Vidyarani Veerappan: ವೀರಪ್ಪನ್‌ ಪುತ್ರಿ ಲೋಕಸಭೆ ಚುನಾವಣಾ ಕಣಕ್ಕೆ, ಬಿಜೆಪಿ ಟಿಕೆಟ್‌ ಸಿಗದ್ದಕ್ಕೆ ಪಕ್ಷ ಬದಲಿಸಿದ ವಿದ್ಯಾರಾಣಿ
ಕನ್ನಡ ಸುದ್ದಿ  /  ಚುನಾವಣೆಗಳು  /  Vidyarani Veerappan: ವೀರಪ್ಪನ್‌ ಪುತ್ರಿ ಲೋಕಸಭೆ ಚುನಾವಣಾ ಕಣಕ್ಕೆ, ಬಿಜೆಪಿ ಟಿಕೆಟ್‌ ಸಿಗದ್ದಕ್ಕೆ ಪಕ್ಷ ಬದಲಿಸಿದ ವಿದ್ಯಾರಾಣಿ

Vidyarani Veerappan: ವೀರಪ್ಪನ್‌ ಪುತ್ರಿ ಲೋಕಸಭೆ ಚುನಾವಣಾ ಕಣಕ್ಕೆ, ಬಿಜೆಪಿ ಟಿಕೆಟ್‌ ಸಿಗದ್ದಕ್ಕೆ ಪಕ್ಷ ಬದಲಿಸಿದ ವಿದ್ಯಾರಾಣಿ

ಎರಡು ದಶಕ ಕರ್ನಾಟಕ, ತಮಿಳುನಾಡು ಕಾಡನ್ನಾಳಿದ ವೀರಪ್ಪನ್‌ ಪುತ್ರಿ ವಿದ್ಯಾರಾಣಿ ಬಿಜೆಪಿಯಿಂದ ಟಿಕೆಟ್‌ ಸಿಗದೇ ಎನ್‌ಟಿಕೆ ಪಕ್ಷದಿಂದ ಕೃಷ್ಣಗಿರಿ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿರುವ ವಿದ್ಯಾರಾಣಿ ವೀರಪ್ಪನ್‌.
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿರುವ ವಿದ್ಯಾರಾಣಿ ವೀರಪ್ಪನ್‌.

ಕೃಷ್ಣಗಿರಿ( ತಮಿಳುನಾಡು): ಬೆಂಗಳೂರಿಗೆ ಹೊಂದಿಕೊಂಡಂತೆ ಇರುವ ಹೊಸೂರು ನಗರದ ಭಾಗವೂ ಆಗಿರುವ ಕೃಷ್ಣಗಿರಿ ಲೋಕಸಭಾ ಕ್ಷೇತ್ರದಿಂದಲೇ ಕಾಡುಗಳ್ಳ ವೀರಪ್ಪನ್‌ ಪುತ್ರಿ ವಿದ್ಯಾರಾಣಿ ವೀರಪ್ಪನ್‌ ಕಣಕ್ಕೆ ಇಳಿಯಲಿದ್ದಾರೆ. ಆದರೆ ಅವರು ಸೇರಿ ನಾಲ್ಕು ವರ್ಷದಿಂದ ಇದ್ದ ಭಾರತೀಯ ಜನತಾಪಾರ್ಟಿಯಿಂದ ಅಲ್ಲ. ಆದರೆ ಅವರಿಗೆ ನಾಮ್‌ ತಮಿಳರ್‌ ಕಚ್ಚಿ(Naam Tamilar Katchi ) ಪಕ್ಷವು ಟಿಕೆಟ್‌ ಅನ್ನು ಘೋಷಿಸಿದೆ ಇದರೊಂದಿಗೆ ಸತತ ಐದಾರು ವರ್ಷಗಳಿಂದಲೂ ಚುನಾವಣೆಗೆ ನಿಲ್ಲಬೇಕು ಎನ್ನುವ ಅವರ ಬಯಕೆ ಲೋಕಸಭೆ ಚುನಾವಣೆ ಮೂಲಕ ಈಡೇರುವ ಸಾಧ್ಯತೆಯಿದೆ.

ವಿದ್ಯಾರಾಣಿ ವೀರಪ್ಪನ್‌ ಅವರು ಬಿಜೆಪಿ ಸೇರಿ ಯುವಮೋರ್ಚಾ, ಮಹಿಳಾ ಮೋರ್ಚಾ ಹಾಗೂ ಹಿಂದುಳಿದ ವರ್ಗಗಳ ಮೋರ್ಚಾದ ನಾನಾ ಹಂತದಲ್ಲಿ ಕೆಲಸ ಮಾಡಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಚರ್ಚೆಗಳು ನಡೆದಿದ್ದವು. ಆದರೆ ಲೋಕಸಭೆ ಚುನಾವಣೆ ಮೇಲೆ ವಿದ್ಯಾರಾಣಿ ಕಟ್ಟಿದ್ದರು. ಇದಕ್ಕಾಗಿ ಸಂಘಟನೆಯಲ್ಲೂ ತೊಡಗಿದ್ದರು. ಆದರೆ ಬಿಜೆಪಿ ವಿದ್ಯಾರಾಣಿಗೆ ಅವಕಾಶ ಮಾಡಿಕೊಡಲಿಲ್ಲ. ಈಗಾಗಲೇ ತಮಿಳುನಾಡು ಲೋಕಸಭೆ ಚುನಾವಣೆಗೆ ಸಂಬಂಧಿಸಿ ಎರಡು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ವಿದ್ಯಾರಾಣಿ ಹೆಸರು ಇರಲಿಲ್ಲ. ಈ ಹಿಂದೆ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಸಿ.ನರಸಿಂಹನ್‌ ಅವರಿಗೆ ಅವಕಾಶ ಮಾಡಿಕೊಟ್ಟಿತ್ತು. ಅವರಿಗೆ ಟಿಕೆಟ್‌ ದೊರೆಯುವ ಸೂಚನೆಗಳನ್ನು ಪಕ್ಷ ನೀಡಿತ್ತು. ಇದರಿಂದ ವಿದ್ಯಾರಾಣಿ ಎರಡು ತಿಂಗಳಿನಿಂದಲೂ ಪಕ್ಷದ ಚಟುವಟಿಕೆಗಳಿಂದಲೇ ದೂರವಿದ್ದರು.

ಈಗ ನಾಮ್‌ ತಮಿಳರ್‌ ಪಕ್ಷ ಸೇರಿದ್ದು. ವಿದ್ಯಾರಾಣಿ ಹೆಸರನ್ನು ಕೃಷ್ಣಗಿರಿ ಕ್ಷೇತ್ರಕ್ಕೆ ಘೋಷಿಸಲಾಗಿದೆ. ಎಲ್‌ಟಿಟಿಇ ನಾಯಕ ಪ್ರಭಾಕರನ್‌ ಸ್ಥಾಪಿಸಿದ ಪಕ್ಷವಿದು. ಈಗಲೂ ತಮಿಳುನಾಡಿನಲ್ಲಿ ಸಕ್ರಿಯವಾಗಿದೆ.

ವಿದ್ಯಾರಾಣಿ ವೀರಪ್ಪನ್‌ ಕಾನೂನು ಪದವೀಧರೆ. ಬೆಂಗಳೂರಿನಲ್ಲಿ ಕಾನೂನು ಪದವಿ ಮುಗಿಸಿ ವಕೀಲರಾಗಿಯೂ ಕೆಲಸ ಮಾಡಿದವರು. ಪ್ರೀತಿಸಿ ವಿವಾಹವಾದ ನಂತರ ಕೃಷ್ಣಗಿರಿಯಲ್ಲಿ ನೆಲೆಸಿದ್ದಾರೆ. ಮಕ್ಕಳ ಶಾಲೆಯನ್ನೂ ನಡೆಸುತ್ತಿದ್ಧಾರೆ. ಸಮಾಜ ಸೇವಾ ಚಟುವಟಿಕೆಗಳಲ್ಲಿ ಇದ್ದುಕೊಂಡು ಬಿಜೆಪಿ ಸೇರಿದ್ದರು.

ನನಗೆ ಎನ್‌ ಟಿಕೆಯು ಟಿಕೆಟ್‌ ನೀಡಿದೆ. ಈ ಕ್ಷೇತ್ರದಲ್ಲಿ ಕೃಷಿಕರು, ಗಿರಿಜನರ ಉನ್ನತೀಕರಣಕ್ಕೆ ಕೆಲಸ ಮಾಡುತ್ತಾ ಬಂದಿದ್ದೇನೆ. ಮುಂದೆಯೂ ಯುವಕರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವೆ ಎಂದು ವಿದ್ಯಾರಾಣಿ ತಿಳಿಸಿದ್ದಾರೆ.

ಏಪ್ರಿಲ್‌ 19ರಂದು ಇಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ನಿಂದ ಇಲ್ಲಿ ಜ್ಯೋತಿಮಣಿ, ಎಐಎಡಿಎಂಕೆಯಿಂದ ಜಯಪ್ರಕಾಶ್‌ ಇಲ್ಲಿ ಅಭ್ಯರ್ಥಿಗಳು.

Whats_app_banner