ಲೋಕಸಭೆ ಚುನಾವಣೆ 2024: ಉತ್ತರ ಮತ್ತು ದಕ್ಷಿಣ ಭಾರತದ ವ್ಯತ್ಯಾಸ, ಅಸಮಾನತೆಗಳೂ ಚರ್ಚೆಯ ವಿಷಯ -ಗಿರೀಶ್ ಲಿಂಗಣ್ಣ ಬರಹ
ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭೆ ಚುನಾವಣೆ 2024: ಉತ್ತರ ಮತ್ತು ದಕ್ಷಿಣ ಭಾರತದ ವ್ಯತ್ಯಾಸ, ಅಸಮಾನತೆಗಳೂ ಚರ್ಚೆಯ ವಿಷಯ -ಗಿರೀಶ್ ಲಿಂಗಣ್ಣ ಬರಹ

ಲೋಕಸಭೆ ಚುನಾವಣೆ 2024: ಉತ್ತರ ಮತ್ತು ದಕ್ಷಿಣ ಭಾರತದ ವ್ಯತ್ಯಾಸ, ಅಸಮಾನತೆಗಳೂ ಚರ್ಚೆಯ ವಿಷಯ -ಗಿರೀಶ್ ಲಿಂಗಣ್ಣ ಬರಹ

Lok Sabha Election 2024: ಎಪ್ರಿಲ್ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದಕ್ಷಿಣ ಮತ್ತು ಉತ್ತರ ಭಾರತಗಳ ನಡುವಿನ ವ್ಯತ್ಯಾಸಗಳೇ ಪ್ರಮುಖ ಚರ್ಚೆಯ ವಿಚಾರವಾಗುವ ನಿರೀಕ್ಷೆಗಳಿವೆ. ಈ ಕುರಿತು ಲೇಖಕರು, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರೂ ಆದ ಗಿರೀಶ್ ಲಿಂಗಣ್ಣ ಅವರ ಬರಹ ಇಲ್ಲಿದೆ.

ಲೇಖಕ ಗಿರೀಶ್ ಲಿಂಗಣ್ಣ (ಎಡಚಿತ್ರ)
ಲೇಖಕ ಗಿರೀಶ್ ಲಿಂಗಣ್ಣ (ಎಡಚಿತ್ರ)

ಭಾರತದ ಆರ್ಥಿಕತೆ ಅತ್ಯಂತ ಕ್ಷಿಪ್ರವಾಗಿ ಪ್ರಗತಿ ಕಾಣುತ್ತಿದ್ದು, ಇದರಿಂದಾಗಿ ಭಾರತ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಭಾರತದ ಷೇರು ಮಾರುಕಟ್ಟೆಯೂ ಸಹ ಅಪಾರವಾಗಿ ವೃದ್ಧಿಸುತ್ತಿದ್ದು, ಜಾಗತಿಕವಾಗಿ ನಾಲ್ಕನೇ ಸ್ಥಾನ ಹೊಂದಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಜಾಗತಿಕವಾಗಿ ಅತ್ಯಂತ ಪ್ರಭಾವಿ ನಾಯಕರೆಂದು ಹೆಸರಾಗಿದ್ದಾರೆ. ಆರ್ಥಿಕತೆಯ ಮೇಲೆ ಗಮನ ಹರಿಸುವುದರ ಜೊತೆಗೆ, ಮೋದಿಯವರು ಹಿಂದೂ ಸಂಸ್ಕೃತಿಗೆ ಸಂಬಂಧಿಸಿದ ವಿಚಾರಗಳನ್ನು ಪ್ರಚುರಪಡಿಸುತ್ತಿದ್ದಾರೆ. ಮೋದಿಯವರ ನೀತಿಗಳು ಜನರಿಗೆ ತಾವು ಭಾರತೀಯರು, ಹಿಂದೂಗಳು ಎನ್ನಲು ಬಹಳಷ್ಟು ಹೆಮ್ಮೆ ತರಬಹುದು. ಆದರೆ, ಅದರ ಜೊತೆಗೇ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ಮತ್ತು ತನ್ನ ಆಡಳಿತದಲ್ಲಿ ಇನ್ನಷ್ಟು ಕಟ್ಟುನಿಟ್ಟು ತರಲು ಸಾಧ್ಯವಾಗುತ್ತದೆ.

ಭಾರತದ ಆಧುನಿಕವಾದ, ತನ್ನ ನೂತನ ಉದ್ಯಮಗಳು, ತಂತ್ರಜ್ಞಾನ ಕೇಂದ್ರಗಳು, ಮತ್ತು ಆಧುನಿಕ ಐಫೋನ್ ತಯಾರಿಕಾ ಕಾರ್ಖಾನೆಗಳನ್ನು ಹೊಂದಿರುವ ಭಾಗ ಭಾರತದ ದಕ್ಷಿಣ ಭಾಗದಲ್ಲಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ಪಕ್ಷಕ್ಕೆ ದಕ್ಷಿಣ ಭಾಗದಿಂದ ಹೆಚ್ಚಿನ ಬೆಂಬಲವೇನೂ ಲಭಿಸುತ್ತಿಲ್ಲ. ದಕ್ಷಿಣ ಭಾರತದ ಬದಲಿಗೆ, ಮೋದಿಯವರ ಪಕ್ಷ ತನ್ನ ಮತಗಳಿಗಾಗಿ ಕಡಿಮೆ ಶ್ರೀಮಂತವಾದ, ಹೆಚ್ಚಿನ ಜನಸಂದಣಿ ಹೊಂದಿರುವ, ಹಿಂದಿ ಭಾಷಿಕ ಉತ್ತರ ಭಾರತದ ಗ್ರಾಮೀಣ ಪ್ರದೇಶಗಳ ಮೇಲೆ ಅವಲಂಬಿತವಾಗಿದೆ. ಎಪ್ರಿಲ್ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಅಧಿಕಾರಕ್ಕೆ ನಿರೀಕ್ಷೆಗಳಿದ್ದು, ಈ ಚುನಾವಣೆಯ ಸಂದರ್ಭದಲ್ಲಿ ದಕ್ಷಿಣ ಮತ್ತು ಉತ್ತರ ಭಾರತಗಳ ನಡುವಿನ ವ್ಯತ್ಯಾಸಗಳೇ ಪ್ರಮುಖ ಚರ್ಚೆಯ ವಿಚಾರವಾಗುವ ನಿರೀಕ್ಷೆಗಳಿವೆ.

ದಕ್ಷಿಣ ಮತ್ತು ಉತ್ತರ ಭಾರತಗಳ ನಡುವ ವ್ಯತ್ಯಾಸವನ್ನು ಮುಂದಿನ ದಿನಗಳಲ್ಲಿ ಹೇಗೆ ನಿರ್ವಹಿಸಲಾಗುತ್ತದೆ ಎನ್ನುವುದು ಭಾರತದ ಭವಿಷ್ಯಕ್ಕೆ ಅತ್ಯಂತ ಮುಖ್ಯವಾಗಿದೆ. ಆತಂಕಕಾರಿ ಪರಿಸ್ಥಿತಿಯಲ್ಲಿ, ಇದು ಭವಿಷ್ಯದಲ್ಲಿ ಗಂಭೀರ ಆಡಳಿತಾತ್ಮಕ ಸಮಸ್ಯೆಗಳು ಮತ್ತು ಭಾರತದ ಏಕೀಕೃತ ಮಾರುಕಟ್ಟೆಯ ವಿಘಟನೆಗೂ ಕಾರಣವಾಗಬಹುದು. ಉತ್ತಮ ಭವಿಷ್ಯಕ್ಕಾಗಿ, ಇಂತಹ ವಿಭಜನೆಯನ್ನು ತಡೆಯುವುದು ಭಾರತದ ಸಮಸ್ಯಾತ್ಮಕ ಗುರುತಿನ ರಾಜಕೀಯವನ್ನು ಕಡಿಮೆ ತೀವ್ರಗೊಳಿಸಬಹುದು.

ಪ್ರಗತಿ ಮತ್ತು ಭೌಗೋಳಿಕ ವಿಭಜನೆ

ಸಾಮಾನ್ಯವಾಗಿ ದೇಶಗಳ ಪ್ರಗತಿ ಬಹಳಷ್ಟು ಬಾರಿ ಅವುಗಳ ಭೌಗೋಳಿಕ ವಿಭಜನೆಯ ಮೇಲೆ ಅವಲಂಬಿಸಿರುತ್ತದೆ. ಅಮೆರಿಕಾದ ಅಂತರ್ಯದ್ಧದ ಪರಿಣಾಮ ಇಂದಿಗೂ ಅಲ್ಲಿನ ಆರ್ಥಿಕತೆ ಮತ್ತು ರಾಜಕಾರಣದ ಮೇಲಿದೆ. 1992ರಲ್ಲಿ, ಡೆಂಗ್ ಕ್ಸಿಯಾವೋಪಿಂಗ್ ಚೀನಾದ ಆರ್ಥಿಕತೆಯ ಬಾಗಿಲು ತೆರೆಯುವ ಬಯಕೆ ಹೊಂದಿದ್ದ ಸಂದರ್ಭದಲ್ಲಿ, ಅವರು ಚೀನಾದ ದಕ್ಷಿಣದ ಗುವಾಂಗ್‌ಡಾಂಗ್ ಪ್ರಾಂತ್ಯಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಉದ್ಯಮ ಸ್ನೇಹಿ ಸಂಸ್ಕೃತಿ ಮತ್ತು ಮುಕ್ತ ಇತಿಹಾಸವನ್ನು ಬೆಂಬಲಿಸುವ ಮೂಲಕ ಡೆಂಗ್ ಕ್ಸಿಯಾವೋಪಿಂಗ್ ಅವರು ಕಮ್ಯುನಿಸ್ಟ್ ಪಕ್ಷದ ಸಂಪ್ರದಾಯವಾದಿ ಸದಸ್ಯರ ವಿರೋಧವನ್ನು ಎದುರಿಸಲು ಸಾಧ್ಯವಾಯಿತು. ಚೀನಾ ಒಂದು ಪ್ರಬಲ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಲು ಈ ಹೆಜ್ಜೆ ನಾಂದಿ ಹಾಡಿತು.

ಭಾರತದಲ್ಲಿನ ಭಿನ್ನತೆಯನ್ನು ಅರ್ಥೈಸಿಕೊಳ್ಳುವುದನ್ನು, ನಾವು ಆರ್ಥಿಕ ವ್ಯತ್ಯಾಸಗಳಿಂದ ಆರಂಭಿಸಬೇಕು. ಭಾರತದ ದಕ್ಷಿಣ ಭಾಗ ಐತಿಹಾಸಿಕವಾಗಿಯೂ ಹೆಚ್ಚು ಶ್ರೀಮಂತವಾದ, ನಗರೀಕರಣಗೊಂಡಿದ್ದ ಭೂ ಪ್ರದೇಶವಾಗಿತ್ತು. ದಕ್ಷಿಣ ಭಾರತದ ಐದು ರಾಜ್ಯಗಳು (ಆಂಧ್ರ ಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ) ಭಾರತದ ಜನಸಂಖ್ಯೆಯ 20% ಪಾಲು ಹೊಂದಿದ್ದು, ದೇಶದ 30% ಸಾಲ ಹೊಂದಿವೆ. ಜೊತೆಗೆ, ಈ ಪ್ರದೇಶಗಳು ಕಳೆದ ಮೂರು ವರ್ಷಗಳ ಅವಧಿಯಲ್ಲಿ 35% ವಿದೇಶೀ ನೇರ ಬಂಡವಾಳ ಹೂಡಿಕೆ ಪಡೆದುಕೊಂಡಿವೆ. ದಕ್ಷಿಣ ಭಾರತದಲ್ಲಿ ಉತ್ತಮ ಆಡಳಿತ ವ್ಯವಸ್ಥೆ, ಉತ್ತಮ ಶಿಕ್ಷಣ ಮತ್ತು ಆಸ್ತಿ ಹಕ್ಕುಗಳು ಇದ್ದುದರ ಪರಿಣಾಮವಾಗಿ, ಉತ್ತಮ ಉದ್ಯಮಗಳು ಸ್ಥಾಪನೆಗೊಂಡು, ಹೆಚ್ಚು ಆಧುನಿಕವಾದ ಹಣಕಾಸು ವ್ಯವಸ್ಥೆ ರೂಪುಗೊಂಡಿತು. ಇವೆಲ್ಲವೂ 1947ರಲ್ಲಿ ಸ್ವಾತಂತ್ರ್ಯ ಗಳಿಸಿದ ಬಳಿಕ ದಕ್ಷಿಣ ಭಾರತ ಆರ್ಥಿಕವಾಗಿ ಉತ್ತಮ ಸ್ಥಿತಿ ಹೊಂದಲು ನೆರವಾದವು. ಕಾಲ ಕ್ರಮೇಣ ಉತ್ತರ ಮತ್ತು ದಕ್ಷಿಣ ಭಾರತಗಳ ನಡುವಿನ ವ್ಯತ್ಯಾಸಗಳು ಹೆಚ್ಚುತ್ತಲೇ ಸಾಗಿದ್ದವು. 1993ರಲ್ಲಿ ದಕ್ಷಿಣ ಭಾರತ ದೇಶದ ಜಿಡಿಪಿಯ 24% ಹೊಂದಿದ್ದರೆ, ಈಗ ಈ ಪ್ರಮಾಣ 31%ಗೆ ಏರಿಕೆ ಕಂಡಿದೆ.

ಭಾರತಕ್ಕೆ ಭೇಟಿ ನೀಡುವ ವಿದೇಶೀ ನಾಯಕರು ಸಾಮಾನ್ಯವಾಗಿ ಭಾರತೀಯ ನಾಯಕರನ್ನು ದೆಹಲಿಯಲ್ಲಿ ಭೇಟಿ ಮಾಡುತ್ತಾರೆ. ಆದರೆ, ಹೆಚ್ಚು ಆಸಕ್ತಿಕರವಾದ ಉದ್ಯಮ ಅವಕಾಶಗಳನ್ನು ಪಡೆಯುವ ಸಲುವಾಗಿ ಅವರು ಹೆಚ್ಚಾಗಿ ಭಾರತದ ದಕ್ಷಿಣ ಭಾಗಕ್ಕೆ ಪ್ರಯಾಣ ಬೆಳೆಸಬೇಕಾಗುತ್ತದೆ.

ಮಹತ್ವ ಪಡೆಯುತ್ತಿದೆ ದಕ್ಷಿಣ ಭಾರತ

ಈಗ ಜಾಗತಿಕ ಉದ್ಯಮಗಳು ಚೀನಾದಿಂದ ಭಾರತಕ್ಕೆ ಸ್ಥಾನ ಬದಲಾವಣೆ ನಡೆಸುತ್ತಿರುವ ಸಂದರ್ಭದಲ್ಲಿ, ಭಾರತದ 46% ಇಲೆಕ್ಟ್ರಾನಿಕ್ ರಫ್ತು ದಕ್ಷಿಣ ಭಾರತದಿಂದಲೇ ನೆರವೇರುತ್ತಿದೆ. ಇದೇ ರೀತಿ, ಭಾರತದ 46% ಹೆಚ್ಚಿನ ಮೌಲ್ಯ ಹೊಂದಿರುವ, 'ಯುನಿಕಾರ್ನ್ಸ್' ಎಂದು ಕರೆಯಲ್ಪಡುವ ಸ್ಟಾರ್ಟಪ್‌ಗಳು ದಕ್ಷಿಣ ಭಾರತ ಮೂಲದವಾಗಿದ್ದು, ಅವುಗಳಲ್ಲಿ ಬಹಳಷ್ಟು ಬೆಂಗಳೂರು ಕೇಂದ್ರಿತವಾಗಿವೆ.

ದಕ್ಷಿಣ ಭಾರತದ ಐದು ರಾಜ್ಯಗಳು ಭಾರತದ ಐಟಿ ಸೇವೆಯ ರಫ್ತಿನ 66%ಗೆ ಜವಾಬ್ದಾರವಾಗಿವೆ. 'ಗ್ಲೋಬಲ್ ಕೆಪಾಬಿಲಿಟಿ ಸೆಂಟರ್ಸ್' (ಜಾಗತಿಕ ಸಾಮರ್ಥ್ಯ ಕೇಂದ್ರಗಳು) ನಿರ್ಮಾಣ ಈಗ ಹೊಸದಾದ ಟ್ರೆಂಡ್ ಆಗಿದ್ದು, ಇಲ್ಲಿ ದೊಡ್ಡದಾದ ಅಂತಾರಾಷ್ಟ್ರೀಯ ಕಂಪನಿಗಳು ತಮ್ಮ ಜಾಗತಿಕ ಮಟ್ಟದ ಲೆಕ್ಕ ಪರಿಶೋಧಕರು, ವಕೀಲರು, ವಿನ್ಯಾಸಗಾರರು, ವಾಸ್ತುಶಿಲ್ಪಿಗಳು ಮತ್ತು ಇತರ ತಜ್ಞರನ್ನು ಜೊತೆಯಾಗಿ ತರುತ್ತವೆ. ಇಂತಹ ಕೇಂದ್ರಗಳಲ್ಲಿ, 79% ಕೇಂದ್ರಗಳು ದಕ್ಷಿಣ ಭಾರತದಲ್ಲಿ ಸ್ಥಾಪನೆಯಾಗಿವೆ.

ದಕ್ಷಿಣ ಭಾರತ ಒಟ್ಟಾರೆಯಾಗಿ ಭಾರತದ ಆರ್ಥಿಕತೆಯನ್ನು ಮುನ್ನಡೆಸುತ್ತಿದ್ದರೂ, ದಕ್ಷಿಣದ ರಾಜಕೀಯ ಚಿತ್ರಣ ಉತ್ತರಕ್ಕಿಂತ ಅತ್ಯಂತ ಭಿನ್ನವಾಗಿದೆ. ಉತ್ತರ ಭಾರತದಲ್ಲಿ ಹಿಂದಿ ಭಾಷೆಯ ಕುರಿತು ಹೆಚ್ಚಿನ ಆದ್ಯತೆ, ಪ್ರಬಲ ಹಿಂದುತ್ವ ಆಧಾರಿತ ರಾಜಕಾರಣ ಮತ್ತು ಮುಸ್ಲಿಮರೆಡೆಗೆ ನಕಾರಾತ್ಮಕ ಧೋರಣೆಗಳು ಹೆಚ್ಚಾಗಿ ಕಂಡುಬರುತ್ತವೆ. ನರೇಂದ್ರ ಮೋದಿಯವರ ನೇತೃತ್ವದ ಭಾರತೀಯ ಜನತಾ ಪಾರ್ಟಿಯೂ ದೇಶದ ಅಭಿವೃದ್ಧಿಯ ಕುರಿತ ತನ್ನ ಗುರಿಗಳ ಜೊತೆಗೆ, ಇಂತಹ ಧೋರಣೆಗಳ ಪರವಾಗಿಯೂ ಇದೆ. ಈ ವಿಚಾರಗಳ ಕುರಿತು ಬಿಜೆಪಿಗೆ ನಂಬಿಕೆ ಇರುವುದರಿಂದ ಮತ್ತು ಇದು ಪಕ್ಷಕ್ಕೆ ಚುನಾವಣೆಗಳನ್ನು ಗೆಲ್ಲಲು ನೆರವಾಗುವುದರಿಂದ, ಬಿಜೆಪಿ ಇವೆರಡನ್ನೂ ಮಾಡುತ್ತಾ ಬಂದಿದೆ.

ಆದರೆ ದಕ್ಷಿಣ ಭಾರತದ ವಿಚಾರಕ್ಕೆ ಬಂದರೆ, ಬಿಜೆಪಿಯ ಕಾರ್ಯ ವಿಧಾನ ಅಷ್ಟೊಂದು ಪರಿಣಾಮಕಾರಿಯಾಗಿ ಕಂಡುಬಂದಿಲ್ಲ. 1960ರ ದಶಕದ ಬಳಿಕ, ಮತದಾರರು ಇಂಗ್ಲಿಷ್ ಮತ್ತು ತಮಿಳಿನಂತಹ ಸ್ಥಳೀಯ ಭಾಷೆಗಳನ್ನು ಬೆಂಬಲಿಸುವ ಪ್ರಾದೇಶಿಕ ಪಕ್ಷಗಳನ್ನು ಆರಿಸುತ್ತಾ ಬಂದಿದ್ದಾರೆ. ಅವುಗಳು ಮಧ್ಯಮ ಮಟ್ಟದಲ್ಲಿ ಹಿಂದೂ ಮೌಲ್ಯಗಳ ಪ್ರತಿಪಾದನೆ ನಡೆಸುತ್ತಾ ಬಂದಿವೆ.

ಬಿಜೆಪಿ ಗಳಿಸಿದ ಮತ ಲೆಕ್ಕಾಚಾರ

2019ರ ಚುನಾವಣೆಯಲ್ಲಿ, ಬಿಜೆಪಿಯ ಒಟ್ಟು ಮತಗಳಲ್ಲಿ ಕೇವಲ 11% ಮಾತ್ರವೇ ದಕ್ಷಿಣ ಭಾರತದಿಂದ ಬಂದಿದ್ದು, ಆ ಪಕ್ಷ ಗಳಿಸಿದ ಲೋಕಸಭಾ ಸ್ಥಾನಗಳ 10% ಮಾತ್ರವೇ ದಕ್ಷಿಣ ಭಾರತದಿಂದ ಲಭಿಸಿದ್ದವು. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಬಿಜೆಪಿ ಪ್ರಬಲವಾಗಿರುವ ಏಕೈಕ ರಾಜ್ಯವಾದ ಕರ್ನಾಟಕದಲ್ಲೂ ಬಿಜೆಪಿ 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿತು.

ನರೇಂದ್ರ ಮೋದಿಯವರು ಆಧುನಿಕವಾದ, ತಂತ್ರಜ್ಞಾನ ನಿರ್ದೇಶಿತವಾದ, ಸಂಪೂರ್ಣ ದೇಶಕ್ಕೆ ಸೇವೆ ಸಲ್ಲಿಸುವ ಕೇಂದ್ರ ಸರ್ಕಾರವನ್ನು ಮುನ್ನಡೆಸುವ ಬಯಕೆ ಹೊಂದಿದ್ದಾರೆ. ಆದರೆ, ಅವರ ನಿರಂತರ ಚುನಾವಣಾ ಗೆಲುವುಗಳ ಹೊರತಾಗಿಯೂ, ಅವರಿಗೆ ಭಾರತದಾದ್ಯಂತ ನಿರೀಕ್ಷಿತ ಪ್ರಮಾಣದಲ್ಲಿ ಭಾರೀ ಬೆಂಬಲ ಲಭಿಸಿಲ್ಲ.

ಈ ಉದ್ವಿಗ್ನತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ಭಾರತಕ್ಕೆ ದೇಶಾದ್ಯಂತ ಕಾರ್ಯಾಚರಿಸುವಂತೆ ದೊಡ್ಡ ಒಂದೇ ಮಾರುಕಟ್ಟೆಯಾಗಿ ರೂಪುಗೊಳ್ಳುವ ಅವಶ್ಯಕತೆಯಿದೆ. ಇದರಿಂದಾಗಿ, ಕಂಪನಿಗಳು ಇಂಧನ ಮತ್ತು ಕಾರ್ಮಿಕರಂತಹ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು, ದೊಡ್ಡದಾಗಿ, ಹೆಚ್ಚು ದಕ್ಷವಾಗಿ ಬೆಳೆಯಲು ಸಾಧ್ಯವಾಗುತ್ತದೆ. ರಾಜ್ಯಗಳ ನಡುವಿನ ವ್ಯಾಪಾರ 2017ರಲ್ಲಿ ಭಾರತದ ಜಿಡಿಪಿಯ 23% ಇದ್ದುದು 2021ರಲ್ಲಿ 35%ಗೆ ಹೆಚ್ಚಳ ಕಂಡು, ಆರ್ಥಿಕ ಅಭಿವೃದ್ಧಿಗೆ ಬೆಂಬಲ ನೀಡಿದೆ. ನರೇಂದ್ರ ಮೋದಿಯವರು ಏಕೀಕೃತ ತೆರಿಗೆ ವ್ಯವಸ್ಥೆ, ಸಾಗಾಣಿಕಾ ವ್ಯವಸ್ಥೆ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗಳು ಸೇರಿದಂತೆ ವಿವಿಧ ರಾಷ್ಟ್ರವ್ಯಾಪಿ ವ್ಯವಸ್ಥೆಗಳನ್ನು ಜಾರಿಗೆ ತರುವಲ್ಲಿ ಕೊಡುಗೆ ನೀಡಿದ್ದಾರೆ.

ಭಾರತದ ಸಂವಿಧಾನದ ಅನುಸಾರವಾಗಿ, ಇವುಗಳಲ್ಲಿ ಬಹುಪಾಲು ಬದಲಾವಣೆಗಳ ಸಾಧನೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಕಾರ್ಯಾಚರಿಸುವ ಅವಶ್ಯಕತೆ ಇತ್ತು. ಭವಿಷ್ಯದ ಬದಲಾವಣೆಗಳಿಗೂ ಇಂತಹ ಸಹಯೋಗ ಅನಿವಾರ್ಯವಾಗಿದೆ. ಭಾರತದ ಶಿಕ್ಷಣ ಕ್ಷೇತ್ರದಲ್ಲೂ ಬಹಳಷ್ಟು ಬದಲಾವಣೆಗಳನ್ನು ತರುವ ಅವಶ್ಯಕತೆಯಿದ್ದು, ಶಿಕ್ಷಣದ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಜವಾಬ್ದಾರಿ ಹೊಂದಿವೆ. ಉದ್ಯೋಗಾವಕಾಶಗಳು ಅತ್ಯಂತ ಪರಿಮಿತವಾಗಿರುವ ಉತ್ತರ ಭಾರತದಲ್ಲಿನ ಯುವ ಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳಿರುವ ದಕ್ಷಿಣ ಭಾರತಕ್ಕೆ ಬರುವ ಅವಕಾಶ ಒದಗಿಸಬೇಕು. ಅದರೊಡನೆ, ಸಂಪೂರ್ಣ ಭಾರತವನ್ನು ವ್ಯಾಪಿಸಿ, ಆರ್ಥಿಕ ಪ್ರಗತಿಗೆ ನೆರವು ನೀಡಬಲ್ಲ ಮತ್ತು ಪರಿಸರ ಮಾಲಿನ್ಯವನ್ನು ಕಡಿಮೆಗೊಳಿಸಬಲ್ಲ ಏಕೀಕೃತ ವಿದ್ಯುತ್ ಜಾಲದ ಸ್ಥಾಪನೆಯೂ ಅವಶ್ಯಕವಾಗಿದೆ.

ವಿಭಜನೆ ಮಾತುಗಳಿಂದ ತೊಂದರೆಯೇ ಹೆಚ್ಚು

ಒಂದು ವೇಳೆ ನರೇಂದ್ರ ಮೋದಿಯವರು ಏನಾದರೂ ಮತ್ತೊಂದು ಬಾರಿ ಚುನಾಯಿತರಾದರೆ, ಅವರು ಭಾರತೀಯ ಸಂವಿಧಾನ ಜಾರಿಗೆ ತಂದಿರುವ ಸಮತೋಲನಕ್ಕೆ ಅಡ್ಡಿ ಉಂಟುಮಾಡಬಹುದು ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದ ಹಲವು ನಾಯಕರು ಮೋದಿಯವರು ನಮ್ಮನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತಿಲ್ಲ, ಸುಳ್ಳು ಅಕ್ರಮ ತನಿಖೆಯ ಹೆಸರಲ್ಲಿ ನಮ್ಮನ್ನು ಗುರಿಯಾಗಿಸುತ್ತಾರೆ, ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಬರಬೇಕಾದ ಹಣವನ್ನು ಹಿಡಿದಿಡುತ್ತಾರೆ, ಉತ್ತರ ಭಾರತವನ್ನು ಬೆಂಬಲಿಸುವ ನಿಟ್ಟಿನಲ್ಲಿ ದಕ್ಷಿಣ ಭಾರತದಿಂದ ಅಪಾರ ಪ್ರಮಾಣದ ತೆರಿಗೆ ಪಡೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ. 2026ರ ಬಳಿಕ, ಸಂಸದೀಯ ಕ್ಷೇತ್ರಗಳ ಪುನರ್ ವಿಂಗಡನೆ ನೆರವೇರಿದಾಗ ದಕ್ಷಿಣ ಭಾರತಕ್ಕೆ ಇನ್ನಷ್ಟು ಅನನುಕೂಲತೆಗಳು ಉಂಟಾಗುವ ಸಾಧ್ಯತೆಗಳಿವೆ. ದಕ್ಷಿಣ ಭಾರತದ ಪ್ರತಿರೋಧದ ಹೊರತಾಗಿಯೂ, ಬಿಜೆಪಿ ಹಿಂದಿಯನ್ನು ಭಾರತದ ರಾಷ್ಟ್ರೀಯ ಭಾಷೆಯಾಗಿ ಘೋಷಿಸಬಹುದು ಎಂಬ ಆತಂಕಗಳು ವ್ಯಕ್ತವಾಗಿವೆ.

ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ, ಇಂತಹ ಭಿನ್ನಾಭಿಪ್ರಾಯಗಳು ಭಾರತದ ಆರ್ಥಿಕತೆಯನ್ನು ಉತ್ತಮಗೊಳಿಸಲು ಬೇಕಾದ ಹಲವು ಮುಖ್ಯ ಬದಲಾವಣೆಗಳನ್ನು ತಡೆಯುವ ಸಾಧ್ಯತೆಗಳೂ ಇವೆ. ತೀರಾ ಕೆಟ್ಟ ಸನ್ನಿವೇಶದಲ್ಲಿ, ಒಂದಷ್ಟು ಜನರು ಭಾರತವನ್ನು ವಿಭಜಿಸಬೇಕೆಂಬ ಸಲಹೆಯನ್ನೂ ನೀಡಬಹುದು. ಕೊನೆಯ ಬಾರಿ ದೇಶ ವಿಭಜನೆಯಂತಹ ದುಸ್ಸಾಹಸ ಭಾರತ ಸ್ವತಂತ್ರಗೊಂಡ ಸಂದರ್ಭದಲ್ಲಿ ನೆರವೇರಿದ್ದು, 1963ರಲ್ಲಿ ಕೇಂದ್ರ ಸರ್ಕಾರ ರಾಜಕಾರಣಿಗಳು ದೇಶ ವಿಭಜನೆಯ ವಿಚಾರವನ್ನು ಆಡುವುದು ಅಕ್ರಮ ಎಂದು ಆದೇಶ ಹೊರಡಿಸಿತು.

ಅದೃಷ್ಟವಶಾತ್, ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಇನ್ನೂ ಉತ್ತಮ ಆಯ್ಕೆಯಿದೆ. ದಕ್ಷಿಣ ಭಾರತದಲ್ಲಿ ಉತ್ತಮ ಸಾಧನೆ ತೋರುವ ಸಲುವಾಗಿ, ಬಿಜೆಪಿ ತನ್ನ ಬಲವಾದ ಹಿಂದೂ ರಾಷ್ಟ್ರೀಯವಾದದ ಧೋರಣೆಯನ್ನು ಕೊಂಚಮಟ್ಟಿಗೆ ತಗ್ಗಿಸಬಹುದು. ಅದರೊಡನೆ, ಎಲ್ಲೆಡೆಯೂ ಹಿಂದಿಯನ್ನು ಬಳಸುವಂತೆ ಒತ್ತಡ ಹೇರುವುದನ್ನು ಕಡಿಮೆಗೊಳಿಸಿ, ಆರ್ಥಿಕ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಮಾಡಬಹುದು. ಅದರೊಡನೆ, ಬಿಜೆಪಿ ನಾಯಕರು ನರೇಂದ್ರ ಮೋದಿಯವರ ಮಾದರಿಯನ್ನು ಅನುಸರಿಸಿ, ಅವರ ತೀವ್ರಗಾಮಿ ಬೆಂಬಲಿಗರ ನಿಲುವುಗಳನ್ನು ಅನುಸರಿಸದಿರುವುದು ಉತ್ತಮವಾಗುತ್ತದೆ. ಇದಿನ್ನೂ ಬಹಳ ಬೇಗನೇ ಆದರೂ, ಇಂತಹ ಬದಲಾವಣೆಗಳು ಬರುವ ಸಾಧ್ಯತೆಗಳಿವೆ ಎಂದು ದಕ್ಷಿಣ ಭಾರತದ ಬಿಜೆಪಿ ನಾಯಕರು ಅಭಿಪ್ರಾಯ ಹೊಂದಿದ್ದಾರೆ. ಭಾರತದ ಆರ್ಥಿಕತೆ ಭವಿಷ್ಯದಲ್ಲಿ ಹೇಗೆ ಕಾಣಬಹುದು ಎಂಬುದರ ಸಂಕೇತಗಳನ್ನು ದಕ್ಷಿಣ ಭಾರತ ಈಗಾಗಲೇ ನೀಡತೊಡಗಿದೆ. ಒಂದು ವೇಳೆ ನರೇಂದ್ರ ಮೋದಿ ಮತ್ತು ಅವರ ಪಕ್ಷ ಉತ್ತಮ ಆಯ್ಕೆಗಳನ್ನು ಕೈಗೊಂಡರೆ, ಆಗ ದಕ್ಷಿಣ ಭಾರತ ಭವಿಷ್ಯದಲ್ಲಿ ಭಾರತದ ರಾಜಕಾರಣ ಸಾಗುವ ದಿಕ್ಕಿನ ಸುಳಿವನ್ನೂ ನೀಡಬಲ್ಲದು.

- ಗಿರೀಶ್ ಲಿಂಗಣ್ಣ

(ಲೇಖಕರು, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Whats_app_banner