Pralhad Joshi: ರಾಜಸ್ತಾನ ವಿಧಾನಸಭೆ ಚುನಾವಣೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಿಜೆಪಿ ಉಸ್ತುವಾರಿ ಹೊಣೆ
ಲೋಕಸಭೆ ಚುನಾವಣೆಗೂ ಮುನ್ನ ನಡೆಯಲಿರುವ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಬಿಜೆಪಿ ಉಸ್ತುವಾರಿಗಳನ್ನು ನೇಮಿಸಿದೆ. ಕರ್ನಾಟಕದವರಾದ ಕೇಂದ್ರ ಸಚಿವ ಪಲ್ಹಾದ ಜೋಶಿ ಅವರಿಗೆ ರಾಜಸ್ತಾನ ಚುನಾವಣೆ ಬಿಜೆಪಿ ಉಸ್ತುವಾರಿ ವಹಿಸಲಾಗಿದೆ. ಯಾರನ್ನು ಉಸ್ತುವಾರಿಗಳಾಗಿ ನೇಮಿಸಲಾಗಿದೆ ಎನ್ನುವ ಮಾಹಿತಿ ಇಲ್ಲಿದೆ..
ದೆಹಲಿ/ಹುಬ್ಬಳ್ಳಿ: ವರ್ಷಾಂತ್ಯದೊಳಗೆ ನಡೆಯಲಿರುವ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳಿಗೆ ಬಿಜೆಪಿ ಉಸ್ತುವಾರಿಗಳನ್ನು ನಿಯೋಜಿಸಲಾಗಿದ್ದು, ಕೇಂದ್ರ ಸಚಿವ ಹಾಗೂ ಕರ್ನಾಟಕ ಬಿಜೆಪಿ ಮಾಜಿ ಅಧ್ಯಕ್ಷ ಪ್ರಲ್ಹಾದ ಜೋಶಿ ಅವರನ್ನು ರಾಜಸ್ತಾನ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನೇತೃತ್ವದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಚುನಾವಣೆ ನಿಗದಿಯಾಗಿರುವ ರಾಜಸ್ತಾನ, ಮಧ್ಯಪ್ರದೇಶ, ತೆಲಂಗಾಣ ಹಾಗೂ ಛತ್ತೀಸಗಡ ರಾಜ್ಯಗಳ ಉಸ್ತುವಾರಿಯನ್ನು ನೇಮಿಸಲಾಗಿದೆ. ಈ ಮೂಲಕ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಚುನಾವಣೆ ಎದುರಿಸಲು ಈಗಿನಿಂದಲೇ ಸಿದ್ದತೆ ಶುರು ಮಾಡಿದೆ.
ಪ್ರಲ್ಹಾದ ಜೋಶಿ ಅವರೊಂದಿಗೆ ರಾಜಸ್ತಾನದಲ್ಲಿ ಗುಜರಾತ್‌ನ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಹರಿಯಾಣದ ನಾಯಕ ಕುಲದೀಪ್ ಬಿಷ್ಣೋಯ್ ಅವರ ಸಹ ಉಸ್ತುವಾರಿಗಳಾಗಿ ನಿಯೋಜಿಸಲಾಗಿದೆ.
ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರನ್ನು ಮಧ್ಯ ಪ್ರದೇಶ ರಾಜ್ಯ ಉಸ್ತುವಾರಿಯಾಗಿ, ಮತ್ತೊಬ್ಬ ಕೇಂದ್ರ ಸಚಿವ ಮನ್‌ಸುಖ್ ಮಾಂಡವೀಯ ಅವರನ್ನು ಉಪ ಉಸ್ತುವಾರಿಯಾಗಿ ನೇಮಿಸಲಾಗಿದೆ.
ತೆಲಂಗಾಣ ಉಸ್ತುವಾರಿಯಾಗಿ ಕೇಂದ್ರದ ಮಾಜಿ ಸಚಿವ ಪ್ರಕಾಶ್ ಜಾವಡೇಕರ್, ಹಿರಿಯ ನಾಯಕ ಓಂಪ್ರಕಾಶ್ ಮಾಥೂರ್ ಅವರನ್ನು ಛತ್ತೀಸಗಢ ಉಸ್ತುವಾರಿಯಾಗಿ ಬಿಜೆಪಿ ಹೆಸರಿಸಿದೆ.
ನಾಲ್ಕು ಬಾರಿ ಸಂಸದರಾಗಿ ಕೇಂದ್ರದಲ್ಲಿ ಸದ್ಯ ಗಣಿ ಮತ್ತು ಕಲ್ಲಿದ್ದಲು, ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಪ್ರಲ್ಹಾದ ಜೋಶಿ ಅವರನ್ನು ವರ್ಷದ ಹಿಂದೆ ನಡೆದ ಉತ್ತರಾಖಂಡ ಚುನಾವಣೆ ಉಸ್ತುವಾರಿಯನ್ನಾಗಿ ಪಕ್ಷ ನೇಮಿಸಿತ್ತು.ಅಲ್ಲಿ ಪಕ್ಷ ಮರಳಿ ಅಧಿಕಾರಕ್ಕೆ ಬಂದಿತ್ತು. ಎರಡು ತಿಂಗಳ ಹಿಂದೆ ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ಪ್ರಲ್ಹಾದ ಜೋಶಿ ನೀತಿ ನಿರೂಪಣೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವಿಭಾಗ