ಕನ್ನಡ ಸುದ್ದಿ  /  Elections  /  Lok Sabha-elections  /  Lok Sabha Election Fir Against Shobha Karandlaje For Remarks Linking Tamil Nadu With Rameshwaram Cafe Blast Uks

Shobha Karandlaje: ರಾಮೇಶ್ವರಂ ಕೆಫೆ ಸ್ಫೋಟ ಕುರಿತ ಹೇಳಿಕೆ, ಶೋಭಾ ಕರಂದ್ಲಾಜೆ ವಿರುದ್ಧ ಮಧುರೈನಲ್ಲಿ ಎಫ್‌ಐಆರ್‌, ಆಯೋಗದಿಂದಲೂ ಕ್ರಮ

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ತಮಿಳುನಾಡು ನಂಟು ಇದೆ ಎಂದು ಬಿಂಬಿಸುವ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಮಧುರೈ ನಗರ ಸೈಬರ್ ಕ್ರೈಂ ಪೊಲೀಸರು ಬುಧವಾರ ಎಫ್ಐಆರ್ ದಾಖಲಿಸಿದ್ದಾರೆ. ಚುನಾವಣಾ ಆಯೋಗವೂ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (ಎಡ ಚಿತ್ರ); ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (ಬಲ ಚಿತ್ರ)
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (ಎಡ ಚಿತ್ರ); ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (ಬಲ ಚಿತ್ರ)

ಮಧುರೈ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ನಡೆದ ಸ್ಫೋಟದ ಶಂಕಿತ ಆರೋಪಿ ತಮಿಳುನಾಡಿನಿಂದ ಬಂದವನು ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಮಧುರೈ ನಗರ ಸೈಬರ್ ಕ್ರೈಂ ಪೊಲೀಸರು ಬುಧವಾರ ಎಫ್ಐಆರ್ ದಾಖಲಿಸಿದ್ದಾರೆ.

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಕಾರ್ಯಕರ್ತರೊಬ್ಬರು ನೀಡಿದ ದೂರಿನ ಮೇರೆಗೆ ಶೋಭಾ ಕರಂದ್ಲಾಜೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಐಪಿಸಿ ಸೆಕ್ಷನ್ 153, 153 ಎ, 505 (1) (ಬಿ) ಮತ್ತು 505 (2) ಅಡಿಯಲ್ಲಿ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿ ಶೋಭಾ ಕರಂದ್ಲಾಜೆ ನೀಡಿದ ಹೇಳಿಕೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೂಡ ಅವರ ಹೇಳಿಕೆಯನ್ನು ಖಂಡಿಸಿದ್ದರು. ಅದೇ ರೀತಿ, ಕಾನೂನು ಕ್ರಮ ಜರುಗಿಸುವಂತೆ ಚುನಾವಣಾ ಆಯೋಗವನ್ನೂ ಆಗ್ರಹಿಸಿದ್ದರು.

ಇದೇ ವೇಳೆ, ಡಿಎಂಕೆ ದೂರನ್ನು ಪರಿಗಣಿಸಿ ಶೋಭಾ ಕರಂದ್ಲಾಜೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಭಾರತದ ಚುನಾವಣಾ ಆಯೋಗವು ಕರ್ನಾಟಕದ ಚುನಾವಣಾ ಅಧಿಕಾರಿಗೆ ಸೂಚನೆ ನೀಡಿದೆ.

ಕಾನೂನು ಕ್ರಮಕ್ಕೆ ಆಗ್ರಹಿಸಿದ್ದ ತಮಿಳುನಾಡು ಮುಖ್ಯಮಂತ್ರಿ

“ಕೇಂದ್ರ ಬಿಜೆಪಿ ಸಚಿವೆ ಶೋಭಾ ಅವರೇ ಬೇಜವಾಬ್ದಾರಿ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ. ಅಂತಹ ಹೇಳಿಕೆ ಎನ್‌ಐಎ ಅಧಿಕಾರಿ ಅಥವಾ ರಾಮೇಶ್ವರಂ ಕೆಫೆ ತನಿಖೆ ಜೊತೆಗೆ ನಿಕಟ ನಂಟು ಹೊಂದಿರುವವರು ನೀಡಿದ್ದರೆ ಒಪ್ಪಿಕೊಳ್ಳಬಹುದಿತ್ತು. ಆದರೆ ಶೋಭಾ ಅವರು ಅಂತಹ ಅಧಿಕಾರ ಹೊಂದಿಲ್ಲ. ಸಮಾಜ ಒಡೆಯುವ ಇಂತಹ ಹೇಳಿಕೆಯನ್ನು ತಮಿಳರಷ್ಟೇ ಅಲ್ಲ, ಕನ್ನಡಿಗರೂ ವಿರೋಧಿಸುತ್ತಾರೆ” ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದರು.

ಶಾಂತಿ, ಸೌಹಾರ್ದತೆ ಮತ್ತು ರಾಷ್ಟ್ರೀಯ ಏಕತೆಗೆ ಧಕ್ಕೆ ತಂದಿರುವ ಶೋಭಾ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ಪ್ರಧಾನಿಯಿಂದ ಹಿಡಿದು ಕಾರ್ಯಕರ್ತರವರೆಗೆ ಬಿಜೆಪಿಯ ಪ್ರತಿಯೊಬ್ಬರೂ ಈ ಕೊಳಕು ಸಮಾಜ ಒಡೆಯುವ ರಾಜಕೀಯವನ್ನು ನಿಲ್ಲಿಸಬೇಕು. ಚುನಾವಣಾ ಆಯೋಗವು ಈ ದ್ವೇಷ ಭಾಷಣವನ್ನು ಗಮನಿಸಬೇಕು. ಅವರ ವಿರುದ್ಧ ತತ್‌ಕ್ಷಣ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಟಾಲಿನ್ ಟ್ವೀಟ್‌ನಲ್ಲಿ ಆಗ್ರಹಿಸಿದ್ದರು.

ಶೋಭಾ ಕರಂದ್ಲಾಜೆ ವಿರುದ್ಧ ಕ್ರಮಕ್ಕೆ ಡಿಎಂಕೆ ಆಗ್ರಹ

ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಮಂಗಳವಾರ ಕ್ಷಮೆಯಾಚಿಸಿದ್ದು, ತಮ್ಮ ಹೇಳಿಕೆಗಳು ಬೆಳಕನ್ನು ಚೆಲ್ಲುವ ಉದ್ದೇಶವನ್ನು ಹೊಂದಿವೆಯೇ ಹೊರತು ನೆರಳು ಬೀರುವ ಉದ್ದೇಶದಿಂದಲ್ಲ ಎಂದು ಹೇಳಿದ್ದರು.

ಶೋಭಾ ಅವರ ಹೇಳಿಕೆಯ ವಿರುದ್ಧ ಡಿಎಂಕೆ ಬುಧವಾರ ಭಾರತದ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಇದರಂತೆ, ಕೇಂದ್ರ ಸಚಿವರು 1951ರ ಜನ ಪ್ರಾತಿನಿಧ್ಯ ಕಾಯ್ದೆ ಮತ್ತು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ ತಮಿಳುನಾಡಿನ ಆಡಳಿತ ಪಕ್ಷವು ಕರಂದ್ಲಾಜೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಕೋರಿದೆ.

ಈ ಹೇಳಿಕೆಯು ಕರ್ನಾಟಕದ ಜನರು ಮತ್ತು ತಮಿಳುನಾಡಿನ ಜನರ ನಡುವೆ ದ್ವೇಷದ ಭಾವನೆಗಳನ್ನು ಉತ್ತೇಜಿಸಲು ಪ್ರಯತ್ನಿಸಿದೆ ಎಂದು ಡಿಎಂಕೆ ಆರೋಪಿಸಿದೆ.

“ಸ್ಫೋಟ ಪ್ರಕರಣದ ತನಿಖೆ ಪ್ರಸ್ತುತ ನಡೆಯುತ್ತಿದೆ, ಮತ್ತು ಸ್ಫೋಟದ ಹಿಂದಿನ ಅಪರಾಧಿಯನ್ನು ಗುರುತಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಇದರ ಹೊರತಾಗಿಯೂ, ಮಾನ್ಯ ಸಚಿವರು ಬಾಂಬ್ ಅನ್ನು ತಮಿಳುನಾಡಿನ ಜನರು ಇರಿಸಿದ್ದಾರೆ ಎಂಬ ಆಧಾರರಹಿತ ಆರೋಪವನ್ನು ಮಾಡಿದ್ದಾರೆ” ಎಂದು ಡಿಎಂಕೆ ತನ್ನ ದೂರಿನಲ್ಲಿ ತಿಳಿಸಿದೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1 ರಂದು ಐಇಡಿ ಸ್ಫೋಟ ಸಂಭವಿಸಿ ಕನಿಷ್ಠ 10 ಜನರು ಗಾಯಗೊಂಡಿದ್ದರು. ಸಿಸಿಟಿವಿ ದೃಶ್ಯಾವಳಿಗಳಿಂದ ಪೊಲೀಸರು ಶಂಕಿತನನ್ನು ಪತ್ತೆಹಚ್ಚಿದ್ದಾರೆ. ಕೆಫೆಯೊಳಗೆ ಸ್ಫೋಟವನ್ನು ನಡೆಸಲು ಟೈಮರ್ ಹೊಂದಿರುವ ಐಇಡಿ ಸಾಧನವನ್ನು ಬಳಸಲಾಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಉಳಿದಂತೆ ಇನ್ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)