ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭೆ ಚುನಾವಣೆ 2024; ಫಲಿತಾಂಶಕ್ಕೆ ಸಂಬಂಧಿಸಿ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ 10 ಭವಿಷ್ಯ ನುಡಿಗಳು

ಲೋಕಸಭೆ ಚುನಾವಣೆ 2024; ಫಲಿತಾಂಶಕ್ಕೆ ಸಂಬಂಧಿಸಿ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ 10 ಭವಿಷ್ಯ ನುಡಿಗಳು

ಲೋಕಸಭಾ ಚುನಾವಣೆ 2024ರ 6ನೇ ಹಂತದ ಮತದಾನ ಇಂದು (ಮೇ 25) ನಡೆಯುತ್ತಿದೆ. ಈ ನಡುವೆ, ಲೋಕಸಭೆ ಚುನಾವಣೆ ಫಲಿತಾಂಶ ಕುರಿತು ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್‌ರ 10 ಭವಿಷ್ಯ ನುಡಿಗಳು ಗಮನಸೆಳೆದಿವೆ. ಆ ವಿವರ ಇಲ್ಲಿದೆ.

ಲೋಕಸಭೆ ಚುನಾವಣೆ 2024; ಫಲಿತಾಂಶಕ್ಕೆ ಸಂಬಂಧಿಸಿ  ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ 10 ಭವಿಷ್ಯ ನುಡಿಗಳು
ಲೋಕಸಭೆ ಚುನಾವಣೆ 2024; ಫಲಿತಾಂಶಕ್ಕೆ ಸಂಬಂಧಿಸಿ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ 10 ಭವಿಷ್ಯ ನುಡಿಗಳು

ಬೆಂಗಳೂರು/ನವದೆಹಲಿ: ಲೋಕಸಭಾ ಚುನಾವಣೆ 2024 ಅಂತಿಮ ಹಂತದ ಕಡೆಗೆ ದಾಪುಗಾಲಿರಿಸಿದ್ದು, 6ನೇ ಹಂತದ ಮತದಾನ ನಾಳೆ (ಮೇ 25) ನಡೆಯಲಿದೆ, ಜೂನ್ 1 ಕ್ಕೆ ಅಂತಿಮ ಹಂತದ ಮತದಾನ ಮುಗಿಯುತ್ತಿದ್ದಂತೆ ಎಕ್ಸಿಟ್ ಪೋಲ್ ಅಥವಾ ಚುನಾವಣೋತ್ತರ ಸಮೀಕ್ಷೆಗಳು ಒಂದೊಂದಾಗಿ ಪ್ರಕಟವಾಗಲಿವೆ.

ಟ್ರೆಂಡಿಂಗ್​ ಸುದ್ದಿ

ಎರಡು ಅವಧಿಗೆ ಬಹುಮತದೊಂದಿಗೆ ಆಡಳಿತ ನಡೆಸಿದ ಬಿಜೆಪಿ ತನ್ನ ಎನ್‌ಡಿಎ ಮೈತ್ರಿಕೂಟವನ್ನೂ ಜೊತೆಗೆ ಉಳಿಸಿಕೊಂಡೇ ಈ ಸಲದ ಚುನಾವಣೆಯನ್ನು ಎದುರಿಸಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರಸ್ ತನ್ನ ಹಿಂದಿನ ಯುಪಿಎ ಮೈತ್ರಿ ಕೂಟ ಬಿಟ್ಟು, ಹೊಸದೇ ಆದ ಇಂಡಿಯಾ ಬ್ಲಾಕ್ ಅನ್ನು ರಚಿಸಿಕೊಂಡು ಚುನಾವಣೆ ಎದುರಿಸಿದೆ. ಇದಲ್ಲದೆ, ಈ ಎರಡೂ ಮೈತ್ರಿ ಹೊರತುಪಡಿಸಿ ಹಾಗೆಯೇ ಚುನಾವಣೆ ಎದುರಿಸಿದ ಪಕ್ಷಗಳೂ ಇವೆ.

ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶವನ್ನು ಈಗ ಪ್ರಕಟಿಸುವಂತೆ ಇಲ್ಲ. ಚುನಾವಣಾ ಆಯೋಗ ನಿಗದಿಪಡಿಸಿದ ವೇಳಾಪಟ್ಟಿ ಪ್ರಕಾರ, ಜೂನ್ 1 ರಂದು ಅಂತಿಮ ಹಂತದ ಮತದಾನ ಪೂರ್ಣಗೊಂಡು ಒಂದು ಗಂಟೆಯ ಬಳಿಕ ಚುನಾವಣೋತ್ತ ಸಮೀಕ್ಷೆ (ಎಕ್ಸಿಟ್ ಪೋಲ್‌) ಫಲಿತಾಂಶ ಪ್ರಕಟವಾಗಲಿದೆ. ಈ ನಡುವೆ, ಹಲವು ರಾಜಕೀಯ ನಿಪುಣರು ತಮ್ಮದೇ ಆದ ಲೆಕ್ಕಾಚಾರಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ.

ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಲೆಕ್ಕಚಾರ

ಬಿಜೆಪಿ ಮತ್ತು ಮಿತ್ರ ಪಕ್ಷಗಳು, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು, ಇವರಡನ್ನೂ ಹೊರತುಪಡಿಸಿದ ಪಕ್ಷಗಳು ತಮ್ಮದೇ ಲೆಕ್ಕಾಚಾರದಲ್ಲಿ ತಮ್ಮ ಸ್ಥಾನಗಳನ್ನು ಗೆಲ್ಲುವ ವಿಶ್ವಾಸದೊಂದಿಗೆ ಮುನ್ನಡೆಯುತ್ತಿವೆ. ಈ ನಡುವೆ, ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್‌, ತಮ್ಮದೇ ಲೆಕ್ಕಾಚಾರದೊಂದಿಗೆ ಈ ಸಲದ ಚುನಾವಣಾ ಗೆಲುವು ಯಾರಿಗೆ ಎಂಬುದನ್ನು ವಿವರಿಸಿದ್ದಾರೆ.

ಪ್ರಶಾಂತ್ ಕಿಶೋರ್ ಅವರು ತಮ್ಮ ಆಶ್ಚರ್ಯಕರ ಪ್ರಕ್ಷೇಪಣಗಳನ್ನು ವಿವರಿಸಿದ್ದು, ಇದು ರಾಜಕೀಯ ವಲಯಗಳಲ್ಲಿ ಸಂಚಲನ ಮೂಡಿಸಿದೆ. ಈ ಸಾಧ್ಯತೆಗಳ ಪ್ರಕಾರ ಜೂನ್ 4 ರಂದು ಬಿಜೆಪಿಯೇ ಆಡಳಿತ ಮುಂದುವರಿಸಲಿದೆ.

ಲೋಕಸಭಾ ಚುನಾವಣೆ ಫಲಿತಾಂಶ; ಪ್ರಶಾಂತ್ ಕಿಶೋರ್ ಅವರ 10 ಭವಿಷ್ಯ ನುಡಿ

1) ಆಡಳಿತ ಚುಕ್ಕಾಣಿ ಮೇಲಿನ ಬಿಜೆಪಿಯ ಹಿಡಿತ ಬಿಗಿ

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಪ್ರಶಾಂತ್ ಕಿಶೋರ್ ತಮ್ಮ ಇತ್ತೀಚಿನ ಸಂದರ್ಶನದಲ್ಲಿ ಬಲವಾದ ನಂಬಿಕೆಯೊಂದಿಗೆ ಪ್ರತಿಪಾದಿಸಿದ್ದಾರೆ. ಆದರೆ, ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ 400 ಸ್ಥಾನಗಳನ್ನು ಗಳಿಸುವ ಕಲ್ಪನೆಯನ್ನು ಅವರು "ಮಾನಸಿಕ" ತಂತ್ರ ಎಂದು ತಳ್ಳಿಹಾಕಿದ್ದರು. ಜೂನ್ 4 ರಂದು ಪ್ರಧಾನಿ ನರೇಂದ್ರ ಮೋದಿ ಮತ್ತೆ ಆಡಳಿತ ಚುಕ್ಕಾಣಿ ಹಿಡಿಯುತ್ತಾರೆ ಎಂದು ಹೇಳಿರುವ ಅವರು, 2019 ರ ಅದೇ ಫಲಿತಾಂಶ ಬರಬಹುದು ಅಥವಾ ಸ್ವಲ್ಪ ಸುಧಾರಿಸಬಹುದು. 2019 ರಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಅದೇ ರೀತಿ, 2014 ರಲ್ಲಿ 282 ಸ್ಥಾನಗಳನ್ನು ಗಳಿಸಿತ್ತು.

2) ಮೋದಿ ಜನಪ್ರಿಯತೆಯಲ್ಲಿ ಕುಸಿತ

ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ಕುಸಿತವನ್ನು ಕಿಶೋರ್ ಪ್ರಸ್ತಾಪಿಸಿದ್ದು, ಹಿಂದುತ್ವದ ನಾಯಕ ಮತ್ತು ರಾಜಕಾರಣಿ ಎಂಬ ರೀತಿಯಲ್ಲಿ ನರೇಂದ್ರ ಮೋದಿ ಅವರನ್ನು ಬಹಳ ಎಚ್ಚರಿಕೆಯಿಂದ ಇಮೇಜ್ ರೂಪಿಸಲಾಗಿತ್ತು. ಆದರೆ, ಎರಡು ಅವಧಿಯ ಆಡಳಿತ ಬಳಿಕದ ಈ ಚಿತ್ರಣವೂ ಬದಲಾಗಿದೆ. ಈ ಬೆಳವಣಿಗೆಯ ಬಗ್ಗೆ ಪ್ರಧಾನಿ ಮೋದಿಗೆ ಅರಿವಿದೆ ಎಂಬ ನಂಬಿಕೆ ಇದೆ ಎಂದು ಅಭಿಪ್ರಾಯಪಟ್ಟರು.

3) ಬಿಜೆಪಿಗೆ ಸಾರ್ವಜನಿಕ ಅಸಮಾಧಾನವೇ ದೊಡ್ಡ ಸವಾಲು

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಾರ್ವಜನಿಕ ಭಿನ್ನಾಭಿಪ್ರಾಯ, ಅಸಮಾಧಾನವೇ ಪ್ರಮುಖ ಸವಾಲು. ಗ್ರಾಮೀಣ ಸಂಕಷ್ಟ, ಹೆಚ್ಚುತ್ತಿರುವ ಅಸಮಾನತೆಗಳು ಮತ್ತು ನಿರುದ್ಯೋಗ ಕೂಡ ಕೆಲವು ಗಂಭೀರ ಸವಾಲುಗಳು ಎಂದು ಪ್ರಶಾಂತ್ ಕಿಶೋರ್ ಗುರುತಿಸಿದ್ದಾರೆ. "60 ಕೋಟಿಗೂ ಹೆಚ್ಚು ಜನರು ದಿನಕ್ಕೆ 100 ರೂಪಾಯಿಗಿಂತ ಹೆಚ್ಚು ಸಂಪಾದಿಸದ ದೇಶದಲ್ಲಿ, ಸರ್ಕಾರದ ವಿರುದ್ಧದ ವಿರೋಧವನ್ನು ಎಂದಿಗೂ ದುರ್ಬಲಗೊಳಿಸಲಾಗುವುದಿಲ್ಲ. ಎಂದಿಗೂ ಆ ತಪ್ಪನ್ನು ಮಾಡಬೇಡಿ," ಎಂದು ಪ್ರಶಾಂತ್ ಕಿಶೋರ್‌ ಹೇಳಿದ್ದಾರೆ.

4) ಉತ್ತರ ಮತ್ತು ಪಶ್ಚಿಮದಲ್ಲಿ ಬಿಜೆಪಿಯ ಪ್ರಾಬಲ್ಯ

ಬಿಜೆಪಿ ತನ್ನ ಭದ್ರಕೋಟೆಯಾಗಿರುವ ಉತ್ತರ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ಯಾವುದೇ ಗಣನೀಯ ಕುಸಿತವನ್ನು ಎದುರಿಸುವುದಿಲ್ಲ ಎಂದು ಪ್ರಶಾಂತ್ ಕಿಶೋರ್‌ ಭವಿಷ್ಯ ನುಡಿದಿದ್ದಾರೆ. ಈ ಪ್ರದೇಶಗಳಲ್ಲಿ 100 ಸ್ಥಾನಗಳನ್ನು ಕಳೆದುಕೊಂಡರಷ್ಟೇ ಬಿಜೆಪಿಗೆ ಅಧಿಕಾರ ನಷ್ಟವಾಗಲಿದೆ. ಸದ್ಯ ಅಂತಹ ಪರಿಸ್ಥಿತಿ ಇಲ್ಲ ಎಂದು ಕಿಶೋರ್ ಹೇಳಿದರು.

5) ದಕ್ಷಿಣ ಮತ್ತು ಪೂರ್ವದಲ್ಲಿ ಪ್ರಭಾವ ಹೆಚ್ಚಳ

ಪೂರ್ವ ಮತ್ತು ದಕ್ಷಿಣದಲ್ಲಿ ಬಿಜೆಪಿಗೆ ಹೆಚ್ಚಿನ ಲಾಭವಿಲ್ಲ. ಆದಾಗ್ಯೂ ಈ ಭಾಗದಲ್ಲಿ ಬಿಜೆಪಿ ತನ್ನ ಪ್ರಯತ್ನದ ಫಲವಾಗಿ ಪಕ್ಷದ ಮತಗಳಿಕೆ ಮತ್ತು ಸ್ಥಾನಗಳಿಕೆ ಎರಡೂ ಹೆಚ್ಚಾಗಲಿದೆ. ಇಲ್ಲಿ ಪಕ್ಷ ವಿಸ್ತರಣೆಗೆ ವಿಪಕ್ಷಗಳು ಹೆಚ್ಚಿನ ಪ್ರಯತ್ನ ಮಾಡಿಲ್ಲ.

6) ಒಡಿಶಾ ಮತ್ತು ಅದರಾಚೆಗೆ ಬಿಜೆಪಿಯ ಯಶಸ್ಸು

ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಖಚಿತವಾದ ಗೆಲುವು ಸಿಗಲಿದೆ ಎಂದು ಭವಿಷ್ಯ ನುಡಿದಿರುವ ಪ್ರಶಾಂತ್ ಕಿಶೋರ್, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಂಬರ್ ಒನ್ ಪಕ್ಷವಾಗಬಹುದೆಂದು ಹೇಳಿದರು. ತಮಿಳುನಾಡಿನಲ್ಲಿ ಬಿಜೆಪಿಯ ಹೆಚ್ಚುತ್ತಿರುವ ಮತಗಳ ಪ್ರಮಾಣ ಮತ್ತು ತೆಲಂಗಾಣದಲ್ಲಿ ಮೊದಲ ಅಥವಾ ಎರಡನೇ ಪಕ್ಷವಾಗುವ ಸಾಧ್ಯತೆ ಇದೆ ಎಂದರು.

7) ಜಗನ್ ಮೋಹನ್ ರೆಡ್ಡಿಗೆ ಹೆಚ್ಚು ಸವಾಲುಗಳು

ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಮತ್ತೆ ಅಧಿಕಾರಕ್ಕೆ ಬರುವುದು "ಬಹಳ ಕಷ್ಟ" ಎಂದು ಕಿಶೋರ್ ಹೇಳಿದರು. 2019 ರಲ್ಲಿ ಅವರ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಚುನಾವಣೆಯಲ್ಲಿ ಗೆದ್ದಾಗ ಕಿಶೋರ್ ರೆಡ್ಡಿ ಪರ ಕೆಲಸ ಮಾಡಿದ್ದರು.

8) ಅವಕಾಶ ಕೈಚೆಲ್ಲಿದ ವಿಪಕ್ಷಗಳು

ಬಿಜೆಪಿಗೆ ಸಿಕ್ಕ ವಿಜಯ ಅಥವಾ ಗೆಲುವು ಅದರ ಅಸಾಧಾರಣ ಕಾರ್ಯಸಾಧನೆಯಿಂದ ಸಿಕ್ಕವು ಅಲ್ಲ. ಆ ಗೆಲುವುಗಳೆಲ್ಲವೂ ವಿಪಕ್ಷಗಳು ಕೈಚೆಲ್ಲಿದ ಅವಕಾಶಗಳು ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.

9) ರಾಹುಲ್ ಗಾಂಧಿಯವರ ರಾಯ್‌ಬರೇಲಿ ನಿರ್ಧಾರ

ಅಮೇಥಿ ಬದಲಿಗೆ ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ಸ್ಪರ್ಧಿಸುವ ರಾಹುಲ್ ಗಾಂಧಿಯವರ ನಿರ್ಧಾರವನ್ನು ಪ್ರಶಾಂತ್‌ ಕಿಶೋರ್ ಟೀಕಿಸಿದರು. ಇದು ಯಾವುದೇ ಕಾರ್ಯತಂತ್ರದ ಅರ್ಥವನ್ನು ಹೊಂದಿಲ್ಲ. ಈ ಕ್ರಮವು ಗಾಂಧಿಯವರ ಮತದಾರರನ್ನು "ಹೆಚ್ಚು ನಿರಾಶೆಗೊಳಿಸುತ್ತದೆ" ಎಂಬುದು ಪ್ರಶಾಂತ್ ಕಿಶೋರ್ ಅವರ ಅಭಿಪ್ರಾಯ.

10) ವಿರೋಧ ಪಕ್ಷದ ಮೈತ್ರಿಗೆ ಬಲ ಸಾಲದು

ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳಿಗೆ ವಿಶೇಷವಾಗಿ ಇರುವುದು ಐದು ಪಕ್ಷಗಳು. ಕಾಂಗ್ರೆಸ್, ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ, ಮತ್ತು ಮಹಾರಾಷ್ಟ್ರದಲ್ಲಿ ಎನ್‌ಸಿಪಿ-ಶಿವಸೇನೆ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಶೇಕಡ 30 ಸ್ಟ್ರೈಕ್ ರೇಟ್ ಅಗತ್ಯವಿದೆ ಎಂದು ಕಿಶೋರ್ ಹೇಳಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)