ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ ಫಲಿತಾಂಶ; ಎಕ್ಸಿಟ್ ಪೋಲ್ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳ ಕುರಿತು 4 ಅಂಶಗಳ ವಿವರಣೆ

ಲೋಕಸಭಾ ಚುನಾವಣೆ ಫಲಿತಾಂಶ; ಎಕ್ಸಿಟ್ ಪೋಲ್ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳ ಕುರಿತು 4 ಅಂಶಗಳ ವಿವರಣೆ

ಲೋಕಸಭಾ ಚುನಾವಣೆ ನಿರ್ಣಾಯಕ ಘಟ್ಟ ತಲುಪಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಇದಕ್ಕೂ ಮೊದಲು ಜೂನ್ 1 ರಂದು ಅಂತಿಮ ಹಂತದ ಮತದಾನ ಮುಗಿಯುತ್ತಲೇ, ಎಕ್ಸಿಟ್ ಪೋಲ್ ಪ್ರಕಟವಾಗಲಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಎಕ್ಸಿಟ್ ಪೋಲ್ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳ ಕುರಿತು 4 ಅಂಶಗಳ ವಿವರಣೆ ಇಲ್ಲಿದೆ.

ಲೋಕಸಭಾ ಚುನಾವಣೆ ಫಲಿತಾಂಶ; ಎಕ್ಸಿಟ್ ಪೋಲ್ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳು ಭಾರತದಲ್ಲಿವೆ. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ ಫಲಿತಾಂಶ; ಎಕ್ಸಿಟ್ ಪೋಲ್ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳು ಭಾರತದಲ್ಲಿವೆ. (ಸಾಂಕೇತಿಕ ಚಿತ್ರ)

ನವದೆಹಲಿ: ಲೋಕಸಭಾ ಚುನಾವಣೆ 2024 (Lok Sabha Election 2024) ಕೊನೆಯ ಹಂತಕ್ಕೆ ಬಂದಿದ್ದು, ಜೂನ್‌ 1ಕ್ಕೆ ಅಂತಿಮ ಹಂತದ ಮತದಾನ ನಡೆಯಲಿದೆ. ಏಪ್ರಿಲ್ 19ಕ್ಕೆ ಮೊದಲ ಹಂತದ ಮತದಾನ ನಡೆಯಿತು. ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತದಲ್ಲಿ ತಲಾ 14 ಲೋಕ ಸಭಾ ಕ್ಷೇತ್ರಗಳ ಮತದಾನ ನಡೆಯಿತು. ಈಗ ಸಹಜವಾಗಿಯೇ ಎಕ್ಸಿಟ್‌ ಪೋಲ್ (Exit Poll) ಅಥವಾ ಚುನಾವಣೋತ್ತರ ಸಮೀಕ್ಷೆಯ ಕಡೆಗೆ ಎಲ್ಲರ ಗಮನ ನೆಟ್ಟಿದೆ.

ಟ್ರೆಂಡಿಂಗ್​ ಸುದ್ದಿ

ಭಾರತದ ಮೊದಲ ಎಕ್ಸಿಟ್‌ ಪೋಲ್‌ ಅಥವಾ ಚುನಾವಣೋತ್ತರ ಸಮೀಕ್ಷೆಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಒಪೀನಿಯನ್‌ ಪ್ರಕಟಿಸಿತ್ತು. ಇದನ್ನು ಲೋಕಸಭೆಯ ಎರಡನೇ ಚುನಾವಣೆ ಸಂದರ್ಭದಲ್ಲಿ ಪ್ರಕಟಿಸಲಾಗಿತ್ತು. ಎಕ್ಸಿಟ್ ಪೋಲ್ ಅಥವಾ ಚುನಾವಣೋತ್ತರ ಸಮೀಕ್ಷೆ ಎಂಬುದು ಹೆಸರೇ ಸೂಚಿಸುವಂತೆ ಪ್ರತಿ ಮತದಾನ ಹಂತಗಳಲ್ಲಿ ಮತದಾನದ ಬಳಿಕ ಮತದಾರರ ಅಭಿಪ್ರಾಯ ಕೇಳಿ ಫಲಿತಾಂಶ ಏನಿರಬಹುದು ಎಂಬುದನ್ನು ಲೆಕ್ಕಾಚಾರದ ಮೇಲೆ ಊಹಿಸುವ ಪ್ರಕ್ರಿಯೆ.

ಭಾರತದಲ್ಲಿ ಚುನಾವಣೋತ್ತರ ಸಮೀಕ್ಷೆಗೆ ಸಂಬಂಧಿಸಿದ ನಿಯಮಗಳು

1) ಅಂತಿಮ ಹಂತದ ಮತದಾನ ಪೂರ್ಣಗೊಳ್ಳುವ ಮೊದಲು ಚುನಾವಣೋತ್ತರ ಸಮೀಕ್ಷೆಗಳ ವರದಿಯನ್ನು ಪ್ರಕಟಿಸುವ ಹಾಗಿಲ್ಲ. ಪ್ರಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 126A ಪ್ರಕಾರ, " ಈ ನಿಟ್ಟಿನಲ್ಲಿ ಚುನಾವಣಾ ಆಯೋಗವು ಸೂಚಿಸಬಹುದಾದಂತಹ ಅವಧಿಯಲ್ಲಿ ಎಕ್ಸಿಟ್ ಪೋಲ್‌ನ ಫಲಿತಾಂಶವನ್ನು ಯಾವುದೇ ವ್ಯಕ್ತಿ ಯಾವುದೇ ನಿರ್ಗಮನ ಸಮೀಕ್ಷೆಯನ್ನು ನಡೆಸಬಾರದು ಮತ್ತು ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಪ್ರಕಟಿಸಬಾರದು ಅಥವಾ ಪ್ರಚಾರ ಮಾಡಬಾರದು ಅಥವಾ ಯಾವುದೇ ರೀತಿಯಲ್ಲಿ ಪ್ರಸಾರ ಮಾಡಬಾರದು" ಎಂದಿದೆ.

2) ಯಾವ ಪಕ್ಷ ಗೆಲ್ಲುವ ಸಾಧ್ಯತೆ ಇದೆ ಎಂಬುದನ್ನು ತಿಳಿದುಕೊಳ್ಳುವ ಜನರ ತೀವ್ರ ಕುತೂಹಲದ ಕಾರಣ ಟಿವಿ ಚಾನೆಲ್‌ಗಳು, ಸೋಷಿಯಲ್ ಮೀಡಿಯಾಗಳಲ್ಲಿ ಮತದಾನ ಪೂರ್ಣಗೊಳ್ಳುವ ಮೊದಲೇ ಇದಕ್ಕೆ ಸಂಬಂಧಿಸಿದ ಸುಳಿವು ನೀಡತೊಡಗುತ್ತವೆ. ಹೀಗಾಗಿ ನಿಯಮಗಳ ಸೆಕ್ಷನ್‌ 126ಎ ಪ್ರಕಾರ, "ಈ ಸೆಕ್ಷನ್‌ನ ನಿಬಂಧನೆಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ"

3) ಹಿಂದಿನ ಚುನಾವಣೆಗಳಲ್ಲಿ ದೂರದರ್ಶನ ಅಥವಾ ರೇಡಿಯೋ ಚಾನೆಲ್‌ಗಳು ಚುನಾವಣೆಗೆ ಸಂಬಂಧಿಸಿದ ಯಾವುದನ್ನೂ ಪ್ರಸಾರ ಮಾಡಬಾರದು ಎಂದು ಚುನಾವಣಾ ಆಯೋಗವು ಘೋ‍ಷಿಸಿತ್ತು. ನಿಖರವಾಗಿ ಹೇಳಬೇಕು ಎಂದರೆ, “ಭಾರತೀಯ ಚುನಾವಣಾ ಆಯೋಗವು ಔಪಚಾರಿಕವಾಗಿ ಅಂತಹ ಫಲಿತಾಂಶಗಳನ್ನು ಪ್ರಕಟಿಸುವವರೆಗೆ, ಅಂತಹ ಫಲಿತಾಂಶಗಳು ಅನಧಿಕೃತ ಎಂದು ಸ್ಪಷ್ಟವಾದ ಹಕ್ಕು ನಿರಾಕರಣೆಯೊಂದಿಗೆ ಸಾಗಿಸದ ಹೊರತು ಅಥವಾ ಅಪೂರ್ಣ ಅಥವಾ ಭಾಗಶಃ ಫಲಿತಾಂಶಗಳು ಅಥವಾ ಪ್ರಕ್ಷೇಪಗಳನ್ನು ಅಂತಿಮ ಫಲಿತಾಂಶ ಎನ್ನುವಂತೆ ಪ್ರಕಟವಾಗಬಾರದು” ಎಂದು ಆಯೋಗ ಹೇಳಿದನ್ನು ಎಕನಾಮಿಕ್ ಟೈಮ್ಸ್ ಉಲ್ಲೇಖ ಮಾಡಿದೆ.

4) ಎಕ್ಸಿಟ್ ಪೋಲ್ ಅಥವಾ ಚುನಾವಣೋತ್ತರ ಸಮೀಕ್ಷೆಗಳು ಯಾವತ್ತೂ ಸರಿಯಾಗಬೇಕು ಎಂದೇನೂ ಇಲ್ಲ. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶವನ್ನು ಗಮನಿಸಿ. ಆಕ್ಸಿಸ್ ಮೈ ಇಂಡಿಯಾ-ಇಂಡಿಯಾ ಟುಡೇ ಸಮೀಕ್ಷೆಯನ್ನು ಹೊರತುಪಡಿಸಿ, ಅದರ ಶೇಕಡಾ 95 ಸಮೀಕ್ಷೆಗಳು ನಿಖರ ಫಲಿತಾಂಶ ಒದಗಿಸುವಲ್ಲಿ ವಿಫಲವಾಗಿವೆ.

ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು

ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಇಂಗ್ಲಿಷ್‌ನಲ್ಲಿ ಒಪೀನಿಯನ್ ಪೋಲ್ ಎಂದೂ, ಚುನಾವಣೋತ್ತರ ಸಮೀಕ್ಷೆಗಳನ್ನು ಇಂಗ್ಲಿಷ್‌ನಲ್ಲಿ ಎಕ್ಸಿಟ್ ಪೋಲ್ ಎಂದೂ ಗುರುತಿಸುತ್ತಾರೆ. ಚುನಾವಣಾ ಪೂರ್ವ ಸಮೀಕ್ಷೆ ಎಂದರೆ ಚುನಾವಣೆಗೆ ಮೊದಲು ಜನಾಭಿಪ್ರಾಯ ಸಂಗ್ರಹಿಸಿ ಅದರ ಲೆಕ್ಕಾಚಾರ ಆಧರಿಸಿ ಫಲಿತಾಂಶ ಹೀಗಿರಬಹುದು ಎಂದು ಹೇಳುವಂಥದ್ದು.

ಇದೇ ರೀತಿ ಚುನಾವಣೋತ್ತರ ಸಮೀಕ್ಷೆಯನ್ನು ಮತಗಟ್ಟೆಗಳಲ್ಲಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಮತಗಟ್ಟೆ ಸಮೀಕ್ಷೆ ನಡೆಸುವ ಸಂಸ್ಥೆಗಳಿದ್ದು, ಅವುಗಳು ಕೆಲವು ಮಾಧ್ಯಮಗಳ ಜೊತೆಗೂಡಿ ಮತದಾರರ ಅಭಿಪ್ರಾಯ ಸಂಗ್ರಹಿಸಿ ಚುನಾವಣಾ ಫಲಿತಾಂಶ ಹೀಗೆಯೇ ಇರಲಿದೆ ಎಂಬುದನ್ನು ಮುನ್ನಂದಾಜಿಸುತ್ತವೆ.

ಮೊದಲೆಲ್ಲ ಮತಗಟ್ಟೆಗೆ ಹೋಗಿ ಈ ಸಮೀಕ್ಷೆ ಮಾಡಲಾಗುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಮತದಾರರ ಮೊಬೈಲ್‌ಗೆ ಸ್ವಯಂಚಾಲಿತ ಕರೆ ಮಾಡಿ ಅಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡಲಾಗುತ್ತಿದೆ. ಈ ರೀತಿ ಕರೆಗಳಲ್ಲಿ ಮತದಾರರಿಗೆ ಕೆಲವು ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರಗಳ ಆಯ್ಕೆ ನೀಡಲಾಗುತ್ತದೆ. ಆ ಮೂಲಕ ಮಾದರಿ ಸಂಗ್ರಹಿಸಿ ಫಲಿತಾಂಶ ಅಂದಾಜಿಸುತ್ತಾರೆ. ಈ ರೀತಿ ಸಮೀಕ್ಷೆ ನಡೆಸುವುದಕ್ಕೆ ಒಂದು ಚೌಕಟ್ಟಿನಲ್ಲಿ ಪ್ರಶ್ನಾವಳಿಗಳನ್ನು ಸಿದ್ಧಪಡಿಸಲಾಗುತ್ತದೆ. ಇದಕ್ಕೆ ಮತದಾರರು ನೀಡಿದ ಉತ್ತರಗಳನ್ನು ಇಟ್ಟುಕೊಂಡು ವಿಶ್ಲೇಷಣೆ ಮಾಡಲಾಗುತ್ತದೆ ಎಂಬುದನ್ನು ಪರಿಣತರು ಹೇಳುತ್ತಾರೆ.