ಲೋಕಸಭಾ ಚುನಾವಣೆ ಮತ ಎಣಿಕೆಗೆ ಬೆಂಗಳೂರಿನ 3 ಕೇಂದ್ರಗಳು ಸಜ್ಜು; ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ
ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಬೆಂಗಳೂರಿನ ಕೇಂದ್ರಗಳು ಸಜ್ಜುಗೊಳ್ಳುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳ್ಳುತ್ತಿದ್ದು, 5 ಮಂದಿಗಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ. ಮಾರಕಾಸ್ತ್ರಗಳನ್ನು ಕೊಂಡೊಯ್ಯುವಂತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕೆ ದಿನಕ್ಕೆ ದಿನಗಣನೆ ಶುರುವಾಗಿದೆ. ಕೊನೆಯ ಹಂತದ ಮತದಾನ ಜೂನ್ 1ಕ್ಕೆ ನಡೆಯಲಿದ್ದು, ಅದಾಗುತ್ತಲೇ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ, ಮತ ಎಣಿಕೆ ದಿನಕ್ಕೆ ಬೆಂಗಳೂರು ಸಜ್ಜಾಗತೊಡಗಿದೆ. ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಾದ ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರಗಳ ಮತಗಳ ಎಣಿಕೆಗೆ ಬೆಂಗಳೂರು ಜಿಲ್ಲಾಡಳಿತ ಸಜ್ಜುಗೊಂಡಿದೆ. ಇದೇ ಸಂದರ್ಭದಲ್ಲಿ ಮತ ಎಣಿಕೆ ದಿನದಂದು ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಹೊರಡಿಸಿ ಆದೇಶ ಪ್ರಕಟವಾಗಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮತ ಎಣಿಕೆ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಇಲ್ಲಿ ನಡೆಯಲಿದೆ. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮತ ಎಣಿಕೆ ವಸಂತನಗರದ ಅರಮನೆ ರಸ್ತೆಯಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆಯಲಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತ ಎಣಿಕೆ ಜಯನಗರದ 4ನೇ 'ಟಿ ಬ್ಲಾಕ್, 26ನೇ ಮುಖ್ಯರಸ್ತೆ, 36ನೇ ಕ್ರಾಸ್ ನಲ್ಲಿರುವ ಎಸ್.ಎಸ್.ಎಂ.ಆರ್.ವಿ. ಕಾಲೇಜಿನಲ್ಲಿ ನಡೆಯಲಿದೆ.
ಜೂನ್ 4 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಪ್ರತಿಬಂಧಕಾಜ್ಞೆ
ಮತ ಎಣಿಕೆ ನಡೆಯುವ ಸಮಯದಲ್ಲಿ ಕೆಲ ಸಮಾಜಘಾತುಕ, ವ್ಯಕ್ತಿಗಳು, ಕೆಲವು ಕಿಡಿಗೇಡಿಗಳು, ಗೆದ್ದ ಹಾಗೂ ಸೋತ ಅಭ್ಯರ್ಥಿಗಳ ಪರ ಅಥವಾ ವಿರುದ್ಧ ಪ್ರತಿಭಟನೆ ನಡೆಸಿ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟವುಂಟು ಮಾಡುವ ಸಾಧ್ಯತೆಗಳು ಇರುವುದಾಗಿ ತಿಳಿದುಬಂದಿದ್ದು, ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಆದೇಶ ಹೊರಡಿಸಿದ್ದಾರೆ.
ಸಾರ್ವತ್ರಿಕ ಲೋಕಸಭಾ ಚುನಾವಣೆ 2024ರ ಸಂಬಂಧ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜೂನ್ 4 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆಯನ್ನು ವಿಧಿಸಿರುತ್ತಾರೆ.
ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 5 ಮಂದಿಗಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಹಾಗೂ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ. ಚುನಾವಣಾ ಅಭ್ಯರ್ಥಿ, ಬೆಂಬಲಿಗರು ಸೇರಿ 5 ಜನರಿಗಿಂತ ಹೆಚ್ಚಿನ ಸಂಖ್ಯೆಯ ಜನರು ಸೇರುವಂತಿಲ್ಲ. ಶಸ್ತ್ರ, ಬಡಿಗೆ, ಭರ್ಜಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ ದೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನುಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ಅವುಗಳೊಂದಿಗೆ ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ. ಕಲ್ಲುಗಳು, ಸ್ಫೋಟಕ ವಸ್ತುಗಳು ಯಾವುದೇ ದಾಹಕ ವಸ್ತುಗಳನನ್ನು ಮತ ಎಣಿಕೆ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ.
ಪ್ರಚೋದನಕಾರಿ ನಡವಳಿಕೆಗೆ ನಿರ್ಬಂಧ
ಶವಯಾತ್ರೆ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳ ಪ್ರದರ್ಶನ ಮತ್ತು ದಹನ ಮಾಡುವುದನ್ನು ಪ್ರತಿಬಂಧಿಸಲಾಗಿದೆ. ಸದರಿ ಸ್ಥಳದಲ್ಲಿ ಭಾಷಣ ಮಾಡುವುದು ಹಾಗೂ ಪ್ರಚೋದನಾಕಾರಿಯಾಗಿ ಮಾತನಾಡುವುದನ್ನು ಹಾಗೂ ರಾಜಕೀಯಕ್ಕೆ ಸಂಬಂದಿಸಿದಂತೆ ಬಹಿರಂಗವಾಗಿ ಘೋಷಣೆ ಮಾಡುವುದು, ಗಾಯನ, ವಾದ್ಯ ಭಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಆಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು, ಮುಂತಾದವುಗಳನ್ನು ಪ್ರದರ್ಶಿಸುವುದಾಗಲೀ ಹಾಗೂ ಸಾರ್ವಜನಿಕ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.
ಯಾವುದೇ ವ್ಯಕ್ತಿ ಬಹಿರಂಗವಾಗಿ ಮೇಲೆ ವಿವರಿಸಿದ ಮಾರಕಾಸ್ತ್ರಗಳು, ಸ್ಫೋಟಕ ವಸ್ತುಗಳು, ವಿನಾಷಕಾರಿ ವಸ್ತುಗಳನ್ನು ಹಾಗೂ ಇತರೆ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು ಕಂಡು ಬಂದರೆ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರವಿರುತ್ತದೆ. ಅಂತಹ ಮಾರಕಾಸ್ತ್ರಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲಾಗುತ್ತದೆ. ಈ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಯಾವುದೇ ವ್ಯಕ್ತಿಯ ಜಾತಿ, ಧರ್ಮ, ಕೋಮು ಪಂಥಗಳಿಗೆ ಅಥವಾ ಸಾರ್ವಜನಿಕ ನೈತಿಕತೆಗೆ ಭಾದಕ ಉಂಟುಮಾಡಬಹುದಾದಂತಹ ಚಟುವಟಿಕೆಗಳನ್ನು ನಿಷೇಧಿಸಿದೆ. ಬ್ಯಾನರ್ ಅಥವಾ ಫ್ಲೆಕ್ಸ್ ಗಳನ್ನು ಅಂಟಿಸುವುದನ್ನು ನಿಷೇಧಿಸಿದೆ. ಆದರೆ ಶವಸಂಸ್ಕಾರ ಮೆರವಣಿಗೆಗೆ ಈ ನಿಷೇದಾಜ್ಞೆಯು ಅನ್ವಯಿಸುವುದಿಲ್ಲ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.