Lok Sabha Elections2024: ಬಿಜೆಪಿಯ ಭದ್ರಕೋಟೆ ಬೆಂಗಳೂರು ದಕ್ಷಿಣ ಭೇದಿಸಲು ಕೈ ಹರಸಾಹಸ, ಪ್ರಖರ ಸೂರ್ಯನೆದುರು ಯಾರು ನಿಲ್ಲೋರು
Bengaluru South ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ನಂತರ ಈಗ ಬಿಜೆಪಿ ಭದ್ರಕೋಟೆ. ಪ್ರತಿಷ್ಠಿತ ಕ್ಷೇತ್ರದ ಚುನಾವಣೆ ಇತಿಹಾಸವೂ ವಿಭಿನ್ನವಾಗಿದೆ.(ವರದಿ: ಎಚ್.ಮಾರುತಿ,ಬೆಂಗಳೂರು)
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಗಳಲ್ಲಿ ಒಂದು. ಕಳೆದ ಎಂಟು ಚುನಾವಣೆ ಗಳಿಂದ ಇಲ್ಲಿ ಬಿಜೆಪಿ ಅನಾಯಾಸವಾಗಿ ಗೆಲ್ಲುತ್ತಾ ಬಂದಿದೆ. ಅದರಲ್ಲೂ ಅನಂತಕುಮಾರ್ ಈ ಕ್ಷೇತ್ರವನ್ನು ಆವರಿಸಿಕೊಂಡಿದ್ದರು. ಕೇಂದ್ರದಲ್ಲಿ ಮಂತ್ರಿಯಾಗಿಯೂ ಛಾಪು ಮೂಡಿಸಿದ್ದವರು. ಪಕ್ಷದ ಸಂಘಟನೆ, ಸಂಘ ಪರಿವಾರದ ಬೇರುಗಳು ಗಟ್ಟಿಯಾಗಿವೆ ಎನ್ನುವುದಕ್ಕೆ ಅನಂತಕುಮಾರ್ ಅವರ ನಂತರ 2019ರ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ಅವರ ಗೆಲುವೇ ಸಾಕ್ಷಿ. ಈ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ನಡೆಸುತ್ತಿರುವ ಪ್ರಯೋಗಗಳೆಲ್ಲವೂ ಕೈ ಕೊಡುತ್ತಾ ಬಂದಿವೆ.
ಒಂಬತ್ತು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಗೋವಿಂದರಾಜ ನಗರ, ವಿಜಯನಗರ, ಬಿಟಿಎಂ ಲೇ ಔಟ್ ನಲ್ಲಿ ಕಾಂಗ್ರೆಸ್ ಮತ್ತು ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಜಯನಗರ, ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಗೆದ್ದಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 3,31,192 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿತ್ತು. ಬಿಜೆಪಿ ಪಡೆದ ಮತಗಳು ಹಿಂದಿನ ಚುನಾವಣೆಗಿಂತ ಶೇ.5.32 ಹೆಚ್ಚಾಗಿತ್ತು. ತೇಜಸ್ವಿಸೂರ್ಯ 7,39,229, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬಿ.ಕೆ.ಹರಿಪ್ರಸಾದ್ 4,08,037 ಮತ ಪಡೆದಿದ್ದರು. ಈ ಬಾರಿ ಮೈತ್ರಿ ಬದಲಾಗಿದ್ದು, ಬಿಜೆಪಿ ಶಕ್ತಿ ವೃದ್ಧಿಸಿದೆ.
ಈ ಕ್ಷೇತ್ರದಲ್ಲಿ ಬ್ರಾಹ್ಮಣ (3,50,000),ಒಕ್ಕಲಿಗ ( 5,00,000), ಎಸ್ ಸಿ, ಎಸ್ ಟಿ (6,00,000), ಮುಸ್ಲಿಂ (3,00,000),ಕ್ರಿಶ್ಚಿಯನ್ (2,00,000), ಇತರೆ 2 ಲಕ್ಷ ಮತದಾರರಿದ್ದಾರೆ. ಈ ಅಂಕಿ ಅಂಶಗಳನ್ನು ನೋಡಿದರೆ ಬಿಜೆಪಿಯೇತರ ಅಭ್ಯರ್ಥಿ ಗೆಲುವು ಸಾಧಿಸಬೇಕಿತ್ತಲ್ಲವೇ ಎಂದು ಮೇಲ್ನೋಟಕ್ಕೆ ಅನ್ನಿಸಬಹುದು.
ಆದರೆ ಇಲ್ಲಿ ನಗರ ಕೇಂದ್ರಿತ ಮತದಾರರು ಬಿಜೆಪಿ ಜೊತೆ ಗಟ್ಟಿಯಾಗಿ ನಿಂತಿದ್ದಾರೆ. ಆಗಲೇ ಹೇಳಿದಂತೆ ಬಿಜೆಪಿ ಬೇರುಗಳು ಬಲವಾಗಿವೆ. ಹಿಂದುತ್ವ, ರಾಮ ಮಂದಿರದಂತಹ ಭಾವನಾತ್ಮಕ ವಿಷಯಗಳು ಬಿಜೆಪಿ ಬೆನ್ನಿಗಿವೆ. ಇಂತಹ ಕಾರಣಗಳಿಗಾಗಿಯೇ ಆಧಾರ್ ರೂಪಿಸಿದ, ಇನ್ ಫೋಸಿಸ್ ದೈತ್ಯ ನಂದನ್ ನೀಲೇಕಣಿ ಅಂತಹವರೂ ಸೋಲು ಕಂಡಿದ್ದಾರೆ.
ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಬಿಜೆಪಿಯ ತೇಜಸ್ವಿ ಸೂರ್ಯ ಮತ್ತೊಮ್ಮೆ ಸ್ಪರ್ಧಿಸಲಿದ್ದು, ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಅನ್ಯ ಆಕಾಂಕ್ಷಿಗಳು ಇಲ್ಲ.
ಅಭ್ಯರ್ಥಿಗಾಗಿ ಕಾಂಗ್ರೆಸ್ ಹುಡುಕಾಟ ನಡೆಸಿದ್ದರೂ ಯಾರೊಬ್ಬರೂ ಆಸಕ್ತಿ ತೋರುತ್ತಿಲ್ಲ. ಆದರೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ, ಮಾಜಿ ಶಾಸಕಿ ಸೌಮ್ಯಾರೆಡ್ಡಿ ಅವರ ಹೆಸರು ಮುನ್ನೆಲೆಗೆ ಬಂದಿದೆಯಾದರೂ ಅಪ್ಪ ಮಗಳು ಅಧಿಕೃತವಾಗಿ ಓಕೆ ಎಂದು ಹೇಳಿಲ್ಲ.
ಈ ಹಿಂದಿನ ಎಲ್ಲಾ ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಾ ಬಂದಿತ್ತು. ಕೆಲವು ಲಕ್ಷ ಮತಗಳನ್ನು ಪಡೆಯುತ್ತಿದ್ದು, ಕಾಂಗ್ರೆಸ್ ಓಟಕ್ಕೆ ಕಡಿವಾಣ ಬೀಳುತ್ತಿತ್ತು. ಈ ಬಾರಿ ಜೆಡಿಎಸ್ ಎನ್‌ಡಿಎ ಒಕ್ಕೂಟ ಸೇರಿದೆ. ಆದ್ದರಿಂದ ಬಿಜೆಪಿ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ.
ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಬಿಜೆಪಿಗೆ ಪೈಪೋಟಿ ನೀಡಬಹುದು ಎಂಬ ಸತ್ಯ ಅರಿತಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮರ್ಥರಿಗಾಗಿ ಹುಡುಕಾಟ ನಡೆಸಿದ್ದಾರೆ. ತೇಜಸ್ವಿನಿ ಅನಂತ ಕುಮಾರ್ ಅವರನ್ನು ಸೆಳೆಯುವ ಡಿಕೆಶಿ ಪ್ರಯತ್ನ ವಿಫಲವಾಗಿದೆ. ಆದರೂ ಬಿಜೆಪಿಯಿಂದಲೇ ಯಾರನ್ನಾದರೂ ಸೆಳೆಯಲು ಪ್ರಯತ್ನ ನಡೆಸಿರುವ ಅವರು ಕೆಲವರ ಸಂಪರ್ಕ ಸಾಧಿಸಿದ್ದಾರೆ ಎಂದು ತಿಳಿದು ಬಂದಿದೆ.
ದೇಶದಲ್ಲಿ ಅನಾಯಾಸವಾಗಿ ಗೆಲ್ಲುವ ಕ್ಷೇತ್ರಗಳಲ್ಲಿ ಒಂದಾದ ಈ ಕ್ಷೇತ್ರದಲ್ಲಿ ಬಿಜೆಪಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಥವಾ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಕಣಕ್ಕಿಳಿಸುವ ಚಿಂತನೆ ನಡೆಸಿದೆ. ಆದರೆ ಇನ್ನೂ ಖಚಿತವಾಗಿಲ್ಲ.
ಹಿಂದೆ ಗೆದ್ದಿದ್ದರು ಗುಂಡೂರಾವ್
ಈ ಕ್ಷೇತ್ರ ಕಾಂಗ್ರೆಸ್ ಗೆ ಒಲಿದಿದ್ದು ಕಡಿಮೆ. ಹಿಂದಿನಿಂದಲೂ ಕಾಂಗ್ರೆಸೇತರ ಪಕ್ಷಗಳೇ ಗೆಲುವು ಸಾಧಿಸಿಕೊಂಡು ಬಂದಿವೆ. 1977 ರಿಂದ 2019 ರ ಅವಧಿಯಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಒಮ್ಮೆ ಮಾತ್ರ ಗೆದ್ದಿದ್ದು, 1977 ರಿಂದ 1984 ರ ಅವಧಿಯಲ್ಲಿ ನಡೆದ ಮೂರು ಚುನಾವಣೆಗಳಲ್ಲಿ ಜನತಾ ಪಕ್ಷದಿಂದ ಕೆ.ಎಸ್.ಹೆಗ್ಡೆ, ಟಿ.ಆರ್.ಶಾಮಣ್ಣ ಮತ್ತು ವಿ.ಎಸ್.ಕೃಷ್ಣಯ್ಯರ್ ಗೆಲುವು ಸಾಧಿಸಿದ್ದರು. 1989 ರಲ್ಲಿ ಒಮ್ಮೆ ಮಾತ್ರ ಕಾಂಗ್ರೆಸ್‌ನಿಂದ ಆರ್.ಗುಂಡೂರಾವ್ ಗೆದ್ದಿದ್ದರು.
1991 ರಲ್ಲಿ ಬಿಜೆಪಿಯಿಂದ ಕೆ.ವೆಂಕಟಗಿರಿಗೌಡ ಅವರು ಚೊಚ್ಚಲ ಗೆಲುವು ಸಾಧಿಸಿದ್ದರು. ಅಂದಿನಿಂದ ಇಂದಿನವರೆಗೆ ಅಂದರೆ, 1996 ರಿಂದ 2014 ರವರೆಗೆ ನಡೆದ ಆರು ಚುನಾವಣೆಗಳಲ್ಲಿ ಬಿಜೆಪಿಯಿಂದ ಅನಂತಕುಮಾರ್ ಗೆಲುವು ಸಾಧಿಸುತ್ತಾ ಬಂದಿದ್ದರು. ಅವರ ನಿಧನದ ಬಳಿಕ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ಅವರು ಗೆಲುವು ಸಾಧಿಸಿದರು.
ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಅಲ್ಪಸಂಖ್ಯಾತ ಮತಗಳನ್ನು ಕ್ರೋಢೀಕರಿಸಿಕೊಂಡು ಬಿಜೆಪಿಯನ್ನು ಮಣಿಸಬಹುದು ಎಂಬ ಹೊಸ ಸಮೀಕರಣಕ್ಕೆ ಕಾಂಗ್ರೆಸ್ ಮುಂದಾಗಿದೆ. ಈ ಸೂತ್ರಕ್ಕೆ ಜೋತು ಬಿದ್ದರೆ ಸೌಮ್ಯರೆಡ್ಡಿ ಅಭ್ಯರ್ಥಿಯಾಗುವುದು ಖಚಿತ.
ಈ ಕ್ಷೇತ್ರದಲ್ಲಿ ಬ್ರಾಹ್ಮಣ ಮತದಾರರ ಸಂಖ್ಯೆ ಹೆಚ್ಚಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಕಣಕ್ಕಿಳಿಸುವ ಆಲೋಚನೆಯನ್ನೂ ಕಾಂಗ್ರೆಸ್ ಮಾಡಿದೆಯಾದರೂ ಅವರು ನಿರಾಕರಿಸಿದ್ದಾರೆ. ಒಟ್ಟಾರೆ ಬಿಜೆಪಿ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಖಚಿತವಾಗಿದ್ದು, ಬಿಜೆಪಿ ಗೆಲುವಿನ ಸಾಧ್ಯತೆಗಳು ಹೆಚ್ಚು. ಆದರೂ ಮತದಾರನ ಮನದಿಂಗಿತ ಹೀಗೆಯೇ ಇರುತ್ತದೆ ಎಂದು ಹೇಳಲಾಗದು.
ಬೆಂಗಳೂರು ದಕ್ಷಿಣವು ಶಿಕ್ಷಿತರ ಕ್ಷೇತ್ರ, ಅಭಿವೃದ್ದಿ ಹೊಂದಿದ ಭಾಗ ಎಂದೇ ನಂಬಿದ್ದರೂ ಸಾಕಷ್ಟು ಸಮಸ್ಯೆಗಳು ಕ್ಷೇತ್ರದಲ್ಲಿವೆ. ಸಂಚಾರ ದಟ್ಟಣೆ, ನೀರಿನ ಸಮಸ್ಯೆಯೂ ಕ್ಷೇತ್ರದಲ್ಲಿದೆ. ಜನ ಇದಕ್ಕಾಗಿ ಕಾಯುತ್ತಲೇ ಮತ ಹಾಕುತ್ತಿದ್ದಾರೆ.
(ವರದಿ: ಎಚ್. ಮಾರುತಿ. ಬೆಂಗಳೂರು)