ಕನ್ನಡ ಸುದ್ದಿ  /  Elections  /  Lok Sabha Elections 2024 Former Minister G Janardhan Reddy Tp Join Bjp Merge His Kalyana Rajya Pragati Party Kub

ಗಾಲಿ ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆ ನಾಳೆ, ಬಿಜೆಪಿಯೊಂದಿಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ವಿಲೀನ

ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಅವರು ಸೋಮವಾರ ಬಿಜೆಪಿ ಸೇರಲಿದ್ದು. ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡಲಿದ್ದಾರೆ.

ಬಿಜೆಪಿಗೆ ಮರಳಲಿರುವ ಜನಾರ್ದನರೆಡ್ಡಿ.
ಬಿಜೆಪಿಗೆ ಮರಳಲಿರುವ ಜನಾರ್ದನರೆಡ್ಡಿ.

ಬಳ್ಳಾರಿ: ಒಂದು ಕಾಲಕ್ಕೆ ಬಿಜೆಪಿಯೊಂದಿಗೆ ಸಕ್ರಿಯವಾಗಿದ್ದು, ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಜೈಲು ಸೇರಿ ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಂದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಸೇರುವುದು ನಿಕ್ಕಿಯಾಗಿದೆ. ಸೋಮವಾರ ಅವರು ಬೆಂಗಳೂರಿನಲ್ಲಿ ಬಿಜೆಪಿ ಸೇರಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಪಕ್ಷದ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಇತರೆ ಪ್ರಮುಖರ ಸಮ್ಮುಖದಲ್ಲಿ ಪಕ್ಷಕ್ಕೆ ರೆಡ್ಡಿ ಮರಳಿದ್ದು. ವರ್ಷದ ಹಿಂದೆ ರಚಿಸಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ವಿಲೀನಗೊಳಿಸಲಿದ್ದಾರೆ.

ಜನಾರ್ದನ ರೆಡ್ಡಿ ಅವರು ಹಾಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರು. ಜನಾರ್ದನ ರೆಡ್ಡಿ ಸೇರ್ಪಡೆಯಿಂದ ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಬಲ 67ಕ್ಕೆ ಏರಿಕೆಯಾಗಲಿದೆ. ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಬಲ 86 ಆಗಲಿದೆ.

ರಾಮುಲು ಸ್ನೇಹ

ಗಾಲಿ ಜನಾರ್ದನ ರೆಡ್ಡಿ ಪೊಲೀಸ್‌ ಪೇದೆಯೊಬ್ಬರ ಪುತ್ರ. ಗಣಿ ವ್ಯವಹಾರದಲ್ಲಿ ತೊಡಗಿಸಿಕೊಂಡು ಸೀಮಿತ ಅವಧಿಯಲ್ಲಿ ಮೇಲಕ್ಕೆ ಬಂದ ಜನಾರ್ದನರೆಡ್ಡಿ ರಾಜಕೀಯದಲ್ಲೂ ತೊಡಗಿಸಿಕೊಂಡವರು. ಶ್ರೀರಾಮುಲು ಅವರೊಂದಿನ ಒಡನಾಟದ ಕಾರಣಕ್ಕೆ ಜೋಡಿಯಾಗಿ ಇಬ್ಬರೂ ಕಾಣಿಸಿಕೊಂಡರು. ಅದರಲ್ಲೂ 1999 ರಲ್ಲಿ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಸೋನಿಯಾಗಾಂಧಿ ಹಾಗೂ ಸುಷ್ಮಾ ಸ್ವರಾಜ್‌ ಅವರ ನಡುವಿನ ಸ್ಪರ್ಧೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದವರು. ಇದಾದ ನಂತರ ಎರಡು ದಶಕದಿಂದ ಕರ್ನಾಟಕದ ರಾಜಕಾರಣದಲ್ಲಿ ಗುರುತಿಸಿಕೊಂಡ ಜೋಡಿ. ಕರ್ನಾಟಕದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಸರ್ಕಾರ ರಚನೆಯಾದಾಗ ಪ್ರಮುಖ ಪಾತ್ರ ವಹಿಸಿದವರು. ನಂತರ ಬಿಜೆಪಿ ಸರ್ಕಾರ ಬಂದಾಗ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಇಬ್ಬರು ಸಚಿವರಾದರು. ನಂತರ ಮುಖ್ಯಮಂತ್ರಿ ಬದಲಾದರೂ ರೆಡ್ಡಿ ಸಚಿವರಾಗಿದ್ದರು. ಇದಾದ ಬಳಿಕ ಗಣಿ ಲೈಸೆನ್ಸ್‌ ವಿಚಾರದಲ್ಲಿ ಜನಾರ್ದನ ರೆಡ್ಡಿ ಬಂಧನವಾಗಿ ಜೈಲು ಸೇರಿದರೆ, ಶ್ರೀರಾಮುಲು ತಮ್ಮದೇ ಬಿಎಸ್‌ಆರ್‌ ಪಕ್ಷ ರಚಿಸಿದರು. ಆನಂತರ ಅವರೂ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದರು.

ಮತ್ತೆ ಶ್ರೀರಾಮುಲು ಗೆದ್ದು ಐದು ವರ್ಷ ಸಚಿವರಾದರೆ ಜನಾರ್ದನರೆಡ್ಡಿ ಜೈಲಿನಿಂದ ಬಿಡುಗಡೆಯಾದರೂ ಬಳ್ಳಾರಿ ಪ್ರವೇಶಕ್ಕೆ ನಿಷೇಧವಿತ್ತು. ಆನಂತರ ಕಾನೂನು ಹೋರಾಟದಲ್ಲಿ ಗೆದ್ದು ಬಂದರೂ ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಸೇರದೇ ಪ್ರತ್ಯೇಕ ಪಕ್ಷ ರಚಿಸಿಕೊಂಡು ಸ್ಪರ್ಧಿಸಿದರು. ಆದರೆ ಗಂಗಾವತಿಯಲ್ಲಿ ತಾವೊಬ್ಬರೇ ಗೆದ್ದರೂ ಇತರೆಡೆ ಪಕ್ಷದ ಅಭ್ಯರ್ಥಿಗಳು ಸೋತರು. ತಿಂಗಳ ಹಿಂದೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಿದ್ದರು.

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವ ಬಿ.ಶ್ರೀರಾಮುಲು ಈ ಬಾರಿ ಬಳ್ಳಾರಿ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ. ಅವರೇ ಮಧ್ಯಸ್ಥಿಕೆ ವಹಿಸಿ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಗೆ ಸೇರ್ಪಡೆಗೆ ಮುತುವರ್ಜಿ ವಹಿಸಿದ್ದಾರೆ. ರೆಡ್ಡಿ ಸೇರ್ಪಡೆಯಿಂದ ಬಳ್ಳಾರಿ, ಗದಗ, ರಾಯಚೂರು, ಕೊಪ್ಪಳ, ಚಿತ್ರದುರ್ಗ ಸಹಿತ ಕೆಲವು ಜಿಲ್ಲೆಗಳಲ್ಲಿ ಬಿಜೆಪಿಗೆ ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ.

ಜೈಲು ವಾಸ

ಗಣಿ ಪ್ರಕರಣಗಳಲ್ಲಿ ಸಿಲುಕಿ ಜೈಲು ವಾಸ ಅನುಭವಿಸಿರುವ ಜನಾರ್ದನ ರೆಡ್ಡಿ ವಿರುದ್ದದ ಪ್ರಕರಣಗಳ ವಿಚಾರಣೆ ಇನ್ನೂ ನಾನಾ ನ್ಯಾಯಾಲಯಗಳಲ್ಲಿ ನಡೆದಿವೆ. ವಿಚಾರಣೆ ಬಾಕಿ ಇರುವಾಗಲೇ ಅವರು ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದಾರೆ. ಅವರ ಸಹೋದರರಾದ ಕರುಣಾಕರ ರೆಡ್ಡಿ ಹಾಗೂ ಸೋಮಶೇಖರ ರೆಡ್ಡಿ ಅವರಿಬ್ಬರೂ ಬಿಜೆಪಿಯಲ್ಲಿಯೇ ಉಳಿದಿದ್ದು, ಕಳೆದ ಬಾರಿ ಗೆದ್ದರೂ ಈ ಬಾರಿ ಸೋತಿದ್ದಾರೆ.