Breaking News:ಬಿಜೆಪಿ ಪಟ್ಟಿ ಪ್ರಕಟ, ಅನಂತ್‌ಕುಮಾರ್‌ ಹೆಗಡೆಗೆ ಕೊಕ್‌, ಶೆಟ್ಟರ್‌ಗೆ ಬೆಳಗಾವಿ, ಚಿತ್ರದುರ್ಗ ಬಾಕಿ
ಕನ್ನಡ ಸುದ್ದಿ  /  ಚುನಾವಣೆಗಳು  /  Breaking News:ಬಿಜೆಪಿ ಪಟ್ಟಿ ಪ್ರಕಟ, ಅನಂತ್‌ಕುಮಾರ್‌ ಹೆಗಡೆಗೆ ಕೊಕ್‌, ಶೆಟ್ಟರ್‌ಗೆ ಬೆಳಗಾವಿ, ಚಿತ್ರದುರ್ಗ ಬಾಕಿ

Breaking News:ಬಿಜೆಪಿ ಪಟ್ಟಿ ಪ್ರಕಟ, ಅನಂತ್‌ಕುಮಾರ್‌ ಹೆಗಡೆಗೆ ಕೊಕ್‌, ಶೆಟ್ಟರ್‌ಗೆ ಬೆಳಗಾವಿ, ಚಿತ್ರದುರ್ಗ ಬಾಕಿ

ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಅಂತಿಮ ಪಟ್ಟಿ ಬಿಡುಗಡೆ ಮಾಡಿದ್ದು ಕೇಂದ್ರದ ಮಾಜಿ ಸಚಿವ ಅನಂತಕುಮಾರ್‌ ಹೆಗಡೆ ಟಿಕೆಟ್‌ ಕೈ ತಪ್ಪಿದೆ. ಜಗದೀಶ್‌ ಶೆಟ್ಟರ್‌ ಬೆಳಗಾವಿ ಟಿಕೆಟ್‌ ಪಡೆದಿದ್ದಾರೆ.ವರದಿ: ಎಚ್‌.ಮಾರುತಿ ಬೆಂಗಳೂರು

ಕರ್ನಾಟಕದಿಂದ ಲೋಕಸಭೆ ಚುನಾವಣೆ ಟಿಕೆಟ್‌ ಪಟ್ಟಿ ಘೋಷಣೆಯಾಗಿದೆ.
ಕರ್ನಾಟಕದಿಂದ ಲೋಕಸಭೆ ಚುನಾವಣೆ ಟಿಕೆಟ್‌ ಪಟ್ಟಿ ಘೋಷಣೆಯಾಗಿದೆ.

ದೆಹಲಿ: ಲೋಕಸಭೆ ಚುನಾವಣೆಗೆ ಕರ್ನಾಟಕದಿಂದ ಸ್ಪರ್ಧಿಸಲಿರುವ ನಾಲ್ಕು ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್‌ ಅಂತಿಮಗೊಳಿಸಿದೆ. ಕೆನರಾದಿಂದ ಆರು ಬಾರಿ ಸಂಸದರಾಗಿದ್ದ ಅನಂತಕುಮಾರ್‌ ಹೆಗಡೆಗೆ ಅವಕಾಶ ನೀಡಿಲ್ಲ. ಅಲ್ಲಿ ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ವಿವಾದಿತ ಹೇಳಿಕೆಗಳ ಮೂಲಕ ವರಿಷ್ಠರ ಕೆಂಗೆಣ್ಣಿಗೆ ಗುರಿಯಾಗಿದ್ದ ಅನಂತಕುಮಾರ್‌ ಹೆಗಡೆ ಅವರಿಗೆ ಈ ಬಾರಿ ಟಿಕೆಟ್‌ ತಪ್ಪಬಹುದು ಎನ್ನುವ ಚರ್ಚೆಗಳಿದ್ದವು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಕಾಗೇರಿ ಅವರ ಹೆಸರು ಕೇಳಿ ಬಂದಿತ್ತು.

ಇನ್ನು ಬೆಳಗಾವಿಯಲ್ಲಿ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ಗೆ ಟಿಕೆಟ್‌ ನೀಡಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗದೇ ಇದ್ದುದರಿಂದ ಮುನಿಸಿಕೊಂಡು ಪಕ್ಷ ತೊರೆದು ಕಾಂಗ್ರೆಸ್‌ ಸೇರಿ ಸೋತಿದ್ದ ಶೆಟ್ಟರ್‌ ಎರಡು ತಿಂಗಳ ಹಿಂದೆ ಪಕ್ಷಕ್ಕೆ ಮರಳಿದ್ದರು. ಅವರು ಧಾರವಾಡ ಇಲ್ಲವೇ ಹಾವೇರಿಯಿಂದ ಅವಕಾಶ ನೀಡುವಂತೆ ಕೋರಿದ್ದರು. ಆದರೆ ಪಕ್ಷ ಬೆಳಗಾವಿಯಲ್ಲಿ ಸ್ಪರ್ಧಿಸುವಂತೆ ಸೂಚಿಸಿದೆ.

ಶೆಟ್ಟರ್‌ ಅವರ ಬೀಗರೂ ಆಗಿರುವ ಕೇಂದ್ರದ ಮಾಜಿ ಸಚಿವ ದಿ. ಚನ್ನಬಸಪ್ಪ ಅಂಗಡಿ ಅವರ ನಿಧನದ ನಂತರ ಅವರ ಪತ್ನಿ ಮಂಗಳಾ ಅಂಗಡಿ ಇಲ್ಲಿ ಸಂಸದೆಯಾಗಿದ್ದರು.

ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಅವಕಾಶ ಪಡೆದುಕೊಂಡಿದ್ದಾರೆ. ಇಲ್ಲಿ ಯಲಹಂಕ ಶಾಸಕ ವಿಶ್ವನಾಥ್‌ ಪುತ್ರ ಅಲೋಕ್‌ ಹಾಗೂ ಸುಧಾಕರ್‌ ನಡುವೆ ಟಿಕೆಟ್‌ ಗೆ ಪೈಪೋಟಿ ಇತ್ತು.

ಈ ಬಾರಿ ರಾಯಚೂರಿನಿಂದ ಹಾಲಿ ಸದಸ್ಯ ರಾಜಾ ಅಮರೇಶ್ವರ ನಾಯಕ್‌ ಅವರಿಗೆ ಮಣೆ ಹಾಕಲಾಗಿದೆ. ಅವರನ್ನು ಬದಲಿಸುವ ಕುರಿತು ಚರ್ಚೆಗಳು ನಡೆದಿದ್ದವು.

ಈ ನಡುವೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಪ್ರತಿನಿಧಿಸುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಯಾರನ್ನೂ ಪ್ರಕಟಿಸಿಲ್ಲ. ಇದೊಂದು ಕ್ಷೇತ್ರ ಮಾತ್ರ ಬಿಜೆಪಿ ಪ್ರಕಟಿಸುವುದು ಬಾಕಿ ಉಳಿದಿದೆ. ಇಲ್ಲಿ ನಾರಾಯಣಸ್ವಾಮಿ ಬದಲಿಸಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರ ಹೆಸರು ಪ್ರಬಲವಾಗಿದೆ. ಇಲ್ಲದೇ ಇದ್ದರೆ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಕಣಕ್ಕಿಳಿಸುವ ಚರ್ಚೆಗಳೂ ನಡೆದಿವೆ.

(ವರದಿ: ಎಚ್‌.ಮಾರುತಿ. ಬೆಂಗಳೂರು)

Whats_app_banner