Vijayapur News: ವಿಜಯಪುರ ಬಿಜೆಪಿ ಅಭ್ಯರ್ಥಿ ವಿಭಿನ್ನ ಪ್ರಚಾರ; ಸಂಸದ ಜಿಗಜಿಣಗಿ 6 ಸಲ ಗೆದ್ದಿರುವುದರ ಹಿಂದಿನ ರಹಸ್ಯ ಇದು-lok sabha elections2024 vijayapur bjp mp candidate senior leader ramesh jigajingi style is different in campaign smu ,ಚುನಾವಣೆಗಳು ಸುದ್ದಿ
ಕನ್ನಡ ಸುದ್ದಿ  /  ಚುನಾವಣೆಗಳು  /  Vijayapur News: ವಿಜಯಪುರ ಬಿಜೆಪಿ ಅಭ್ಯರ್ಥಿ ವಿಭಿನ್ನ ಪ್ರಚಾರ; ಸಂಸದ ಜಿಗಜಿಣಗಿ 6 ಸಲ ಗೆದ್ದಿರುವುದರ ಹಿಂದಿನ ರಹಸ್ಯ ಇದು

Vijayapur News: ವಿಜಯಪುರ ಬಿಜೆಪಿ ಅಭ್ಯರ್ಥಿ ವಿಭಿನ್ನ ಪ್ರಚಾರ; ಸಂಸದ ಜಿಗಜಿಣಗಿ 6 ಸಲ ಗೆದ್ದಿರುವುದರ ಹಿಂದಿನ ರಹಸ್ಯ ಇದು

ಕಾಕಾ, ಬಾಬಾ ಎಂದು ಆತ್ಮೀಯತೆ ಹಾಗೂ ಆಪ್ತತೆಯಿಂದ ಮಾತನಾಡುವ ರಮೇಶ ಜಿಗಜಿಣಗಿ ವಿಜಯಪುರ ಜಿಲ್ಲೆಯಲ್ಲಿ ದೊಡ್ಡ ಫ್ಯಾನ್ ಫಾಲೋಯಿಂಗ್ ಹೊಂದಿದ್ದು, ಚುನಾವಣೆಗಳಲ್ಲಿ ಇದು ಸಹ ಅವರ ಗೆಲುವಿನ ಸೂತ್ರಗಳಲ್ಲಿ ಒಂದು.ವರದಿ: ಸಮೀವುಲ್ಲಾ ಉಸ್ತಾದ್‌. ವಿಜಯಪುರ

ರಮೇಶ್‌ ಜಿಗಜಿಗಣಿ ತಮ್ಮ ವಿಭಿನ್ನ ಹಾವಭಾವದಿಂದಲೇ ಮತದಾರರ ಮನ ಗೆಲ್ಲುತ್ತಾರೆ
ರಮೇಶ್‌ ಜಿಗಜಿಗಣಿ ತಮ್ಮ ವಿಭಿನ್ನ ಹಾವಭಾವದಿಂದಲೇ ಮತದಾರರ ಮನ ಗೆಲ್ಲುತ್ತಾರೆ (Asianet news)

ವಿಜಯಪುರ: ಕಾಕಾ, ಬಾಬಾ ಎಂದೇ ಸೌಜನ್ಯ ಭರಿತವಾಗಿ, ಆಪ್ತವಾಗಿ ಮಾತನಾಡುವ ವಿಜಯಪುರ ಸಂಸದ ರಮೇಶ ಜಿಗಜಿಣಗಿ. ಚಿಕ್ಕೋಡಿ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸತತ ಆರು ಬಾರಿ ಗೆದ್ದ ದಾಖಲೆ ವೀರ. ಸದನದಲ್ಲಿ ಪ್ರಶ್ನೆ ಕೇಳಿದ್ದು ಅಪರೂಪ ಎನ್ನುವುದಕ್ಕಿಂತ ಕೇಳಿಯೇ ಇಲ್ಲ. ಅನೇಕ ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲೆಗೆ ತಂದ ಶ್ರೇಯಸ್ಸು ಸಹ ಅವರ ಹೆಗಲಿಗೆ ಇದ್ದೆ ಇದೆ. ಸಂಸತ್‌ ನಲ್ಲಿ ಹಾಜರಾತಿ ಪ್ರಮಾಣದಲ್ಲಿ ಫಸ್ಟ್ ಕ್ಲಾಸ್ ಅಂದರೆ ಶೇ.74 ರಷ್ಟು ಹಾಜರಾತಿ ಹೊಂದಿದ್ದಾರೆ, ಆದರೆ ಸದನದಲ್ಲಿ ಚರ್ಚೆ, ಪ್ರಶ್ನೆ ಮಾಡಿದ್ದು, ವೈಯುಕ್ತಿಕ ವಿಧೇಯಕಗಳನ್ನು ಮಂಡಿಸಿದ್ದು ಮಾತ್ರ ಶೂನ್ಯ. ಆದರೆ ಅಭಿವೃದ್ಧಿ ವಿಷಯವಾಗಿ ಅನುದಾನವನ್ನು ಸಾಕಷ್ಟು ತಂದಿದ್ದೂ ಇದೆ, ರೈಲ್ವೇ ಸೌಲಭ್ಯ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರಿಗೆ, ಕೇಂದ್ರ ಸ್ವಾಮ್ಯದ ಇಲಾಖೆಯ ಅಧಿಕಾರಿಗಳಿಗೆ ಅವರು ಬರೆದ ಪತ್ರಗಳು ಮಾತ್ರ ರಾಶಿ ರಾಶಿ.

ಕೆಲಸ ಕೂಡ ಮಾಡಿದ್ದಾರೆ

ಕೂಡಗಿಯಲ್ಲಿ ಶಾಖೋತ್ಪನ್ನ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ, ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ, ಕನಮಡಿ-ತಿಕೋಟಾ ಮಾರ್ಗವಾಗಿ ಮಹಾರಾಷ್ಟ್ರ ಗಡಿಯಿಂದ ವಿಜಯಪುರದ ವರೆಗೆ ರಾಷ್ಟ್ರೀಯ ಹೆದ್ದಾರಿ, ಕಲಬುರಗಿ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಜಯಪುರ-ತೆಲಸಂಗ ವರೆಗಿನ 42 ಕಿ.ಮೀ. ರಸ್ತೆ ನಿರ್ಮಾಣ, ವಿಜಯಪುರ ಹುಬ್ಬಳ್ಳಿ ದ್ವಿಪಥ ರಸ್ತೆ ಕಾಮಗಾರಿ, ರೈಲ್ವೇ ಸೌಲಭ್ಯಗಳ ವಿಸ್ತರಣೆ, ಕೋಲ್ಡ್ ಸ್ಟೋರೇಜ್, ಪ್ಯಾಕ್‌ಹೌಸ್, ರೈಲ್ವೇ ಮೇಲ್ಸೆತುವೆಗಳು, ವಿದ್ಯುತ್ ಜಾಲ ಬಲವರ್ಧನೆ. ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ವಿಶೇಷ ಒತ್ತು ಹೀಗೆ ಅನೇಕ ಅಭಿವೃದ್ಧಿ ಕಾಮಗಾರಿಗಳು ಜಿಗಜಿಣಗಿ ಅವರ ಅಭಿವೃದ್ಧಿಯ ಬತ್ತಳಿಕೆಯಲ್ಲಿವೆ.

ಈ ಅವಧಿಯಲ್ಲಿ ಅವರಿಗೆ ಮಂಜೂರಾಗಿದ್ದ ಸಂಸದರ ಅನುದಾನ ಒಟ್ಟು 25 ಕೋಟಿ ರೂ. ಗಳ ಪೈಕಿ 16.76 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದು, ಅದರಲ್ಲಿ ಸಮುದಾಯ ಭವನ, ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲಾ ಕಟ್ಟಡಗಳು, ಬಸ್ ತಂಗುದಾಣಗಳು ಸೇರಿವೆ.

ಚಿಕ್ಕೋಡಿ- ವಿಜಯಪುರದಲ್ಲಿ ರಾಜಕಾರಣ

ರಾಜಕೀಯ ವಿರೋಧಿಗಳ ಪ್ರಯತ್ನಗಳ ನಡುವೆಯೂ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ ಸತತ ಮೂರು ಬಾರಿ ಗೆದ್ದಿರುವ ರಮೇಶ ಜಿಗಜಿಣಗಿ ನೆರೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದಲೂ ಮೂರು ಬಾರಿ ಗೆದ್ದವರು. ಈ ಬಾರಿಯೂ ಜನತೆ ಆಶೀರ್ವದಿಸಿದರೆ ಸಪ್ತ ಬಾರಿ ಲೋಕಸಭೆಗೆ ಪ್ರವೇಶ ಮಾಡುವ ಮೂಲಕ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆಯುತ್ತೇನೆ ಎನ್ನುವ ಉಮೇದಿನಲ್ಲಿದ್ಧಾರೆ. ನಾಲ್ಕು ದಶಕದ ಸುದೀರ್ಘ ರಾಜಕಾರಣದಲ್ಲಿ ಕಾಂಗ್ರೆಸ್‌ನಿಂದ ದೂರವೇ ಇದ್ದುಕೊಂಡು ಜನತಾಪಕ್ಷ, ಜನತಾದಳ, ಲೋಕ ಜನಶಕ್ತಿ, ಸಂಯುಕ್ತ ಜನತಾದಳದ ನಂತರ ಬಿಜೆಪಿಯಿಂದ ವಿಧಾನಸಭೆ, ಲೋಕಸಭೆಗೆ ಆರಿಸುತ್ತಾ ಬಂದಿದ್ದಾರೆ.

ಅನಾರೋಗ್ಯ ಹಿನ್ನೆಲೆಯಲ್ಲಿ ಟಿಕೇಟ್ ತಪ್ಪಲಿದೆ ಎಂದು ಸುದ್ದಿಗೆ ಗರಂ ಆಗಿಯೇ ಗುಡುಗಿದ್ದ ಜಿಗಜಿಣಗಿ ‘ನನಗೆ ಟಿಕೇಟ್ ಪಕ್ಕಾ, ನಾನು ಇತಿಹಾಸ ನಿರ್ಮಿಸಿಯೇ ಸಾಯುವೆ, ಹೀಗೆಯೇ ಭಗವಂತ ನನ್ನ ಹಣೆಬರಹ ಬರೆದಿದ್ದಾನೆ’ ಎಂದು ಗುಡುಗಿದ್ದರು.

ಎದುರಾಳಿ ಪಕ್ಷದವರಿಗೂ ಫೋನ್ ಮೂಲಕ ಮನವಿ

ಚುನಾವಣೆ ಸಂದರ್ಭದಲ್ಲಿ ಮನೆ-ಮನೆ ಪ್ರಚಾರ, ಪಾದಯಾತ್ರೆ ಸಂಪ್ರದಾಯದಂತೆ ನಡೆಯುವುದು ರೂಢಿ. ಆದರೆ ಕಳೆದ ಹಲವಾರು ವರ್ಷಗಳಿಂದ ಜಿಗಜಿಣಗಿ ಇನ್ನೊಂದು ಡಿಫರಂಟ್ ಪ್ರಚಾರ ವೈಖರಿ ಅನುಸರಿಸುತ್ತಾ ಬಂದಿದ್ದಾರೆ. ಪ್ರಚಾರ ಕಾರ್ಯದಿಂದ ಬಿಡುವಿನ ಸಮಯದಲ್ಲಿ ಲಿಸ್ಟ್ ಮಾಡಿಕೊಂಡು ಅದರಲ್ಲಿ ಕೆಲವು ಮುಖಂಡರು, ಕಾರ್ಯಕರ್ತರ ನಂಬರ್ ಗೆ ಫೋನ್ ಕರೆ ಮಾಡುತ್ತಾ ತಮ್ಮ ಪರ ಮತಚಲಾಯಿಸಿಕೊಳ್ಳುವಂತೆ ವಿನಂತಿ ಮಾಡಿಕೊಳ್ಳುವುದು ರೂಢಿ. ಒಮ್ಮೊಮ್ಮೆ ದಿನವೊಂದಕ್ಕೆ ಇನ್ನೂರಕ್ಕೂ ಹೆಚ್ಚು ಕರೆ ಮಾಡುತ್ತಾರೆ ಎಂದು ಜಿಗಜಿಣಗಿ ಅವರ ಅಭಿಮಾನಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಇನ್ನೂ ಕೇವಲ ತಮ್ಮ ಪಕ್ಷದವರಿಗೆ ಅಷ್ಟೇ ಅಲ್ಲದೇ ಎದುರಾಳಿ ಪಕ್ಷದ ಮುಖಂಡರಿಗೂ ಸಹ ಫೋನ್ ಕರೆ ಮಾಡಿ ತಮ್ಮ ಪರವಾಗಿ ಮತ ಚಲಾಯಿಸುವಂತೆ ವಿನಂತಿ ಮಾಡುವುದು ಸಹ ಜಿಗಜಿಣಗಿ ಅವರ ಚುನಾವಣಾ ತಂತ್ರಗಾರಿಕೆ ಭಾಗ. ಒಂದು ರೀತಿ ಫೋನ್ ಮೂಲಕವೇ ಅರ್ಧ ಪ್ರಚಾರ ಕಾರ್ಯ ಮುಗಿಸುವ ಚುನಾವಣಾ ತಂತ್ರವನ್ನು ಜಿಗಜಿಣಗಿ ಅನೇಕ ಅವಧಿಯಲ್ಲಿ ಪಾಲಿಸಿಕೊಂಡು ಬಂದಿದ್ದಾರೆ.

(ವರದಿ: ಸಮೀವುಲ್ಲಾ ಉಸ್ತಾದ್‌. ವಿಜಯಪುರ)

mysore-dasara_Entry_Point