ಲೋಕಸಭಾ ಚುನಾವಣೆ; ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ, ಯಡಿಯೂರಪ್ಪ ಕುಟುಂಬದ ರಾಜಕೀಯ ಭವಿಷ್ಯ ನಿರ್ಧರಿಸುವ ಮತದಾನ
ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ; ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ, ಯಡಿಯೂರಪ್ಪ ಕುಟುಂಬದ ರಾಜಕೀಯ ಭವಿಷ್ಯ ನಿರ್ಧರಿಸುವ ಮತದಾನ

ಲೋಕಸಭಾ ಚುನಾವಣೆ; ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ, ಯಡಿಯೂರಪ್ಪ ಕುಟುಂಬದ ರಾಜಕೀಯ ಭವಿಷ್ಯ ನಿರ್ಧರಿಸುವ ಮತದಾನ

ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಲಿಂಗಾಯತರದ್ದೇ ಪ್ರಾಬಲ್ಯವಿದ್ದು, 2023 ರಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದ ಈ ಸಮಾಜ ಈ ಬಾರಿ ಯಾವ ಪಕ್ಷದ ಬೆಂಬಲಕ್ಕೆ ನಿಲ್ಲಲಿದೆ ಎಂಬುದು ಕುತೂಹಲ. ಆದಾಗ್ಯೂ, ಯಡಿಯೂರಪ್ಪ ಅವರ ಕುಟುಂಬದ ರಾಜಕೀಯ ಭವಿಷ್ಯ ನಿರ್ಧರಿಸಲಿವೆ ಈ 14 ಕ್ಷೇತ್ರಗಳು ಎಂಬುದು ನಿರ್ವಿವಾದಿತ ವಿಚಾರ. (ರಾಜಕೀಯ ವಿಶ್ಲೇಷಣೆ - ಎಚ್.ಮಾರುತಿ, ಬೆಂಗಳೂರು)

ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಲಿಂಗಾಯತರದ್ದೇ ಪ್ರಾಬಲ್ಯವಿದ್ದು ಬಿಎಸ್ ಯಡಿಯೂರಪ್ಪ (ಎಡ ಚಿತ್ರ) ಕುಟುಂಬದ ರಾಜಕೀಯ ಭವಿಷ್ಯ ನಿರ್ಧರಿಸುವ ಮತದಾನ ಮೇ 7ರಂದು ನಡೆಯಲಿದೆ.
ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಲಿಂಗಾಯತರದ್ದೇ ಪ್ರಾಬಲ್ಯವಿದ್ದು ಬಿಎಸ್ ಯಡಿಯೂರಪ್ಪ (ಎಡ ಚಿತ್ರ) ಕುಟುಂಬದ ರಾಜಕೀಯ ಭವಿಷ್ಯ ನಿರ್ಧರಿಸುವ ಮತದಾನ ಮೇ 7ರಂದು ನಡೆಯಲಿದೆ.

ಬೆಂಗಳೂರು: ಕರ್ನಾಟಕದಲ್ಲಿ ನಡೆಯಲಿರುವ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಮೇ 7ರಂದು ಮತದಾನ ನಡೆಯಲಿದ್ದು ಎಲ್ಲರ ಕಣ್ಣು ವೀರಶೈವ ಲಿಂಗಾಯತ ಸಮುದಾಯದತ್ತ ನೆಟ್ಟಿದೆ. 2ನೇ ಹಂತದಲ್ಲಿ ನಡೆಯಲಿರುವ 14 ಕ್ಷೇತ್ರಗಳು ಲಿಂಗಾಯತ ಸಮುದಾಯ ಪ್ರಾಬಲ್ಯ ಹೊಂದಿವೆ. ರಾಜ್ಯದ ಮತದಾರರ ಸಂಖ್ಯೆ 5.3 ಕೋಟಿ ಇದರಲ್ಲಿ ಲಿಂಗಾಯತ ಸಮುದಾಯ ಶೇ.17 ರಷ್ಟು ಮತ್ತು ಎರಡನೇ ಸ್ಥಾನದಲ್ಲಿರುವ ಒಕ್ಕಲಿಗ ಸಮುದಾಯ ಶೇ.12ರಷ್ಟು ಮತದಾರರನ್ನು ಹೊಂದಿದೆ.

ಲಿಂಗಾಯತ ಸಮುದಾಯ ಈ ಬಾರಿ ಯಾವ ಪಕ್ಷವನ್ನು ಕೈ ಹಿಡಿಯಲಿದ್ದರೆ ಎನ್ನುವುದು ಕುತೂಹಲ ಮೂಡಿಸಿದೆ. ಎರಡು ದಶಕಗಳಿಂದ ಈ ಸಮಾಜ ಬಿಜೆಪಿಯ ಬೆಂಬಲಕ್ಕೆ ನಿಲ್ಲುತ್ತಾ ಬಂದಿತ್ತು. ಆದರೆ 2023ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲುವ ಮೂಲಕ ಅಚ್ಚರಿ ಮೂಡಿಸಿತ್ತು.

ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಯತ್ತ ಮರಳುವುದೇ ಅಥವಾ ಕಾಂಗ್ರೆಸ್ ಜೊತೆ ಮುಂದುವರೆಯಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಏಕೆಂದರೆ ಈ ಸಮುದಾಯ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸುವಷ್ಟು ಸಾಮರ್ಥ್ಯ ಹೊಂದಿದೆ.

ಲಿಂಗಾಯತರು ಈ ಬಾರಿ ಯಾರ ಪರ

2019 ರ ಲೋಕಸಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಬೆಂಬಲದೊಂದಿಗೆ ಉತ್ತರ ಕರ್ನಾಟಕದ ಎಲ್ಲ 14 ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸಿತ್ತು. ಆದರೆ 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರಸ್ ಪಕ್ಷವನ್ನು ಬೆಂಬಲಿಸಿತು. ಕಾಂಗ್ರೆಸ್ ಟಿಕೆಟ್ ನೀಡಿದ್ದ 46 ಲಿಂಗಾಯತರಲ್ಲಿ 37 ಅಭ್ಯರ್ಥಿಗಳು ಜಯ ಗಳಿಸಿದ್ದರು. ಇದಕ್ಕೆ ವಿರುದ್ಧವಾಗಿ ಬಿಜೆಪಿ 69 ಲಿಂಗಾಯತರಿಗೆ ಟಿಕೆಟ್ ನೀಡಿತ್ತು. ಆದರೆ ಗೆದ್ದಿದ್ದು ಕೇವಲ 15 ಮಂದಿ ಮಾತ್ರ. 224 ಕ್ಷೇತ್ರಗಳಲ್ಲಿ ಲಿಂಗಾಯತರು 90 ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ.

ದಶಕಗಳ ಕಾಲದಿಂದ ಬಿಜೆಪಿಯೊಂದಿಗೆ ನಿಂತಿದ್ದ ಲಿಂಗಾಯತರು 2023ರಲ್ಲಿ ಏಕಾಏಕಿ ಕಾಂಗ್ರೆಸ್ ಬೆಂಬಲಕ್ಕೆ ನಿಂತರು ಎನ್ನುವುದಕ್ಕೆ ಹಲವಾರು ಕಾರಣಗಳಿವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದು ಪ್ರಮುಖ ಕಾರಣ. ಉತ್ತರ ಕರ್ನಾಟಕದ ಈ 14 ಕ್ಷೇತ್ರಗಳು ಬಿಜೆಪಿಗೆ ಎಷ್ಟು ಮುಖ್ಯವೋ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರ ರಾಜಕೀಯ ಭವಿಷ್ಯಕ್ಕೂ ಅಷ್ಟೇ ಮುಖ್ಯ.

2021 ರ ಜುಲೈನಲ್ಲಿ ಹೈ ಕಮಾಂಡ್ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಸೇರಿದಂತೆ ಅನೇಕ ಕಾರಣಗಳನ್ನು ಮುಂದೊಡ್ಡಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಿತ್ತು. ಇದು ಲಿಂಗಾಯತ ಸಮುದಾಯವನ್ನು ಕೆರಳಿಸಿತ್ತು. ಇವರೇ ಆಯ್ಕೆ ಮಾಡಿದ ಬಸವರಾಜ ಬೊಮ್ಮಾಯಿ ಅವರಿಗೆ ಪಟ್ಟಾಭಿಷೇಕ ಮಾಡಲಾಗಿತ್ತಾದರೂ ಈ ಸಮಾಜದ ಕೋಪ ಆರಿಸಲು ಸಾಧ್ಯವಾಗಿರಲಿಲ್ಲ. ಸುಮಾರು 500 ಕ್ಕೂ ಹೆಚ್ಚು ಲಿಂಗಾಯತ ಸ್ವಾಮೀಜಿಗಳು ಯಡಿಯೂರಪ್ಪ oಅವರ ಬೆನ್ನಿಗೆ ನಿಂತಿದ್ದರು.

ಎರಡನೆಯದಾಗಿ ಜಗದೀಶ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರಂತಹ ಪ್ರಮುಖ ಲಿಂಗಾಯತ ನಾಯಕರಿಗೆ ಟಿಕೆಟ್ ತಪ್ಪಿಸಿದ್ದು ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ರಾಜ್ಯದಲಿ 9 ಮುಖ್ಯಮಂತ್ರಿಗಳನ್ನು ನೀಡಿದ ಈ ಸಮಾಜದ ಕೋಪ ಆರಿರಲಿಲ್ಲ. ಮುಸ್ಲಿಮರಿಗೆ ನೀಡಿದ್ದ ಶೇ.4 ರಷ್ಟು ಮೀಸಲಾತಿಯನ್ನು ಕಿತ್ತು ತಲಾ 2 ರಷ್ಟು ಮೀಸಲಾತಿಯನ್ನು ಲಿಂಗಾಯತ ಮತ್ತು ಒಕ್ಕಲಿಗರಿಗೆ ಹಂಚುವ ಮೂಲಕ ಕೋಪ ಶಮನ ಮಾಡುವ ಪ್ರಯತ್ನವನ್ನು ಬೊಮ್ಮಾಯಿ ಮಾಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.

ಈ ಹಂತದಲ್ಲಿ ಯಡಿಯೂರಪ್ಪ ಅವರ ಅನಿವಾರ್ಯತೆಯನ್ನು ಬಿಜೆಪಿ ಅರ್ಥ ಮಾಡಿಕೊಂಡಿತ್ತು. ಯಡಿಯೂರಪ್ಪ ಅವರಿಗೆ ಸಂಸದೀಯ ಮಂಡಳಿ ಸದಸ್ಯತ್ವ ಮತ್ತು ವಿಜಯೇಂದ್ರ ಅವರಿಗೆ ರಾಜ್ಯ ಅಧ್ಯಕ್ಷ ಸ್ಥಾನವನ್ನು ನೀಡಲಾಯಿತು. ಅರವಿಂದ ಬೆಲ್ಲದ್ ಅವರನ್ನು ವಿಧಾನಸಭೆ ಉಪ ನಾಯಕನನ್ನಾಗಿ ನೇಮಿಸಲಾಯಿತು. ಈ ಚುನಾವಣೆಯಲ್ಲಿ 9 ಲಿಂಗಾಯತರಿಗೆ ಟಿಕೆಟ್ ನೀಡಿದೆ.

ಶೆಟ್ಟರ್ ಘರ್‌ ವಾಪ್ಸಿ ಆದರೂ ಸವದಿ ಬಾಕಿ

ಶೆಟ್ಟರ ಅವರನ್ನು ಘರ್ ವಾಪ್ಸಿ ಮಾಡುವಲ್ಲಿ ಹೈಕಮಾಂಡ್ ಯಶಸ್ವಿಯಾದರೂ ಸವದಿ ಅವರನ್ನು ಕರೆ ತರುವಲ್ಲಿ ವಿಫಲವಾಯಿತು. ಲಿಂಗಾಯತರು ಬಿಜೆಪಿಗೆ ಮರಳಿದ್ದಾರೆ ಎಂದು ಪಕ್ಷದ ಮುಖಂಡರು ಹೇಳಿದರೆ ಕಾಂಗ್ರೆಸ್ ಈ ವಾದವನ್ನು ಒಪ್ಪುತ್ತಿಲ್ಲ. ಬಿಜೆಪಿಯೊಳಗಿನ ಲಿಂಗಾಯತ ಮುಖಂಡರಲ್ಲಿ ಹೊಂದಾಣಿಕೆಯೇ ಇಲ್ಲ. ಬಸನಗೌಡ ಪಾಟೀಲ ಯತ್ನಾಳ್ ಪಕ್ಷದ ಅಧ್ಯಕ್ಷರ ವಿರುದ್ಧವಾಗಿ ಇದ್ದಾರೆ. ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ ಸ್ವತಂತ್ರವಾಗಿ ಸ್ಪರ್ಧಿಸಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದಾರೆ. ಈ ಎಲ್ಲ ಅಂಶಗಳು ಲಿಂಗಾಯತರು ಸಂಪೂರ್ಣವಾಗಿ ಬಿಜೆಪಿ ಜೊತೆ ಇಲ್ಲ ಎನ್ನುವುದನ್ನು ತೋರಿಸುತ್ತವೆ ಎಂದು ಹೇಳುತ್ತಾರೆ.

ಈ ಚುನಾವಣೆಯಲ್ಲಿ 20 ಸ್ಥಾನಗಳನ್ನಾದರೂ ಗೆದ್ದರೆ ಮಾತ್ರ ಪಕ್ಷ ಇನ್ನೂ ಎರಡು ದಶಕಗಳ ಕಾಲ ಯಡಿಯೂರಪ್ಪ ಅವರ ಕುಟುಂಬದ ಹಿಡಿತದಲ್ಲೇ ಇರುತ್ತದೆ. ಇಲ್ಲವಾದಲ್ಲಿ ಯಡಿಯೂರಪ್ಪ ಮೂಲೆಗುಂಪಾದರೂ ಆಶ್ಚರ್ಯಪಡಬೇಕಿಲ್ಲ ಎಂದು ಬಿಜೆಪಿ ಮುಖಂಡರೊಬ್ಬರು ಅಭಿಪ್ರಾಯಪಡುತ್ತಾರೆ.

ಲಿಂಗಾಯತರು ಕೈ ಹಿಡಿಯದಿದ್ದರೆ ಪರ್ಯಾಯ ವೋಟ್ ಬ್ಯಾಂಕ್ ಸೃಷ್ಟಿಸುವಲ್ಲಿ ಕಾಂಗ್ರೆಸ್ ನಿರತವಾಗಿದೆ. ಅಹಿಂದ, ಎಸ್ ಸಿ, ಎಸ್ ಟಿ ಸೇರಿದಂತೆ ಅನೇಕ ವರ್ಗಗಳನ್ನು ಒಂದೇ ತೆಕ್ಕೆಗೆ ತರಲು ಲೆಕ್ಕಾಚಾರ ಹಾಕಿದೆ. ಶಾಮನೂರು, ಖಂಡ್ರೆ ಸೇರಿದಂತೆ ಅನೇಕ ಪ್ರಭಾವಿ ಲಿಂಗಾಯತ ಕುಟುಂಬಗಳಿಗೆ ಟಿಕೆಟ್ ನೀಡಯುವ ಮೂಲಕವೂ ಕಾಂಗ್ರೆಸ್ ಲಿಂಗಾಯತ ಸಮುದಾಯವನ್ನು ಓಲೈಸುವ ಪ್ರಯತ್ನ ಮಾಡಿದೆ. ಯಾರು ಕಡೆ ಎನ್ನುವುದನ್ನು ಫಲಿತಾಂಶ ಬರುವವರೆಗೆ ಕಾಯಲೇಬೇಕು.

(ರಾಜಕೀಯ ವಿಶ್ಲೇಷಣೆ - ಎಚ್.ಮಾರುತಿ, ಬೆಂಗಳೂರು)

Whats_app_banner