Arun Govil: ರಾಮಾಯಣದ ರಾಮನಿಗೆ ಲೋಕಸಭೆ ಟಿಕೆಟ್‌ ಕೊಟ್ಟ ಬಿಜೆಪಿ !
ಕನ್ನಡ ಸುದ್ದಿ  /  ಚುನಾವಣೆಗಳು  /  Arun Govil: ರಾಮಾಯಣದ ರಾಮನಿಗೆ ಲೋಕಸಭೆ ಟಿಕೆಟ್‌ ಕೊಟ್ಟ ಬಿಜೆಪಿ !

Arun Govil: ರಾಮಾಯಣದ ರಾಮನಿಗೆ ಲೋಕಸಭೆ ಟಿಕೆಟ್‌ ಕೊಟ್ಟ ಬಿಜೆಪಿ !

ಈ ವರ್ಷ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಯಿತು. ನಾಲ್ಕು ದಶಕದ ಹಿಂದೆ ರಾಮಾಯಾಣ ಧಾರಾವಾಹಿಯಲ್ಲಿ ರಾಮನ ಪಾತ್ರ ಮಾಡಿದ್ದ ಅರುಣ್‌ ಗೋವಿಲ್‌ ಈ ಬಾರಿ ಲೋಕಸಭೆ ಚುನಾವಣೆ ಟಿಕೆಟ್‌ ಪಡೆದರು.

ರಾಮನ ಪಾತ್ರಧಾರಿ ಅರುಣ್‌ ಗೋವಿಲ್‌ಗೆ ಬಿಜೆಪಿ ಟಿಕೆಟ್‌
ರಾಮನ ಪಾತ್ರಧಾರಿ ಅರುಣ್‌ ಗೋವಿಲ್‌ಗೆ ಬಿಜೆಪಿ ಟಿಕೆಟ್‌

ದೆಹಲಿ: ನಾಲ್ಕು ದಶಕದ ಹಿಂದೆ ಭಾರತದ ಪ್ರತಿ ಮನಸುಗಳಲ್ಲಿ ರಾಮಾಯಣದ ಮೂಲಕ ರಾಮನ ಪಾತ್ರವನ್ನೇ ಅಚ್ಚು ಒತ್ತಿದ್ದ ಹಿರಿಯ ನಟ ಅರುಣ್‌ ಗೋವಿಲ್‌ ಈ ಬಾರಿ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ. ಅದೂ ಎರಡು ತಿಂಗಳ ಹಿಂದೆಯಷ್ಟೇ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಮಾಡಲಾಗಿದೆ. ಭಾವನಾತ್ಮಕ ಸಂಬಂಧವನ್ನು ಚುನಾವಣೆಗೂ ಬೆಸೆಯುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಭಾರತೀಯ ಜನತಾಪಕ್ಷ ಅರುಣ್‌ ಗೋವಿಲ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಭಾನುವಾರ ಬಿಡುಗಡೆಯಾಗಿರುವ ಬಿಜೆಪಿಯ ಐದನೇ ಪಟ್ಟಿಯಲ್ಲಿ ಅರುಣ್‌ ಗೋವಿಲ್‌ ಹೆಸರಿದೆ. ಅವರಿಗೆ ಮೀರತ್‌ ಕ್ಷೇತ್ರದ ಟಿಕೆಟ್‌ ದೊರೆತಿದೆ.

ಗೋವಿಲ್‌ ಅವರು ಮೂರು ವರ್ಷದ ಹಿಂದೆಯಷ್ಟೇ ಬಿಜೆಪಿ ಸೇರಿದ್ದರು. ಅವರಿಗೆ ಈ ಬಾರಿ ಲೋಕಸಭೆ ಚುನಾವಣೆಗೆ ಟಿಕೆಟ್‌ ನೀಡುವ ಕುರಿತು ಚರ್ಚೆಗಳು ನಡೆದಿದ್ದವು. ಈವರೆಗೂ ಮೀರತ್‌ ಕ್ಷೇತ್ರವನ್ನು ರಾಜೇಂದ್ರ ಅಗರವಾಲ್‌ ಮೂರು ಬಾರಿ ಪ್ರತಿನಿಧಿಸಿದ್ದರು. ಅವರ ಬದಲಿಗೆ ಗೋವಿಲ್‌ಗೆ ಅವಕಾಶ ಮಾಡಿಕೊಡಲಾಗಿದೆ.

ನಲವತ್ತು ವರ್ಷಗಳ ಹಿಂದೆ ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸುವಲ್ಲಿ ಹೆಸರುವಾಸಿಯಾದ ನಟ ಅರುಣ್ ಗೋವಿಲ್ , ತೆರೆಯ ಮೇಲೆ ಆ ಪಾತ್ರವನ್ನು ನಿರ್ವಹಿಸಿದ ಅತ್ಯುತ್ತಮ ನಟ ಎಂದು ಹೆಸರು ವಾಸಿಯಾಗಿದ್ದವರು.

ಮೀರತ್‌ ನವರೇ ಆಗಿರುವ ಅರುಣ್‌ ಗೋವಿಲ್‌ ಅವರಿಗೆ ಈಗ 72 ವರ್ಷ. ಅವರ ತಂದೆ ಸರ್ಕಾರಿ ನೌಕರರರಾಗಿದ್ದರು. ಎಂಜಿನಿಯರಿಂಗ್‌ ಶಿಕ್ಷಣ ಪಡೆದು 1975ರಲ್ಲಿ ಮುಂಬೈಗೆ ಉದ್ಯೋಗ ಅರಸಿ ಹೋದ ಅರುಣ್‌ ಗೋವಿಲ್‌ ಅವರು ಸಹೋದರನೊಂದಿಗೆ ಕೆಲಸಕ್ಕೆ ಸೇರಿಕೊಂಡರೂ ಏನನ್ನಾದರೂ ಮಾಡಬೇಕು ಎನ್ನುವ ಕಾರಣಕ್ಕೆ ಚಿತ್ರರಂಗದ ಕಡೆಗೆ ತೆರಳಿದ್ದರು.

ಪಹೇಲಿ ಎನ್ನುವ ಸಿನೆಮಾದಲ್ಲಿ ಅಭಿನಯಿಸಿದ್ದರು. ಆನಂತರ ಮೂರ್ನಾಲ್ಕು ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ ವಿಕ್ರಂ ಬೇತಾಳ್‌ ಎನ್ನುವ ಧಾರವಾಹಿಯಲ್ಲಿ ಅವರಿಗೆ ಸಿಕ್ಕ ಅವಕಾಶ ದಿಕ್ಕು ಬದಲಿಸಿತು.

ಆಗ ರಾಮಾಯಣ ಧಾರಾವಾಹಿ ತೆಗೆಯಲು ರಮಾನಂದ ಸಾಗರ್‌ ಪ್ರಯತ್ನ ನಡೆಸುತ್ತಿದ್ದರು. ಅರುಣ್‌ ಗೋವಿಲ್‌ಗೆ ರಾಮನ ಪಾತ್ರದ ಅವಕಾಶ ಸಿಕ್ಕಿತ್ತು. ಇದನ್ನು ಬಳಸಿಕೊಂಡು ಅವರು ಛಾಪು ಉಳಿಯುವ ರೀತಿಯಲ್ಲೇ ಅಭಿನಯಿಸಿದ್ದರು.

ಇದಾದ ನಂತರ ಚಿತ್ರರಂಗ, ಕಿರುತೆರೆಯಲ್ಲೇ ಗೋವಿಲ್‌ ಗುರುತಿಸಿಕೊಂಡು ಬಂದಿದ್ದರು. ವಿವಿಧ ಭಾಷೆಯ ಸಿನೆಮಾ, ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಲವು ಪ್ರಶಸ್ತಿಗಳೂ ಅವರ ಅಭಿನಯಕ್ಕೆ ಲಭಿಸಿವೆ.

ಈಗ ರಾಜಕೀಯದತ್ತ ಮುಖ ಮಾಡಿದ್ದಾರೆ. ಅದು ರಾಮನ ಪಾತ್ರ ಮಾಡಿದ ನಾಲ್ಕು ದಶಕದ ಬಳಿಕ, ರಾಮ ಮಂದಿರ ಉದ್ಘಾಟನೆಯ ನಂತರ ಹೊಸ ಜವಾಬ್ದಾರಿ ಒಲಿದು ಬಂದಿದೆ.

ಸೀತೆಗೆ ಆಗಲೇ ಅವಕಾಶ

ಇನ್ನು ಇದೇ ರಾಮಾಯಣದಲ್ಲಿ ಸೀತಾ ಪಾತ್ರದಲ್ಲಿ ಅಭಿನಯಿಸಿದ್ದ ದೀಪಿಕಾ ಚಿಕ್ಲಿಯಾ 1991–1996ರವರೆಗೆ ಬಿಜೆಪಿಯಿಂದ ಬರೋಡಾ ಸಂಸದರಾಗಿದ್ದರು. ಆನಂತರ ರಾಜಕೀಯದಿಂದ ದೂರ ಉಳಿದಿದ್ದಾರೆ.

Whats_app_banner