ಕನ್ನಡ ಸುದ್ದಿ  /  Elections  /  Lok Sabha-elections  /  Lok Sabha Election 2024 Union Minister Shobha Karandlaje Retracts Tamilians Claim On Bengaluru Blast Case Suspect Uks

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ವಿವಾದ; ಕ್ಷಮೆಯಾಚನೆ, ಏನಿದು ವಿದ್ಯಮಾನ ಇಲ್ಲಿದೆ ಪೂರ್ಣ ಮಾಹಿತಿ

ಕೇಂದ್ರ ಸಚಿವೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ನೀಡಿದ ಒಂದು ಹೇಳಿಕೆ ಭಾರಿ ವಿವಾದಕ್ಕೀಡಾಯಿತು. ಕೂಡಲೇ ಅವರು ಈ ಕುರಿತು ವಿಷಾದ ವ್ಯಕ್ತಪಡಿಸಿದ್ದು, ಸ್ಪಷ್ಟೀಕರಣ ನೀಡಿ ಕ್ಷಮೆಯಾಚಿಸಿದರು. ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್ ಖಂಡನೆಗೊಳಗಾಗುವಂತೆ ಶೋಭಾ ಕರಂದ್ಲಾಜೆ ಹೇಳಿರುವುದೇನು? ಇಲ್ಲಿದೆ ಪೂರ್ಣ ವಿವರ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (ಎಡ ಚಿತ್ರ); ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (ಬಲ ಚಿತ್ರ)
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (ಎಡ ಚಿತ್ರ); ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (ಬಲ ಚಿತ್ರ)

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ನೀಡಿದ ಹೇಳಿಕೆ ವಿವಾದಕ್ಕೀಡಾಗುತ್ತಿರುವಂತೆಯೇ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ (Shobha Karnadlaje) ಈ ಕುರಿತು ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ತಮಿಳುನಾಡಲ್ಲಿ ಉಗ್ರ ತರಬೇತಿ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದೇಕೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಪ್ರಶ್ನಿಸಿದ್ದಾರೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಂಗಳವಾರ (ಮಾರ್ಚ್ 19) ನಗರ್ತಪೇಟೆಯಲ್ಲಿ ಹನುಮಾನ್ ಚಾಲೀಸಾ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಎಎನ್‌ಐ ಜೊತೆ ಮಾತನಾಡುತ್ತ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದರು. ಆಗ ಅವರು ನೀಡಿದ ಹೇಳಿಕೆ ವಿವಾದಕ್ಕೀಡಾಯಿತು. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ಕರಂದ್ಲಾಜೆ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಅಲ್ಲದೆ, ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.

ಶೋಭಾ ಕರಂದ್ಲಾಜೆ ಹಿಂದಿಯಲ್ಲಿ ಹೇಳಿದ್ದೇನು? ಇಲ್ಲಿದೆ ವಿಡಿಯೋ

“ನಮಾಜು ಮುಗಿದ ನಂತರವಷ್ಟೇ ಈ ದಾರಿಯಲ್ಲಿ ಹೋಗಲು ಬಿಡುತ್ತೇವೆ ಅಂತ ಪೊಲೀಸ್ ಹೇಳ್ತಾರೆ. ಇಲ್ಲಿ ಯಾರ ಸರ್ಕಾರ ನಡೆಯುತ್ತಿರುವುದು ಅಂತ ಸಿದ್ದರಾಮಯ್ಯ ಅವರಲ್ಲಿ ಕೇಳಬಯಸುತ್ತೇನೆ. ಹಿಂದೂಗಳು ನಿಮಗೆ ಮತ ಚಲಾಯಿಸಿಲ್ಲವೇ? ಹಿಂದೂಗಳನ್ನು ಅವಹೇಳನ ಮಾಡುವ ಕೆಲಸ ಇಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಒಬ್ಬ ಬರ್ತಾನೆ ತಮಿಳುನಾಡಿನಿಂದ, ಒಂದು ಕೆಫೆಯಲ್ಲಿ ಬಾಂಬ್‌ ಇಡ್ತಾನೆ. ಇನೊಬ್ಬ ಬರ್ತಾನೆ ದೆಹಲಿಯಿಂದ, ವಿಧಾನ ಸೌಧ ಒಳಗೆ ನಿಂತು ಪಾಕ್ ಪರ ಘೋಷಣೆ ಕೂಗ್ತಾನೆ, ಮತ್ತೊಬ್ಬ ಬರ್ತಾನೆ ಕೇರಳದಿಂದ, ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮೇಲೆ ಆಸಿಡ್ ಎರಚುತ್ತಾನೆ. ಇಲ್ಲಿ ಅಂಗಡಿಯೊಳಗೆ ಹನುಮಾನ್ ಚಾಲೀಸಾ ಕೇಳಿಕೊಂಡು ಕುಳಿತವನ ಮೇಲೆ ಕೆಲವು ಹುಡುಗರು ಹಲ್ಲೆ ನಡೆಸ್ತಾರೆ. ಆರ್‌ಟಿ ನಗರದಲ್ಲಿ ಕೆಲವರು ಮಚ್ಚು ಹಿಡಿದು ಸಾರ್ವಜನಿಕವಾಗಿ ಓಡಾಡ್ತಾರೆ. ಆ ವಿಡಿಯೋವನ್ನು ಈಗ ನೋಡಿದೆ. ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಈ ಸರ್ಕಾರ ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತಿದೆ ಮತ್ತು ಹಿಂದೂ ವಿರೋಧಿಯಾಗಿ ವರ್ತಿಸುತ್ತಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕರ್ನಾಟಕದ ಗೃಹ ಸಚಿವ ಜಿ.ಪರಮೇಶ್ವರ್ ಅವರು ರಾಜೀನಾಮೆ ಕೊಡಬೇಕು. ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ” ಎಂದು ಹೇಳಿರುವುದು ಮೇಲಿನ ವಿಡಿಯೋದಲ್ಲಿ ಕಂಡುಬಂದಿದೆ.

ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ವಿಡಿಯೋ ತುಣುಕು, ನಗರ್ತಪೇಟೆಯ ಪ್ರತಿಭಟನೆ ಸ್ಥಳದ್ದಾಗಿದ್ದು ಅಲ್ಲಿ ಕೂಡ ಇದೇ ಹೇಳಿಕೆಯನ್ನು ಅವರು ಪುನರಾವರ್ತಿಸಿರುವುದು ಕಂಡುಬಂದಿದೆ. ಈ ಹೇಳಿಕೆಗಳು ಹಿಂದಿ ಭಾಷೆಯಲ್ಲಿದೆ.

ಶೋಭಾ ಕರಂದ್ಲಾಜೆ ಕನ್ನಡದಲ್ಲಿ ನೀಡಿದ ಹೇಳಿಕೆ ಇದು

ಆದರೆ, ಶೋಭಾ ಕರಂದ್ಲಾಜೆ ಅವರು ಕನ್ನಡದಲ್ಲಿ ನೀಡಿದ ಹೇಳಿಕೆಯಲ್ಲಿ ತಮಿಳು, ದೆಹಲಿಯ ಉಲ್ಲೇಖ ಇಲ್ಲ. ಅನ್ಯ ರಾಜ್ಯಗಳಿಂದ ಬಂದವರು ಎಂದಷ್ಟೇ ಹೇಳಿರುವುದು ಕಂಡುಬಂದಿದೆ.

ತಮಿಳುನಾಡು ಸಿಎಂ ಸ್ಟಾಲಿನ್ ಖಂಡನೆ ಹೀಗಿದೆ…

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಅರವಿಂದ್ ಗುಣಶೇಖರನ್ ಎಂಬುವವರ ಟ್ವೀಟ್‌ ಅನ್ನು ರೀಟ್ವೀಟ್ ಮಾಡಿ, ಶೋಭಾ ಕರಂದ್ಲಾಜೆ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಅರವಿಂದ ಗುಣಶೇಖರನ್‌ ಅವರು ಶೋಭಾ ಕರಂದ್ಲಾಜೆ ಹೇಳಿಕೆಯ 9 ಸೆಕೆಂಡ್‌ಗಳ ತುಣಕನ್ನಷ್ಟೇ ಶೇರ್ ಮಾಡಿದ್ದು, “ತಮಿಳುನಾಡಿನಿಂದ ಜನ ಬರ್ತಾರೆ, ಅಲ್ಲಿ ತರಬೇತಿ ಪಡೆಯುತ್ತಾರೆ ಇಲ್ಲಿ ಬಾಂಬ್ ಇಡ್ತಾರೆ, ಕೆಫೆಯಲ್ಲಿ ಬಾಂಬ್ ಇಟ್ರು” ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳ್ತಾರೆ. ಕರ್ನಾಟಕದಲ್ಲಿ ತಮಿಳರು ಬಾಂಬ್ ಇಡ್ತಾರೆ ಎನ್ನುವುದಕ್ಕೆ ಅವರ ಬಳಿ ಆಧಾರ ಏನಿದೆ" ಎಂದು ಪ್ರಶ್ನಿಸಿದ್ದಾರೆ.

ಅರವಿಂದ ಗುಣಶೇಖರನ್ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌, "ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಅಜಾಗರೂಕ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಆ ರೀತಿ ಹೇಳಿಕೆ ನೀಡುವ ಹಕ್ಕು ಎನ್‌ಐಎ ಅಧಿಕಾರಿ ಅಥವಾ ರಾಮೇಶ್ವರಂ ಕೆಫೆ ಸ್ಫೋಟದ ತನಿಖೆ ಜೊತೆಗೆ ನಿಕಟ ಸಂಪರ್ಕ ಹೊಂದಿದವರಿಗೆ ಮಾತ್ರ ಇರುವಂಥದ್ದು. ಅದನ್ನು ಹೇಳಲು ಶೋಭಾ ಕರಂದ್ಲಾಜೆ ಅವರಿಗೆ ಅಧಿಕಾರ ಇಲ್ಲ.ಬಿಜೆಪಿಯವರ ಈ ರೀತಿ ಸೌಹಾರ್ದ ಕೆಡಿಸುವ ಮಾತುಗಳನ್ನು ತಮಿಳರು ಮತ್ತು ಕನ್ನಡಿಗರು ತಿರಸ್ಕರಿಸುತ್ತಾರೆ.

ಶಾಂತಿ, ಸೌಹಾರ್ದತೆ ಮತ್ತು ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಉಂಟು ಮಾಡುತ್ತಿರುವ ಶೋಭಾ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ನಾನು ಒತ್ತಾಯಿಸುತ್ತೇನೆ. ಪ್ರಧಾನಿಯಿಂದ ಹಿಡಿದು ಕಾರ್ಯಕರ್ತರವರೆಗೆ ಬಿಜೆಪಿಯ ಎಲ್ಲರೂ ಈ ಕೊಳಕು ರಾಜಕೀಯದಲ್ಲಿ ತೊಡಗುವುದನ್ನು ನಿಲ್ಲಿಸಬೇಕು. ಭಾರತದ ಚುನಾವಣಾ ಆಯೋಗ ಈ ದ್ವೇಷದ ಭಾಷಣವನ್ನು ಗಮನಿಸಬೇಕು ಮತ್ತು ತಕ್ಷಣವೇ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಆಗ್ರಹಿಸಿದ್ದಾರೆ.

ಕ್ಷಮೆಯಾಚಿಸಿದ ಶೋಭಾ ಕರಂದ್ಲಾಜೆ

“ನನ್ನ ತಮಿಳು ಸೋದರ, ಸೋದರಿಯರೇ, ನನ್ನ ಮಾತುಗಳು ಯಾರನ್ನೂ ನೋಯಿಸುವ ಉದ್ದೇಶದ್ದಾಗಿರಲಿಲ್ಲ. ನಿರ್ದಿಷ್ಟ ವಿಷಯದ ಕಡೆಗೆ ಬೆಳಕನ್ನು ಚೆಲ್ಲುವಂಥದ್ದು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಆದರೂ ನನ್ನ ಟೀಕೆಗಳು ಕೆಲವರಿಗೆ ನೋವು ತಂದಿರುವುದನ್ನು ಗಮನಿಸಿದ್ದೇನೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಟೀಕೆಗಳು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದ ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದವರನ್ನು ಉದ್ದೇಶಿಸಿದ್ದಾಗಿತ್ತು. ತಮಿಳುನಾಡಿನವರ ಬಳಿ ಹೃದಯಾಂತರಾಳದಿಂದ ಕ್ಷಮೆಯನ್ನು ಕೇಳುತ್ತೇನೆ. ಇದಲ್ಲದೆ, ನಾನು ನನ್ನ ಹಿಂದಿನ ಕಾಮೆಂಟ್‌ಗಳನ್ನು ಹಿಂತೆಗೆದುಕೊಳ್ಳುತ್ತೇನೆ.” ಎಂದು ಶೋಭಾ ಕರಂದ್ಲಾಜೆ ಕ್ಷಮೆಯಾಚಿಸಿದ್ದಾರೆ.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)