ಲೋಕಸಭೆ ಚುನಾವಣೆ; ಮೈಸೂರಲ್ಲಿ ಬಿಜೆಪಿ ಮಾಧ್ಯಮ ಸಂವಾದ, ಜತೆಗಿದ್ರೂ ಯದುವೀರ್‌, ಪ್ರತಾಪ್ ಸಿಂಹ ಬಾಡಿ ಲಾಂಗ್ವೇಜ್ ಕಥೆನೇ ಬೇರೆ ಇತ್ತು
ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭೆ ಚುನಾವಣೆ; ಮೈಸೂರಲ್ಲಿ ಬಿಜೆಪಿ ಮಾಧ್ಯಮ ಸಂವಾದ, ಜತೆಗಿದ್ರೂ ಯದುವೀರ್‌, ಪ್ರತಾಪ್ ಸಿಂಹ ಬಾಡಿ ಲಾಂಗ್ವೇಜ್ ಕಥೆನೇ ಬೇರೆ ಇತ್ತು

ಲೋಕಸಭೆ ಚುನಾವಣೆ; ಮೈಸೂರಲ್ಲಿ ಬಿಜೆಪಿ ಮಾಧ್ಯಮ ಸಂವಾದ, ಜತೆಗಿದ್ರೂ ಯದುವೀರ್‌, ಪ್ರತಾಪ್ ಸಿಂಹ ಬಾಡಿ ಲಾಂಗ್ವೇಜ್ ಕಥೆನೇ ಬೇರೆ ಇತ್ತು

ಮೈಸೂರು -ಕೊಡಗು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಯದುವೀರ್ ಒಡೆಯರ್ ಮತ್ತು ಹಾಲಿ ಸಂಸದ ಪ್ರತಾಪ್ ಸಿಂಹ ಮೊದಲ ಸಲ ಸೋಮವಾರ(ಮಾರ್ಚ್ 19) ಮುಖಾಮುಖಿಯಾದರು. ಈ ಇಬ್ಬರ ನಡುವಿನ ಬಾಡಿಲಾಂಗ್ವೇಜ್ ಬೇರೆಯದೇ ಕಥೆ ಹೇಳ್ತಾ ಇತ್ತು.. (ವಿಶೇಷ ವರದಿ- ರಂಗಸ್ವಾಮಿ, ಮೈಸೂರು)

ಲೋಕಸಭೆ ಚುನಾವಣೆ; ಮೈಸೂರಲ್ಲಿ ಬಿಜೆಪಿ ಮಾಧ್ಯಮ ಸಂವಾದ ಸೋಮವಾರ ನಡೆಯಿತು. ಅಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್‌, ಹಾಲಿ ಸಂಸದ ಪ್ರತಾಪ್ ಸಿಂಹ ಒಂದು ಗಂಟೆ ಜೊತೆಗಿದ್ದರೂ, ಅವರ ಬಾಡಿ ಲಾಂಗ್ವೇಜ್ ಕಥೆನೇ ಬೇರೆ ಇತ್ತು.
ಲೋಕಸಭೆ ಚುನಾವಣೆ; ಮೈಸೂರಲ್ಲಿ ಬಿಜೆಪಿ ಮಾಧ್ಯಮ ಸಂವಾದ ಸೋಮವಾರ ನಡೆಯಿತು. ಅಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್‌, ಹಾಲಿ ಸಂಸದ ಪ್ರತಾಪ್ ಸಿಂಹ ಒಂದು ಗಂಟೆ ಜೊತೆಗಿದ್ದರೂ, ಅವರ ಬಾಡಿ ಲಾಂಗ್ವೇಜ್ ಕಥೆನೇ ಬೇರೆ ಇತ್ತು.

ಮೈಸೂರು: ಲೋಕಸಭೆ ಚುನಾವಣೆ (Lok Sabha Election 2024)ಗೆ ಮೈಸೂರು- ಕೊಡಗು ಕ್ಷೇತ್ರದಲ್ಲಿ ಯದವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿ ಅಭ್ಯರ್ಥಿ. ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಿದ ಸಂಕಟ. ಹೀಗಾಗಿ ಪರೋಕ್ಷವಾಗಿ ಟಾಂಗ್ ಕೊಟ್ಟು ಮಾತನಾಡ್ತಾ ಇದ್ದ ಪ್ರತಾಪ್ ಸಿಂಹ ಮತ್ತು ಯದುವೀರ್ ಒಡೆಯರ್ ನಿನ್ನೆ ಮಾಧ್ಯಮ ಸಂವಾದ ವೇದಿಕೆಯಲ್ಲಿ ಅಕ್ಕಪಕ್ಕ ಕೂರಬೇಕಾಯಿತು. ಕುಳಿತುಕೊಂಡರು. ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆಲ್ಲ ಉತ್ತರ ಕೊಟ್ಟರು.

ಈ ಮಾಧ್ಯಮ ಸಂವಾದದಲ್ಲಿ ಪ್ರಶ್ನೋತ್ತರಕ್ಕಿಂತ ಹೆಚ್ಚು ಗಮನಸೆಳೆದುದು ಯದುವೀರ್ ಒಡೆಯರ್ ಮತ್ತು ಪ್ರತಾಪ್ ಸಿಂಹ ಅವರ ಬಾಡಿಲಾಂಗ್ವೇಜ್‌. ಪ್ರತಾಪ್ ಸಿಂಹ ಅವರ ಬಾಡಿಲಾಂಗ್ವೇಜ್‌ಗೂ ಮಾತಿಗೂ ತಾಳೆಯಾಗುತ್ತಿರಲಿಲ್ಲ. ಒಂದು ಗಂಟೆ ಮಾಧ್ಯಮ ಸಂವಾದದಲ್ಲಿ ಅಕ್ಕ ಪಕ್ಕ ಕುಳಿತಿದ್ದರೂ ಪರಸ್ಪರ ಮುಖ ಕೊಟ್ಟು ಸೌಹಾರ್ದ ಮಾತುಕತೆ ಇರಲಿಲ್ಲ. ಸಂವಾದ ಮುಗಿದು ಟೀ ಕುಡಿಯಲು ಕುಳಿತಾಗಲೂ ಅಲ್ಲೂ ಅಷ್ಟೇ, ಇಬ್ಬರೂ ಅವರವರದ್ದೇ ಲೋಕದಲ್ಲಿದ್ದರು.

ಯದುವೀರ್‌, ಪ್ರತಾಪ್ ಸಿಂಹ ಬಾಡಿ ಲಾಂಗ್ವೇಜ್ ಕಥೆನೇ ಬೇರೇನೇ ಇತ್ತು

ಮೈಸೂರಿನಲ್ಲಿ ಸೋಮವಾರ ಬಿಜೆಪಿಯ ಮಾಧ್ಯಮ ಸಂವಾದಕ್ಕೆ ಪಕ್ಷದ ಅಭ್ಯರ್ಥಿ ಯದುವೀರ್ ಒಡೆಯರ್ ಮತ್ತು ಇತರೆ ನಾಯಕರು ಕುಳಿತಿದ್ದಾಗ ಅಲ್ಲಿಗೆ ಹಾಲಿ ಸಂಸದ ಪ್ರತಾಪ್ ಸಿಂಹ ಬಂದರು. ಅವರು ಬರುತ್ತಿದ್ದಂತೆ, ಅವರ ಅಭಿಮಾನಿಗಳು ಜೈಕಾರ ಕೂಗಿ ಬರಮಾಡಿಕೊಂಡರು.

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಗರ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ಭಾಗಿಯಾದರು.‌ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಮಾಧ್ಯಮ ಸಂವಾದದಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಉಪಾಧ್ಯಕ್ಷೆ ಮಾಳವಿಕ ಅವಿನಾಶ್, ಮಾಜಿ ಶಾಸಕ ಹಾಗು ನಗರಾಧ್ಯಕ್ಷ ಎಲ್ ನಾಗೇಂದ್ರ, ಶಾಸಕ ಶ್ರಿ ವತ್ಸ, ಮಾಜಿ ಸಚಿವ ಎಸ್ ಎ ರಾಮದಾಸ್ ಸೇರಿದಂತೆ ಹಲವು ಪ್ರಮುಖರು ಸಂವಾದದಲ್ಲಿ ಭಾಗಿಯಾದರು.

ಇಬ್ಬರೂ ಅಕ್ಕಪಕ್ಕ ಕುಳಿತಿದ್ದರು. ಔಪಚಾರಿಕವಾಗಿ ಸ್ವಾಗತಿಸುವ ಸಂದರ್ಭದಲ್ಲಿ ಹೂಗುಚ್ಛ ಕೊಟ್ಟು, ಹಸ್ತಲಾಘವ ಮಾಡಿದರು. ಆದರೆ ಬಾಡಿಲಾಂಗ್ವೇಜ್‌ ಅವರ ಕೆಲಸಕ್ಕೆ ಸಾಥ್ ಕೊಟ್ಟಿರಲಿಲ್ಲ. ಕಾರಣ ಇಷ್ಟೆ, ಯದುವೀರ್‌ಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ, ವ್ಯಂಗ್ಯವಾಗಿ ಟೀಕಿಸಿದ್ದ ಪ್ರತಾಪ್ ಸಿಂಹ, ಬಳಿಕ ಡ್ಯಾಮೇಜ್ ಕಂಟ್ರೋಲ್‌ ಮಾಡುವಂತೆ ಮಾತನಾಡಿದರು. ಆದರೆ, ಮಾತುಗಳಿಗೂ ಭಾವನೆಗಳಿಗೂ ಹೊಂದಿಕೆ ಇರಲಿಲ್ಲ.

ಇನ್ನು ಯದುವೀರ್ ಒಡೆಯರ್ ಮಾತನಾಡುವಾಗ, ನನ್ನನ್ನು ನೀವು ಸಂಸದ, ಪ್ರತಿನಿಧಿ ಏನು ಬೇಕಾದರೂ ಅಂದುಕೊಳ್ಳಿ ಎಂದು ಹೇಳಿದರು. ಇದೇ ವೇಳೇ ಪ್ರತಾಪ್ ಸಿಂಹ ಅವರು, “ನಾನು ಜನಸೇವಕ” ಎಂದು ಹಲವು ಬಾರಿ ಉಚ್ಚರಿಸಿದರು. ಅಪ್ಪಿತಪ್ಪಿಯೂ ಯದುವೀರ್ ಹೆಸರು ಹೇಳಲಿಲ್ಲ. ಸುಮಾರು ಒಂದು ಗಂಟೆ ಕಾಲ, ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತಿದ್ದ ಪ್ರತಾಪ್ ಸಿಂಹ ಹಾಗೂ ಯದುವೀರ್‌ ಒಡೆಯರ್ ಅವರು ಸೌಜನ್ಯಕ್ಕಾದರೂ ಪರಸ್ಪರ ಮಾತನಾಡದೇ ನಿರ್ಗಮಿಸಿದರು.

“ಜನಸೇವಕ”ನ ಜೊತೆಗೆ ಚಹಾ ಸೇವಿಸಿದ ಯದುವೀರ್‌

ಪದೇಪದೆ ನಾನು ಜನಸೇವಕ ಎಂದು ಹೇಳಿಕೊಳ್ಳುತ್ತಿದ್ದ ಪ್ರತಾಪ್‌ ಸಿಂಹ ಕೆಲವು ದಿನಗಳ ಹಿಂದೆ, ಯದುವೀರ್ ಅವರಿಗೆ ಟಿಕೆಟ್ ಘೋಷಣೆಯಾದ ಅಂದಿನಿಂದ “ಮಹಾರಾಜರು” ಎಂದು ಸಂಬೋಧಿಸುತ್ತಲೇ, ಜನರ ನಡುವೆ ಬರ್ತಾರಾ, ಇರ್ತಾರ, ಜತೆಗೆ ಬೆರೆಯುತ್ತಾರಾ ಎಂದೆಲ್ಲ ಟೀಕಿಸಿದ್ದರು.

ಯದುವೀರ್ ಅವರು ಮಾಧ್ಯಮ ಸಂವಾದ ಮುಗಿದ ಕೂಡಲೇ ಸಾದಾ ಸೀದಾ ಸಾಮಾನ್ಯರಂತೆ “ಜನಸೇವಕ” ಪ್ರತಾಪ್ ಸಿಂಹ ಅವರ ಪಕ್ಕದಲ್ಲೇ ಚಹಾ ಕುಡಿಯಲು ಕುಳಿತು ಗಮನಸೆಳೆದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಪ್ರತಾಪ್ ಸಿಂಹ ಅವರ ಚಡಪಡಿಕೆ ಕಾಣುತ್ತಿತ್ತು. ಅದೇ ರೀತಿ ಒಡೆಯರ್ ಅವರ ಬಾಡಿಲಾಂಗ್ವೇಜ್‌ನಲ್ಲೂ ಸಂದೇಶ ರವಾನೆಯಾಗುತಿತ್ತು.

ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಕ್ರೇಜ್‌

ಪ್ರಚಾರಕ್ಕೆ ಹೋಗುತ್ತಿರುವ ಟಿಕೆಟ್ ವಂಚಿತ ಪ್ರತಾಪ್ ಸಿಂಹರನ್ನು ನೋಡುತ್ತಿದ್ದಂತೆಯೇ ಪ್ರತಾಪ್ ಸಿಂಹ ಜೊತೆಯಲ್ಲಿ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂತು. ಬಿಜೆಪಿಯ ಸಂವಾದ ಕಾರ್ಯಕ್ರಮ ಮುಗಿಸಿಕೊಂಡು ಹೋಗುತ್ತಿದ್ದ ಪ್ರತಾಪ್ ಸಿಂಹರನ್ನು ಸುತ್ತುವರಿದ ಅಭಿಮಾನಿಗಳು, ಪೋಟೊ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಈ ವೇಳೆ ಪ್ರತಾಪ್ ಸಿಂಹ ಅವರು, ಅಭಿಮಾನಿಗಳನ್ನು ಸಮಾಧಾನ ಮಾಡಿ ಕಳುಹಿಸುತ್ತಿದ್ದ ದೃಶ್ಯ ಗಮನಸೆಳೆಯಿತು.

(ವಿಶೇಷ ವರದಿ- ರಂಗಸ್ವಾಮಿ, ಮೈಸೂರು)

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

Whats_app_banner