ಕನ್ನಡ ಸುದ್ದಿ  /  Elections  /  Lok Sabha Elections 2024 Vijaya Pura Constituency Always Patils Akhada Now Jigajingi Era Need Committed Development Smu

Lok Sabha Elections 2024: ಘಟಾನುಘಟಿ ಪಾಟೀಲರ ನೆಚ್ಚಿನ ಕ್ಷೇತ್ರ ವಿಜಯಪುರದಲ್ಲೀಗ ಜಿಗಜಿಣಗಿ ರಾಜಕಾರಣ, ಅಭಿವೃದ್ದಿಗಿಲ್ಲ ಪಣ

vijayapura ಉತ್ತರ ಕರ್ನಾಟಕದ ವಿಜಯಪುರ ರಾಜಕಾರಣವೇ ವಿಭಿನ್ನ. ಪಾಟೀಲರ ರಾಜಕಾರಣದ ನಡುವೆ ಜಿಗಜಿಣಗಿ ಕೂಡ ಮಿಂಚಿದ್ದಾರೆ. ಏಳನೇ ಬಾರಿಗೆ ಸಂಸತ್‌ ಸದಸ್ಯರಾಗಬೇಕೆಂದು ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ವಿಜಯಪುರ ಕ್ಷೇತ್ರದ ಪರಿಚಯ, ವಿಶೇಷತೆಗಳ ಮಾಹಿತಿ ಇಲ್ಲಿದೆವರದಿ: ಸಮೀವುಲ್ಲಾ ಉಸ್ತಾದ್‌, ವಿಜಯಪುರ

ವಿಜಯಪುರ ವಿಭಿನ್ನ ರಾಜಕಾರಣದ ಅಖಾಡ.
ವಿಜಯಪುರ ವಿಭಿನ್ನ ರಾಜಕಾರಣದ ಅಖಾಡ.

ವಿಜಯಪುರ: ಗೋಳಗುಮ್ಮಟ ಖ್ಯಾತಿ ವಿಜಯಪುರ ಜಿಲ್ಲೆ ಲೋಕಸಭಾ ಕ್ಷೇತ್ರದ ಮಹಿಮೆಯೂ ಸಹ ವಿಭಿನ್ನ. ಇದು ಪಾಟೀಲರ ರಾಜಕಾರಣದ ಅಖಾಡ. ಮೊದಲಿನಿಂದಲೂ ವಿಧಾನಸಭೆ ಇಲ್ಲವೇ ಲೋಕಸಭೆಯಲ್ಲಿ ಪಾಟೀಲರದ್ದೇ ರಾಜಕೀಯದಾಟ. ಒಂದಾನೊಂದು ಕಾಲದಲ್ಲಿ ಕಾಂಗ್ರೆಸ್ ಪ್ರಬಲ ಕೋಟೆಯಾಗಿದ್ದ ವಿಜಯಪುರ ಲೋಕಸಭಾ ಕ್ಷೇತ್ರ ಈಗ ಬಿಜೆಪಿ ಭದ್ರಕೋಟೆ. ಫೈರ್ ಬ್ರ್ಯಾಂಡ್ ಎಂದೇ ಹೆಸರಾಗಿರುವ ಹಾಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ವಿಜಯಪುರವನ್ನು ಬಿಜೆಪಿ ಭದ್ರಕೋಟೆಯಾಗಿಸಿದರು. ನಂತರ ಸಂಸದ ರಮೇಶ ಜಿಗಜಿಣಗಿ ಸತತ ಮೂರು ಬಾರಿ ಗೆದ್ದು ಈ ಭದ್ರಕೋಟೆಗೆ ಬಿಜೆಪಿ ಬಾವುಟವನ್ನು ಮತ್ತಷ್ಟು ಗಟ್ಟಿಯಾಗಿ ಹಾರುವಂತೆ ಮಾಡಿದ್ದಾರೆ.

ಎರಡು ಬಾರಿ ಕೇಂದ್ರ ಸಚಿವ

1962ರ ಚುನಾವಣೆವರೆಗೂ ಎರಡು ಕ್ಷೇತ್ರಗಳು ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದ್ದವು. ಆರಂಭದಲ್ಲಿ ವಿಜಯಪುರ ಉತ್ತರ ಹಾಗೂ ವಿಜಯಪುರ ದಕ್ಷಿಣ ಎಂಬ ಎರಡು ಲೋಕಸಭಾ ಕ್ಷೇತ್ರಗಳಿದ್ದವು. ಬಾಗಲಕೋಟೆ ಪ್ರತ್ಯೇಕ ಗೊಂಡ ನಂತರ ವಿಜಯಪುರ ಇಡೀ ಜಿಲ್ಲೆ ಪ್ರತ್ಯೇಕ ಕ್ಷೇತ್ರದ ರೂಪ ಪಡೆಯಿತು.

ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆಯುವುದು ಸುಲಭದ ಮಾತಲ್ಲ. ಆದರೆ ವಿಜಯಪುರ ಜಿಲ್ಲೆ ಪ್ರತಿನಿಧಿಸಿದ ಇಬ್ಬರು ಕೇಂದ್ರ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಸನಗೌಡ ಪಾಟೀಲ ಯತ್ನಾಳರು ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಜವಳಿ, ರೈಲ್ವೇ ಖಾತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರೆ, ಹಾಲಿ ಸಂಸದ ರಮೇಶ ಜಿಗಜಿಣಗಿ ಈ ಹಿಂದಿನ ಲೋಕಸಭಾ ಅವಧಿಯಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಘಟಾನುಘಟಿಗಳ ರಣಕಣ

ಅಜಾತಶತ್ರು, ಅಕ್ಷರ ದಾಸೋಹ ರೂವಾರಿ ಹಾಗೂ ಔಂಧ ಪ್ರಾಂತ್ಯದ ಪ್ರಧಾನಿಯೂ ಆಗಿದ್ದ ದಿ.ರಾಮಪ್ಪ ಬಿದರಿ ವಿಜಯಪುರ ಲೋಕಸಭಾ ಕ್ಷೇತ್ರದ ಪ್ರಥಮ ಸಂಸದರು.

ಅಲ್ಲಿಂದ ಇಲ್ಲಿಯವರೆಗೆ ಅನೇಕ ಘಟಾನುಘಟಿಗಳು ವಿಜಯಪುರ ಲೋಕಸಭಾ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಹಾಲಿ ಸಚಿವರಾಗಿರುವ ಡಾ.ಎಂ.ಬಿ. ಪಾಟೀಲ, ಪ್ರಸ್ತುತ ನಗರ ಶಾಸಕರಾಗಿರುವ ಬಸನಗೌಡ ಪಾಟೀಲ ಯತ್ನಾಳ, ಹಾಲಿ ಸಂಸದ ರಮೇಶ ಜಿಗಜಿಣಗಿ ಈ ಮೂವರು ಸಹ ರಾಜ್ಯ ರಾಜಕಾರಣದಲ್ಲಿ ದೊಡ್ಡ ಪ್ರಭಾವ ಬೀರುವ ರಾಜಕಾರಣಿಗಳು. ಈ ಮೂವರು ಸಹ ವಿಜಯಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದು ವಿಶೇಷ. ಈ ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ದಿ.ಕೆ.ಬಿ. ಚೌಧರಿ ಸಹ ರಾಜ್ಯ ರಾಜಕಾರಣದಲ್ಲಿ ದೊಡ್ಡ ಹೆಸರು ಮಾಡಿದವರು.

ವಿಜಯಪುರ ಲೋಕಸಭಾ ಕ್ಷೇತ್ರ ಎರಡು ಅಂದರೆ ವಿಜಯಪುರ ಉತ್ತರ ಹಾಗೂ ವಿಜಯಪುರ ದಕ್ಷಿಣ ಎಂಬ ಲೋಕಸಭಾ ಕ್ಷೇತ್ರವಾಗಿತ್ತು. ಆರಂಭದಿಂದಲೂ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿಯೇ ಇದ್ದ ಈ ಕ್ಷೇತ್ರದಿಂದ ನಿರಂತರವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿದ್ದರು. ಈ ಕಾಂಗ್ರೆಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದು 1999ರ ಚುನಾವಣೆ. 1999 ಚುನಾವಣೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿಯಿಂದ ಆಯ್ಕೆಯಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದರು. ಅಲ್ಲಿಂದ ಇಲ್ಲಿಯವರೆಗೂ ಈ ಕ್ಷೇತ್ರ ಬಿಜೆಪಿ ಹಿಡಿತದಲ್ಲಿಯೇ ಇದೆ. ಜಯಪ್ರಕಾಶ ನಾರಾಯಣ ಅವರ ಜನತಾ ಪಕ್ಷಕ್ಕೂ ಈ ಕ್ಷೇತ್ರ ನೆಲೆ ಒದಗಿಸಿತ್ತು, 1984 ರಲ್ಲಿ ಗುರಡ್ಡಿ ಶಿವಶಂಕರಪ್ಪ ಮಲ್ಲಪ್ಪ ಆಯ್ಕೆಯಾಗಿದ್ದರು. 1957 ರಲ್ಲಿ ಪಕ್ಷೇತರ ಅಭ್ಯರ್ಥಿಗೂ ಈ ಕ್ಷೇತ್ರ ಮಣೆ ಹಾಕಿದ್ದು, ಸುಗಂಧಿ ಮುರೆಗೆಪ್ಪಣ್ಣ ಅವರು ಆಯ್ಕೆಯಾಗಿದ್ದರು. ಎಸ್‌.ಡಬ್ಲ್ಯೂ.ಎ ಪಕ್ಷದಿಂದ 1967 ರಲ್ಲಿ ಜೆ.ಡಿ. ಪಾಟೀಲ, 1996 ರಲ್ಲಿ ಜೆಡಿಎಸ್ ಪಕ್ಷದಿಂದ ಪಾಟೀಲ ಬಸನಗೌಡ ರುದ್ರಗೌಡ ಆಯ್ಕೆಯಾದರು. ಅಂದರೆ ಅನೇಕ ಪಕ್ಷಗಳಿಗೂ ವಿಜಯಪುರ ಕ್ಷೇತ್ರ ಆಶೀರ್ವಾದ ಮಾಡಿದ್ದುಂಟು.

ಜಿಗಜಿಣಗಿ ಅವರಿಂದ ಮಾತ್ರ ಹ್ಯಾಟ್ರಿಕ್

1957 ರಿಂದ ರಚನೆಯಾದ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ರಮೇಶ ಜಿಗಜಿಣಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ, ಅವರನ್ನು ಹೊರುತಪಡಿಸಿ ಯಾರೊಬ್ಬರು ಹ್ಯಾಟ್ರಿಕ್ ಗೆಲುವು ದಾಖಲಿಸಿಲ್ಲ. ಬಸನಗೌಡ ಪಾಟೀಲ ಯತ್ನಾಳ, ಬಿ.ಕೆ. ಗುಡದಿನ್ನಿ, ಕೆ.ಬಿ. ಚೌಧರಿ ಅವರಿಗೆ ವಿಜಯಪುರ ಲೋಕಸಭೆ ಮತದಾರರು ಎರಡು ಬಾರಿ ಅವಕಾಶ ಕರುಣಿಸಿದ್ದರು.

ಪ್ರಥಮ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು ಮಾತ್ರ ರಮೇಶ ಜಿಗಜಿಣಗಿ. 2009, 2014, 2019 ರಲ್ಲಿ ಸತತ ಮೂರು ಬಾರಿ ಜಿಗಜಿಣಗಿ ಈ ಕ್ಷೇತ್ರದ ಮೇಲೆ ಪಾರುಪತ್ಯ ಸಾಧಿಸಿದ್ದಾರೆ. ಇದಕ್ಕೂ ಮುನ್ನ ಚಿಕ್ಕೋಡಿಯಲ್ಲೂ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ ಜಿಗಜಿಣಗಿ. ಒಮ್ಮೆ ಜನತಾದಳ, ಮತ್ತೊಮ್ಮೆ ಲೋಕಶಕ್ತಿ, ಆನಂತರ ಬಿಜೆಪಿ ಸೇರಿ ಗೆದ್ದಿದ್ದರು. ವಿಜಯಪುರದಲ್ಲಿ ಮಾತ್ರ ಬಿಜೆಪಿಯಿಂದಲೇ ಮೂರು ಬಾರಿ ಗೆದ್ದಿದ್ದಾರೆ.

ಕ್ಷೇತ್ರದ ಸಮಸ್ಯೆಗಳು ಅನೇಕ. ಅದರಲ್ಲಿ ಆಲಮಟ್ಟಿ ಆಣೆಕಟ್ಟನ್ನು ಒಡಲಲ್ಲಿ ಇಟ್ಟುಕೊಂಡಿದ್ದರೂ ನೀರಾವರಿ ವಿಚಾರದಲ್ಲಿ ಅಲ್ಲಲ್ಲಿ ಕೆಲಸಗಳಾಗಿವೆ; ಪೂರ್ತಿ ನೀರಾವರಿ ಜಿಲ್ಲೆಯಾಗಿಲ್ಲ. ಐತಿಹಾಸಿಕ, ಪಾರಂಪರಿಕ ಪ್ರವಾಸೋದ್ಯಮದಲ್ಲಿ ವಿಪುಲ ಅವಕಾಶಗಳಿದ್ದರೂ ಸಂಪರ್ಕ ಜಾಲದ ಕೊರತೆಯಿಂದ ನಿರೀಕ್ಷಿತ ಬೆಳವಣಿಗೆ ಆಗಿಲ್ಲ. ಈಗ ವಿಮಾನ ನಿಲ್ದಾಣ, ಹೆದ್ದಾರಿ ಕೆಲಸಗಳು ಆಗಿರುವುದು ಕೊಂಚ ಆಶಾದಾಯಕ ಬೆಳವಣಿಗೆ. ಉದ್ಯೋಗ ಒದಗಿಸುವ ಕಾರ್ಖಾನೆಗಳೂ ಇಲ್ಲ. ಹಿಂದೆ ಆಲಮಟ್ಟಿ ಬಳಿ ಜವಳಿ ಪಾರ್ಕ್‌ ಘೋಷಿಸಿದರೂ ಜಾರಿಯಾಗಿಲ್ಲ. ಶ್ರೇಷ್ಠ ದ್ರಾಕ್ಷಿ,ದಾಳಿಂಬೆ,ನಿಂಬೆಯನ್ನು ಬೆಳೆದರೂ ಮಾರುಕಟ್ಟೆಯ ಕೊರತೆ ಮಾತ್ರ ಗಟ್ಟಿಯಾಗಿ ರೂಪುಗೊಂಡಿಲ್ಲ.

ಮತದಾರರ ವಿವರ

ಒಟ್ಟು ಮತದಾರರು - 18,38,438

ಪುರುಷ ಮತದಾರರು - 9,39,813

ಮಹಿಳೆ ಮತದಾರರು - 8,98,413

ಇತರೆ ಮತದಾರರು - 212

ವಿಜಯಪುರ ಪ್ರತಿನಿಧಿಸಿದ ಸಂಸದರ ಪಟ್ಟಿ

1957 - ಬಿದರಿ ರಾಮಪ್ಪ ಬಾಳಪ್ಪ - ಕಾಂಗ್ರೆಸ್ (ವಿಜಯಪುರ ದಕ್ಷಿಣ)

1957 - ಸುಗಂಧಿ ಮುರೆಗಪ್ಪಣ್ಣ - ಪಕ್ಷೇತರ (ವಿಜಯಪುರ ಉತ್ತರ)

1962 - ರಾಜಾರಾಮ ಗಿರಿಧರಲಾಲ ದುಬೆ - ಕಾಂಗ್ರೆಸ್ - (ವಿಜಯಪುರ ಉತ್ತರ)

1962 - ಸಂಗನಗೌಡ ಬಸನಗೌಡ ಪಾಟೀಲ - ಕಾಂಗ್ರೆಸ್- (ವಿಜಯಪುರ ದಕ್ಷಿಣ)

1967 - ಜಿ.ಡಿ. ಪಾಟೀಲ - ಎಸ್‌.ಡಬ್ಲ್ಯೂ.ಎ ಪಕ್ಷ

1971 - ಭೀಮಪ್ಪ ಯಲ್ಲಪ್ಪ ಚೌಧರಿ - ಕಾಂಗ್ರೆಸ್

1977 - ಚೌಧರಿ ಕಾಳಿಂಗಪ್ಪ ಭೀಮಣ್ಣ - ಕಾಂಗ್ರೆಸ್

1980 - ಚೌಧರಿ ಕಾಳಿಂಗಪ್ಪ ಭೀಮಣ್ಣ - ಕಾಂಗ್ರೆಸ್ (ಐ)

1984 - ಗುರಡ್ಡಿ ಶಿವಶಂಕರಪ್ಪ ಮಲ್ಲಪ್ಪ - ಜೆಎನ್‌ಪಿ

1989 - ಬಿ.ಕೆ. ಗುಡದಿನ್ನಿ - ಕಾಂಗ್ರೆಸ್

1991 - ಬಿ.ಕೆ. ಗುಡದಿನ್ನಿ - ಕಾಂಗ್ರೆಸ್

1996 - ಪಾಟೀಲ ಬಸನಗೌಡ ರುದ್ರಗೌಡ - ಜನತಾದಳ

1998 - ಡಾ.ಎಂ.ಬಿ. ಪಾಟೀಲ - ಕಾಂಗ್ರೆಸ್

1999 - ಬಸನಗೌಡ ಪಾಟೀಲ ಯತ್ನಾಳ - ಬಿಜೆಪಿ

2004 - ಬಸನಗೌಡ ಪಾಟೀಲ ಯತ್ನಾಳ - ಬಿಜೆಪಿ

2009 - ರಮೇಶ ಜಿಗಜಿಣಗಿ - ಬಿಜೆಪಿ(ಮೀಸಲು)

2014 - ರಮೇಶ ಜಿಗಜಿಣಗಿ - ಬಿಜೆಪಿ

2019 - ರಮೇಶ ಜಿಗಜಿಣಗಿ – ಬಿಜೆಪಿ

ವರದಿ: ಸಮೀವುಲ್ಲಾ ಉಸ್ತಾದ