Exit Poll: ಒಡಿಶಾದಲ್ಲಿ ಮೈತ್ರಿ ಮುರಿದು ವೈರಿಗಳಾದ ಬಿಜೆಡಿ-ಬಿಜೆಪಿ ನಡುವೆ ಪ್ರಬಲ ಪೈಪೋಟಿ; ಹೀಗಿದೆ ಲೋಕಸಭಾ ಚುನಾವಣೆಯ ಕಣ
ಕನ್ನಡ ಸುದ್ದಿ  /  ಚುನಾವಣೆಗಳು  /  Exit Poll: ಒಡಿಶಾದಲ್ಲಿ ಮೈತ್ರಿ ಮುರಿದು ವೈರಿಗಳಾದ ಬಿಜೆಡಿ-ಬಿಜೆಪಿ ನಡುವೆ ಪ್ರಬಲ ಪೈಪೋಟಿ; ಹೀಗಿದೆ ಲೋಕಸಭಾ ಚುನಾವಣೆಯ ಕಣ

Exit Poll: ಒಡಿಶಾದಲ್ಲಿ ಮೈತ್ರಿ ಮುರಿದು ವೈರಿಗಳಾದ ಬಿಜೆಡಿ-ಬಿಜೆಪಿ ನಡುವೆ ಪ್ರಬಲ ಪೈಪೋಟಿ; ಹೀಗಿದೆ ಲೋಕಸಭಾ ಚುನಾವಣೆಯ ಕಣ

ಬಿಜೆಡಿ ಪಕ್ಷ ಪ್ರಾಬಲ್ಯ ಸಾಧಿಸಿರುವ ಒಡಿಶಾದಲ್ಲಿ ಬಿಜೆಪಿಯು ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಪೈಪೋಟಿ ನಡೆಸಿದೆ. ಮೊದಲು ಮೈತ್ರಿ ಸರ್ಕಾರದ ಮುನ್ಸೂಚನೆ ನೀಡಿದ್ದ ಬಿಜೆಡಿ ಹಾಗೂ ಬಿಜೆಪಿ ನಡುವೆ ಮನಸ್ತಾಪ ಮುಂದುವರಿದಿದೆ. ಒಡಿಶಾದಲ್ಲಿ ಬಿಜೆಡಿ-ಬಿಜೆಪಿ ಪೈಪೋಟಿ ಹೇಗಿದೆ? ಒಡಿಶಾ ಲೋಕಸಭಾ ಕ್ಷೇತ್ರಗಳು, ಇಲ್ಲಿನ ರಾಜಕೀಯ ವಲಯದ ಒಟ್ಟು ಚಿತ್ರಣ ಹೀಗಿದೆ.

ಒಡಿಶಾದಲ್ಲಿ ಮೈತ್ರಿ ಮುರಿದು ವೈರಿಗಳಾದ ಬಿಜೆಡಿ-ಬಿಜೆಪಿ ನಡುವೆ ಪ್ರಬಲ ಪೈಪೋಟಿ
ಒಡಿಶಾದಲ್ಲಿ ಮೈತ್ರಿ ಮುರಿದು ವೈರಿಗಳಾದ ಬಿಜೆಡಿ-ಬಿಜೆಪಿ ನಡುವೆ ಪ್ರಬಲ ಪೈಪೋಟಿ

ಲೋಕಸಭಾ ಚುನಾವಣೆ 2024ರ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಇಂದು (ಜೂನ್‌ 1) ಎಕ್ಸಿಟ್‌ ಪೋಲ್‌ ಇದ್ದು, ಯಾವ ರಾಜ್ಯದಲ್ಲಿ ಯಾವ ಪಕ್ಷ ಗೆದ್ದು ಬೀಗಬಹುದು ಎಂಬ ಅಂದಾಜು ಸಿಗಲಿದೆ. ಈ ನಡುವೆ ಆಯಾ ರಾಜ್ಯಗಳ ಜನರು ತಮ್ಮ ರಾಜ್ಯದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರಬಹುದು ಎಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಒಡಿಶಾ ರಾಜ್ಯದಲ್ಲಿ ಬಿಜೆಪಿ ಹಾಗೂ ಬಿಜೆಡಿ ಎರಡೂ ಪಕ್ಷಗಳು ಲೋಕಸಭಾ ಚುನಾವಣ ಕಣದಲ್ಲಿ ಪ್ರಬಲವಾಗಿವೆ. ಈ ಎರಡರ ನಡುವೆ ತೀವ್ರ ಪೈಪೋಟಿ ಉಂಟಾಗುವ ಸಾಧ್ಯತೆಯೂ ಎದ್ದು ಕಾಣುತ್ತಿದೆ. ಒಡಿಶಾದಲ್ಲಿ ಪ್ರಸ್ತುತ ಬಿಜೆಡಿ ಸರ್ಕಾರ ಅಸ್ಥಿತ್ವದಲ್ಲಿದೆ. ಬಿಜು ಜನತಾ ದಳ ಪ್ರಾಬಲ್ಯವಿರುವ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಪೈಪೋಟಿಗೆ ಇಳಿದಿದೆ. ಇಲ್ಲಿ ಬಿಜೆಡಿ, ಬಿಜೆಪಿ ಪೈಪೋಟಿ ಹೇಗಿದೆ? ಯಾವ ಪಕ್ಷ ಬಹುಮತ ಸಾಧಿಸಬಹುದು, ಇಲ್ಲಿನ ಲೋಕಸಭಾ ಕ್ಷೇತ್ರಗಳೆಷ್ಟು, ಒಡಿಶಾದಿಂದ ಸ್ಪರ್ಧಿಸಿದ ಪ್ರಮುಖ ನಾಯಕರು ಯಾರು ಇತ್ಯಾದಿ ವಿವರ ಇಲ್ಲಿದೆ.

ಒಡಿಶಾ ಲೋಕಸಭಾ ಕ್ಷೇತ್ರಗಳ ಚಿತ್ರಣ

ಒಡಿಶಾದಲ್ಲಿ ಒಟ್ಟು 21 ಸಂಸದೀಯ ಕ್ಷೇತ್ರಗಳಿವೆ. ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ಒಡಿಶಾವು ಪೂರ್ವ ರಾಜ್ಯಗಳ ಮನಸ್ಥಿತಿಯನ್ನು ವ್ಯಾಖ್ಯಾನಿಸುತ್ತದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎಯ ಭದ್ರಕೋಟೆಯಾಗಿದ್ದ ಒಡಿಶಾವು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸ್ಥಳೀಯ ಪಕ್ಷದ ಪ್ರಾಬಲ್ಯದ ಕಾರಣದಿಂದ ಕೈ ಕುಸಿತ ಕಂಡಿತು. ಮತ್ತೊಂದೆಡೆ 2009ರಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಎನ್ನಿಸಿಕೊಂಡಿರುವ ಬಿಜೆಪಿ, ಸದ್ಯ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜು ಜನತಾ ದಳದಿಂದ (ಬಿಜೆಡಿ) ತೀವ್ರ ಪೈಪೋಟಿ ಎದುರಿಸುತ್ತಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಡಿಶಾದಲ್ಲಿ ನಾಲ್ಕು ಹಂತಗಳಲ್ಲಿ ಮತದಾನ ನಡೆದಿದ್ದು, ಜೂನ್‌ 4 ರಂದು ಫಲಿತಾಂಶ ಹೊರ ಬೀಳಲಿದೆ. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಒಡಿಶಾದಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತಿತ್ತು. 2014 ರಲ್ಲಿ ಖಾತೆ ತೆರೆಯಲು ಸಾಧ್ಯವಾಗದ ಕಾಂಗ್ರೆಸ್‌, 2019ರ ಲೋಕಸಭಾ ಚುನಾವಣೆಯಲ್ಲಿ ಕೇವಲ 1 ಸ್ಥಾನಗಳಿಸಿತ್ತು. ಬಿಜೆಡಿ ಹಾಗೂ ಬಿಜೆಪಿ ಪ್ರಾಬಲ್ಯವು ಒಡಿಶಾದಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆ ಉಂಟು ಮಾಡಿತ್ತು.

ಕಳೆದ ಬಾರಿ ಅಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಡಿಯು ಶೇ 42.8ರಷ್ಟು ಮತ ಹಂಚಿಕೆಯೊಂದಿಗೆ 21 ಕ್ಷೇತ್ರಗಳ ಪೈಕಿ 12 ರಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ ಶೇ 38.4 ರಷ್ಟು ಮತ ಗಳಿಸುವ ಮೂಲಕ 8 ಸ್ಥಾನಗಳನ್ನು ಗೆದ್ದು ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಕಾಂಗ್ರೆಸ್ ಶೇ 13.4 ರಷ್ಟು ಮತಗಳೊಂದಿಗೆ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತ್ತು.

ಒಡಿಶಾ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಮೂರು ಬಣಗಳ ನಡುವೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಬಿಜೆಪಿ, ಬಿಜೆಡಿ ಹಾಗೂ ಕಾಂಗ್ರೆಸ್‌ ಇಲ್ಲಿ ಪ್ರಬಲ ಪೈಪೋಟಿಯನ್ನು ನೀಡಿವೆ. ಇದರೊಂದಿಗೆ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಇತರ ಪಕ್ಷಗಳು ಕೂಡ ಸ್ಪರ್ಧಾ ಕಣದಲ್ಲಿವೆ.

ಒಡಿಶಾ ಲೋಕಸಭಾ ಚುನಾವಣೆ ಒಟ್ಟು ಸೀಟುಗಳು

ಒಡಿಶಾದಲ್ಲಿನ 21 ಲೋಕಸಭಾ ಕ್ಷೇತ್ರಗಳ ಪೈಕಿ 3 ಎಸ್‌ಸಿಗೆ ಹಾಗೂ 5 ಎಸ್‌ಟಿಗೆ ಮೀಸಲಾದ ಕ್ಷೇತ್ರಗಳಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಡಿ ಒಡಿಶಾದ ಪ್ರಮುಖ ಕ್ಷೇತ್ರಗಳಾದ ಕಿಯೋಂಜಾರ್‌, ಧೆಂಕನಾಲ್‌, ಪುರಿ ಮತ್ತು ಕಟಕ್‌ನಲ್ಲಿ ಗೆಲುವು ಸಾಧಿಸಿದ್ದರೆ ಸಂಬಲ್‌ಪುರ ಹಾಗೂ ಭುವನೇಶ್ವರ ಬಿಜೆಪಿ ಪಾಲಾಗಿವೆ.

ಬಿಜೆಪಿ ಹಾಗೂ ಬಿಜೆಡಿ ನಡುವೆ ವೈರತ್ವ

ಒಡಿಶಾದಲ್ಲಿ ಪ್ರಸಕ್ತ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಆಡಳಿತ ಬಿಜೆಡಿಗೆ ಬಿಜೆಪಿ ತೀವ್ರ ಪೈಪೋಟಿಯನ್ನು ನೀಡಿದೆ. ಮೈತ್ರಿ ಮಾತುಕತೆ ವಿಫಲವಾಗಿರುವ ಕಾರಣ ಈ ಬಾರಿ ಎರಡು ಪಕ್ಷಗಳ ನಡುವಿನ ರಣರಂಗದ ವೇದಿಕೆ ಅಂತಲೇ ಹೇಳಲಾಗುತ್ತಿದೆ. 2009ರಲ್ಲಿ ಬಿಜೆಪಿ ಹಾಗೂ ಬಿಜೆಡಿ ನಡುವೆ ವೈರತ್ವ ಮೂಡುವ ಮೊದಲು 9 ವರ್ಷಗಳ ಕಾಲ ಈ ಎರಡು ಪಕ್ಷಗಳು ಮೈತ್ರಿಯಾಗಿ ಸರ್ಕಾರ ನಡೆಸಿದ್ದವು. 2009ರ ನಂತರ ಪ್ರತಿ ಚುನಾವಣೆಯಲ್ಲೂ ಬಿಜೆಡಿ ಹಾಗೂ ಬಿಜೆಪಿ ನಡುವಿನ ವೈರತ್ವ ಎದ್ದು ಕಾಣುತ್ತಿತ್ತು. ಅದಾಗ್ಯೂ 2019ರ ಚುನಾವಣೆ ಫಲಿತಾಂಶ ಪ್ರಕಟವಾಗಿದಿನಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಹಲವು ಸಾರ್ವಜನಿಕ ಸಭೆಗಳಲ್ಲಿ ಒಂದಾಗಿ ಕಾಣಿಸಿದ್ದರು. ಇದರಿಂದ ಎರಡೂ ಪಕ್ಷದ ಹಿರಿಯ ನಾಯಕರು ಬಿಜೆಪಿ ಹಾಗೂ ಬಿಜೆಡಿ ಮೈತ್ರಿಗೆ ಪ್ರಯತ್ನಿಸಿದ್ದರು. ಆದರೆ 2024ರ ಚುನಾವಣೆಯಲ್ಲಿ ಈ ದೋಸ್ತಿಗೆ ವೇದಿಕೆಯೇ ಸಿಗಲಿಲ್ಲ.

ಒಂದೂವರೆ ದಶಕಗಳ ಬಿರುಕಿನ ನಂತರವೂ ಎರಡೂ ಕಡೆಯಿಂದ ಮುನಿಸು ಮರೆತು ಒಂದಾಗಲು ಕಾರ್ಯಕರ್ತರು ಸಿದ್ಧರಿಲ್ಲದ ಕಾರಣ ಮಾತುಕತೆ ವಿಫಲವಾಯಿತು. ಸಂಧಾನಕಾರರು ಸಹ ಸೀಟುಗಳ ಸಂಖ್ಯೆಯಲ್ಲಿ ಪರಸ್ಪರರ ಬೇಡಿಕೆಗಳನ್ನು ಸರಿಹೊಂದಿಸಲು ಕಷ್ಟಪಟ್ಟರು. ಕೆಲವು ಸಂದರ್ಭಗಳಲ್ಲಿ ಎರಡೂ ಕಡೆಯವರು ಸ್ಪರ್ಧಿಸಲು ಬಯಸಿದ ನಿರ್ದಿಷ್ಟ ಸ್ಥಾನಗಳ ಮೇಲೆ ತೀವ್ರ ಭಿನ್ನಾಭಿಪ್ರಾಯಗಳಿದ್ದವು.

ಎರಡೂ ಕಡೆಯವರು ಪ್ರತಿಸ್ಪರ್ಧಿಗಳಾಗಿ ಪರಸ್ಪರ ಎದುರಿಸಲು ಸಜ್ಜಾದಾಗ, ಇವರ ನಡುವೆ ಹೊಂದಾಣಿಕೆ ಮಾಡುವುದು ಕಷ್ಟವಾಯಿತು. ಆದರೆ ಎರಡೂ ಪಕ್ಷಗಳ ಹಿರಿಯ ನಾಯಕರು ಈ ಬಗ್ಗೆ ಹಿಂದಿನಂತೆ ಪರಸ್ಪರ ದಾಳಿ ಮಾಡುವುದನ್ನು ತಪ್ಪಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಈ ಬಾರಿ ದೇಶದಲ್ಲಿ ಮೂರನೇ ಬಾರಿಗೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಬಗ್ಗೆ ಕೇಸರಿಪಾಳೆಯದಲ್ಲಿ ವಿಶ್ವಾಸವಿದ್ದರೂ ಕೂಡ ಚುನಾವಣೋತ್ತರ ಸನ್ನಿವೇಶದಲ್ಲಿ ಬಿಜೆಡಿಗೆ ಬಿಜೆಪಿಯ ಬೆಂಬಲದ ಅಗತ್ಯವಿದೆ ಎಂದು ಊಹಾಪೋಹಗಳು ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ಪಟ್ನಾಯಕ್‌ ಕುರಿತು ಮೋದಿ ನೇರ ಆರೋಪ; ಊಹಾಪೋಹಗಳಿಗೆ ತೆರೆ

ಇತ್ತೀಚೆಗೆ ಸುದ್ದಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನವೀನ್‌ ಪಟ್ನಾಯಕ್‌ ನೇತೃತ್ವ ಬಿಜೆಡಿ ಸರ್ಕಾರ ವಿರುದ್ಧ ಮೊದಲ ಬಾರಿಗೆ ನೇರ ವಾಗ್ದಾಳಿ ನಡೆಸಿದ್ದರು. ಆ ಮೂಲಕ ಬಿಜೆಪಿ ಮತ್ತು ಬಿಜೆಡಿ ನಡುವೆ ಮೈತ್ರಿ ಸರ್ಕಾರ ಉಂಟಾಗಬಹುದು ಎಂಬ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. 2019ರಲ್ಲಿ ಒಡಿಶಾದಲ್ಲಿ ನಡೆದ ಚುನಾವಣಾ ರ‍್ಯಾಲಿಗಳಲ್ಲೂ ಮೋದಿ ಬಿಜೆಡಿ ಸರ್ಕಾರವನ್ನು ಟೀಕಿಸುತ್ತಿರಲಿಲ್ಲ. ಆದರೆ ಈ ಬಾರಿ ಒಡಿಯಾ ಭಾಷೆಯ ಅಸ್ಮಿತೆಯ ಬಗ್ಗೆ ಮಾತನಾಡಿದ್ದರು. ಒಡಿಯಾ ಭಾಷೆ ಅಪಾಯದಲ್ಲಿದೆ ಎಂದು ಕಟುವಾಗಿ ಟೀಕಿಸಿದ್ದರು. ಈ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತಹ ಹಿರಿಯ ಬಿಜೆಪಿ ನಾಯಕರು ಕೂಡ ಒಡಿಶಾದಲ್ಲಿ ತಮ್ಮ ಇತ್ತೀಚಿನ ಪ್ರಚಾರ ಸಭೆಗಳಲ್ಲಿ ಪಟ್ನಾಯಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದನ್ನು ಗಮನಿಸಬಹುದು.

ಆದರೆ ಬಿಜೆಪಿ ಆರೋಪಗಳಿಗೆ ಸೊಪ್ಪ ಹಾಕದ ಬಿಜೆಡಿ ನಾಯಕ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಗಂಜಾಂ ಜಿಲ್ಲೆಯ ತಮ್ಮ ಸಾಂಪ್ರದಾಯಿಕ ವಿಧಾನಸಭಾ ಕ್ಷೇತ್ರವಾದ ಹಿಂಜಿಲಿಯಿಂದ ತಮ್ಮ ಪಕ್ಷದ ಪ್ರಚಾರವನ್ನು ಪ್ರಾರಂಭಿಸುವಾಗ ಸ್ಪರ್ಧೆಯ ತೀವ್ರ ಸ್ವರೂಪದ ಬಗ್ಗೆ ಸೂಕ್ಷ್ಮವಾಗಿ ತಿಳಿದಿದ್ದಾರೆ. ಪ್ರತಿಸ್ಪರ್ಧಿಗಳ ಮೇಲೆ ನೇರ ದಾಳಿ ನಡೆಸಿದ್ದಾರೆ. 2036 ರಲ್ಲಿ ಒಡಿಶಾ ರಾಜ್ಯವು ರಚನೆಯ ಶತಮಾನೋತ್ಸವವನ್ನು ಆಚರಿಸುತ್ತಿರುವಾಗ ಒಡಿಶಾವನ್ನು ನಂಬರ್ ಒನ್ ರಾಜ್ಯವನ್ನಾಗಿ ಮಾಡಲು ಮತ ಚಲಾಯಿಸುವಂತೆ ಜನರಿಗೆ ಕರೆ ನೀಡಿರುವ 76 ವರ್ಷದ ಪಟ್ನಾಯಕ್, ರಾಜ್ಯದ ಅಭಿವೃದ್ಧಿಯ ಹಾದಿಯನ್ನು ತಡೆಯಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ. "ಆದರೆ ಅಭಿವೃದ್ಧಿ ಕಾರ್ಯಗಳನ್ನು ವಿರೋಧಿಸುವಲ್ಲಿ ಯಾರೂ ಯಶಸ್ವಿಯಾಗಲಿಲ್ಲ ಮತ್ತು ಅವರು ಈ ಬಾರಿಯೂ ಯಶಸ್ವಿಯಾಗುವುದಿಲ್ಲ" ಎಂದು ಹೇಳಿದ್ದಾರೆ. ಯಾವಾಗಲೂ ತಮ್ಮ ಮುಖ್ಯ ಅಜೆಂಡಾ ಅಭಿವೃದ್ಧಿಯಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಮತ್ತು ಲೋಕಸಭೆಯ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವುದು ಬಿಜೆಡಿಯ ಪ್ರಮುಖ ಉದ್ದೇಶವಾಗಿದೆ. 2019ರಲ್ಲಿ 21 ಲೋಕಸಭಾ ಕ್ಷೇತ್ರಗಳಲ್ಲಿ 12 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಎಂಟರಲ್ಲಿ ಸೋಲು ಕಂಡಿತ್ತು. ಬಿಜೆಪಿ ಇಲ್ಲಿನ ಲೋಕ ಕದನ ಗೆಲ್ಲೋಕೆ ನಾನಾ ರೀತಿಯ ಕಸರತ್ತು ಪ್ರಯೋಗಗಳನ್ನು ಮಾಡಿದೆ. 2019 ರಲ್ಲಿ ಪಶ್ಚಿಮ ಒಡಿಶಾದ ಎಲ್ಲಾ ಐದು ಸ್ಥಾನಗಳನ್ನು ಒಳಗೊಂಡಂತೆ ಎಂಟು ಸ್ಥಾನಗಳನ್ನು ಗೆದ್ದಾಗ ಪಕ್ಷದ ಲೋಕಸಭಾ ಕಾರ್ಯಕ್ಷಮತೆಯಿಂದ ಉತ್ತೇಜಿತರಾದ ಬಿಜೆಪಿ ನಾಯಕರು ಈ ಬಾರಿ ಪಕ್ಷವು ತನ್ನ ಲೋಕಸಭಾ ಸಂಖ್ಯೆಯನ್ನು 15 ದಾಟಬಹುದು ಎಂದು ಭಾವಿಸಿದ್ದಾರೆ. ಅಂತಿಮವಾಗಿ ಯಾರಿಗೆ ಎಷ್ಟು ಸ್ಥಾನಗಳ ಸಿಗಲಿವೆ ಅನ್ನೋದು ಜೂನ್ 4ರ ಫಲಿತಾಂಶದಲ್ಲಿ ಸ್ಪಷ್ಟವಾಗಲಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner