ಕನ್ನಡ ಸುದ್ದಿ  /  Elections  /  Mysore News Bjp Candidate Yaduveer Wadiyar Starts Lok Sabha Election2024 Campaign In Cm Siddaramiah Home Turf Mysore Rgs

Lok Sabha Elections2024:ಒಡೆಯರ್‌ಗೆ ಆರತಿ ಎತ್ತಿ ಸ್ವಾಗತ, ಮೈಸೂರು-ಕೊಡಗು ಕ್ಷೇತ್ರದಲ್ಲಿ ಚುನಾವಣಾ ರಂಗು ಜೋರು

ಸಿಎಂ ಸಿದ್ದರಾಮಯ್ಯ ತವರು ಮೈಸೂರಿನಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಚಾರ ಜೋರಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಅಂತಿಮಗೊಳಿಸುತ್ತಿದೆ.ವರದಿ: ಪಿ.ರಂಗಸ್ವಾಮಿ. ಮೈಸೂರು

ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಯದುವೀರ್‌ ಒಡೆಯರ್‌ ಪ್ರಚಾರದ ವೇಳೆ ಮಕ್ಕಳು ಎಳೆನೀರು ಕೊಟ್ಟರು. ಕ್ಷೇತ್ರದ ಮುಖಂಡರಾದ ಸಂದೇಶ್‌ ಸ್ವಾಮಿ, ಬಿ.ಪಿ. ಮಂಜುನಾಥ್‌ ಜತೆಗಿದ್ದರು.
ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಯದುವೀರ್‌ ಒಡೆಯರ್‌ ಪ್ರಚಾರದ ವೇಳೆ ಮಕ್ಕಳು ಎಳೆನೀರು ಕೊಟ್ಟರು. ಕ್ಷೇತ್ರದ ಮುಖಂಡರಾದ ಸಂದೇಶ್‌ ಸ್ವಾಮಿ, ಬಿ.ಪಿ. ಮಂಜುನಾಥ್‌ ಜತೆಗಿದ್ದರು.

ಮೈಸೂರು:ಲೋಕಸಭೆ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗುತ್ತಿದ್ಧಂತೆ ಪ್ರಚಾರ ಭರಾಟೆಯೂ ಜೋರಾಗಿದೆ. ಬಿಜೆಪಿ ಬಹುತೇಕ ಕ್ಷೇತ್ರಗಳಿಗೆ ಟಿಕೆಟ್‌ ಘೋಷಿಸಿದೆ. ಕಾಂಗ್ರೆಸ್‌ ಒಂದೆರಡು ದಿನದಲ್ಲಿ ಪಟ್ಟಿ ಪ್ರಕಟಿಸುವ ಸೂಚನೆಗಳಿವೆ. ಇದೆರ ನಡುವೆ ಭಾರತೀಯ ಜನತಾ ಪಾರ್ಟಿಯ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಯದುವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಪ್ರಚಾರವನ್ನು ಆರಂಭಿಸಿದ್ಧಾರೆ. ಮೈಸೂರಿನ ಬಿಜೆಪಿ ಮುಖಂಡರೊಡನೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ದ ಅಖಾಡಕ್ಕೆ ಯದುವೀರ್‌ ಇಳಿದರು.

ಎನ್ ಆರ್ ಕ್ಷೇತ್ರದ ಕ್ಯಾತಮಾರನಹಳ್ಳಿಯ ಟೆಂಟ್ ಹೌಸ್ ಸರ್ಕಲ್ ಬಳಿಗೆ ಆಗಮಿಸಿದ ಯದುವೀರ್ ಅವರನ್ನು ಬಿಜೆಪಿ ಕಾರ್ಯಕರ್ತರು ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಂಡರು. ಈ ವೇಳೆ ಯದುವೀರ್ ಅವರು ಕ್ಯಾತಮಾರನಹಳ್ಳಿಯ ಹುಲಿಯಮ್ಮ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲು ಪಾದಯಾತ್ರೆಯೊಂದಿಗೆ ತೆರಳಿದರು. ಈ ಸಂದರ್ಭದಲ್ಲಿ ನೂರಾರು ವರ್ಷಗಳಿಂದ ಈ ಭಾಗದ ಜನತೆ ವಂಶ ಪಾರಂಪರ್ಯವಾಗಿ ರಾಜಮನೆತನಕ್ಕೆ ಗೌರವಗಳನ್ನು ನೀಡುತ್ತಾ ಬಂದಿರುವಂತೆಯೇ, ಛತ್ರಿ ಚಾಮರಗಳನ್ನು ಹಿಡಿದು, ಮಡಿ ಸೇವೆಯ ಮುಖಾಂತರ ಯದುವೀರ್ ಅವರನ್ನು ಬರಮಾಡಿಕೊಂಡರು. ಇದೇ ವೇಳೆ ಕಿಕ್ಕಿರಿದು ನೆರೆದಿದ್ದ ಜನರು ಮೈಸೂರಿನ ಮಹಾರಾಜರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರೆ, ಮಹಿಳೆಯರು ಆರತಿ ಬೆಳಗಿ ಶುಭ ಹಾರೈಸಿದರು. ಮೈಸೂರಿನ ರಾಜಮನೆತನದ ಮೇಲೆ ಜನತೆಗೆ ಇರುವ ಪ್ರೀತ್ಯಾದರ ಹಾಗೂ ಗೌರವ ಭಾವನೆಗಳಿಗೂ ಈ ಸನ್ನಿವೇಶ ಸಾಕ್ಷಿಯಾಯಿತು. ಇನ್ನೂ ಯದುವೀರ್ ಹೋದೆಡೆಯೆಲ್ಲಾ ವ್ಯಾಪಕ ಜನಬೆಂಬಲ ವ್ಯಕ್ತವಾಗಿದ್ದು, ಮಹಿಳೆಯರು ಆರತಿ ಬೆಳಗುವ ಮೂಲಕ ಶುಭ ಹಾರೈಸುತ್ತಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಯಾರು

ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಧುಮುಕಿರುವ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬಿಜೆಪಿ ನಾಯಕರ ಜೊತೆಗೆ ಜೆಡಿಎಸ್ ನಾಯಕರ ವಿಶ್ವಾಸ ಗಳಿಸುವುದಕ್ಕೂ ಮುಂದಾಗಿದ್ದಾರೆ. ಕೇವಲ ಮೂರೇ ದಿನಕ್ಕೆ ರಾಜಕೀಯದ ಎಲ್ಲಾ ಪಟ್ಟುಗಳನ್ನು ಕರಗತ ಮಾಡಿಕೊಂಡತೆ ಯದುವೀರ್ ಕಾಣುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಯಾರಾಗ್ತಾರೆ ಎನ್ನುವ ಕುತೂಹಲ ಹೆಚ್ಚಿಸಿದೆ.

ಬಿಜೆಪಿಗೆ ಸೇರ್ಪಡೆಯಾದ ಕೂಡಲೇ ಲೋಕಸಭಾ ಚುನಾವಣೆಯ ಕದನದಲ್ಲಿ ಯದುವೀರ್ ಫುಲ್ ಆಕ್ಟೀವ್ ಆಗಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರಾದರೂ, ಕಾಂಗ್ರೆಸ್ ಪಾಳಯ ಮಾತ್ರ ಮೌನಕ್ಕೆ ಶರಣಾಗಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಹೆಸರು ಘೋಷಣೆ ಆಗುತ್ತಿದ್ದಂತೆ ಅಭ್ಯರ್ಥಿ ಯದುವಂಶಸ್ಥ ಯದುವೀರ್ ಒಡೆಯರ್ ಕ್ಷೇತ್ರ ಪರ್ಯಟನೆಯಲ್ಲಿ ನಿರತರಾಗಿದ್ದಾರೆ. ಮೈಸೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದ ತರುವಾಯ, ಸ್ಥಳೀಯ ಬಿಜೆಪಿ ನಾಯಕರು, ಜೆಡಿಎಸ್ ನಾಯಕರನ್ನು ಭೇಟಿಯಾಗುವ ಮೂಲಕ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ.

ರಸ್ತೆ ಬದಿಯಲ್ಲೇ ಕುಳಿತು ಚಹಾ ಸೇವಿಸುವ ಮೂಲಕ ಜನಸಾಮಾನ್ಯರ ಗಮನ ಸೆಳೆದಿದ್ದಾರೆ. ಈಗಾಗಲೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕೊಡಗು‌ ಜಿಲ್ಲೆಗೂ ಒಮ್ಮೆ ಭೇಟಿಕೊಟ್ಟಿರುವ ಯದುವೀರ್ ಅವರು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ, ಮಾಜಿ ಸಚಿವ ಸಾ ರಾ ಮಹೇಶ್ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಜೆಡಿಸ್ ನ ಹಾಲಿ ಹಾಗು ಮಾಜಿ ಶಾಸಕರು ಕೂಡ ಯದುವೀರ್ ಬೆಂಬಲಕ್ಕೆ ‌ನಿಂತಿದ್ದಾರೆ.

ಸಿಎಂ ತವರಲ್ಲಿ ಕಣ ಹೇಗಿದೆ

ಇನ್ನೂ, ಮೈತ್ರಿ ಅಭ್ಯರ್ಥಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮಾಡುತ್ತಿದ್ದರೂ ಸಹ ಸಿಎಂ ಸಿದ್ದರಾಮಯ್ಯನವರ ತವರು ಜಿಲ್ಲೆಯ ಲೋಕಸಭೆ ಚುನಾವಣೆ ಅಖಾಡದ ಕೈ ಅಭ್ಯರ್ಥಿ ಇನ್ನೂ ಆಯ್ಕೆ ಆಗಿಲ್ಲ.

ಸಿಎಂ ಸಿದ್ದರಾಮಯ್ಯರಿಗೆ ಸ್ವಕ್ಷೇತ್ರದಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದ್ದು, ಬಲಿಷ್ಠ ಒಕ್ಕಲಿಗ ಸಮಾಜದ ಅಭ್ಯರ್ಥಿಯತ್ತ ಕೈ ನಾಯಕರ ಚಿತ್ತ ನೆಟ್ಟಿದೆ‌. ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರನ್ನು ಎದುರಿಸುವ ಕಾಂಗ್ರೆಸ್ ನ ಸಮರ್ಥ ಅಭ್ಯರ್ಥಿ ಯಾರು? ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಡಾ. ಶುಶ್ರುತ್ ಗೌಡ ರೇಸ್ ನಲ್ಲಿದ್ದು, ಇವರಿಬ್ಬರಲ್ಲೇ ಯಾರಾದರೊಬ್ಬರು ಅಭ್ಯರ್ಥಿಯಾಗ್ತಾರಾ ಅಥವಾ ಹೊಸ ಮುಖ ಬರಲಿದೆಯಾ ಎಂಬ ಕುತೂಹಲವಿದೆ. ಚುನಾವಣೆ ದಿನಾಂಕ ಕೂಡ ಘೋಷಣೆ ಆಗಿದೆ. ಹಾಗಾಗಿ ಎದುರಾಳಿ ಮೈತ್ರಿಕೂಟ ಒಡ್ಡಿರುವ ಸವಾಲನ್ನು ಯಾವ ರೀತಿ ಎದುರಿಸಬೇಕೆಂಬ ರಣತಂತ್ರವನ್ನು ಕಾಂಗ್ರೆಸ್ ನಾಯಕರು ರೂಪಿಸುತ್ತಿದ್ದಾರೆ.

(ವರದಿ: ಪಿ.ರಂಗಸ್ವಾಮಿ. ಮೈಸೂರು)