ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದರು. ಆ ಮೂಲಕ‌ 2019ರ ಲೋಕಸಭಾ ಚುನಾವಣೆಯಲ್ಲಿ ವಿಜಯ ಸಾಧಿಸಿದ್ದರು. ರೆಡ್ಡಿ ಆಂಧ್ರಪ್ರದೇಶದಲ್ಲಿ ಮಾಡಿರುವ ಕೆಲಸಗಳು ಚಂದ್ರಬಾಬು ನಾಯ್ಡು ಅವರ ಕೆಲಸಗಳಿಗೆ ಹಿಂದೇಟಾಗುವಂತೆ ಮಾಡಿರಬಹುದು ಎಂದು ಹೇಳಲಾಗುತ್ತದೆ.

ಟಿಡಿಪಿ ಜೆಎಸ್‌ಪಿಗೆ ಮಾಡು ಇಲ್ಲದೇ ಮಡಿ ಯುದ್ಧ

ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ದು ಹಾಗೂ ಜನಸೇನಾ ಪಕ್ಷದ ಪವನ್‌ ಕಲ್ಯಾಣ್‌ಗೆ ಇದು ಮಾಡು ಇಲ್ಲದೇ ಮಡಿ ಯುದ್ಧವಾಗಿದೆ. ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶವು ಈ ಪಕ್ಷಗಳ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಟಿಡಿಪಿ ಹಾಗೂ ಜೆಎಸ್‌ಪಿ ಜೊತೆಗೆ ಮೈತ್ರಿಗೆ ಕೈ ಜೋಡಿರುವ ಬಿಜೆಪಿಗೆ ಇದು ಪ್ರತಿಷ್ಠೆಯ ಕಣವಾಗಿರುವುದು ಸುಳ್ಳಲ್ಲ.

ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅವಿನಾಶ್‌ ರೆಡ್ಡಿ ಮತ್ತು ವೈಎಸ್‌ಆರ್‌ ಕುಟುಂಬದ ಪ್ರಾಬಲ್ಯವಿರುವ ಕ್ಷೇತ್ರವಾದ ಕಡಪದಿಂದ 2019 ರಲ್ಲಿ ಸ್ಪರ್ಧಿಸಿದಾಗ ಜಗನ್ ಮೋಹನ್ ರೆಡ್ಡಿ ಅವರು 3,80,726 ಮತಗಳ ಹೆಚ್ಚಿನ ಮತಗಳ ಅಂತರವನ್ನು ಪಡೆದರು.

ಏತನ್ಮಧ್ಯೆ, ಆ ಸಮಯದಲ್ಲಿ ಭಾರತದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು ಎನ್ನಿಸಿಕೊಂಡಿದ್ದ ಟಿಡಿಪಿ ಪಕ್ಷದ ಜಯದೇವ್ ಗಲ್ಲಾ ಅವರು ಗುಂಟೂರಿನಿಂದ ಸ್ಪರ್ಧಿಸಿ 4205 ಮತಗಳ ಅಂತರ ಗಳಿಸಿದರು. ಆದರೆ ಗಲ್ಲಾ ಅವರು ಇತ್ತೀಚೆಗೆ ತಮ್ಮ ಕುಟುಂಬ ಮತ್ತು ವ್ಯಾಪಾರ ವ್ಯವಹಾರಗಳ ಮೇಲೆ ಕೇಂದ್ರೀಕರಿಸುವ ಅಗತ್ಯವಿದೆ ಎಂದು ಉಲ್ಲೇಖಿಸಿ ಪೂರ್ಣ ಸಮಯದ ರಾಜಕೀಯದಿಂದ ವಿರಾಮ ಘೋಷಿಸಿದರು.

ಮೂವರು ಅಭ್ಯರ್ಥಿಗಳನ್ನು ಹೊರತುಪಡಿಸಿ, ಈ ವರ್ಷ ಸ್ಪರ್ಧಿಸಿದ ಎಲ್ಲಾ ಪದಾಧಿಕಾರಿಗಳು ವೈಎಸ್‌ಆರ್‌ಪಿಯ ಭಾಗವಾಗಿ ಕಳೆದ ಚುನಾವಣೆಯಲ್ಲಿ ಚುನಾಯಿತರಾಗಿದ್ದರು.‌ ವಲ್ಲಭನೇನಿ ಬಾಲಶೌರಿ ಮತ್ತು ಮಾಗುಂಟ ಶ್ರೀನಿವಾಸಲು ರೆಡ್ಡಿ ಮುಂತಾದ ಅಭ್ಯರ್ಥಿಗಳು ವೈಎಸ್‌ಆರ್‌ಪಿಗೆ ರಾಜೀನಾಮೆ ನೀಡಿ ಟಿಡಿಪಿ ಮತ್ತು ಜೆಎಸ್‌ಪಿಯಂತಹ ಇತರ ಪಕ್ಷಗಳನ್ನು ಸೇರಿದ್ದಾರೆ.

ಜಗನ್‌, ಶರ್ಮಿಳಾ ನಡುವೆ ವೈರತ್ವಕ್ಕೆ ಕಾರಣವೇನು?

ಆಂಧ್ರಪ್ರದೇಶದಲ್ಲಿ ವೈ.ಎಸ್‌. ರಾಜಶೇಖರ್‌ ರೆಡ್ಡಿ ಅವರ ಕಾಲದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಜೋರಾಗಿತ್ತು. ಆದರೆ 2009ರಲ್ಲಿ ರಾಜಶೇಖರ್‌ ರೆಡ್ಡಿ ಹೆಲಿಕಾಪ್ಟರ್‌ ದುರಂತದಲ್ಲಿ ಮರಣ ಹೊಂದುತ್ತಾರೆ. ಆಗ ಆಂಧ್ರದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಕುಸಿಯಿತು ಅಂತಲೇ ಹೇಳಬಹುದು. ಆ ಹೊತ್ತಿಗೆ ಕಡಪದಲ್ಲಿ ಸಂಸದರಾಗಿದ್ದ ವೈ, ಜಗನ್‌ಮೋಹನ್‌ ರೆಡ್ಡಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಕಾಂಗ್ರೆಸ್‌ ನಿರಾಕರಿಸಿತ್ತು. ಇದರಿಂದ ಬೇಸತ್ತ ಜಗನ್‌ 2011ರಲ್ಲಿ ತಮ್ಮದೇ ಹೊಸ ಪಕ್ಷ ಸ್ಥಾಪಿಸುತ್ತಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಜಗನ್‌ ಹಾಗೂ ಸಹೋದರಿ ಶರ್ಮಿಳಾ ಒಟ್ಟಾಗಿ ಕೆಲಸ ಮಾಡುವ ಮೂಲಕ ಅಮೋಘ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ವೈಎಸ್‌ಆರ್‌ಸಿಪಿ ಸರ್ಕಾರವನ್ನು ಅಧಿಕಾರಕ್ಕೆ ತರುತ್ತಾರೆ. ಆದರೆ ಅಣ್ಣನೊಂದಿಗೆ ವೈಮನಸ್ಸಿನ ಕಾರಣದಿಂದ ತಮ್ಮ ತಾಯಿಯೊಂದಿಗೆ ವೈಎಸ್‌ಆರ್‌ಸಿಪಿ ಪಕ್ಷದಿಂದ ಹೊರ ಬರುವ ಶರ್ಮಿಳಾ ವೈಎಸ್‌ಆರ್‌ ತೆಲಂಗಾಣ ಪಕ್ಷ'(ವೈಎಸ್‌ಆರ್‌ಟಿಪಿ) ಎಂಬ ಹೊಸ ಪಕ್ಷ ಸ್ಥಾಪಿಸುತ್ತಾರೆ. ಅಲ್ಲದೇ ಅಣ್ಣನ ವಿರುದ್ಧವೇ ಸಮರ ಸಾರುತ್ತಾರೆ ಶರ್ಮಿಳಾ. 2024ರ ಜನವರಿಯಲ್ಲಿ ತಮ್ಮ ಪಕ್ಷವನ್ನು ಕಾಂಗ್ರೆಸ್‌ ಜೊತೆ ವಿಲೀನ ಮಾಡುವ ಶರ್ಮಿಳಾ ಸದ್ಯ ಕಡಪ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. 

4 ಕ್ಷೇತ್ರಗಳಲ್ಲಿ ಚುನಾವಣಾ ಕಾವು ಜೋರು

ಆಂಧ್ರಪ್ರದೇಶದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆಯ ಕಾವು ಜೋರಾಗಿತ್ತು. ಪಕ್ಷದ ಪ್ರಮುಖರು ಮತ್ತು ಪ್ರಮುಖ ಅಭ್ಯರ್ಥಿಗಳು ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಕಡಪ ಕ್ಷೇತ್ರ ವೈಎಸ್‌ ರೆಡ್ಡಿ ಕುಟುಂಬದ ಪಾಲಿಗೆ ರಣರಂಗವಾಗಲಿದ್ದು, ವೈಎಸ್‌ಆರ್‌ಸಿಪಿಯ ವೈ.ಎಸ್‌. ಅವಿನಾಶ್ ರೆಡ್ಡಿ ಮೂರನೇ ಅವಧಿಗೆ ಮರು ಆಯ್ಕೆ ಬಯಸಿದ್ದು, ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಅಧ್ಯಕ್ಷ ವೈ.ಎಸ್. ಶರ್ಮಿಳಾ ಇದೇ ಕ್ಷೇತ್ರದಿಂದ ಚುನಾವಣಾ ರಾಜಕೀಯಕ್ಕೆ ಬರುತ್ತಿದ್ದಾರೆ.  ಶರ್ಮಿಳಾ ಕಾಂಗ್ರೆಸ್‌ನ ಇಮೇಜ್ ಅನ್ನು ಸುಧಾರಿಸಲು ಸಿಗುವ ಅವಕಾಶಗಳನ್ನು ಬಿಡುತ್ತಿಲ್ಲ. ವೈಎಸ್‌ಆರ್‌ಸಿಪಿ ಸರ್ಕಾರದ ವೈಫಲ್ಯಗಳು ಮತ್ತು ಜಗನ್ ಮೋಹನ್ ರೆಡ್ಡಿಯವರ ನೀತಿಗಳನ್ನು ಬಹಿರಂಗಪಡಿಸುವಲ್ಲಿ ಧ್ವನಿಯಾಗಿದ್ದಾರೆ.

ವಿಶಾಖಪಟ್ಟಣಂ ಲೋಕಸಭಾ ಕ್ಷೇತ್ರವು ಬಹುಶಃ ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಕುತೂಹಲ ಮೂಡಿಸಿರುವ ಕ್ಷೇತ್ರವಾಗಿದೆ. ವೈಎಸ್‌ಆರ್‌ಸಿಪಿಯು ಶಿಕ್ಷಣ ಸಚಿವ ಬೊಚ್ಚ ಸತ್ಯನಾರಾಯಣ ಅವರ ಪತ್ನಿ ಬೊಚ್ಚಾ ಝಾನ್ಸಿ ಲಕ್ಷ್ಮಿ ಅವರನ್ನು ಕಣಕ್ಕಿಳಿಸಿದೆ. ಎನ್‌ಡಿಎ ಟಿಡಿಪಿಯಿಂದ ಎಂ.ಶ್ರೀಭರತ್ ಅವರನ್ನು ಕಣಕ್ಕಿಳಿಸಿದೆ. ಇದು ಝಾನ್ಸಿ ಮತ್ತು ಅವರ ಪತಿಯ ರಾಜಕೀಯ ಅನುಭವದ ಜೊತೆಗೆ ಬಲವಾದ ರಾಜಕೀಯ ಪರಂಪರೆಯನ್ನು ಹೊಂದಿರುವ  ಕಿರಿಯ ವ್ಯಕ್ತಿಯೊಂದಿಗೆ ಸ್ಪರ್ಧೆ ಏರ್ಪಟ್ಟಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಲವು ಪಕ್ಷಗಳು ಆಂಧ್ರಪ್ರದೇಶದಿಂದ ಸ್ಪರ್ಧಿಸಿದ್ದರೂ ನೆಕ್‌ ಟು ನೆಕ್‌ ಫೈಟ್‌ ಇರುವುದು ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಟಿಡಿಪಿ ಮೈತ್ರಿ ಪಕ್ಷಗಳ ನಡುವೆ ಎನ್ನುವುದು ಸುಳ್ಳಲ್ಲ. 

ಎಲ್ಲದರ ನಡುವೆ ಮುಂದಿನ ಬಾರಿ ಚಂದ್ರಬಾಯು ನಾಯ್ದು ಅವರೇ ಮುಖ್ಯಮಂತ್ರಿ ಎಂಬ ಪ್ರಚಾರವೂ ಸದ್ದಿಲ್ಲದೇ ನಡೆದಿದೆ. ಅದೇನೇ ಇದ್ದರೂ ಲೋಕಸಭೆ ಹಾಗೂ ವಿಧಾನಸಭೆ ಎರಡೂ ಚುನಾವಣೆಗಳ ಫಲಿತಾಂಶ ಜೂನ್‌ 4 ರಂದು ಪ್ರಕಟಗೊಳ್ಳಲಿದೆ. ಅಂದು ಮುಂದಿನ ಮುಖ್ಯಮಂತ್ರಿ ಯಾರಾಗಬಹುದು, ಲೋಕಸಭೆಯಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗಳಿಸಲಿದೆ ಎಂಬುದು ಬಹಿರಂಗವಾಗಲಿದೆ.

Whats_app_banner