ಮಮತಾ ಭದ್ರಕೋಟೆಯಲ್ಲಿ ನೆಲೆಯೂರಲು ಬಿಜೆಪಿ ತಂತ್ರ; ಟಿಎಂಸಿ ತವರಲ್ಲಿ ಇಂಡಿಯಾ ಮೈತ್ರಿಕೂಟ ಸಹಿತ ತ್ರಿಕೋನ ಪೈಪೋಟಿ
West Bengal Lok Sabha election 2024: ದೇಶದ ಗಮನಸೆಳೆಯುವ ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಈ ಬಾರಿಯೂ ಆಸಕ್ತಿದಾಯಕ ವಿದ್ಯಮಾನಗಳು ನಡೆಯುತ್ತಿವೆ. ಇನ್ನೇನು ಕೊನೆಯ ಹಂತದ ಮತದಾನ ನಡೆದು ಚುನಾವಣೋತ್ತರ ಸಮೀಕ್ಷೆಗಳು ಹೊರಬರುವ ಸಮಯ. ಅದಕ್ಕೂ ಮುನ್ನ ರಾಜ್ಯದ ರಾಜಕೀಯ ಚಿತ್ರಣ ಹೇಗಿದೆ ಎಂಬುದನ್ನು ನೋಡೋಣ.
ರಾಷ್ಟ್ರ ರಾಜಕಾರಣದಲ್ಲಿ ಪ್ರತಿಬಾರಿಯೂ ಸುದ್ದಿಯಲ್ಲಿರುವ ರಾಜ್ಯ ಪಶ್ಚಿಮ ಬಂಗಾಳ. ಭಾರತದ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸಂಸದರನ್ನು ಸಂಸತ್ತಿಗೆ ಕಳುಹಿಸುವ ರಾಜ್ಯಗಳಲ್ಲಿ ಬಂಗಾಳಕ್ಕೆ ಮೂರನೇ ಸ್ಥಾನ. ಮೊದಲ ಎರಡು ಸ್ಥಾನಗಳಲ್ಲಿ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಇವೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು 42 ಲೋಕಸಭಾ ಕ್ಷೇತ್ರಗಳಿವೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನ ಮೂಲನೆಲೆಯಾಗಿರುವ ಬಂಗಾಳಿಗರ ನಾಡಲ್ಲಿ ಈ ಬಾರಿಯ ಲೋಕಸಮರದಲ್ಲಿ ಭಾರಿ ಪೈಪೋಟಿ ಇದೆ. ದೀದಿ ತವರಲ್ಲಿ ಮೇಲ್ನೋಟಕ್ಕೆ ಟಿಎಂಸಿ, ಬಿಜೆಪಿ ನಡುವಿನ ಪೈಪೋಟಿ ಕಾಣಿಸಿದರೂ, ಕಾಂಗ್ರೆಸ್ ಸೇರಿದಂತೆ ಎಡಪಕ್ಷಗಳು ಫಲಿತಾಂಶದಲ್ಲಿ ನಿರ್ಣಾಯಕ ಪೈಪೋಟಿ ನೀಡಲಿವೆ.
ಜೂನ್ 1ರಂದು ಕೊನೆಯ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಅದು ಮುಗಿದ ಬೆನ್ನಲ್ಲೇ ಎಕ್ಸಿಟ್ ಪೋಲ್ ಫಲಿತಾಂಶ ಹೊರಬೀಳಲಿದೆ. ಹೀಗಾಗಿ ರಾಜ್ಯ ರಾಜಕಾರಣದ ಫಲಿತಾಂಶ ಹೇಗಿರಲಿದೆ ಎಂಬುದು ಸದ್ಯದ ಕುತೂಹಲ.
ಪ್ರಬಲ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಹೋಲಿಸಿದರೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷವೇ ಪ್ರಬಲ ಸ್ಪರ್ಧಿ. ಇಲ್ಲಿ ಮೇಲುಗೈ ಮಮತಾ ಬ್ಯಾನರ್ಜಿ ಪಕ್ಷದ್ದೇ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದೊಂದು ದಶಕದಿಂದ ಟಿಎಂಸಿ ಪಕ್ಷವು ಲೋಕಸಭಾ ಚುನಾವಣೆ ಮಾತ್ರವಲ್ಲದೆ ವಿಧಾನಸಭೆ ಚುನಾವಣೆಯಲ್ಲೂ ಬಹುಮತ ಪಡೆದಿದೆ. ಮಮತಾ ಬ್ಯಾನರ್ಜಿ ಅವರು ಇಲ್ಲಿ 3ನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ದಶಕಗಳ ಹಿಂದೆ ಕಾಂಗ್ರೆಸ್ ಆಡಳಿತ ನಡೆಸಿದೆ. ಬಳಿಕ ಎಡಪಕ್ಷಗಳು ವಶಪಡಿಸಿಕೊಂಡಿದ್ದವು. ಇದೀಗ ಟಿಎಂಸಿಯ ಭದ್ರಕೋಟೆಯಾಗಿದೆ. ದೀದಿ ಕೋಟೆಯನ್ನ ಶತಾಯ ಗತಾಯ ಭೇದಿಸಲೇಬೇಕೆಂದು ಬಿಜೆಪಿ ಪ್ರಯತ್ನಿಸುತ್ತಿದೆ. ಅದು ಎಷ್ಟರ ಮಟ್ಟಿಗೆ ಸಫಲವಾಗಲಿದೆ ಅನ್ನೋದು ಫಲಿತಾಂಶದ ದಿನ ಸ್ಪಷ್ಟವಾಗಲಿದೆ.
2019ರ ಚುನಾವಣೆಯಲ್ಲಿ ಏನಾಗಿತ್ತು?
ದೇಶದಲ್ಲಿ ನಮೋ ಹವಾ ನಡುವೆಯೂ 2019ರ ಚುನಾವಣೆಯಲ್ಲಿ ಬಂಗಾಳದಲ್ಲಿ ಟಿಎಂಸಿ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ 22 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಆದರೆ, 2014ರ ಚುನಾವಣೆಯಲ್ಲಿ ಗೆದ್ದಿದ್ದ 12 ಕ್ಷೇತ್ರಗಳನ್ನು ಕಳೆದುಕೊಂಡಿತ್ತು. ಅತ್ತ ಏಕಾಏಕಿ 16 ಕ್ಷೇತ್ರಗಳನ್ನು ಹೆಚ್ಚಿಸಿಕೊಂಡ ಬಿಜೆಪಿ 18ರಲ್ಲಿ ಗೆದ್ದಿತು. ಕಾಂಗ್ರೆಸ್ ಕೇವಲ 2 ಸ್ಥಾನ ಮಾತ್ರ ಪಡೆಯಿತು. ಇದೀಗ ಈ ಬಾರಿಯೂ ಇದೇ ಚಿತ್ರಣ ಇರಲಿದೆ ಎಂದು ಹೇಳುವುದು ಕಷ್ಟಸಾಧ್ಯ. ಕಳೆದ ಬಾರಿ ಗೆದ್ದ ಸ್ಥಾನಗಳನ್ನು ಉಳಿಸಿಕೊಳ್ಳುಬಹುದು ಎಂಬ ಭರವಸೆ ಖುದ್ದು ಬಿಜೆಪಿಗಿಲ್ಲ.
ಇಂಡಿಯಾ ಮೈತ್ರಿಕೂಟದ ಕತೆಯೇನು?
ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷವು 12 ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿದ್ದು, ಮೈತ್ರಿಕೂಟದೊಂದಿಗೆ ಸ್ಪರ್ಧಿಸಿದೆ. ಆದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂಡಿಯಾ ಮೈತ್ರಿಕೂಟದಿಂದ ದೂರ ಉಳಿದಿದ್ದಾರೆ. ಆದರೆ, ಬಿಜೆಪಿ ಅಲೆಯನ್ನು ಹೋಗಲಾಡಿಸುವ ಸಲುವಾಗಿ ಮೈತ್ರಿಗೆ ಬಾಹ್ಯ ಬೆಂಬಲ ನೀಡುವುದಾಗಿ ದೀದಿ ಘೋಷಿಸಿದ್ದಾರೆ. ಒಟ್ಟಿನಲ್ಲಿ ಬಂಗಾಳದಿಂದ ಬಿಜೆಪಿಯನ್ನು ಹೊರಗೆ ಓಡಿಸುವುದೇ ಎಲ್ಲಾ ಪಕ್ಷಗಳ ಗುರಿ. ಅತ್ತ ಬಿಜೆಪಿ ಸ್ವತಂತ್ರವಾಗಿ ಎಲ್ಲಾ 42 ಕ್ಷೇತ್ರದಲ್ಲಿ ಕಣಕ್ಕಿಳಿದರೆ, ಸಹಜವಾಗಿ ಟಿಎಂಸಿ ಕೂಡಾ ತನ್ನದೇ ಅಭ್ಯರ್ಥಿಗಳನ್ನು ಕಣದಲ್ಲಿ ಇರಿಸಿದೆ. ಹೀಗಾಗಿ, ಮೇಲ್ನೋಟಕ್ಕೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ, ಟಿಎಂಸಿ ಹಾಗೂ ಮೈತ್ರಿಕೂಟದ ನಡುವೆ ತ್ರಿಕೋನ ಸ್ಪರ್ಧೆ ಕಂಡರೂ, ಇಲ್ಲಿ ಟಿಎಂಸಿ ವರ್ಸಸ್ ಇತರ ಎಲ್ಲರೂ ಎಂಬುದಂತೂ ಸ್ಪಷ್ಟ.
ಮಮತಾ ಮೇಲೆ ಬಂಗಾಳಿಗರಿಗೆ, ಬಂಗಾಳಿಗರ ಮೇಲೆ ಮಮತಾಗೆ ಅಚಲ ನಂಬಿಕೆ!
ದೇಶದಲ್ಲಿ ಬಿಜೆಪಿ, ನರೇಂದ್ರ ಮೋದಿ ಹಾಗೂ ಹಿಂದುತ್ವದ ಹವಾ ಎಷ್ಟೇ ಜೋರಾಗಿದ್ದರೂ, ಅದು ಬಂಗಾಳದಲ್ಲಿ ಸದ್ದು ಮಾಡಿದಂತಿಲ್ಲ. ಬಿಜೆಪಿಯು ಇಲ್ಲಿ ಇಲ್ಲಸಲ್ಲದ ತಂತ್ರ ಮಾಡಿದರೂ ಫಲ ಸಿಗುತ್ತಿಲ್ಲ. ಕಳೆದ ಬಾರಿಯ ಚುನಾವಣೆ ನಂತರ ಮಮತಾ ಅವರ ಆಪ್ತ ಸುವೇಂದು ಅಧಿಕಾರಿ ಬಿಜೆಪಿ ಸೇರಿದರೂ ಪ್ರಧಾನಿ ಮೋದಿ ಅವರ ಪಕ್ಷಕ್ಕೆ ಹೇಳಿಕೊಳ್ಳುವಷ್ಟು ಹವಾ ಸೃಷ್ಟಿಸಲು ಸಾಧ್ಯವಾಗಿಲ್ಲ.
ಬಂಗಾಳದ ಜನರು ಪ್ರಬುದ್ಧರಾಗಿದ್ದು ಅವರಲ್ಲಿ ಜಾತ್ಯತೀತ ಮೌಲ್ಯಗಳಿವೆ. ಬಂಗಾಳದ ಜನರು ಟಿಎಂಸಿ ಪಕ್ಷದ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಮನ್ನಣೆ ನೀಡಿದ್ದಾರೆ. ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯದ ಜನರು ನಮ್ಮೊಂದಿಗೆ ಕೈಜೋಡಿಸುತ್ತಾರೆ ಎಂಬುದನ್ನು ಮಮತಾ ಹೇಳುತ್ತಾ ಬರುತ್ತಿದ್ದಾರೆ. ಮಾತು ಮಾತಿಗೂ ಜನರ ಆಪ್ತ ಒಡನಾಟವನ್ನು ಹೆಚ್ಚಿಸಿಕೊಂಡಿದ್ದಾರೆ.
ಲೋಕಸಭಾ ಚುನಾವಣೆಯ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದಲ್ಲಿ ಗೃಹಲಕ್ಷ್ಮೀ ಯೋಜನೆ ಇರುವಂತೆ, ಬಂಗಾಳದಲ್ಲಿ ‘ಲಕ್ಷ್ಮೀ ಭಂಡಾರ್’ ಯೋಜನೆ ಜಾರಿಯಲ್ಲಿದೆ. ಪ್ರತಿ ಕುಟಂಬದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಇಲ್ಲದ ಸೀಮಿತ ವಯೋಮಿತಿಯ ಒಬ್ಬರು ಮಹಿಳೆಗೆ ಮಾಸಿಕ 500 ರೂಪಾಯಿ ನೀಡಲಾಗುತ್ತಿದೆ. ಎಸ್‌ಟಿ ಅಥವಾ ಎಸ್‌ಸಿ ಸಮುದಾಯಕ್ಕೆ ಈ ಮೊತ್ತ 1000 ಇದೆ. ಇದು ರಾಜ್ಯದ ಹಲವು ಮಹಿಳೆಯರನ್ನು ಸ್ವಾವಲಂಬಿಯಾಗಿಸಿದೆ. ಅಲ್ಲಿಗೆ ಚುನಾವಣೆಯೊಂದರಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮಹಿಳೆಯರ ಮತವನ್ನು ಮಮತಾ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಸ್ಲಿಂ ಮತದಾರರು ನಿರ್ಣಾಯಕ!
ಬಂಗಾಳದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕವಾಗಿದ್ದು, ಶೇಕಡಾ 30ರಷ್ಟಿರುವ ಮುಸ್ಲಿಮರು ಫಲಿತಾಂಶ ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂಬುದು ಅಲಿಖಿತ ಸತ್ಯ. ಸಹಜವಾಗಿ ಹಿಂದುತ್ವವನ್ನೇ ಗೆಲುವಿನ ಮಂತ್ರವಾಗಿಸಿದ ಬಿಜೆಪಿ ವಿರುದ್ಧ ಇರುವ ಬಂಗಾಳದ ಮುಸ್ಲಿಂ ಸಮುದಾಯದ ಜನರು, ಕಾಂಗ್ರೆಸ್ ಮೈತ್ರಿಕೂಟದತ್ತವೂ ವಾಲುತ್ತಿದ್ದಾರೆ. ಆದರೆ, ಅಂತಿಮವಾಗಿ ಇವರ ಬಹುಮತ ಟಿಎಂಸಿಗೆ ಅನ್ನೋದು ಬಹುತೇಕ ಖಚಿತ. ಈ ನಡುವೆ ಬಿಜೆಪಿ ಕಿತ್ತೆಸೆಯುವ ಇರಾದೆಯಲ್ಲಿರುವ ಮುಸ್ಲಿಂ ಸಮುದಾಯದ ಜನರು, ಮೈತ್ರಿ ಬೆಂಬಲಿಸುವ ಸಲುವಾಗಿ ಕಾಂಗ್ರೆಸ್‌ಗೆ ಮತ ಹಾಕಿದರೂ ಅಚ್ಚರಿಯಿಲ್ಲ. ಆಗ ಟಿಎಂಸಿ ಹಾಗೂ ಕಾಂಗ್ರೆಸ್ ನಡುವೆ ಮತ ವಿಭಜನೆಯಾಗಲಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡಿರುವ ಪಕ್ಷಗಳು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿವೆ.
ಮಮತಾ ಮಟ್ಟಹಾಕೋದು ಅಷ್ಟು ಸುಲಭವಲ್ಲ
ಭ್ರಷ್ಟಾಚಾರ ಆರೋಪ, ರಾಜಕೀಯ ಹಿಂಸಾಚಾರ ಪ್ರಕರಣಗಳು ಬಂಗಾಳ ಚುನಾವಣೆಯಲ್ಲಿ ಹೆಚ್ಚು ಚರ್ಚೆಯ ವಿಷಯಗಳು. ಇವು ಯಾವುದೂ ಟಿಎಂಸಿ ಬುಡ ಅಲುಗಾಡಿಸುವಲ್ಲಿ ಯಶಸ್ವಿಯಾಗಿಲ್ಲ. ವಾಸ್ತವದಲ್ಲಿ ಬಂಗಾಳ ಚುನಾವಣೆ ಇತಿಹಾಸದಲ್ಲಿ ಭ್ರಷ್ಟಾಚಾರ ವಿಚಾರ ಯಾವತ್ತಿಗೂ ದೊಡ್ಡ ವಿಷಯವೇ ಆಗಿಲ್ಲ. ಕೆಲವು ವರ್ಷಗಳಿಂದ ಸಿಎಎ ವಿರುದ್ಧ ಇಲ್ಲಿನ ಜನರ ಅಭಿಪ್ರಾಯ ವ್ಯಕ್ತವಾಗಿದೆ. ಇತ್ತೀಚೆಗೆ ಸಂದೇಶ್ ಖಾಲಿ ಪ್ರಕರಣ ನಿರ್ಣಾಯಕವಾಗಿದೆ.
ಸಂದೇಶ್ ಖಾಲಿ ಪ್ರಕರಣ
ಆರಂಭದಲ್ಲಿ ಸಂದೇಶ್ ಖಾಲಿ ಪ್ರಕರಣ ಬಿಜೆಪಿ ಕೈಹಿಡಿಯುತ್ತೆ ಎಂದೇ ಹೇಳಲಾಗಿತ್ತು. ರಾಜ್ಯದಲ್ಲಿ ಗುರುತಿಸಿಕೊಂಡಿದ್ದ ಪ್ರಬಲ ಟಿಎಂಸಿ ನಾಯಕ ಶಹಜಹಾನ್ ಹಾಗೂ ಆತನ ಬಂಟರು, ಬುಡಕಟ್ಟು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣ ದೇಶದ ಗಮನ ಸೆಳೆದು ವ್ಯಾಪಕ ಪ್ರತಿಭಟನೆಯೂ ನಡೆಯಿತು. ಆ ಬಳಿಕ ಮುಖಂಡನನ್ನು ಬಂಧಿಸಲಾಯಿತು. ಸದ್ಯ ಪ್ರಕರಣ ಸಿಬಿಐ ತನಿಖೆಯಲ್ಲಿದೆ. ಆ ಬಳಿಕ ಆಗಿದ್ದೇ ಬೇರೆ. ಲೈಂಗಿಕ ದೌರ್ಜನ್ಯದ ದೂರು ನೀಡಿದ್ದ ಮಹಿಳೆಯರು, ಬಿಜೆಪಿ ಮುಖಂಡರು ಬಿಳಿ ಹಾಳೆ ಮೇಲೆ ಸಹಿ ಹಾಕಿಸಿಕೊಂಡು ಬಲವಂತವಾಗಿ ದೂರು ನೀಡುವಂತೆ ಒತ್ತಾಯಿಸಿದರು ಎಂದು ಆರೋಪಿದರು. ಅಲ್ಲಿಗೆ ಪ್ರಕರಣದ ದಿಕ್ಕೇ ಬದಲಾಯಿತು. ಒಂದೊಮ್ಮೆ ಟಿಎಂಸಿ ಮೇಲೆ ಆಕ್ರೋಶ ಹೊರಹಾಕಿದ್ದ ಜನರೀಗ ಬಿಜೆಪಿ ಮೇಲೆ ತಿರುಗಿಬಿದ್ದಿದ್ದಾರೆ. ಇದು ಚುನಾವಣೆಯಲ್ಲಿಯೂ ಬಿಜೆಪಿಗೆ ತಿರುಮಂತ್ರವಾಗುವ ಸಾಧ್ಯತೆ ಇದೆ.
ಕಂಟಕವಾದ ಸಿಎಎ, ಎನ್‌ಆರ್‌ಸಿ
ಪೌರತ್ವ ತಿದ್ದಪಡಿ ಕಾಯ್ದೆ (CAA) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (NRC) ಕಾನೂನು ರೂಪಿಸಿದ ಬಿಜೆಪಿ ಸರ್ಕಾರವು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದ ಹಿಂದೂ, ಸಿಖ್, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಕ್ರಿಶ್ಚಿಯನ್ನರಿಗೆ ಭಾರತದಲ್ಲಿ ಪೌರತ್ವ ನೀಡುವುದಾಗಿ ಹೇಳಿತು. ಮುಸ್ಲಿಮರನ್ನು ಹೊರಗಿಡುವ ಮೂಲಕ, ಅವರ ಕೆಂಗಣ್ಣಿಗೆ ಗುರಿಯಾಯ್ತು. ಇದರಿಂದಾಗಿ ರಾಜ್ಯಕ್ಕೆ ರಾಜ್ಯವೇ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿತ್ತು. ನಮ್ಮಲ್ಲಿ ಸಿಎಎ ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದು ಮಮತಾ ಕಡ್ಡಿಮುರಿದಂತೆ ಹೇಳಿದರು. ಪರಿಣಾಮವಾಗಿ, 2019ರ ನಂತರ ರಾಜ್ಯದಲ್ಲಿ ನಡೆದ ಮೂರು ಉಪಚುನಾವಣೆಗಳಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತು. ಇದು ಬಂಗಾಳಿಗರ ಆಕ್ರೋಶ ಹಾಗೂ ಒಗ್ಗಟ್ಟಿನ ಫಲ ಎಂಬುದನ್ನು ಟಿಎಂಸಿ ಒತ್ತಿ ಹೇಳಿತು. ಇದು ಬಿಜೆಪಿಗೂ ಸ್ಪಷ್ಟವಾಗಿ ಅರ್ಥವಾಗಿದೆ.
ಸದ್ಯ ಲೋಕಸಭೆ ಚುನಾವಣಾ ಫಲಿತಾಂಶದ ಕುತೂಹಲ ಹೆಚ್ಚಿದ್ದು, ಯಾರ ಪರ ಮತದಾರನ ಒಲವು ಇದೆ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ. ಬಿಜೆಪಿ ಹೆಸರು ಮೇಲಕ್ಕೆ ಕೇಳಿಬಂದರೂ, ಬಂಗಾಳದಲ್ಲಿ ಟಿಎಂಸಿಗೆ ಪ್ರಬಲ ಎದುರಾಳಿ ಇಂಡಿಯಾ ಮೈತ್ರಿಕೂಟ ಮತ್ತು ಇತರ ಪ್ರಬಲ ಎಡಪಕ್ಷಗಳು ಮಾತ್ರ ಎಂಬುದು ಸತ್ಯ. ಇಂದು (ಜೂನ್ 1) ಅಂತಿಮ ಹಂತದ ಮತದಾನ ಮುಗಿದ ಬೆನ್ನಲ್ಲೇ ಚುನಾವಣಾತ್ತರ ಫಲಿತಾಂಶ ಹೊರಬೀಳಲಿದ್ದು, ಫಲಿತಾಂಶದ ಅಂದಾಜು ಚಿತ್ರಣ ಸಿಗಲಿದೆ.
ಪಶ್ಚಿಮ ಬಂಗಾಳದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಲೋಕಸಭಾ ಚುನಾವಣೆ 2024; ಭಾರತದಲ್ಲಿ ಮತಗಟ್ಟೆ ಸಮೀಕ್ಷೆ ಫೇಲಾಗಿದ್ಯಾ, ಸಂದೇಹ ಬೇಡ ಈ 5 ಎಕ್ಸಿಟ್ ಪೋಲ್ ಚೆಕ್ ಮಾಡಿ