ಕನ್ನಡ ಸುದ್ದಿ  /  Elections  /  Lok Sabha Elections2024 Bangalore Rural Congress Candidate Dk Suresh Files Nominations At Ramnagar With Leaders Mrt

Ramnagar News:ರಾಮನಗರದಲ್ಲಿ ಡಿಕೆ ಸಹೋದರರ ಅಬ್ಬರ, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಸುರೇಶ್ ನಾಮಪತ್ರ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್‌ ಭಾರೀ ಜನರೊಂದಿಗೆ ರಾಮನಗರದಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದರು.ವರದಿ:ಎಚ್‌.ಮಾರುತಿ, ಬೆಂಗಳೂರು

ರಾಮನಗರದಲ್ಲಿ ಕಾಂಗ್ರೆಸ್‌ ಬೆಂಬಲ ಪ್ರದರ್ಶನ ಹೀಗಿತ್ತು,
ರಾಮನಗರದಲ್ಲಿ ಕಾಂಗ್ರೆಸ್‌ ಬೆಂಬಲ ಪ್ರದರ್ಶನ ಹೀಗಿತ್ತು,

ರಾಮನಗರ: ರಾಜ್ಯದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾದ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

ಮೂರನೇ ಬಾರಿಗೆ ಮರು ಆಯ್ಕೆ ಬಯಸಿರುವ ಅವರು ರಾಮನಗರದಲ್ಲಿ ಬೃಹತ್ ರೋಡ್ ಶೋ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. 2019 ರಲ್ಲಿ ಗೆದ್ದ ಏಕೈಕ ಸಂಸದ ಸುರೇಶ್ ಮಾತ್ರ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ,ಮಂಕಾಳ್ ವೈದ್ಯ, ಶಾಸಕರಾದ ಎಚ್.ಸಿ. ಬಾಲಕೃಷ್ಣ, ಇಕ್ಬಾಲ್ ಹುಸೇನ್, ಎಂ. ಶಿವಣ್ಣ, ಡಾ. ರಂಗನಾಥ್, ಕೊತ್ತನೂರು ಮಂಜುನಾಥ್, ಎಸ್ ರವಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ ಎಂ ರೇವಣ್ಣ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ. ವಿ. ಶ್ರೀನಿವಾಸ್, ಪಿ.ಜಿ. ಆರ್. ಸಿಂಧ್ಯಾ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ಪಕ್ಷದ ಶಕ್ತಿ ಪ್ರದರ್ಶನ ಜೋರಾಗಿಯೇ ನಡೆದಿದ್ದು, ಮೆರವಣಿಗೆಯಲ್ಲಿ ಕ್ಷೇತ್ರದ ವಿವಿಧ ಭಾಗಗಳ 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

ಮನೆ ದೇವರು ಶಕ್ತಿ ದೇವತೆ ಕಬ್ಬಾಳಮ್ಮ, ಕೆಂಕೇರಮ್ಮ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಕನಕಪುರದ ಕೋಡಿಹಳ್ಳಿ ನಿವಾಸಕ್ಕೆ ಭೇಟಿ ನೀಡಿ ತಾಯಿ, ಸಹೋದರ ಶಿವಕುಮಾರ್ ದಂಪತಿಗಳ ಆಶೀರ್ವಾದ ಪಡೆದುಕೊಂಡರು.

ಗೆಲುವು ಖಚಿತ

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಸುರೇಶ್ ಅವರು ಗೆಲ್ಲುತ್ತಾರೆ. ಪ್ರತಿನಿತ್ಯ ನನಗೆ ಮಾಹಿತಿ ಬರುತ್ತಿರುವ ಆಧಾರದಲ್ಲಿ ಹೇಳುತ್ತೇನೆ. ಸುರೇಶ್ ಅವರು ಗೆಲುವು ಶತಸಿದ್ದ ಎಂದು ಘೋಷಿಸಿದರು.

ನಾವು ನಮ್ಮ ಗ್ಯಾರಂಟಿ ಯೋಜನೆಗಳ ಮೂಲಕ ನೇರವಾಗಿ ಕನ್ನಡ ನಾಡಿನ‌ ಜನತೆಯ ಖಾತೆಗೆ ಹಣ ಜಮೆ ಮಾಡುತ್ತಿದ್ದೇವೆ. ಶೂದ್ರರು, ದಲಿತರು, ಮಹಿಳೆಯರು, ಶ್ರಮಿಕರು, ದುಡಿಯುವ ವರ್ಗಗಳ ಎಲ್ಲರ ಮನೆ ಮನೆಯನ್ನೂ ನಮ್ಮ ಗ್ಯಾರಂಟಿಗಳು ತಲುಪಿವೆ. ಇದು ನಮ್ಮ ಬದ್ಧತೆ. ನೀವು ಕೊಟ್ಟ ಒಂದೊಂದು ಓಟಿಗೂ ಘನತೆ ತಂದಿದ್ದೇವೆ ಎಂದರು.

ದೇವೇಗೌಡರ ಕುಟುಂಬ ಎದುರಿಸುತ್ತೇವೆ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಅಳಿಯ ಡಾ. ಸಿ.ಎನ್.‌ ಮಂಜುನಾಥ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿರುವ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ನಾವು ದೇವೇಗೌಡರ ಕುಟುಂಬದ ವಿರುದ್ಧ ಅನೇಕ ಚುನಾವಣೆಗಳನ್ನು ಮಾಡಿದ್ದೇವೆ. ದೇವೇಗೌಡರ ವಿರುದ್ಧ ಓರ್ವ ಮಹಿಳೆಯನ್ನು ನಿಲ್ಲಿಸಿ ಗೆಲ್ಲಿಸಿದ್ದೇವೆ. ನಾನು ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದೇನೆ. 2013ರ ಉಪಚುನಾವಣೆಯಲ್ಲಿ ಇದೇ ರೀತಿ ಜೆಡಿಎಸ್ ಹಾಗೂ ಬಿಜೆಪಿ ಸೇರಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದಾಗ ಸುರೇಶ್ ಅವರು ಗೆದ್ದಿದ್ದರು. ಆಗ ಸಿದ್ದರಾಮಯ್ಯ ಅವರ ಸರ್ಕಾರ ಇದ್ದರೂ ನಾನು ಸಚಿವನಾಗಿರಲಿಲ್ಲ. ಆಗಲೂ ನಾವು ಸಹೋದರಿ ಅನಿತಾ ಕುಮಾರಸ್ವಾಮಿ ಅವರನ್ನು 1.30 ಲಕ್ಷ ಮತಗಳಿಂದ ಮಣಿಸಿದೆವು. ನಂತರ ಜನ ಸುರೇಶ್ ಅವರನ್ನು ಸತತವಾಗಿ ಗೆಲ್ಲಿಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.

ಹೇಗಿದೆ ವಾತಾವರಣ

ಈ ಕ್ಷೇತ್ರದಲ್ಲಿ ಇಬ್ಬರು ಪ್ರಬಲ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಮಂಜುನಾಥ್ ಅವರಿಗೆ ಸಹಕಾರಿಯಾಗಿದೆ. ಡಿಕೆ ಸಹೋದರರಿಗೆ ಈ ಕ್ಷೇತ್ರ ಪ್ರತಿಷ್ಠೆಯಾಗಿದ್ದು ಗೆಲುವಿಗೆ ಪಣ ತೊಟ್ಟಿದ್ದಾರೆ.

ಬಿಜೆಪಿ ಅಭ್ಯರ್ಥಿ ಜಯದೇವ ಆಸ್ಪತ್ರೆ ನಿವೃತ್ತ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಒಳ್ಳೆಯ ಹೆಸರಿದೆ. ಬಿಜೆಪಿ ಜೆಡಿಎಸ್ ಈ ಕ್ಷೇತ್ರವನ್ನು ಕಸಿದುಕೊಳ್ಳಲು ಪ್ರಯತ್ನ ಮಾಡುತ್ತಿವೆ. ಮತದಾರ ಯಾರ ಪರ ಎಂದು ಇಷ್ಟು ಬೇಗ ಹೇಳಲು ಅಸಾಧ್ಯ. ಒಂದೆರಡು ವಾರ ಕಳೆದರೆ ನಾಡಿಮಿಡಿತ ಗೊತ್ತಾಗಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯ.

(ವರದಿ: ಎಚ್. ಮಾರುತಿ, ಬೆಂಗಳೂರು)