Lok Sabha Elections2024: ಅಧಿಕಾರಸ್ಥ ನೇತಾರರ ನಂಟು, ಉತ್ತರ ಕನ್ನಡದ ಪ್ರಗತಿಯ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು
Canara ಉತ್ತರ ಕನ್ನಡ ಜಿಲ್ಲೆ, ಬೆಳಗಾವಿಯ ಎರಡು ಕ್ಷೇತ್ರ ಒಳಗೊಂಡ ಕೆನರಾ ಕ್ಷೇತ್ರ ವಿಭಿನ್ನ ರಾಜಕೀಯ, ಸಾಂಸ್ಕೃತಿಕ, ಪ್ರಾದೇಶಿಕ ಹಿನ್ನೆಲೆಯ ಕ್ಷೇತ್ರ.ವರದಿ: ಹರೀಶ್ ಮಾಂಬಾಡಿ, ಮಂಗಳೂರು

ಕಾರವಾರ: ಕರಾವಳಿಯ ಇತರ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಶರವೇಗದಲ್ಲಿ ಬೆಳೆಯುತ್ತಿದ್ದರೆ, ಅಲ್ಲೇ ಪಕ್ಕದಲ್ಲಿರುವ ಕಡಲತೀರ, ಮಲೆನಾಡು, ದಟ್ಟಾರಣ್ಯ ತನ್ನೊಳಗೆ ಇಟ್ಟುಕೊಂಡಿರುವ ಉತ್ತರ ಕನ್ನಡ ಮಾತ್ರ ಮುದುಡಿಕೊಂಡು ಕುಳಿತಿದೆ. ಅಲ್ಲೊಂದು, ಇಲ್ಲೊಂದು ರಸ್ತೆ, ಮೂಲಸೌಕರ್ಯ ಅಭಿವೃದ್ಧಿಗಳು ನಡೆದದ್ದು ಬಿಟ್ಟರೆ, ಕೇಂದ್ರದಿಂದ ಜನೋಪಯೋಗಿ ಶಾಶ್ವತ ಯೋಜನೆಗಳು ಜಾರಿಗೊಂಡದ್ದು ಕಡಿಮೆ. ಆದರೆ ಕರಾವಳಿಯ ಇತರ ಜಿಲ್ಲೆಗಳಂತೆ ಇಲ್ಲಿಯೂ ಅಭಿವೃದ್ಧಿಗಿಂತ ಮೊದಲು ಭಾವನಾತ್ಮಕ ವಿಚಾರಧಾರೆಗೆ ಪ್ರಥಮ ಪ್ರಾಶಸ್ತ್ಯ ಇರುವ ಕಾರಣ ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರ ಹೊಂದಿರುವ ಕೆನರಾ ಲೋಕಸಭಾ ಕ್ಷೇತ್ರವೂ ಕೆಲ ವರ್ಷಗಳಿಂದ ಸುದ್ದಿಯಲ್ಲಿದೆ. ಈ ಬಾರಿಯೂ ಇದೇ ನಡೆಯುತ್ತದಾ ಅಥವಾ ಬದಲಾಗುತ್ತದಾ ಎಂಬುದು ಕಾದು ನೋಡಬೇಕಷ್ಟೇ.
ಮುಖ್ಯಮಂತ್ರಿಯನ್ನು ರಾಜ್ಯಕ್ಕೆ ನೀಡಿದ ಜಿಲ್ಲೆ ಇದು. ಇದೇ ಭಾಗದ ರಾಮಕೃಷ್ಣ ಹೆಗಡೆ ಚುನಾವಣೆಗೆ ಸ್ಪರ್ಧೆಗಿಳಿದದ್ದು ಬೇರೆ ಕಡೆಯಾದರೂ ತನ್ನ ರಾಜಕೀಯ ಜೀವನವನ್ನು ಆರಂಭಿಸಿದ್ದು, ಉತ್ತರ ಕನ್ನಡದಲ್ಲೇ. 1983 ಮತ್ತು 1985ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರ ಅತ್ಯಾಪ್ತ ಆರ್.ವಿ.ದೇಶಪಾಂಡೆ ಈಗ ಕಾಂಗ್ರೆಸ್ ನಲ್ಲಿದ್ದಾರೆ. ಅವರ ಪ್ರಭಾವ ಇನ್ನೂ ಜಿಲ್ಲೆಯಲ್ಲಿದೆ ಎನ್ನುವುದಕ್ಕೆ ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್ ಗೆ ಬಂದದ್ದು ಸಾಕ್ಷಿ. ಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯಿಂದ ಸೆಳೆಯುವ ತಂತ್ರಗಾರಿಕೆಯಲ್ಲಿದ್ದಾರೆ. ಮಾರ್ಗರೇಟ್ ಆಳ್ವ ರಾಜ್ಯಸಭೆ ಸದಸ್ಯರಾಗಿ ಸಚಿವರಾಗಿದ್ದರು. ರಾಮಕೃಷ್ಣ ಹೆಗಡೆ ಕೂಡ ಕೇಂದ್ರ ಮಂತ್ರಿಯಾಗಿದ್ದರು. ಅನಂತಕುಮಾರ ಹೆಗಡೆ ಅವರಿಗೂ ಕೇಂದ್ರದಲ್ಲಿ ಮಂತ್ರಿ ಸ್ಥಾನ ಅಲ್ಪಾವಧಿಗೆ ದೊರೆತ್ತಿತ್ತು.
ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶ
ದೇಶರಕ್ಷಣೆಯ ನೌಕಾನೆಲೆ ಇರುವ ಉತ್ತರ ಕನ್ನಡದ ಉದ್ದಕ್ಕೂ ಇರುವ ಕಡಲು ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವನ್ನು ಒದಗಿಸುತ್ತದೆ. ಇಲ್ಲಿದ ದೇವಸ್ಥಾನಗಳು, ಪ್ರಾಕೃತಿಕ ಸೊಬಗನ್ನು ಪ್ರವಾಸೋದ್ಯಮವನ್ನಾಗಿಸುವ ಅವಕಾಶವೂ ಇದೆ. ಬೀಚ್‌ಗಳು ಕೂಡ. ಆದರೆ ಇವುಗಳ ಕುರಿತು ಪ್ರಬಲವಾದ ವಿಚಾರ ಮಂಡಿಸಲು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.
ಅಭಿವೃದ್ಧಿ ಮರೀಚಿಕೆ, ಆಸ್ಪತ್ರೆಗೆ ಮಣಿಪಾಲಕ್ಕೆ ಹೋಗಬೇಕು
‘ಜನಪ್ರತಿನಿಧಿಗಳೆಂದರೆ ಸರಕಾರದಿಂದ ದುಡ್ಡು ಕೊಡಿಸುವ ದಲ್ಲಾಳಿಗಳಲ್ಲ, ಬದಲಾಗಿ ಬದುಕಿನ ವರ್ತಮಾನ ಹಾಗೂ ಭವಿಷ್ಯದ ಚಿಂತಕರು, ರೂಪಕರು ಅವರು’ – ಇದು ಉತ್ತರ ಕನ್ನಡ ಕ್ಷೇತ್ರವನ್ನು 24 ವರ್ಷಗಳ ಕಾಲ ಪ್ರತಿನಿಧಿಸಿದ ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಎಂದೇ ಹೇಳಲಾಗುತ್ತಿದ್ದ, ಈಗ ಅತ್ಯಂತ ವಿವಾದಾಸ್ಪದ ಹೇಳಿಕೆ ನೀಡುವವರು ಎಂದೇ ಸುದ್ದಿಯಲ್ಲಿರುವ ಅನಂತಕುಮಾರ ಹೆಗಡೆ ಮಾತು. ಕಳೆದ ಬಾರಿ ಚುನಾವಣೆಯಲ್ಲಿ ಜಯಗಳಿಸಿದ ಮೇಲೆ ತೆರೆಮರೆಗೆ ಸರಿದಿದ್ದರು ಎನ್ನಲಾಗುತ್ತಿದ್ದರೂ ಮತ್ತೆ ಕೆಲ ತಿಂಗಳಿಂದ ಅವರು ಸುದ್ದಿಯಲ್ಲಿದ್ದಾರೆ.
ಅವರು ಅಷ್ಟೂ ವರ್ಷಗಳಲ್ಲಿ ಏನು ಮಾಡಿದ್ದಾರೆ ಎಂಬುದಕ್ಕೆ ಸ್ಪಷ್ಟತೆ ಇಲ್ಲ. ಆದರೆ ಮಾತಿನಲ್ಲಿ ಅವರನ್ನು ಮೀರಿಸುವವರು ಯಾರೂ ಇಲ್ಲ. ಮಾತಿನ ಮಂಟಪ ಕಟ್ಟುವುದರಿಂದಲೇ ವಿಜಯ ಸಾಧಿಸಿರುವ ಹೆಗಡೆ, ತನ್ನದೇ ಆದ ಫ್ಯಾನ್ ಬೇಸ್ ಹೊಂದಿದ್ದಾರೆ. ಇಡೀ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ, ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ, ಸಿಆರ್‌ಝೆಡ್‌ನಿಂದ ಮರಳು ತೆಗೆಯಲು ಆಗುತ್ತಿಲ್ಲ. ರೈಲ್ವೆ ಯೋಜನೆ ಹಳ್ಳಹಿಡಿಯುತ್ತಿದೆ ಹೀಗೆ ದೂರುಗಳ ಪಟ್ಟಿಯೇ ಅವರ ವಿರುದ್ಧ ಇದೆ. ಇಷ್ಟಿದ್ದರೂ ಅವರು ಸತತವಾಗಿ ಗೆಲ್ಲುತ್ತಿರುವುದೇ ವಿಸ್ಮಯ,
ವಿಧಾನಸಭಾ ಕ್ಷೇತ್ರಗಳು - 8
ಉತ್ತರ ಕನ್ನಡ ಕ್ಷೇತ್ರಕ್ಕೆ ಒಳಪಡುವ ವಿಧಾನಸಭ ಕ್ಷೇತ್ರಗಳು ಇವು: ಬೆಳಗಾವಿ ಜಿಲ್ಲೆಯ ಖಾನಾಪುರ (ಪ್ರಸ್ತುತ ಬಿಜೆಪಿ), ಕಿತ್ತೂರು (ಕಾಂಗ್ರೆಸ್), ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ (ಕಾಂಗ್ರೆಸ್), ಕಾರವಾರ (ಕಾಂಗ್ರೆಸ್), ಕುಮಟಾ (ಬಿಜೆಪಿ), ಭಟ್ಕಳ (ಕಾಂಗ್ರೆಸ್), ಶಿರಸಿ (ಕಾಂಗ್ರೆಸ್), ಯಲ್ಲಾಪುರ (ಬಿಜೆಪಿ – ಕಾಂಗ್ರೆಸ್ ನತ್ತ ಮುಖ). ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ 5 ಕಾಂಗ್ರೆಸ್, 4 ಬಿಜೆಪಿ ವಶದಲ್ಲಿದೆ.
ಲೋಕಸಭಾ ಸದಸ್ಯರಾದವರು ಇವರು:
1952, 1957, 1962ರಲ್ಲಿ ಜೋಕಿಂ ಆಳ್ವಾ (ಕಾಂಗ್ರೆಸ್)
1967ರಲ್ಲಿ ದಿನಕರ ದೇಸಾಯಿ (ಸ್ವತಂತ್ರ)
1971ರಲ್ಲಿ ಬಿ.ವಿ.ನಾಯ್ಕ (ಕಾಂಗ್ರೆಸ್),
1977ರಲ್ಲಿ ಬಿ.ಪಿ.ಕದಂ (ಕಾಂಗ್ರೆಸ್),
1980, 1984, 1989, 1991ರಲ್ಲಿ ಜಿ.ದೇವರಾಯ ನಾಯ್ಕ (ಕಾಂಗ್ರೆಸ್),
1996, 1998ರಲ್ಲಿ ಅನಂತಕುಮಾರ ಹೆಗಡೆ (ಬಿಜೆಪಿ),
1999ರಲ್ಲಿ ಮಾರ್ಗರೆಟ್ ಆಳ್ವ (ಕಾಂಗ್ರೆಸ್),
2004,2009, 2014, 2019ರಲ್ಲಿ ಅನಂತಕುಮಾರ ಹೆಗಡೆ (ಬಿಜೆಪಿ).
ಮಾವ, ಸೊಸೆ ಗೆದ್ದ ಕ್ಷೇತ್ರವಿದು
ಉತ್ತರ ಕನ್ನಡ ಕ್ಷೇತ್ರ ಹಿಂದೆ ಕೆನರಾ ಕ್ಷೇತ್ರವಾಗಿತ್ತು. ಅದರ ಪ್ರಥಮ ಸಂಸದರಾಗಿದ್ದ ಜೋಕಿಂ ಆಳ್ವ 1952ರಿಂದ 1967ರವರೆಗೆ ಮೂರು ಅವಧಿಗೆ ಗೆದ್ದಿದ್ದರು. ಬಳಿಕ ಅವರ ಸೊಸೆ (ಮಗನ ಪತ್ನಿ) ಮಂಗಳೂರು ಮೂಲದ ಮಾರ್ಗರೆಟ್ ಆಳ್ವ 1999ರಲ್ಲಿ ಜಯಗಳಿಸಿದ್ದರು. ಸಾಹಿತಿಗಳಲ್ಲಿ ದಿನಕರ ದೇಸಾಯಿ ಅವರನ್ನು ಗೆಲ್ಲಿಸಿ ಶಿವರಾಮ ಕಾರಂತರನ್ನು ಸೋಲಿಸಿದ್ದರು ಉತ್ತರ ಕನ್ನಡದ ಮತದಾರರು.
(ವರದಿ: ಹರೀಶ್ ಮಾಂಬಾಡಿ, ಮಂಗಳೂರು)