Lok Sabha Elections2024: ದಾವಣಗೆರೆ ಲೋಕಸಭಾ ಕ್ಷೇತ್ರದ ಮೇಲೆ ಶಾಮನೂರು, ಭೀಮಸಮುದ್ರ ಕುಟುಂಬಗಳ ಹಿಡಿತ
ಕನ್ನಡ ಸುದ್ದಿ  /  ಚುನಾವಣೆಗಳು  /  Lok Sabha Elections2024: ದಾವಣಗೆರೆ ಲೋಕಸಭಾ ಕ್ಷೇತ್ರದ ಮೇಲೆ ಶಾಮನೂರು, ಭೀಮಸಮುದ್ರ ಕುಟುಂಬಗಳ ಹಿಡಿತ

Lok Sabha Elections2024: ದಾವಣಗೆರೆ ಲೋಕಸಭಾ ಕ್ಷೇತ್ರದ ಮೇಲೆ ಶಾಮನೂರು, ಭೀಮಸಮುದ್ರ ಕುಟುಂಬಗಳ ಹಿಡಿತ

Davangere ಲೋಕಸಭೆ ಚುನಾವಣೆಗೆ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಬೀಗರ ಕುಟುಂಬಗಳ ನಡುವೆ ಜಿದ್ದಾಜಿದ್ದಿ.ಶಾಮನೂರು ಹಾಗೂ ಭೀಮಸಮುದ್ರ ಕುಟುಂಬಗಳು ಮೂರು ದಶಕದಿಂದ ಹಿಡಿದ ಹೊಂದಿವೆ.(ವರದಿ: ಯಶವಂತಕುಮಾರ್‌, ಚಿತ್ರದುರ್ಗ)

ದಾವಣಗೆರೆ ಎರಡು ಕುಟುಂಬಗಳ ನಡುವಿನ ಜಿದ್ದಾಜಿದ್ದಿ ಚುನಾವಣಾ ಕಣ
ದಾವಣಗೆರೆ ಎರಡು ಕುಟುಂಬಗಳ ನಡುವಿನ ಜಿದ್ದಾಜಿದ್ದಿ ಚುನಾವಣಾ ಕಣ

ದಾವಣಗೆರೆ: ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. 30 ವರ್ಷಗಳ ಹಿಂದೆ ಕರ್ನಾಟಕದ ಮ್ಯಾಂಚೆಸ್ಟರ್ ಸಿಟಿ ಎಂಬ ಹೆಗ್ಗಳಿಕೆ ಪಡೆದಿದ್ದ ದಾವಣಗೆರೆ ಬೆಣ್ಣೆದೋಸೆ, ಮಂಡಕ್ಕಿ ನಗರಿ ಎಂಬ ಖ್ಯಾತಿಯನ್ನೂ ಪಡೆದಿದೆ. ರಾಜಕೀಯದಲ್ಲೂ ಇಂತಹದೇ ವಾತಾವರಣ. ಲೋಕಸಭೆ ಚುನಾವಣೆಯಲ್ಲೂ ಇಲ್ಲಿ ಎರಡು ಕುಟುಂಬಗಳ ನಡುವೆಯೇ ಹಣಾಹಣಿ. ಎರಡು ತಲೆಮಾರುಗಳ ಸ್ಪರ್ಧೆಯ ನಂತರ ಈಗ ಪತ್ನಿಯರ ಸೆಣೆಸಾಟಕ್ಕೆ ವೇದಿಕೆಯನ್ನು ದಾವಣಗೆರೆ ಒದಗಿಸಿದೆ. ಇದರಿಂದ ಈ ಚುನಾವಣೆ ಇದೇ ಕುಟುಂಬಗಳ ಜಿದ್ದಾಜಿದ್ದಿಯ ಅಖಾಡವಾಗಿ ಮಾರ್ಪಡುವ ಲಕ್ಷಣಗಳು ಕಾಣಿಸುತ್ತಿವೆ.

ಹಳೆ ಕ್ಷೇತ್ರ ಹೊಸ ಜಿಲ್ಲೆ

1997 ರಲ್ಲಿ ಜನಸಂಖ್ಯೆ ಆಧಾರದಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಬೇರ್ಪಟ್ಟ ದಾವಣಗೆರೆ, ನೂತನ ಜಿಲ್ಲೆಯಾಗಿ ಘೋಷಣೆಯಾಯ್ತು. ದಾವಣಗೆರೆ ಜಿಲ್ಲೆಯಾಗಿ ಘೋಷಣೆ ಆದ್ಮೇಲೆ ಕೈಗಾರಿಕೆ, ಶಿಕ್ಷಣ, ವಾಣಿಜ್ಯ, ಚಿತ್ರಕಲೆ, ವಿನ್ಯಾಸ ಶಾಸ್ತ್ರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹೆಸರಾಯಿತು.

ದಾವಣಗೆರೆ ಚಿತ್ರದುರ್ಗ ಜಿಲ್ಲೆಯಲ್ಲಿದ್ದಾಗ ಕುರುಬ ಸಮುದಾಯದ ಪಾರುಪತ್ಯ ಹೆಚ್ಚಿತ್ತು. 1984, 1989, 1991 ರ ಲೋಕಸಭಾ ಚುನಾವಣೆಯಲ್ಲಿ ಕುರುಬ ಸಮುದಾಯದ ಮುಖಂಡ ಚನ್ನಯ್ಯ ಒಡೆಯರ್ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸತತ ಮೂರು ಬಾರಿ ಗೆಲುವು ಸಾಧಿಸಿ ಇತಿಹಾಸ ಬರೆದಿದ್ದರು.

1996 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ.ಮಲ್ಲಿಕಾರ್ಜುನಪ್ಪ ಗೆಲುವು ಸಾಧಿಸಿ ಕಾಂಗ್ರೆಸ್ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದರು. ದಾವಣಗೆರೆ ಜಿಲ್ಲೆಯಾಗಿ ಘೋಷಣೆ ಆದ ಬಳಿಕ ಅಂದರೆ 1998 ರಲ್ಲಿ ಶಾಮನೂರು ಶಿವಶಂಕರಪ್ಪ ಲೋಕಸಭಾ ಚುನಾವಣೆಗೆ ಎಂಟ್ರಿ ಕೊಟ್ಟು ಗೆಲುವು ಸಾಧಿಸುವ ಮೂಲಕ ಲಿಂಗಾಯತ ಸಮುದಾಯದ ಪ್ರಾಬಲ್ಯಕ್ಕೆ ಬುನಾದಿ ಹಾಕಿಕೊಟ್ಟರು.

ಶಾಮನೂರು ಶಿವಶಂಕರಪ್ಪ ಬಳಿಕ 1999ರ ಲೋಕಸಭಾ ಚುನಾವಣೆಯಲ್ಲಿ ಭೀಮಸಮುದ್ರದ ಜಿ.ಮಲ್ಲಿಕಾರ್ಜುನಪ್ಪ ಮತ್ತೊಮ್ಮೆ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಜಿ.ಮಲ್ಲಿಕಾರ್ಜುನಪ್ಪ ಅವರ ಉತ್ತರಾಧಿಕಾರಿಯಾಗಿ ಅವರ ಪುತ್ರ ಜಿ.ಎಂ.ಸಿದ್ದೇಶ್ವರ್ 2004, 2009, 2014, 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸತತ ಜಯಭೇರಿ ಬಾರಿಸಿದ್ದಾರೆ. 1998 ರಿಂದ ಇಲ್ಲಿಯವರೆಗೂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಜಿ.ಮಲ್ಲಿಕಾರ್ಜುನಪ್ಪ ಕುಟುಂಬಗಳ ನಡುವಿನ ನೇರ ಹಣಾಹಣಿ ನಡೆಯುತ್ತಿದೆ. ಕಾಂಗ್ರೆಸ್ ಹಿರಿಯ ಧುರೀಣ ಡಾ.ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಸಂಸದ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಮೂರು ಬಾರಿ ಸೋಲು ಕಂಡಿದ್ದಾರೆ.

ಶಾಮನೂರು ಶಿವಶಂಕರಪ್ಪ ಹಾಗೂ ಜಿ.ಎಂ.ಸಿದ್ದೇಶ್ವರ್ ಇಬ್ಬರೂ ಮಾವ-ಅಳಿಯಂದಿರು. ಆದರೆ, ರಾಜಕೀಯದಲ್ಲಿ ಬದ್ದ ವೈರಿಗಳು. ಸಾರ್ವಜನಿಕವಾಗಿ, ವೇದಿಕೆಗಳ ಮೇಲೂ ಒಬ್ಬರನ್ನು ಮಾತನಾಡಿಸದಷ್ಟು ವೈರಿಗಳು. ಸ್ಮಾರ್ಟ್ ಸಿಟಿ ಯೋಜನೆ ವಿಚಾರದಲ್ಲಿ ಇಂದಿಗೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ್ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಲೇ ಇರುತ್ತದೆ.

ಕ್ಷೇತ್ರದ ಬಗ್ಗೆ ಮಾಹಿತಿ

ದಾವಣಗೆರೆ ಲೋಕಸಭಾ ಕ್ಷೇತ್ರ ಒಟ್ಟು 8 ವಿಧಾನಸಭಾ ಕ್ಷೇತ್ರ ಒಳಗೊಂಡಿದ್ದು, ನೂತನ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕು ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಹರಪನಹಳ್ಳಿ ತಾಲೂಕು ಈ ಮೊದಲು ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿತ್ತು. ವಿಜಯನಗರ ಜಿಲ್ಲೆಯಾದ ಬಳಿಕ ಜಿಲ್ಲೆಯಿಂದ ಬೇರ್ಪಟ್ಟಿದೆ. ಸದ್ಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರದಲ್ಲಿ ಕಾಂಗ್ರೆಸ್, 1 ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಲೋಕಸಭಾ ಕ್ಷೇತ್ರದಲ್ಲಿ ಕಳೆದ 2 ದಶಕಗಳಿಂದಲೂ ಬಿಜೆಪಿ ಪಾರುಪತ್ಯ ಮರೆದಿದೆ.

ರಾಜಕೀಯ ಹೊರತುಪಡಿಸಿದರೆ ಕೃಷಿ, ಶಿಕ್ಷಣ, ಕೈಗಾರಿಕೆಯಲ್ಲೂ ದಾವಣಗೆರೆ ಜಿಲ್ಲೆ ಸದ್ದು ಮಾಡುತ್ತದೆ. ದಾವಣಗೆರೆಯನ್ನು ವಿದ್ಯಾಕಾಶಿ ಎಂದೂ ಕರೆಯುತ್ತಾರೆ. ಕೃಷಿಗೆ ಭದ್ರಾ ನಾಲೆ, ತುಂಗಭದ್ರಾ ನದಿ ಆಸರೆ. ನೀರಾವರಿ ಇದ್ರೂ ಜಗಳೂರು, ಮಾಯಕೊಂಡ ಕ್ಷೇತ್ರಕ್ಕೆ ನೀರು ಇಲ್ಲ ಅನ್ನೋದು ಅಷ್ಟೇ ಸತ್ಯ. ಹರಪನಹಳ್ಳಿಯೂ ನೀರಾವರಿ ಕ್ಷೇತ್ರ ಕಡಿಮೆ. ಕೈಗಾರಿಕೆ ಅಂತ ಬಂದರೆ ಎರಡು ಬೃಹತ್ ಸಕ್ಕರೆ ಕಾರ್ಖಾನೆ, ಸಣ್ಣಪುಟ್ಟ ಕೈಗಾರಿಕೆಗಳು ಇವೆ.

ಹಾಲಿ ಸಂಸದರು

ಸಂಸದ ಜಿ.ಎಂ.ಸಿದ್ದೇಶ್ವರ್ ನಾಲ್ಕು ಬಾರಿ ಸತತವಾಗಿ ಗೆಲುವ ಸಾಧಿಸುವ ಮೂಲಕ ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದ್ದಾರೆ. 5ನೇ ಬಾರಿಗೂ ಸ್ಪರ್ಧೆ ಮಾಡುವ ಇಚ್ಛೆ ಹೊಂದಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿ ಭಾರೀ ಉದ್ಯಮಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ, ವಿಮಾನಯಾನ ಖಾತೆ ರಾಜ್ಯ ದರ್ಜೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದ ಮತದಾರರ ಪೈಕಿ 2019ರ ಮಾಹಿತಿ ಪ್ರಕಾರ ಲಿಂಗಾಯತರು : 4,31,437, ಎಸ್ಸಿ/ಎಸ್ಟಿ : 5,14,656, ಮುಸ್ಲಿಂ : 1,97,496, ಕುರುಬರು : 1,57,464ರಷ್ಟಿದ್ದಾರೆ.

ಕ್ಷೇತ್ರದಲ್ಲಿ ಮಹಿಳಾ ಮತದಾರರು : 7,31,230, ಪುರುಷ ಮತದಾರರು : 7,27,244 ಸೇರಿ ಒಟ್ಟು ಮತದಾರರು : 14,58,594.

ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಕೆಲಸ ಮಾಡಿದ್ದಾರಾ?

ಪ್ಲಸ್‌ ಪಾಯಿಂಟ್

1. ಸತತ 4 ಬಾರಿ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆಯಾಗಿದ್ದಾರೆ

2. ಲೋಕಸಭಾ ಕ್ಷೇತ್ರದಲ್ಲಿ ಪರಿಚಿತ ಮುಖ

3. ಸಾದರ ಲಿಂಗಾಯತ ಸಮುದಾಯದ ಮುಖಂಡ, ಉದ್ಯಮಿ

4. ದಾವಣಗೆರೆ ಸ್ಮಾರ್ಟ್ ಸಿಟಿ ಆಯ್ಕೆಯಾಗಲು ಶ್ರಮಿಸಿದ್ದಾರೆ.

5. ಲೋಕಸಭಾ ಕ್ಷೇತ್ರದಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದಾರೆ

ಮೈನಸ್

1. ನಾಲ್ಕು ಬಾರಿ ಗೆದ್ದರೂ ದಾವಣಗೆರೆ ಜಿಲ್ಲೆಯಲ್ಲಿ ನೆನಪಿಗೆ ಉಳಿಯುವಂತಹ ಕೆಲಸ ಮಾಡಿರೋದು ಕಡಿಮೆ

2. ಲೋಕಸಭೆ 8 ವಿಧಾನಸಭಾ ಕ್ಷೇತ್ರವನ್ನು ಹೊಂದಿದ್ದರೂ ಜಿ.ಎಂ.ಸಿದ್ದೇಶ್ವರ್ ಕೇವಲ ದಾವಣಗೆರೆ ನಗರಕ್ಕೆ ಸೀಮಿತವಾಗಿದ್ದಾರೆ

3. 2023ರ ವಿಧಾನಸಭಾ ಚುನಾವಣೆಯಲ್ಲಿ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಹೆಚ್ಚು ಕ್ಷೇತ್ರ ಶ್ರಮವಹಿಸಿ ಗೆಲ್ಲಿಸಿಕೊಳ್ಳಲಿಲ್ಲ ಅನ್ನೋ ಆರೋಪ

4. 8 ಕ್ಷೇತ್ರಗಳ ಪೈಕಿ 1 ರಲ್ಲಿ ಬಿಜೆಪಿ, 7 ಕಾಂಗ್ರೆಸ್ ಗೆದ್ದಿರೋದು ಜಿಎಂಎಸ್ ಗೆ ವಿರೋಧಿ ಅಲೆ

5. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡರ ವಿರೋಧ ಕಟ್ಟಿಕೊಂಡಿರೋದು

ಇದುವರೆಗೂ ಸಂಸದರಾದವರು

1. ಕೊಂಡಜ್ಜಿ ಬಸಪ್ಪ – 1977 – ಕಾಂಗ್ರೆಸ್

2. ಟಿ.ವಿ.ಚಂದ್ರಶೇಖರಪ್ಪ – 1980 – ಕಾಂಗ್ರೆಸ್

3. ಚನ್ನಯ್ಯ ಒಡೆಯರ್ – 1984 – ಕಾಂಗ್ರೆಸ್

4. ಚನ್ನಯ್ಯ ಒಡೆಯರ್ – 1989 - ಕಾಂಗ್ರೆಸ್

5. ಚನ್ನಯ್ಯ ಒಡೆಯರ್ – 1991 – ಕಾಂಗ್ರೆಸ್

6. ಜಿ.ಮಲ್ಲಿಕಾರ್ಜುನಪ್ಪ – 1996 – ಬಿಜೆಪಿ

7. ಶಾಮನೂರು ಶಿವಶಂಕರಪ್ಪ – 1998 – ಕಾಂಗ್ರೆಸ್

8. ಜಿ.ಮಲ್ಲಿಕಾರ್ಜುನಪ್ಪ – 1999 – ಬಿಜೆಪಿ

9. ಜಿ.ಎಂ.ಸಿದ್ದೇಶ್ವರ್ – 2004 – ಬಿಜೆಪಿ

10. ಜಿ.ಎಂ.ಸಿದ್ದೇಶ್ವರ್ – 2009 – ಬಿಜೆಪಿ

11. ಜಿ.ಎಂ.ಸಿದ್ದೇಶ್ವರ್ – 2014 – ಬಿಜೆಪಿ

12. ಜಿ.ಎಂ.ಸಿದ್ದೇಶ್ವರ್ – 2019 – ಬಿಜೆಪಿ

(ವರದಿ: ಯಶವಂತಕುಮಾರ್‌, ಚಿತ್ರದುರ್ಗ)

Whats_app_banner