Lok Sabha Elections2024: ಕನ್ನಡದಲ್ಲಿ ಅಭಿನಯಿಸಿದ್ದ ನಟಿ ರಾಧಿಕಾ ಶರತಕುಮಾರ್ ತಮಿಳುನಾಡು ಬಿಜೆಪಿ ಚುನಾವಣೆ ಕಣಕ್ಕೆ
ತಮಿಳುನಾಡಿನಲ್ಲೂ ಲೋಕಸಭೆ ಚುನಾವಣೆಗೆ ಬಿಜೆಪಿ ನಾನಾ ಕ್ಷೇತ್ರದವರಿಗೆ ಮಣೆ ಹಾಕಿದ್ದು. ನಟಿ ರಾಧಿಕಾ ಶರತ್‌ಕುಮಾರ್(Radikaa Sarathkumar) ಅವರನ್ನು ಕಣಕ್ಕಿಳಿಸಿದೆ.

ದೆಹಲಿ: ಭಾರತೀಯ ಜನತಾಪಾರ್ಟಿಯು ಲೋಕಸಭೆ ಚುನಾವಣೆಗೆ ತಮಿಳುನಾಡಿನಲ್ಲಿ ಸ್ಪರ್ಧಿಸಲಿರುವ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕನ್ನಡ ಸೇರಿ ಹಲವು ಭಾಷೆಗಳಲ್ಲಿ ನಟಿಸಿರುವ ನಟಿ ರಾಧಿಕಾ ಶರತ್‌ಕುಮಾರ್ ಅವರಿಗೆ ಟಿಕೆಟ್ ನೀಡಿದೆ. ರಾಧಿಕಾ ಅವರು ವಿರುಧು ನಗರ ಕ್ಷೇತ್ರದಿಂದ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ರಾಧಿಕಾ ಹಾಗೂ ಅವರ ಪತಿ, ಹಿರಿಯ ನಟ ಶರತ್‌ಕುಮಾರ್ ಅವರು ಬಿಜೆಪಿ ಸೇರಿದ್ದರು. ಮೋದಿ ಅವರು ತಮಿಳುನಾಡಿಗೆ ಬಂದಾಗ ಅವರೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.
ತಮಿಳುನಾಡಿನಲ್ಲಿ ತಳವೂರಬೇಕು ಎಂದು ಹಠಕ್ಕೆ ಬಿದ್ದಿರುವ ಬಿಜೆಪಿಯು ವಿವಿಧ ಕ್ಷೇತ್ರದವರನ್ನು ಕರೆ ತಂದು ಪಕ್ಷ ಕಟ್ಟಲು ಮುಂದಾಗಿದೆ. ಈ ಹಿಂದೆ ಎಐಎಡಿಎಂಕೆಯಲ್ಲಿದ್ದ ರಾಧಿಕಾ ಶರತ್ ಕುಮಾರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಮೇಲೆ ವಜಾಗೊಳಿಸಲಾಗಿತ್ತು. ಆನಂತರ ಮಕ್ಕಳ ಕಚ್ಚಿ ಪಕ್ಷದಲ್ಲಿದ್ದರೂ ಸಕ್ರಿಯರಾಗಿರಲಿಲ್ಲ. ಈಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಮೂಲಕ ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಂದಿದ್ದಾರೆ.
ಕನ್ನಡದಲ್ಲಿ ಜೀವನಚಕ್ರ ಚಿತ್ರದಲ್ಲಿ ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದ ರಾಧಿಕಾ ಗಮನ ಸೆಳೆದಿದ್ದರು. ಪ್ರಚಂಡ ಕುಳ್ಳ, ಸತ್ಯಂಶಿವಂ ಸುಂದರಂ, ನಾಗಿಣಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲೂ ದೊಡ್ಡ ಹೆಸರನ್ನು ಮಾಡಿದ್ದಾರೆ. 62 ವರ್ಷದ ರಾಧಿಕಾ ಅವರು ನಾಲ್ಕೂವರೆ ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
ತಮಿಳುನಾಡಿನಲ್ಲಿ ಒಂಬತ್ತು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಬಿಜೆಪಿ ಶುಕ್ರವಾರ 14 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಈ ಮೂಲಕ ಒಟ್ಟು 21 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲು ಮುಂದಾಗಿದೆ. ಪಾಂಡಿಚೇರಿಯಲ್ಲು ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಬಿಜೆಪಿ ಘೋಷಣೆ ಮಾಡಿದೆ.
ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದು, ಈಗ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿರುವ ಅಣ್ಣಾಮಲೈ, ತೆಲಂಗಾಣದ ರಾಜ್ಯಪಾಲರಾಗಿ ರಾಜೀನಾಮೆ ನೀಡಿದ್ದ ತಮಿಳುಸಾಯಿ ಸೌಂದರ ರಾಜನ್ ಸಹಿತ ಹಲವರಿಗೆ ಬಿಜೆಪಿ ತಮಿಳುನಾಡಿನಲ್ಲಿ ಟಿಕೆಟ್ ನೀಡಿ ತುರುಸಿನ ಸ್ಪರ್ಧೆ ಒಡ್ಡಿದೆ.
