ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ 2024; ಭಾರತದಲ್ಲಿ ಮತಗಟ್ಟೆ ಸಮೀಕ್ಷೆ ಫೇಲಾಗಿದ್ಯಾ, ಸಂದೇಹ ಬೇಡ ಈ 5 ಎಕ್ಸಿಟ್‌ ಪೋಲ್ ಚೆಕ್ ಮಾಡಿ

ಲೋಕಸಭಾ ಚುನಾವಣೆ 2024; ಭಾರತದಲ್ಲಿ ಮತಗಟ್ಟೆ ಸಮೀಕ್ಷೆ ಫೇಲಾಗಿದ್ಯಾ, ಸಂದೇಹ ಬೇಡ ಈ 5 ಎಕ್ಸಿಟ್‌ ಪೋಲ್ ಚೆಕ್ ಮಾಡಿ

ಲೋಕಸಭಾ ಚುನಾವಣೆ 2024 ಅಂತಿಮ ಘಟ್ಟದಲ್ಲಿದೆ. ಕೊನೆಯ ಹಂತದ ಮತದಾನ, ಎಕ್ಸಿಟ್ ಪೋಲ್‌, ಜೂನ್ 4 ರಂದು ಫಲಿತಾಂಶ ಹೀಗೆ ಮತದಾರರು ಬಹಳ ಕಾತರದಿಂದ ಕಾಯುತ್ತಿರುವ ಹೊತ್ತು. ನಾಳೆ (ಜೂ.1) ಮತಗಟ್ಟೆ ಸಮೀಕ್ಷೆ ಪ್ರಕಟವಾಗಲಿದೆ. ಭಾರತದಲ್ಲಿ ಮತಗಟ್ಟೆ ಸಮೀಕ್ಷೆ ಫೇಲಾಗಿದ್ಯಾ ಎಂಬ ಒಂದು ಪ್ರಶ್ನೆ ಕಾಡಬಹುದು. ಆ ಸಂದೇಹ ಬೇಡ ಈ 5 ಎಕ್ಸಿಟ್‌ ಪೋಲ್ ಚೆಕ್ ಮಾಡಿ.

ಲೋಕಸಭಾ ಚುನಾವಣೆ 2024; ಭಾರತದಲ್ಲಿ ಮತಗಟ್ಟೆ ಸಮೀಕ್ಷೆ ಫೇಲಾಗಿದ್ಯಾ, ಸಂದೇಹ ಬೇಡ ಈ 5 ಎಕ್ಸಿಟ್‌ ಪೋಲ್ ಚೆಕ್ ಮಾಡಿ. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ 2024; ಭಾರತದಲ್ಲಿ ಮತಗಟ್ಟೆ ಸಮೀಕ್ಷೆ ಫೇಲಾಗಿದ್ಯಾ, ಸಂದೇಹ ಬೇಡ ಈ 5 ಎಕ್ಸಿಟ್‌ ಪೋಲ್ ಚೆಕ್ ಮಾಡಿ. (ಸಾಂಕೇತಿಕ ಚಿತ್ರ)

ನವದೆಹಲಿ: ಲೋಕಸಭಾ ಚುನಾವಣೆ ಅಂತಿಮ ಹಂತಕ್ಕೆ ಬಂದಿದ್ದು, ನಾಳೆಯೇ (ಜೂನ್ 1) ಕೊನೆಯ ಹಂತದ ಮತದಾನ ನಡೆಯಲಿದೆ. ಈ ಮತದಾನ ಮುಗಿದು ಒಂದು ಗಂಟೆ ಆಗುತ್ತಲೇ ಲೋಕಸಭಾ ಚುನಾವಣೆ 2024ರ ಮತಗಟ್ಟೆ ಸಮೀಕ್ಷೆ (Exit Poll) ಗಳನ್ನು ವಿವಿಧ ಮಾಧ್ಯಮ ಸಂಸ್ಥೆಗಳು ಪ್ರಕಟಿಸಲಿವೆ. ಈ ಎಕ್ಸಿಟ್ ಪೋಲ್‌ ಕಡೆಗೆ ರಾಜಕೀಯ ಪಂಡಿತರು, ನಾಗರಿಕರು ಸೇರಿ ಎಲ್ಲರ ಗಮನವೂ ನೆಟ್ಟಿದೆ.

ಟ್ರೆಂಡಿಂಗ್​ ಸುದ್ದಿ

ಮತಗಟ್ಟೆ ಸಮೀಕ್ಷೆ ಅಥವಾ ಎಕ್ಸಿಟ್ ಪೋಲ್‌ ಅನೇಕ ವರ್ಷಗಳಿಂದ ಮತದಾರರ ಚಿತ್ತ ಸೆಳೆಯುವ ವಿಚಾರವಷ್ಟೇ ಅಲ್ಲ, ಚಿತ್ತ ಅಳೆದು ಫಲಿತಾಂಶ ಹೀಗಿರಬಹುದು ಎಂದು ಅಂದಾಜಿಸುವ ತಂತ್ರವೂ ಹೌದು. ಚುನಾವಣಾ ಆಯೋಗವು ಅಧಿಕೃತ ಫಲಿತಾಂಶ ಪ್ರಕಟಿಸುವ ಮೊದಲು ಈ ರೀತಿ ಸಮೀಕ್ಷೆಗಳ ಫಲಿತಾಂಶ ಪ್ರಕಟವಾಗುವುದು ಇದುವರೆಗೂ ನಡೆದುಕೊಂಡು ಬಂದಿರುವ ವಾಡಿಕೆ.

ಹಾಗಂತ, ಇವು ನಿಖರ ಫಲಿತಾಂಶವೇನೂ ಅಲ್ಲ. ಅಧಿಕೃತ ಫಲಿತಾಂಶ ಏನಿದ್ದರೂ ಚುನಾವಣಾ ಆಯೋಗ ಪ್ರಕಟಿಸುವ ಫಲಿತಾಂಶವೇ ಆಗಿದೆ. ಮತಗಟ್ಟೆ ಸಮೀಕ್ಷೆಗಳು ಬಹುತೇಕ ಸರಿಯಾಗುತ್ತವೆ ಎಂಬ ಕಾರಣಕ್ಕೆ ಜನರ ಕುತೂಹಲವನ್ನು ಅದು ಸೆರೆಹಿಡಿದಿಟ್ಟಿದೆ. ಹಾಗಾದರೆ ಈ ಮತಗಟ್ಟೆ ಸಮೀಕ್ಷೆಗಳು ಯಾವಾಗಲೂ ನಿಖರವಾಗಿದ್ದವಾ? ಒಮ್ಮೆಯೂ ಫೇಲ್ ಆಗಿಲ್ವಾ? ಇತಿಹಾಸವನ್ನು ಗಮನಿಸಿದರೆ, ಎಕ್ಸಿಟ್ ಪೋಲ್‌ಗಳು ಯಾವಾಗಲೂ ಸಕ್ಸಸ್ ಆಗಿದ್ದಿಲ್ಲ. ಅವು ನಿಖರವೂ ಆಗಿರಲ್ಲ. ಚರ್ಚೆಗೆ ಗ್ರಾಸ ಒದಗಿಸುತ್ತದೆ ಎಂಬುದು ವಾಸ್ತವ.

ಎಕ್ಸಿಟ್ ಪೋಲ್ ವೈಫಲ್ಯ; ಇತಿಹಾಸ ಪುಟದಿಂದ 5 ವಿಫಲ ಮತಗಟ್ಟೆ ಸಮೀಕ್ಷೆಗಳ ವಿವರ

ಎಕ್ಸಿಟ್ ಪೋಲ್‌ಗಳು ವಾಸ್ತವ ಫಲಿತಾಂಶಗಳಿಗಿಂತ ಭಿನ್ನವಾಗಿರುವ ನಿದರ್ಶನಗಳು ಇವೆ. ಮತಗಟ್ಟೆ ಸಮೀಕ್ಷೆಗಳ ಇತಿಹಾಸವನ್ನು ಅವಲೋಕಿಸಿದರೆ ಅಂತಹ ನಿದರ್ಶನಗಳು ಕಾಣಸಿಗುತ್ತವೆ. ಈ ಪೈಕಿ 5 ಪ್ರಮುಖ ವಿಫಲ ಮತಗಟ್ಟೆ ಸಮೀಕ್ಷೆಗಳ ವಿವರ ಇಲ್ಲಿದೆ. ವಿಶೇಷವಾಗಿ 2004 ರ ಲೋಕಸಭಾ ಚುನಾವಣೆ ಮತ್ತು ಅದರ ಮತಗಟ್ಟೆ ಸಮೀಕ್ಷೆ. ಬಹುತೇಕ ಎಲ್ಲ ಸಮೀಕ್ಷೆಗಳು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಬಹುಮತ ಗಳಿಸಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ನಿಜವಾದ ಫಲಿತಾಂಶ ಎಲ್ಲರನ್ನೂ ಅಚ್ಚರಿಗೆ ದೂಡಿತ್ತು.

1) 2004 ರ ಲೋಕಸಭಾ ಚುನಾವಣೆ ಮತ್ತು ಎಕ್ಸಿಟ್‌ ಪೋಲ್‌

2004 ರ ಚುನಾವಣೆಯಲ್ಲಿ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಜಯಗಳಿಸಿದ ಬಿಜೆಪಿ ಅದೇ ಹುಮ್ಮಸ್ಸಿನಲ್ಲಿ ಲೋಕಸಭೆ ಚುನಾವಣೆ ಗೆಲ್ಲಲು ಮುಂದಡಿ ಇರಿಸಿತ್ತು. ಕೇಂದ್ರದ ಅಂದಿನ ಆಡಳಿತಾರೂಢ ಬಿಜೆಪಿಯು 'ಇಂಡಿಯಾ ಶೈನಿಂಗ್' ಘೋ‍ಷಣೆಯೊಂದಿಗೆ, ಅವಧಿಪೂರ್ವ ಮರುಚುನಾವಣೆಗೆ ಪ್ರಯತ್ನಿಸಿತು. ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎಗೆ 240 ರಿಂದ 250 ಸ್ಥಾನಗಳನ್ನು ನಿರೀಕ್ಷಿಸಿದ್ದವು, ಆದರೆ ನಿಜವಾದ ಫಲಿತಾಂಶಗಳು ಬಂದಾಗ, ಸಂಖ್ಯೆಗಳು ಸಂಪೂರ್ಣವಾಗಿ ವಿರುದ್ಧವಾಗಿದ್ದವು.

2) 2015ರ ದೆಹಲಿ ಅಸೆಂಬ್ಲಿ ಚುನಾವಣೆ ಫಲಿತಾಂಶ vs ಮತಗಟ್ಟೆ ಸಮೀಕ್ಷೆ

ದೆಹಲಿಯಲ್ಲಿ 2015 ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) 70 ರಲ್ಲಿ 67 ಸ್ಥಾನಗಳನ್ನು ಗಳಿಸಿ ಅಮೋಘ ಜಯ ಸಾಧಿಸಿತು. ಮತದಾನದ ದಿನದಂದು ನಡೆಸಿದ ಎಕ್ಸಿಟ್ ಪೋಲ್‌ಗಳು ಎಎಪಿಗೆ ಸ್ಪಷ್ಟ ಬಹುಮತವನ್ನು ನಿರೀಕ್ಷಿಸಿದ್ದವು. ಒಂದು ಎಕ್ಸಿಟ್ ಪೋಲ್ ಮಾತ್ರ 50ಕ್ಕಿಂತ ಹೆಚ್ಚು ಸ್ಥಾನ ನಿರೀಕ್ಷಿಸಿತ್ತು. ಉಳಿದವು ಇಂತಹ ಭರ್ಜರಿ ಗೆಲುವನ್ನು ಅಂದಾಜಿಸಿರಲಿಲ್ಲ.

3) 2015ರ ಬಿಹಾರ ವಿಧಾನಸಭಾ ಚುನಾವಣೆ vs ಎಕ್ಸಿಟ್ ಪೋಲ್‌

ಬಿಹಾರ ವಿಧಾನಸಭೆಗೆ 2015 ರಲ್ಲಿ ನಡೆದ ಚುನಾವಣೆಯಲ್ಲಿ ನಿಕಟ ಪೈಪೋಟಿಯನ್ನು ಊಹಿಸುವ ಮತಗಟ್ಟೆ ಸಮೀಕ್ಷೆ ಪ್ರಕಟವಾಗಿದ್ದವು. ಯಾವುದೇ ಮೈತ್ರಿಗೆ ಸ್ಪಷ್ಟ ಬಹುಮತ ದೊರೆಯುವುದಿಲ್ಲ ಎಂದು ಅಂದಾಜಿಸಲಾಗಿತ್ತು. ಆದರೆ, ಫಲಿತಾಂಶ ಬಂದಾಗ, ಆರ್‌ಜೆಡಿ-ಜೆಡಿಯು-ಕಾಂಗ್ರೆಸ್ ಒಕ್ಕೂಟವು ಭರ್ಜರಿ ಜಯ ಸಾಧಿಸಿತ್ತು. ಲಾಲು ಪ್ರಸಾದ್ ಅವರ ಆರ್‌ಜೆಡಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

4) 2017ರ ಯುಪಿ ಅಸೆಂಬ್ಲಿ ಚುನಾವಣೆ vs ಮತಗಟ್ಟೆ ಸಮೀಕ್ಷೆ

ನೋಟು ಅಮಾನ್ಯೀಕರಣದ ನಂತರ ನಡೆದ 2017 ರ ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ, ನಿರ್ಗಮನ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಅತಂತ್ರ ವಿಧಾನಸಭೆ ಬರಲಿದೆ ಎಂದು ನಿರೀಕ್ಷಿಸಿದ್ದವು. ಆದರೆ, ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಈ ಭವಿಷ್ಯವಾಣಿಗಳಿಗೆ ವ್ಯತಿರಿಕ್ತವಾಗಿ, ಬಿಜೆಪಿ 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಎಲ್ಲರನ್ನೂ ಅಚ್ಚರಿಗೆ ಕೆಡವಿತು. ಇದು ನಿರೀಕ್ಷಿತ ಫಲಿತಾಂಶಕ್ಕೆ ಹೋಲಿಸಿದರೆ ಗಣನೀಯ ಪ್ರಮಾಣದ ವ್ಯತ್ಯಾಸವಿದೆ. 2012 ರಲ್ಲಿ ಗಳಿಸಿದ 47 ಸ್ಥಾನಗಳಿಂದ 2017 ರಲ್ಲಿ403 ಸ್ಥಾನಗಳ ಪೈಕಿ 312 ಸ್ಥಾನಗಳನ್ನು ಕೇಸರಿ ಪಕ್ಷ ಗೆದ್ದುಕೊಂಡಿತ್ತು.

5) 2014 ರ ಲೋಕಸಭಾ ಚುನಾವಣೆ ಮತ್ತು ಚುನಾವಣೋತ್ತರ ಸಮೀಕ್ಷೆ

2014 ರ ಲೋಕಸಭಾ ಚುನಾವಣೆಯಲ್ಲಿ, ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವನ್ನು ಮುನ್ನಂದಾಜಿಸಿದ್ದವು. ಆದರೆ ಬಿಜೆಪಿಗೆ ಸಂಪೂರ್ಣ ಬಹುಮತವನ್ನು ಯಾವ ಸಮೀಕ್ಷೆಯೂ ಅಂದಾಜಿಸಿರಲಿಲ್ಲ. ಅಂತಿಮ ಫಲಿತಾಂಶವು 300 ಸ್ಥಾನಗಳನ್ನು ಮೀರಿ ಎನ್‌ಡಿಎಗೆ ಗಣನೀಯ ವಿಜಯವನ್ನು ಸಾಧಿಸಿತು, ಬಿಜೆಪಿ ಮೊದಲ ಸಲನಿರ್ಣಾಯಕ 272 ಸ್ಥಾನಗಳ ಗಡಿಯನ್ನು ದಾಟಿತು. ಈ ಸಂಪೂರ್ಣ ವ್ಯತಿರಿಕ್ತತೆಯನ್ನು ಎಕ್ಸಿಟ್ ಪೋಲ್‌ಗಳು ಊಹಿಸಿರಲಿಲ್ಲ. ಕಾಂಗ್ರೆಸ್ ಪಕ್ಷ ಗಮನಾರ್ಹ ಹಿನ್ನಡೆ ಅನುಭವಿಸಿದ್ದು, ಕೇವಲ 44 ಸ್ಥಾನಗಳನ್ನು ಗಳಿಸಿತು.