ಲೋಕಸಭಾ ಚುನಾವಣೆ; ಕಾಂಗ್ರೆಸ್ ಪ್ರಚಾರ ಅಭಿಯಾನಕ್ಕೆ ಪ್ರಿಯಾಂಕಾ ಗಾಂಧಿ 108, ರಾಹುಲ್ ಗಾಂಧಿ 107 ರ‍್ಯಾಲಿ ರೋಡ್ ಷೋಗಳ ಗರಿಮೆ
ಲೋಕಸಭಾ ಚುನಾವಣೆ ಅಂತಿಮ ಹಂತ ತಲುಪಿದೆ. ಲೋಕಸಭಾ ಚುನಾವಣೆ ಏಳೂ ಹಂತಗಳ ಪ್ರಚಾರದ ಭರಾಟೆಯೂ ತಣ್ಣಗಾಯಿತು. ನಿನ್ನೆ ಪ್ರಚಾರ ಅಭಿಯಾನ ಕೊನೆಗೊಂಡಿದ್ದು, ನಾಳೆ ಅಂತಿಮ ಹಂತದ ಮತದಾನ, ಮತಗಟ್ಟೆ ಸಮೀಕ್ಷೆ ಪ್ರಕಟವಾಗಲಿದೆ. ಕಾಂಗ್ರೆಸ್ ಪ್ರಚಾರ ಅಭಿಯಾನಕ್ಕೆ ಪ್ರಿಯಾಂಕಾ ಗಾಂಧಿ ಅವರ 108, ರಾಹುಲ್ ಗಾಂಧಿ 107 ರ‍್ಯಾಲಿ ರೋಡ್ ಷೋಗಳ ಗರಿಮೆ ಗಮನಸೆಳೆದಿದೆ.

ನವದೆಹಲಿ: ಲೋಕಸಭೆ ಚುನಾವಣೆ 2024 (Lok Sabha Election 2024) ಅಂತಿಮ ಹಂತಕ್ಕೆ ಬಂದಿದ್ದು, ನಾಳೆ ಕೊನೆಯ ಹಂತದ ಮತದಾನ ನಡೆಯಲಿದೆ. ಅದಾಗಿ ಮತಗಟ್ಟೆ ಸಮೀಕ್ಷೆ (Exit Poll) ಫಲಿತಾಂಶಗಳು ಪ್ರಕಟವಾಗಲಿವೆ. ನಾಳೆಯ ಮತದಾನಕ್ಕೆ 48 ಗಂಟೆ ಮುಂಚಿತವಾಗಿ ಅಂದರೆ ನಿನ್ನೆ (ಮೇ 30) ಪ್ರಚಾರ ಅಭಿಯಾನ ಕೊನೆಗೊಂಡಿದೆ.
ಏಳನೇ ಹಂತದ ಮತದಾನಕ್ಕೂ ಮುನ್ನ ಪ್ರಚಾರದ ಕೊನೆಯ ದಿನದಂದು ರಾಹುಲ್ ಗಾಂಧಿ ಕಾಂಗ್ರೆಸ್ ಪರವಾಗಿ ಪಂಜಾಬ್‌ನಲ್ಲಿ ಪ್ರಚಾರ ನಡೆಸಿದರೆ, ಪ್ರಿಯಾಂಕಾ ಗಾಂಧಿ ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ರೋಡ್ ಶೋ ನಡೆಸಿದರು.
ಲೋಕಸಭೆ ಚುನಾವಣೆ 2024; ಪ್ರಿಯಾಂಕಾ ಗಾಂಧಿ 108, ರಾಹುಲ್ ಗಾಂಧಿ 107 ರ‍್ಯಾಲಿ ರೋಡ್ ಷೋ
ಕಾಂಗ್ರೆಸ್ ಪಕ್ಷದ ಗೆಲ್ಲುವ ಅವಕಾಶಗಳನ್ನು ಹೆಚ್ಚಿಸುವುದಕ್ಕಾಗಿ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕ್ರಮವಾಗಿ ಒಟ್ಟು 107 ಮತ್ತು 108 ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಇದರಲ್ಲಿ ರ‍್ಯಾಲಿಗಳು ಮತ್ತು ರೋಡ್ ಷೋಗಳು ಕೂಡ ಒಳಗೊಂಡಿವೆ.
ಪ್ರಿಯಾಂಕಾ ಗಾಂಧಿ ಅವರು 108 ಸಾರ್ವಜನಿಕ ಸಭೆ ಮತ್ತು ರೋಡ್‌ಶೋಗಳಲ್ಲಿ ಭಾಗವಹಿಸುತ್ತ ಉತ್ಸಾಹದಿಂದ ಪಕ್ಷದ ಪ್ರಚಾರ ನಡೆಸಿದರು. ಅವರು ತಮ್ಮ ಮ್ಯಾರಥಾನ್ ಚುನಾವಣಾ ಪ್ರಚಾರದ ಸಮಯದಲ್ಲಿ 100 ಕ್ಕೂ ಹೆಚ್ಚು ಮಾಧ್ಯಮ ಬೈಟ್‌ಗಳು, ಒಂದು ಟಿವಿ ಸಂದರ್ಶನ ಮತ್ತು ಐದು ಮುದ್ರಣ ಸಂದರ್ಶನಗಳನ್ನು ನೀಡಿದ್ದಾರೆ ಎಂದು ಪಿಟಿಐ ವರದಿ ಹೇಳಿದೆ.
ಪ್ರಿಯಾಂಕಾ ಗಾಂಧಿ ಅವರು ರಾಯ್ ಬರೇಲಿಯಲ್ಲಿ ಬೀಡುಬಿಟ್ಟಿದ್ದರು. ಸುಮಾರು ಎರಡು ವಾರಗಳ ಕಾಲ ಅಲ್ಲಿ ಮತ್ತು ಪಕ್ಕದ ಅಮೇಥಿಯಲ್ಲಿ ಪಕ್ಷದ ಪ್ರಚಾರವನ್ನು ಮುನ್ನಡೆಸಿದರು. ರಾಯ್‌ಬರೇಲಿಯಲ್ಲಿ ಈ ಬಾರಿ ರಾಹುಲ್ ಗಾಂಧಿ ಅವರು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಬಿಜೆಪಿಯ ಸ್ಮೃತಿ ಇರಾನಿ ಅವರನ್ನು ಎದುರಿಸಲು ಕಾಂಗ್ರೆಸ್ ಗಾಂಧಿ ಕುಟುಂಬದ ಆಪ್ತ ಕೆಎಲ್ ಶರ್ಮಾ ಅವರನ್ನು ಅಮೇಥಿಯಿಂದ ಕಣಕ್ಕಿಳಿಸಿದೆ.
ಪ್ರಿಯಾಂಕಾ, ರಾಹುಲ್ ಪ್ರಚಾರ ಅಭಿಯಾನದಲ್ಲಿ ಪ್ರಧಾನಿ ಮೋದಿಯೇ ಪ್ರಮುಖ ಟಾರ್ಗೆಟ್
ಪ್ರಿಯಾಂಕಾ ಗಾಂಧಿ ಅವರು ತಮ್ಮ ಬಿರುಸಿನ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ವಿರುದ್ಧದ ಪ್ರಧಾನಿ ಮೋದಿ ಅವರ ದಾಳಿಯನ್ನು ಎದುರಿಸಿ, ಪ್ರತ್ಯುತ್ತರ ನೀಡುತ್ತ, ಅವರ ಮೇಲೂ ಟೀಕಾ ಪ್ರಹಾರ ನಡೆಸಿದರು.
ಪ್ರಿಯಾಂಕಾ ಅವರು 16 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಚಾರ ನಡೆಸಿದರು. ಪ್ರಿಯಾಂಕಾ ಗಾಂಧಿ ಅವರು ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಸಾವಿರಾರು ಕಾರ್ಯಕರ್ತರ ಎರಡು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದರು.
ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರೊಂದಿಗೆ ಕೆಲವು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾರತ ಬ್ಲಾಕ್ ಅಭ್ಯರ್ಥಿಗಳ ಪರವಾಗಿಯೂ ಮತ ಯಾಚಿಸಿದರು.
ಈ ಪ್ರಚಾರ ಅಭಿಯಾನಗಳ ಫಲಿತಾಂಶ ಏನು ಎಂಬುದು ಜೂನ್ 4 ರಂದು ಬಹಿರಂಗವಾಗಲಿದೆ. ಯಾವೆಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ, ಇಂಡಿಯಾ ಬ್ಲಾಕ್‌ನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂಬುದರ ಮೇಲೆ ಈ ಪ್ರಚಾರ ಅಭಿಯಾನದ ಪರಿಣಾಮವನ್ನು ಅಳೆಯಬಹುದು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

ವಿಭಾಗ